Thursday, March 19, 2009

ಪಥ


ನೆನಪಿನಾ ಸಾಗರದಿ ಉಕ್ಕುತಿವೆ ಅಲೆಗಳು
ಮುತ್ತಿಡುತಲಿವೆ ಓಡೋಡಿ ಹರಿದು ಬಂದು
ಹಿಂದಿರುಗಿ ನೋಡಲು ತೀರದಲಿ ನಿಂದು...

ಬದುಕಿನ ವಿಪರ್ಯಾಸ ಅದೇನೋ ತಿಳಿಯದು
ಕೆಲವೊಮ್ಮೆ ಭರತ, ಇನ್ನೊಮ್ಮೆ ಇಳಿತ
ಸದ್ದಿರದೆ ದಾಳಿ ಇಡೋ ನೆನಹುಗಳ ಮೊರೆತ

ಆ ಏಳು ವರುಷಗಳ ಪ್ರಾಥಮಿಕ ಶಿಕ್ಷಣ
ಕಾಣುತಿರಲೆಲ್ಲೆಲ್ಲೂ ಏಳು ಬಣ್ಣ
ಸಂತಸವೇ ತುಂಬಿತ್ತು ಬಾಳ ಪ್ರತಿ ಕ್ಷಣ

ಮತ್ತೆ ಹೋದ ಆ ಪ್ರೌಢ ಶಾಲೆ
ಅರಳುವ ಮನಸಲಿ ಸುಂದರ ಹೂ ಮಳೆ
ಎಂದೂ ಬತ್ತದ ನೆನಪಿನ ಸೆಲೆ

ಕಾಲಿಡಲು ಷೋಡಶದಿ, ಸುತ್ತಲೂ ಮಾಯೆ
ಕನಸಿನ ಲೋಕದಿ ನಸುನಗೆಯ ಛಾಯೆ
ಹೂ-ದುಂಬಿ ಸಂಗಮಕೆ ಪ್ರಕೃತಿಯ ಧಾರೆ

ಯೌವನದ ಕಾಲದಿ ವಸಂತನಾಗಮನ
ಪ್ರೇಮದ ಮೋಹಕ ಭಾವಾನುಜನನ
ಆರಂಭ ಸಮರಸದ ನವಜೀವನ

ಕಂಪನರಿಯುವ ಮುನ್ನ ನಿಂತಿತು ಸಿಹಿಗಾಳಿ
ಒಂದಿನಿತು ದಯೆ ತೋರದೆ ಬಂತು ಬಿರುಗಾಳಿ
ಜೀವನದಿ ಮಾಡಿತು, ಮುಚ್ಚಲಾಗದ ಕುಳಿ

ಅಲ್ಲಿಗೆ ಮುಕ್ತಾಯ ಸಂತಸದ ಭರತ
ಮತ್ತೆ ಕಂಡದ್ದು ಪಾತಾಳದ ಇಳಿತ
ಭರತವನು ಅಳಿಸಿದ ಚಂಡಮಾರುತ

ಜೀವನ ಸೂರ್ಯನ ಅಸ್ತಂಗತದಿ
ಬಾಳ ಸಂಜೆಯ ಈ ಸಮಯದಿ
ಅಲ್ಲೋಲ ಕಲ್ಲೋಲವೀ ನೆನಪಿನ ಸಾಗರ
ನೂರಾರು ನೆನಪುಗಳ ಬೆಂಬಿಡದ ಸಮರ

ಅಧಿಕವಾಗುತಲಿದೆ ಕಾಯುವಿಕೆ
ಮುಂದಾಗಲಿರುವ ಸಂಪೂರ್ಣ ಅಸ್ತಕೆ
ರವಿಯು ಸಾಗರದ ಜೊತೆ ಲೀನವಾಗುವುದಕೆ

ಗಾಢಾಂಧಕಾರಕೆ ಕಾಯುತಿಹೆನಲ್ಲ..
ಆದರೂ ಇರುಳು ಕವಿಯುತಿಲ್ಲಾ
ಕಂಡದ್ದೇ ಕಾರಿರುಳೋ ? ತಿಳಿಯುತಿಲ್ಲ..
ಅಸ್ತವೋ ಉದಯವೋ ದೇವನೇ ಬಲ್ಲ !

ಅಗೋ, ಕಾಣುತಿದೆ ಒಂದು ಕಿರಣ
ತರುತಲಿದೆ ಮೆಲ್ಲಗೆ ಹೊನ್ನ ಬಣ್ಣ
ಆರಂಭವಾಯಿತೇ ಹೊಸ ಪಯಣ?

2 comments:

  1. ದಿವ್ಯ,
    ಬದುಕಿನ ಹಾದಿಯ ನೆನಪು ಮನಸ್ಸಿಗೆ ಬಹಳ ಹತ್ತಿರವೆಂದೆನಿಸಿತು. ಹೊಸ ಪಯಣಕ್ಕೆ ಶುಭ ಹಾರೈಕೆಗಳು.

    ReplyDelete
  2. ರಾಜೇಶ್,
    ಹೊಸ ಪಯಣದ ಆಶಾ ಭಾವನೆಯೇ ಇಲ್ಲದ ಒಂದು ನೊಂದ ಜೀವದ ಮೌನ ವೇದನೆಯೇ "ಪಥ" .... ಆದರೂ, ಮನುಷ್ಯನಿಗೆ ಈ ಭೂಮಿಯಲ್ಲಿ ಬದುಕಲು ಆಶಾ ಕಿರಣ ಖಂಡಿತವಾಗಿಯೂ ಬೇಕು..ನಿಮ್ಮ ಶುಭ ಹಾರೈಕೆಗೆ ಧನ್ಯವಾದಗಳು..

    ReplyDelete