Tuesday, December 29, 2009

ಕವಿತೆ


ಮನದ ಕಲಸು ಮೇಲೋಗರ
ಜ್ವಾಲಾಮುಖಿಯ ಗೆದ್ದು
ಮತ್ತೆ ಎದ್ದ ಬಿರುಗಾಳಿಯ
ಹೊಯ್ದಾಟದಲೂ ದಿಟ್ಟನೆ ನಿಂದು
ಅಷ್ಟ ದಿಕ್ಕುಗಳಿಂದ ಬರುತಿಹ
ಭವ್ಯ ಆರ್ಭಟವ ಒದ್ದು
ಮೌನ ಭೂಮಿಕೆಯ ಅಂತಿಮ
ಘಟ್ಟದಲಿ - ಜೀವ ತಳೆದಿದೆ ಕವಿತೆ

ಲೇಖನಿ ಚಡಪಡಿಸುತಿದೆ

ಸುಂದರ ಪುಟವ ಅರಸುತಿದೆ
ಕವಿತೆ-ಪುಟದ ಸಂಗಮಕೆ ಕಾಯುತಿದೆ
ಮತ್ತೆ ಮೂಡುವ ನವಿಲುಗರಿಯ
ಕನಸ ಕಾಣುತಿದೆ

ಪುಟವೊಂದು ಹಾತೊರೆಯುತಿದೆ

ತನ್ನ ಸಂಪೂರ್ಣ ಆವರಿಸಿಬಿಡುವ ಕವಿತೆಗಾಗಿ
ಬಹುವಾಗಿ ತವಕಿಸುತಿದೆ
ಕವಿತೆಯ ತನ್ನದಾಗಿಸುವುದಕಾಗಿ

ಆಷಾಢದ ಗಾಳಿ ಭೋರೆಂದು ಬೀಸುತಿದೆ

ಎಲ್ಲವನೂ ಹಾರಿಸಿ ಅಟ್ಟಹಾಸ ಬೀರುತಿದೆ
ಪುಟವು ಪಟಪಟನೆ ಅಲುಗುತಿದೆ
ಲೇಖನಿ ಚಡಪಡಿಸುತಿದೆ
ಕವಿತೆ ಕಾಯುತಿದೆ !!

6 comments:

  1. ಕವಿತೆಯ ಹುಟ್ಟು ಚೆನ್ನಾಗಿದೆ,
    ಶಬ್ದಗಳ ವೇಗ ಹಿತವಾಗಿದೆ

    ReplyDelete
  2. ಚಡಪಡಿಕೆಯೊಳಗಿಂದ ಹೊರಬಂದ ನಿಮ್ಮ ಈ ಕವಿತೆ ಚೆನ್ನಾಗಿದೆ. ಇಷ್ಟವಾಯಿತು.

    ReplyDelete
  3. ದಿವ್ಯ ,ಚೆನ್ನಾಗಿ ಇದೆ ಕವಿತೆ

    ReplyDelete
  4. ಕವಿತೆಯ ಹುಟ್ಟಿನ ಅರ್ಭಟ ಚೆನ್ನಾಗಿ ಮೂಡಿದೆ.
    ಭಾವನೆಗಳ ಅ೦ತರ೦ಗದ ಮೂಸೆಯಲ್ಲಿ , ಶಬ್ದಗಳ ತಿಕ್ಕಾಟದಲ್ಲಿ,
    ಮೊಸರ ಕಡೆದು ಬೆಣ್ಣೆ ತೆಗೆದ೦ತೆ, ಕಾಗದದ ಮೇಲೆ, ಶಬ್ದಗಳ ಜಾಲದಲ್ಲಿ ವ್ಯಕ್ತವಾಗುವ ಭಾವಗಳು- ಕಾವ್ಯ.
    ಚೆನ್ನಾಗಿದೆ ತಮ್ಮ ಶೈಲಿ.

    ReplyDelete
  5. ’ಲೇಖನಿ ಚಡಪಡಿಸುತ್ತಿದೆ !!’ ಹೆ ಹೆ ಈಗಿನ ಕಾಲದಲ್ಲಿ ಕೀ ಬೋರ್ಡ್ ಚಡಪಡಿಸುತ್ತಿದೆ ಆಗ್ಬೇಕು !

    ReplyDelete
  6. ದಿವ್ಯ ಅವರೇ,
    ಸುಂದರವಾದ ಕವಿತೆ... ಹೊಸ ವರ್ಷದ ಹಾರ್ದಿಕ ಶುಭಾಶಯಗಳು...
    ನಿಮ್ಮವ,
    ರಾಘು.

    ReplyDelete