Wednesday, May 11, 2022

ಊರಿಂದ ಹೊರಟಾಗ...

ಹೆದ್ದಾರಿಯಲ್ಲಿ ಓವರ್ ಟೇಕ್
ಮಾಡುವ ವಾಹನಗಳ ವೇಗ
ಮನಸ್ಸಿನಲ್ಲಿ ಕಳೆದ ವಾರದ
ಸವಿನೆನಪುಗಳ ಓಘ..


ಕಡಲತಡಿಯಲಿ ಕಳೆದ ಮಧುರ ಸಂಜೆ
ಎಲ್ಲರನ್ನೂ ಮತ್ತೆ ಭೇಟಿಮಾಡಿಸಿದ ಮುಂಜಿ
ರಾತ್ರಿ ನೋಡಿದ ತೇರು, ಜಾತ್ರೆಯ ಚೆಲುವು
ಅಪರಾತ್ರಿಯಾದರೂ ಕರೆವ ಅಕ್ಕನ ಒಲವು


ವರುಷಗಳ ನಂತರ ಸಿಕ್ಕ ಗೆಳೆಯರು
ಆಡಿದ ಮಾತುಗಳು ನೂರಾರು
ಬಾಕಿ ಉಳಿದಿವೆ ಇನ್ನೂ ಹಲವಾರು
ಮಾಡಿದೆ ಮುಂದಿನ ಭೇಟಿ ಜರೂರು


ಮಾಡಿ ಪಂಚವಿಧ ಭಕ್ಶ್ಯ ಭೋಜನ
ಆದರಿಸಿ ಕರೆವರು ಅತ್ತೆ ದೊಡ್ಡಮ್ಮ
ಪಟ್ಟಿ ಮಾಡಿ ಮಿಸ್ಸಾಗದಂತೆ ಯಾವುದೇ ಐಟಮ್ಮು
ಮಾವು ಹಲಸು ಉಂಡೆ ತುಂಬಿ ಕೊಡುವ ಅಮ್ಮ


ಕಿಚಿ ಕಿಚಿ ಶೆಖೆಗೆ ಹಾಯೆನಿಸುವಂತೆ ಎ.ಸಿ.ಯ ತಂಪು
ಧಾವಂತದ ದಿನಚರಿಗೆ ಒಂದು ವಾರ ರಜೆಯ ಕಂಪು
ನಾಳೆಯ ಸೂರ್ಯ ತರುವನು ಹೊಸ ಉತ್ಸಾಹ
ಮತ್ತೆ ಮೂಡುವುದು ನವಚೈತನ್ಯ ನಿಸ್ಸಂದೇಹ!


ಅಶ್ರುತರ್ಪಣ

ಬಾಲ್ಯ ಎಂಬ ಹೊತ್ತಗೆಯಲ್ಲಿ

ಅಜ್ಜಿಯದೇ ಮಹಾ ಪರ್ವ

ಅವಳಿಲ್ಲದ ಪುಟಗಳೇ ಇಲ್ಲ

ಬಾಲ್ಯವೆಂದರೆ ಅವಳೇ ಎಲ್ಲಾ..


ಮಹಾಭಾರತ ರಾಮಾಯಣದ ಕಥೆ ಹೇಳಲು

ಅಪ್ಪಿಕೊಂಡು ಗುಬ್ಬಚ್ಚಿಯಾಗಿ ಮಲಗಲು

ರವಿವಾರ ಬಿಸಿಬಿಸಿ ತಲೆಸ್ನಾನ ಮಾಡಿಸಲು

ಗೈಡ್ಸ್ ಯೂನಿಫಾರಂಗೆ ಎರಡು ಜಡೆ ಕಟ್ಟಲು

ಎಲ್ಲಕ್ಕೂ ನಮಗೆ ಅಜ್ಜಿಯೇ ಬೇಕು..


ಕಾಲುಗಂಟಿನ ಗಾಯಕ್ಕೆ ಡೆಟ್ಟಾಲು ಹಚ್ಚಿದ್ದು

ಬಡ್ಡಿ ಶೇಕಡಾ ಲೆಕ್ಕವ ತಲೆಯಲ್ಲಿ ತುಂಬಿದ್ದು

"ಮಿತ್ರಸಮಾಜ"ದಲ್ಲಿ ಮಸಾಲೆದೋಸೆ ತಿನ್ನಿಸಿದ್ದು

ರಥಬೀದಿ ಉತ್ಸವದಿ ಬಲೂನು ಕೊಡಿಸಿದ್ದು

ಎಲ್ಲಕ್ಕೂ ನಮ್ಮ ಅಜ್ಜಿಯೇ ಸೈ..


ಇದೆಲ್ಲಾ ನಾವು ನೋಡಿದ ಅಜ್ಜಿ

ಒಂದು ಕಡಲಿನ ಸುಂದರ ಚಿತ್ರದಂತೆ..

ಅದರ ಹಿಂದಿರುವುದು ಮಹಾ-

ಬಿರುಗಾಳಿಯ ಎದುರಿಸಿಯೂ ಎಲ್ಲರನು

ದಡ ಸೇರಿಸಿದ ಒಂದು ದಿಟ್ಟೆಯ ಕತೆ.


ಹೌದು! ಅವಳೊಂದು ಶಿವಗಾಮಿಯಂತೆ

ರವಿ ಉಚ್ಛದಲ್ಲಿದ್ದು ಹುಟ್ಟಿದ ಕೆಚ್ಚೆದೆಯ ಹೆಣ್ಣು!

ಹತ್ತು ಹಲವರ ಧೈರ್ಯವನು ಒಬ್ಬಳೇ ತಳೆದು ಬಂದಳು

ನೂರು ಜನರ ಬದುಕಿಗೆ ದಾರಿ ದೀಪವಾದಳು


ಒಮ್ಮೆ ಕೇಳಿದ್ದೆ ಚಿಕ್ಕವಳಿದ್ದಾಗ - ಹೇಗಜ್ಜೀ

ನಿನಗೆ ಅಷ್ಟೊಂದು ಧೈರ್ಯ? ನಿರ್ಭಯತೆ?

ಅಜ್ಜಿ ಹೇಳಿದ್ದರು "ಪೆಟ್ಟು ತಿಂದು ತಿಂದೂ 

ಕಲ್ಲಾದ ಮೇಲೆ ನೋವಿನ ನೆನಪೇ ಇರದು.

ಕೊಲ್ಲುವವನಿಗಿಂತ ಕಾಯುವವ ದೊಡ್ಡವ

ಎಂದು ನೆನಪಿದ್ದರೆ ಅಷ್ಟೇ ಸಾಕು!!"


ಅಜ್ಜಿಯ ಧೀಶಕ್ತಿಗೆ ನಾವು ಸದಾ ಬೆರಗಾಗಿದ್ದೇವೆ..

ಅವಳ ಎಂಭತ್ತರ ಉತ್ಸಾಹಕ್ಕೆ ನಾಚಿ ನೀರಾಗಿದ್ದೇವೆ..

ಆದರೆ ಇನ್ನು ಊರಿಂದ ಹೊರಟಾಗ ಕಾಲಿಗೆ ನಮಸ್ಕರಿಸಿ 

ಆಶೀರ್ವಾದ ಪಡೆಯಲು ಅಜ್ಜಿಯೇ ಇಲ್ಲಾ 

ಮನದ ತುಂಬಾ ಸದಾ ಅವಳೇ ಎಲ್ಲಾ..


A poem in sad demise of our grandmother..

Written on 4th June, 2017.

Smt. Srimathi Mallya

25/04/1932 - 24/05/2017

Wednesday, January 1, 2014

ಶುಭ ವಿದಾಯ

ಹದಿಮೂರು ಅಶುಭವಂತೆ ಯಾರದೋ ಉವಾಚ
ನನಗಾದರೋ ಅದು ಸದಾ ಶುಭ ಶಕುನ
ಹನ್ನೆರಡು ಕೊಡದನ್ನು ಹದಿಮೂರು ಕೊಟ್ಟಿದೆ
ಪ್ರೀತಿ ಪ್ರೇಮ ಸಹನೆ ಅಕ್ಕರೆ ಹೆಚ್ಚಿಸಿದೆ
ಎರಡು ಜೀವದ ಪ್ರೀತಿಯನು ಮೂರಾಗಿಸಿದೆ

ಮುಗಿದುಹೋಗುತಿದೆ ೨೦೧೩
ನೆನಪಿನ ಬುತ್ತಿಯನು ಮನದೊಳಗೆ ಬಿಡುತ್ತಾ
ಬೇಕಾದ್ದು ಆರಿಸಿಕೊ ಎಂಬ ಆಯ್ಕೆಯ ನೀಡುತ್ತಾ
ಕಟ್ಟಿಕೊಳ್ಳುತಿಹೆನು ತಿಂದ ಸಿಹಿ ನೆನಹುಗಳನು
ಮರೆಯಲಾಗದ ಮಧುರ ಕ್ಷಣಗಳನ್ನು

ಹದಿಮೂರರ ಸವಿಯ ನೆನೆಯುತ್ತಾ
೨೦೧೪ ಕ್ಕೆ ಆದರದ ಸ್ವಾಗತ
ಹದಿಮೂರು ಎಂದಿಗೂ ಅವಿಸ್ಮರಣೀಯ
ನಿನಗಿದೋ ಪ್ರೀತಿಯ ಶುಭ ವಿದಾಯ!!

Wednesday, January 11, 2012

ಇನಿಯ ಹೇಳಿದ್ದು !!

ಸುಯ್ ಸುಯ್ ಎನ್ನುತಿರುವ ಕುಕ್ಕರ್
ನೀನು ಅಡುಗೆ ಮನೆ ಒಳ ಹೋದದ್ದೇ
ಜೋರಾಗಿ ಉದ್ದುದ್ದ ಸೀಟಿ ಹಾಕುತ್ತದೆ

ಎಣ್ಣೆಯಲಿ ನೀ ಕರಿಯುವ ಹಪ್ಪಳ
ನಿನ್ನ ನೋಡುತ್ತಾ ಮುಖ ಅರಳಿಸುತ್ತಾ
ಖುಷಿಯಲ್ಲಿ ಊರಗಲವಾಗುತ್ತೆ

ನಿನ್ನ ಬಳೆಗಳ ನಾದವ ಕೇಳುತ್ತಾ
ತುರಿ ಮಣೆಯು ಆನಂದದಿಂದ
ಪಟ ಪಟನೆ ಕಾಯಿಯ ತುರಿಯುತ್ತದೆ

ಒಗ್ಗರಣೆಯ ಸಾಸಿವೆ ಕಣಗಳೋ
ನಾ ಮುಂದು ತಾ ಮುಂದು ಎಂದು
ನಿನ್ನೆಡೆ ಬರಲು ಚಡಪಡಿಸುತ್ತವೆ

ಅಲ್ಲಿ ಒಳಗೆ ಅಡುಗೆ ಮನೆಯಲ್ಲಿ
ಎಲ್ಲಾ ನಿನ್ನೊಡನೆ ಸರಸವಾಡುವವರೆ
ನನ್ನ ಅನುಪಸ್ಥಿತಿಯಲಿ

ನೆನಪಿರಲಿ ನನ್ನ ರಾಣಿ
ನಾನಿಲ್ಲಿ ಕಾದುಕುಳಿತಿರುವೆ
ನಿನ್ನ ಬರವನ್ನು ಇದಿರು ನೋಡುತ್ತಾ
ನಿನ್ನ ಕೈ ರುಚಿ ಸವಿಯಲು ಕಾಯುತ್ತಾ...

Tuesday, January 3, 2012

ಹೆಸರಿನಲ್ಲೇನಿದೆ?

ಮೊನ್ನೆ ಒಂದು ಮೇಲ್ ಬಂದಿತ್ತು. ಅದೂ ಯು.ಎಸ್ ಉದ್ಯೋಗಿ ಒಬ್ಬರು ಕಳುಹಿಸಿದ್ದು. ವಿಷಯ ಏನಪ್ಪಾ ಎಂದರೆ ಅವರು ಮದುವೆ ಆಗಿ ಸರ್ ನೇಮ್ ಬದಲಾಗಿರೋದ್ರಿಂದ ಅವರ ಕಂಪನಿ ಆಫಿಶೀಯಲ್ ಮೇಲ್ ಐಡಿ ಕೂಡ ಬದಲಾಯಿಸುತ್ತಿದ್ದಾರೆ ಅಂತ! ಅಬ್ಬಾ ಹೆಂಗಸೇ, ಪರವಾಗಿಲ್ವೆ ನಿನ್ನ ಪತಿ ಪ್ರೇಮ ಅಂದು ಕೊಂಡ್ವಿ!

ಈ ಜಗತ್ತಿನಲ್ಲಿ ನಾವು ಎಲ್ಲದಕ್ಕೂ ಅತಿ ಹೆಚ್ಚು ಇಷ್ಟ ಪಡುವ ಶಬ್ದ ಎಂದರೆ ಅದು ನಮ್ಮ ಹೆಸರೇ ಇರಬೇಕು! ಅಲ್ವಾ? ನಮ್ಮ ಗುರುತಿಸುವಿಕೆಗೆ, ಸಂಬೋಧನೆಗೆ ಇರುವ ಒಂದು ಪದವಾದರೂ ನಮಗೆಲ್ಲಾ ಅದರ ಬಗ್ಗೆ ಏನೋ ಒಂದು ಹೆಮ್ಮೆ, ಉಳಿದವರು ನಮ್ಮನ್ನು ಹೆಸರು ಹಿಡಿದು ಕರೆದಾಗ ಒಂದು ಸಂತಸ. ನಮ್ಮ ಮನೆಗೆ ಅಮ್ಮನ ಅಕ್ಕ ತಮ್ಮ ಎಲ್ಲ ಬಂದಾಗ ಅಮ್ಮನ ಹತ್ರ ಹೇಳ್ತಿದ್ದ ಒಂದು ಮಾತು ನಂಗೆ ಈಗಲೂ ನೆನಪಿದೆ, ಆಹಾ ನಿನ್ನ ಗಂಡ ಅದೆಷ್ಟು ಸಲ ನಿನ್ನನ್ನು ಗಾಯತ್ರಿ ಗಾಯತ್ರೀ ಅಂತ ಕರೀತಾನೆ, ಖುಷಿಯಾಗುತ್ತೆ ಕೇಳೋದಕ್ಕೆ ಅಂತ :-) ಅಪ್ಪನೂ ಹೇಳೋವ್ರು - ಹ್ಞೂ ಹೆಸರು ಹಿಡಿದು ಆಗಾಗ ಕರೆಯೋದು( ಹೆಂಡತಿಯನ್ನು) ಪ್ರೀತಿಯ ಸಂಕೇತ ಅಂತ!

ಅಂದ ಹಾಗೆ ಹೆಸರಿನ ಬಗ್ಗೆ ನಾನು ಈಗ ಬರೆಯಲು ಶುರು ಮಾಡಿದ್ದಕ್ಕೆ ಒಂದು ಕಾರಣವಿದೆ - ಅದೇನೆಂದರೆ ನಾನು ನನ್ನ ಬ್ಲಾಗ್ , ಫೇಸ್ ಬುಕ್ ಇತ್ಯಾದಿ ಕಡೆಗಳಲ್ಲಿ "ದಿವ್ಯಾ ಮಲ್ಯ" ಇಂದ "ದಿವ್ಯಾ ಮಲ್ಯ ಕಾಮತ್" ಅಂತ ಹೆಸರು ಬದಲಾಯಿಸಿದ್ದು! ಬದಲಾವಣೆಗಿಂತ ಹೆಸರನ್ನು ಉದ್ದಗೊಳಿಸಿದ್ದು ಅನ್ನಬೇಕೇನೋ :-) ಚಿಕ್ಕಂದಿನಿಂದ "ದಿವ್ಯಾ ಮಲ್ಯ" ಅನ್ನೋ ಐಡೆಂಟಿಟಿಯಲ್ಲಿ ಬೆಳೆದು ಬಂದು ಈಗ ಹಠಾತ್ತನೆ ಅದನ್ನು ದಿವ್ಯಾ ಕಾಮತ್ ಅಂತ ಬದಲಾಯಿಸಲು ಸ್ವಲ್ಪ ಕಷ್ಟ ಅನಿಸಿತ್ತು. ಹಾಗಂತ ಕಾಮತ್ ಅಂತ ಹಾಕಿಕೊಳ್ಳದೆ ಇರಲೂ ನನಗೆ ಮನಸಿಲ್ಲ.. ಇದೊಳ್ಳೆ "ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ" ಅಂತ ನೀವು ಕರೆದರೂ ಪರವಾಗಿಲ್ಲ. ಇದ್ದದನ್ನು ಬಿಡದೆ, ಬಂದದ್ದನ್ನೂ ಇಟ್ಟುಕೊಳ್ಳುವ ಒಂದು ಸಿನ್ಸಿಯರ್ ಪ್ರೀತಿಯೇ ಈ ಹೆಸರು ಉದ್ದಗೊಳಿಸುವಿಕೆಯ ಕಾರಣ.

ಮದುವೆ ಆದಮೇಲೆ ಹುಡುಗಿಯರ ಸರ್ ನೇಮ್ ಬದಲಾವಣೆಯಾಗುವುದು ನಮ್ಮಲ್ಲಿರುವ ಒಂದು ಅಲಿಖಿತ ನಿಯಮವೇ. ಆದರೆ ಆಮೇಲೆ ಕಾನೂನು ಪ್ರಕಾರ ಹೆಸರು ಬದಲಾವಣೆ ಮಾಡಿಕೊಳ್ಳುವುದು ಇತ್ಯಾದಿ ಪ್ರಕ್ರಿಯೆ ಸ್ವಲ್ಪ ಕಿರಿಕಿರಿ ಆದದ್ದರಿಂದ ಹೆಚ್ಚಿನವರು ಆ ಗೋಜಿಗೆ ಹೋಗುವುದೇ ಇಲ್ಲ . ಹೀಗಾಗಿ ಟೀಚರ್ ಆಗಿರುವ ನನ್ನ ಅತ್ತೆ ಒಬ್ಬರು ಈಗಲೂ ಅವರ ವಿದ್ಯಾರ್ಥಿಗಳಿಗೆ "ಮಲ್ಯ" ಟೀಚರ್ರೆ! ಇದು ನನ್ನ ಅಜ್ಜಿಗೆ ಸ್ವಲ್ಪ ಕಸಿವಿಸಿಯ ವಿಷಯವಾಗಿತ್ತಂತೆ. ಅವಳು ಮದ್ವೆ ಆದಮೇಲೂ ಮಲ್ಯ ಟೀಚರ್ರಾಗಿಯೇ ಕರೆಸಿಕೊಳ್ತಿದ್ದಾಳಲ್ವಾ ಅಂತ! ಹಾಗಾಗಿ ನಮ್ಮ(ಮೊಮ್ಮಕ್ಕಳ) ಶಾಲಾ ಸೇರ್ಪಡೆಯ ಸಮಯದಲ್ಲಿ, ಸರ್ ನೇಮ್ ಕೊಡೋದೇ ಬೇಡ, ಬರೀ ಹೆಸರು ಮಾತ್ರ ಸಾಕು ಅಂದಿದ್ರಂತೆ. ಹಾಗಾಗಿ ಶಾಲಾ/ಕಾಲೇಜು ಕಡತದಲ್ಲೆಲ್ಲಾ ನಾನು ಬರೀ ದಿವ್ಯಾ! ಮುಂದೆ ಪದವಿ ಶಿಕ್ಷಣದ ಸಮಯದಲ್ಲಂತೂ ಒಂದಕ್ಕಿಂತ ಜಾಸ್ತಿ ದಿವ್ಯಾ ಇದ್ದಾಗ ಒಬ್ಬಳು ದಿವ್ಯಾ ಕೆ, ಇನ್ನೊಬ್ಬಳು ದಿವ್ಯಾ ರಾವ್ ಅಂತೆಲ್ಲ ಅವರನ್ನು ವಿಂಗಡಿಸಿಕೊಂಡರೆ ನಾನು "ಓನ್ಲಿ ದಿವ್ಯಾ" ಅಂತ ಹೇಳಿಕೊಳ್ಳಬೇಕಾದ ಪರಿಸ್ಥಿತಿ :( ಆಗೆಲ್ಲಾ ಅಪ್ಪ ಅಮ್ಮ ಅಜ್ಜಿಯನ್ನು ತರಾಟೆಗೆ ತೆಗೆದುಕೊಂಡಿದ್ದೆ ಒಂದು ಇನಿಶಿಯಲ್ ಆದರೂ ಕೊಡಬಾರದಿತ್ತಾ ಅಂತ!

ಆದರೆ ನನ್ನ ಆ ದುಃಖಕ್ಕೆ ಪೂರ್ಣ ವಿರಾಮ ದೊರೆತದ್ದು ನಾನು ಕೆಲಸಕ್ಕೆ ಸೇರುವ ಸಮಯ ಬಂದಾಗ. ನನಗೆ ಕೆಲಸ ಸಿಕ್ಕಿ ಕಂಪೆನಿ ಸೇರುವ ಸಂದರ್ಭದಲ್ಲಿ, ಮೊದಲ ದಿನ ಒಂದಿಷ್ಟು ಫಾರಂ ಗಳನ್ನು ತುಂಬಬೇಕಿತ್ತು. ಆಗ ಲಾಸ್ಟ್ ನೇಮ್ ಜಾಗವನ್ನು ಖಾಲಿ ಬಿಟ್ಟಿದ್ದೆ. ಆದರೆ ಆಮೇಲೆ ಎಚ್. ಆರ್. ಫೋನ್ ಮಾಡಿ ಲಾಸ್ಟ್ ನೇಮ್ ಫೀಲ್ಡ್ ಖಾಲಿ ಇದ್ರೆ ಸಿಸ್ಟಮ್ ಅದನ್ನು ತಗೊತಿಲ್ಲ. ಹಾಗಾಗಿ ಮುಂಚಿನ ದಾಖಲೆಯಲ್ಲಿ ಇಲ್ಲದಿದ್ರೂ ಪರವಾಗಿಲ್ಲ, ಇಲ್ಲಿ ಹಾಕಲೇ ಬೇಕು, ಏನ್ ಹಾಕಲಿ ಹೇಳಿ ಅಂತ ಕೇಳಿದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು! ಅಬ್ಬ ಅಂತೂ ಕೊನೆಗೆ ಮಲ್ಯ ಅಂತ ಸೇರಿಸೋ ಚಾನ್ಸ್ ಸಿಕ್ಬಿಡ್ತು ಅಂತ :-)

ಅಂದಹಾಗೆ, ಸರ್ ನೇಮ್ ಬಿಡಿ ಮದುವೆಯ ನಂತರ ಹುಡುಗಿಯ ಹೆಸರನ್ನೇ ಬದಲಾಯಿಸುವ ಪದ್ಧತಿಯೊಂದು ನಮ್ಮ ಜಿ.ಎಸ್.ಬಿ ಸಮುದಾಯದಲ್ಲಿದೆ ಎಂದರೆ ನಂಬುತ್ತೀರಾ? ಸುಧಾ ಇದ್ದವಳು ವಿಜಯಾ, ಸೌಮ್ಯಾ ಇದ್ದವಳು ವರ್ಷಾ ಹೀಗೆ ಏನೇನೋ ಆಗುತ್ತಾರೆ :-( ಆದರೆ ನನಗಂತೂ ಈ ಕ್ರಮದ ಬಗ್ಗೆ ಮೊದಲಿಂದಲೂ ಅಸಮಾಧಾನವಿತ್ತು. ಹಾಗಾಗಿ ಮದುವೆಗೆ ಮೊದ್ಲೇ ಕೇಳ್ ಕೊಂಡಿದ್ದೆ 'ಪ್ಲೀಸ್ ನನ್ನ ಹೆಸರು ಚೇಂಜ್ ಮಾಡೋಲ್ಲ ತಾನೇ' ಅಂತ. ನನ್ನವರಾದರೋ, "ಇಲ್ವೇ... ನನ್ನನ್ನು ಸಂದೀಪ್ ಬದಲು ರಮೇಶ್ ಅಂತ ಕರೆದರೆ ನಂಗಿಷ್ಟ ಆಗುತ್ತಾ, ಖಂಡಿತಾ ಇಲ್ಲ, ಸೊ ನೀನೂ ಯಾವಾಗಲೂ ದಿವ್ಯಾನೆ" ಅಂದಿದ್ರು! ಆದರೂ ಮದುವೆ ದಿನ ಹೆಸರಿಡೋ ಶಾಸ್ತ್ರದ ಸಮಯ ಬಂದಾಗ, ನಾನು ಎಲ್ಲಾ ವಿಷಯಾನೂ ಅವ್ರಿಗೆ ನೆನಪಿಸ್ತಾ ಇರ್ತೇನೆ ಅಂತ "ಸ್ಮೃತಿ" ಅಂತ ಹೆಸರಿಟ್ಟರು(ಶಾಸ್ತ್ರಕ್ಕೆ ಮಾತ್ರ!)... ಆದ್ರೆ ಈಗ ಮಾತ್ರ ಎಷ್ಟೋ ವಿಷಯಗಳನ್ನು ಅವ್ರೆ ನಂಗೆ ಜ್ಞಾಪಿಸಬೇಕಾದ ಪರಿಸ್ಥಿತಿ ಬಂದಾಗ "ನಿನ್ನ ಹೆಸರನ್ನು ವಿಸ್ಮೃತಿ ಅಂತ ಚೇಂಜ್ ಮಾಡ್ತೀನಿ ನೋಡು" ಅಂತ ಧಮಕಿ ಹಾಕ್ತಾರೆ :-))


Sunday, December 11, 2011

ಒಂದು ಅನುವಾದ..

ಡಿ. ಎಚ್. ಲಾರೆನ್ಸ್ ಅವರ Intimates ಕವನವನ್ನು ಕನ್ನಡಕ್ಕೆ ಅನುವಾದಿಸಲು ಮಾಡಿದ ಒಂದು ಪ್ರಯತ್ನ.

ತೃಣ ಸಮಾನವೇ ನಿನಗೆ ನನ್ನ ಪ್ರೀತಿ?
ಬೇವಿನ ಕಹಿ ಧ್ವನಿಯಲಿ ಕೇಳಿದಳು ಗೆಳತಿ
ಕೈಗಿತ್ತು ಕನ್ನಡಿಯ ಹೀಗಂದೆ ನಾನು
ಕೇಳವನಿಗೆ, ನಿನ್ನೆಲ್ಲಾ ಪ್ರಶ್ನೆಗಳನು
ಉತ್ತರಿಸಲು ಸೂಕ್ತ ವ್ಯಕ್ತಿಯವನು
ಭಾವನಾ ಸಾಮ್ರಾಜ್ಯದ ಅಧಿಪತಿಯನ್ನು
ನೇರ ಮೊರೆ ಹೊಕ್ಕು ಕೇಳು ನೀನು !

ಉತ್ತರವ ಹುಡುಕಲು ಕನ್ನಡಿಯ ಕೊಟ್ಟೆ
ತಿರುಗಿಸಿ ಹೊಡೆಯಬಹುದಿತ್ತಾಕೆ ನನ್ನ ತಲೆಗೆ ಮತ್ತೆ
ಅಲ್ಲಿ ಕಂಡಳು ತನ್ನ ಪ್ರತಿಬಿಂಬವನು ಆಕೆ
ಬಂಧಿತಳಾದಳು ತನ್ನದೇ ರೂಪಕೆ
ನಾ ನಡೆದಿದ್ದೆ ಹೊರಕ್ಕೆ !

And this is the original poem..

Intimates

by D.H. Lawrence

Don't you care for my love? she said bitterly.

I handed her the mirror, and said:
Please address these questions to the proper person!
Please make all requests to headquarters!
In all matters of emotional importance
please approach the supreme authority direct!-
So I handed her the mirror.

And she would have broken it over my head,
but she caught a sight of her own reflection
and that held her spellbound for two seconds
while I fled.

Friday, May 20, 2011

ದಿವ್ಯಾ Weds ಸಂದೀಪ್ !

ದಿನ ಉರುಳಿ ಯುಗವಾಗಿ
ಮನವೆರಡು ಒಂದಾಗಿ
ಪಿಸುಮಾತು ನುಡಿಯಾಗಿ
ಕನಸೊಂದು ನನಸಾಗಿದೆ..

ಚೈತ್ರವು ಚಿಗುರಾಗಿದೆ
ಮಾಮರವು ಕೊನರಿದೆ
ಭೂಮಿ ಕಾದು ನಿಂತಿದೆ
ಆಗಸದ ಮಿಲನಕೆ...

ಕಡಲು ಭೋರ್ಗರೆಯುತಿದೆ
ತೀರದ ಸೆಳೆತವಿದೆ
ನದಿಯು ಓಡೋಡಿ ಸಾಗುತಿದೆ
ಭಾವ ಜೀವ ತಳೆಯಲು - ಕಡಲ ತೀರದಲಿ!!!

---------------------------------------------------

ಸ್ನೇಹಿತರೆ,

ಹೊಸ ಬದುಕಿನ ಹೊಸ ಆರಂಭಕೆ
ಮುನ್ನುಡಿ ಬರೆಯುತಿಹೆವು,
ಅಲ್ಲೊಂದು ಖುಷಿಯಿದೆ, ವಚನವಿದೆ
ಸಡಗರವಿದೆ, ಸಂತಸವಿದೆ, ಊಟವಿದೆ :)

ಸತಿ ಪತಿಗಳಾಗುತಿಹೆವು,
ಜೂನ್ ೫, ೨೦೧೧ - ಆದಿತ್ಯವಾರದಂದು
೧೨.೨೮ರ ಅಭಿಜಿನ್ ಲಗ್ನದ ಸುಮುಹೂರ್ತದಲ್ಲಿ
ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ

ನೀವು ಬರಬೇಕು, ನಮ್ಮೊಂದಿಗಿರಬೇಕು, ನಮ್ಮನ್ನು ಹರಸಬೇಕು
ನಮ್ಮ ಆತಿಥ್ಯವನ್ನು ಸ್ವೀಕರಿಸಬೇಕು..

ನಿಮ್ಮ ಆಗಮನದ ನಿರೀಕ್ಷೆಯಲ್ಲಿ...
ದಿವ್ಯಾ ಮತ್ತು ಸಂದೀಪ್