ಕಾಣಿಸುತ್ತಿಲ್ಲ ನನ್ನ ಮನಸು
ಎಲ್ಲೋ ಕಳೆದು ಹೋಗಿಬಿಟ್ಟಿದೆ
ಊರಲ್ಲಿ ಎರಡು ದಿನ ಕಳೆದಿದ್ದೆ ತಪ್ಪಾಯ್ತೋ
ನನ್ನ ಬಿಟ್ಟು ಅದು ಅಲ್ಲೇ ಉಳಿದುಬಿಟ್ಟಿದೆ
ಖುಷಿ ಪಡುತಿರಬೇಕು ನನ್ನ ಮನಸು
ಧೋ ಎಂದು ಸುರಿವ ಮಳೆಯಲ್ಲಿ ನೆನೆದು
ಅಲೆಯುತಿದೆಯೇನೋ ಕಡಲ ತೀರದಿ
ಭೋರ್ಗರೆದು ಅಪ್ಪಳಿಸುವ ಅಲೆಯ ನೋಡುತಾ
ಸುತ್ತಾಡುತಿರಬಹುದು ವಿಶಾಲ ಮೈದಾನದಿ
ಸೊಂಪನೆ ಬೆಳೆದಿರುವ ಹಸಿರ ಪೈರಿನ ಜೊತೆ
ಮೆಲ್ಲುತಿರಬಹುದು ಬಿಸಿಯಾದ ಗೋಳಿಬಜೆ
ಪುಟ್ಟ "ಮಿತ್ರ ಸಮಾಜ" ಹೋಟೆಲಿನ ಒಳಗೆ
ಹಾರಾಡುತಿದೆ ಅದು ಸಂತಸದ ಹೊನಲಿನಲ್ಲಿ
ಆ ಬ್ರಹ್ಮ ರಥದ ಪತಾಕೆಯ ತುದಿಯಲ್ಲಿ
ಓಡಾಡುತಿದೆ ಮನಸು ಅತ್ತಣಿಂದಿತ್ತ
ರಥಬೀದಿ ಪರಿಸರದ ಸುತ್ತ ಮುತ್ತ
ಬೆಚ್ಚಗೆ ಅಡಗಿ ಕೂತಿದೆ ಕೈಯೊಳಗೆ ಸಿಕ್ಕದೆ
ರಚ್ಚೆ ಹಿಡಿದಿದೆ ತಾ ಬರಲಾರದೆಂದು
ಎಳೆದು ತರಬೇಕಾಗಿದೆ ಮತ್ತೆ ಮಹಾನಗರಿಗೆ
ಅದಕಾಗೇ ಹೋಗುವೆನು ಮತ್ತೊಮ್ಮೆ ಊರಿಗೆ :-)
--------------------------------------------------------------------------------
ಕಿರು ಟಿಪ್ಪಣಿ :ಗೋಳಿಬಜೆ - ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯನ್ನು ಹೊರತುಪಡಿಸಿ, ಉಳಿದೆಲ್ಲಾ ಕಡೆ "ಮಂಗಳೂರು ಬಜ್ಜಿ" ಎಂದು ಕರೆಯಲ್ಪಡುವ, ಮೈದಾ ಹಿಟ್ಟಿನಿಂದ ತಯಾರಿಸಲ್ಪಡುವ, ನಮ್ಮ ಊರಿನ ವಿಶಿಷ್ಟವಾದ ರುಚಿಯಾದ ಒಂದು ಖಾದ್ಯ.
ಮಿತ್ರ ಸಮಾಜ - ಉಡುಪಿಯ ರಥಬೀದಿಯಲ್ಲಿ ಬಹು ದಶಕಗಳಿಂದ ಪ್ರಖ್ಯಾತವಾಗಿರುವ, ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಲುವಾಗಿ, ಯಾವುದೇ ತಿಂಡಿಯ ತಯಾರಿಗೂ, ಈರುಳ್ಳಿ/ ಬೆಳ್ಳುಳ್ಳಿಯನ್ನು ಬಳಸದೆ ಇರುವ ಏಕಮಾತ್ರ ಹೋಟೆಲು.
ಬ್ರಹ್ಮ ರಥ - ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಗಾತ್ರದಲ್ಲಿ ವೈವಿಧ್ಯವಾಗಿರುವ ಮೂರು ರಥಗಳಿವೆ - ಬ್ರಹ್ಮ ರಥ, ಮಧ್ಯಮ ರಥ, ಸಣ್ಣ ರಥ ಎಂದು. ಇದರ ಜೊತೆಗೆ ಚಿನ್ನದ ಹಾಗೂ ಬೆಳ್ಳಿ ರಥಗಳೂ ಉಡುಪಿಯಲ್ಲಿ ಪ್ರಸಿದ್ಧ.