ರೇಡಿಯೋ ತಿರುಗಿಸಿದರೆ ಸಾಕು, ಟಿ.ವಿ ಹಾಕಿದರೆ ಅಲ್ಲೂ, ಮತ್ತೆ ಓದುವ ದಿನಪತ್ರಿಕೆಯಲ್ಲೂ ನಿನ್ನೆ, ಇಂದು ನಾಳೆ ನಾವು ಕೇಳುತ್ತಿರುವುದು, ನೋಡುವುದು, ಓದುವುದು ಅಂತರ ರಾಷ್ಟ್ರೀಯ ಮಹಿಳಾ ದಿನ - ಅದರ ಮಹತ್ವ, ಮಹಿಳೆಯರ ಮಹಾನ್ ಗುಣಗಳು, ಮಹಿಳೆಯರಿಗಾಗಿ ಸ್ಪರ್ಧೆ, ಬಹುಮಾನ - ಇವೆಲ್ಲದರ ಕುರಿತು. ಆದರೆ ಇವೆಲ್ಲಾ ಮಾಡಿದಾಕ್ಷಣ ಅದರ ಅರ್ಥ ಪೂರ್ಣ ಆಚರಣೆ ಸಾಧ್ಯವೇ? ರೇಡಿಯೋದಲ್ಲಿ, ಒಂದು ಸ್ಪರ್ಧೆಯಲ್ಲಿ, ಮಹಿಳೆಯರು ಮಾಡುವ ಏನನ್ನೆಲ್ಲ ಪುರುಷರು ಮಾಡಲು ಸಾಧ್ಯವೇ ಇಲ್ಲ ಎಂದೆಲ್ಲಾ ಪಟಪಟನೆ ಹೇಳುವುದರಿಂದ ಏನು ಸಾಧನೆ ಮಾಡಿದಂತಾಗುವುದು? ವಾಸ್ತವದಲ್ಲಿ "Rose is red, Grass is green" ಎಂಬ ನಾಣ್ಣುಡಿಯಂತೆ, ಪ್ರಕೃತಿಯಲ್ಲಿ ಏನೇನು ಹೇಗಿರಬೇಕೋ ಹಾಗೆ ಇರುವುದು ಚಂದ.
ಮಹಿಳಾ ದಿನದ ಅರ್ಥ ಪೂರ್ಣ ಆಚರಣೆ ಆಗಬೇಕಾಗಿರುವುದು - ಒಂದು ದಿನದ ಮಹಿಳಾ ಮಹಿಮೆಯ ಗುಣಗಾನದಿಂದ ಅಲ್ಲ. ನಮ್ಮ ಇಂದಿನ ಸಮಾಜದಲ್ಲಿ, ಇಷ್ಟೊಂದು ವಿಜ್ಞಾನ ತಂತ್ರಜ್ಞಾನದ ಪ್ರಗತಿಯ ದಿನದಲ್ಲಿಯೂ ಮಹಿಳೆಯರು ಎಷ್ಟೊಂದು ಕಷ್ಟಗಳನ್ನು ಎದುರಿಸುತ್ತಿದ್ದಾರೆ, ಬವಣೆ ಪಡುತ್ತಿದ್ದಾರೆ - ಎನ್ನುವುದನ್ನು ಎಲ್ಲರೂ ಮನಗಂಡು, ಆಕೆಗೂ, ಅವಳ ಕನಸುಗಳನ್ನು ನನಸು ಮಾಡುವ ಸಮಯ ಕೊಟ್ಟರೆ, ಆಗ ಮಹಿಳಾ ದಿನಕ್ಕೆ ಅರ್ಥ ಬರಲು ಸಾಧ್ಯ. ಇತ್ತೀಚಿಗೆ ನೋಡಿದ, ಕೇಳಿದ ಕೆಲ ಮನ ಕಲಕುವ ಘಟನೆಗಳ ನೊಂದ ಜೀವಗಳು - ತುಂಬಾ ಸಣ್ಣ ಪ್ರಾಯದಲ್ಲಿಯೇ ಭಾವನೆಗಳ ಅಮಲಿನಲ್ಲಿ, ಮದುವೆಯಾಗಿ ಮತ್ತೆ ಜೀವನದ ವಾಸ್ತವದಲ್ಲಿ ಕಣ್ಣೀರು ಕಂಡವರು, ಒಂದು ಕಡೆಯಾದರೆ, ಅನುರೂಪ ಎಂದೆನಿಸುವ ವರನನ್ನು ತಾವೇ ಹುಡುಕಿ, ನೋಡಿ, ಮದುವೆ ಮಾಡುವ ಒಂದೇ ಒಂದು ಗುರಿಯನ್ನಿಟ್ಟುಕೊಂಡು, ಆತುರದಲ್ಲಿ ಮದುವೆ ಮುಗಿಸಿ, ಆಮೇಲೆ ಮಗಳ ಬಾಳಿನ ದುರಂತ ನೋಡಿದ ಹೆತ್ತವರು ಮತ್ತೊಂದು ಕಡೆ.. ಇವೆಲ್ಲಾ ಈ ಒಂದು ಕವನಕ್ಕೆ ಜನ್ಮ ಕೊಟ್ಟಿವೆ. ಇಂದಿನ ಈ ಯುಗದಲ್ಲೂ, ಹುಡುಗಿಯನ್ನು ಓದಿಸಿ, ಕೆಲಸಕ್ಕೆ ಕಳಿಸುವಷ್ಟು ಹಿರಿದಾದ ಮನಸು ಹಲಮಂದಿ ಹಿರಿಯರಲ್ಲಿ ಇದ್ದರೂ, ಅದರ ನಂತರದ ಪ್ರತಿ ದಿನವೂ ಅವರಿಗೆ, ಹುಡುಗಿ ಮತ್ತೊಬ್ಬರಿಗೆ ದಾಟಿಸಬೇಕಾದ ಒಂದು ಜವಾಬ್ದಾರಿ. ಆ ಜವಾಬ್ದಾರಿಯಿಂದ ಆದಷ್ಟು ಬೇಗ ಕಳಚಿಕೊಳ್ಳುವ ಅವರ ಪ್ರಯತ್ನದಲ್ಲಿ, ಹುಡುಗಿಯ ಕನಸುಗಳು, ಮುಂದಿನ ಜೀವನ ಏನೇನೋ ಆಗುವ ಸಾಧ್ಯತೆಗಳು ! ಇದು ಆಗಬಾರದು. ಜೀವನದ ಪ್ರತಿ ಘಟ್ಟದಲ್ಲೂ ಆಕೆಗೆ, ಆಕೆಯ ಕನಸುಗಳಿಗೆ ಸಾಕಷ್ಟು ಸಮಯ ನೀಡಬೇಕು.
ಪುಟ್ಟ ಮಗುವಾಗಿದ್ದಾಗಿಂದಲೇ, ಯಾವುದೇ ತಾರತಮ್ಯವಿಲ್ಲದೆ ಮಗುವಿನಲ್ಲಿ ಜೀವನದ ಗುರಿಯ ಬಗ್ಗೆ ಮಹತ್ವಾಕಾಂಕ್ಷೆ ಮೂಡಿಸಬೇಕು. ಪುಟ್ಟ (ಗಂಡು) ಮಗುವಿನ ತಾಯಿಯೊಬ್ಬಳು ಹೇಳಿದ್ದು ನೆನಪಿಗೆ ಬರುತ್ತಿದೆ - ಮಗುವಿನ ಮುಖದ ಮೇಲೆ ಒಂದು ಸಣ್ಣ ಮಚ್ಚೆಯ ಥರ ಇರುವ ಒಂದು ಕಲೆಯನ್ನು ನೋಡಿ - "ಇರಲಿ ಬಿಡು..ಗಂಡು ಹುಡುಗ ತಾನೇ" ಎಂದು; ಹೌದು! ಹುಡುಗ ಹೇಗಿದ್ದರೂ ಯಾರಿಗೂ ಚಿಂತೆಯಿಲ್ಲ. ಅದು ಪುಟ್ಟ ಮಗುವಾಗಿರಲಿ, ಮದುವೆಯ ವರವಾಗಿರಲಿ; ಅದೇ, ಹುಡುಗಿ ರೂಪದಲ್ಲಿ ಒಂದಿಷ್ಟು ಕಡಿಮೆಯಿದ್ದರೂ, ಹೆತ್ತವರಾದಿಯಾಗಿ, ಬಳಗದವರಿಗೆಲ್ಲಾ ಚಿಂತೆ! ಇವೆಲ್ಲಾ ಯಾವ ದಿನ ನಮ್ಮ ಸಮಾಜದಲ್ಲಿ ಇಲ್ಲವಾಗುತ್ತದೋ (?!) ಆ ದಿನ, ಮಹಿಳಾ ದಿನದ ಆಚರಣೆ ಸಾರ್ಥಕ.
ಇರಲಾರದೆ ಆಸೆ, ಹರೆಯದ ಹುಡುಗಿಯರಿಗೆ
ಆಗಸದಿ ಹಾರಾಡಲು ಹಕ್ಕಿಯ ಹಾಗೆ
ಏಕೆ ಕಟ್ಟುವಿರಿ ಜವಾಬ್ದಾರಿಯ ದಾರ
ಹಾರಲಾಗದಂತೆ ದೂರ ದೂರ...
ಆಕೆಗೂ ಇರುವುದೊಂದು ಕನಸ ಗೋಪುರ
ಮುಗಿಸಲು ಶಿಕ್ಷಣ, ಆಗಬೇಕೆಂದು ವೃತ್ತಿಪರ
ಪಡೆಯಬೇಕೆಂದು ತಾನೂ, ಪಗಾರ
ಮಾಡಬೇಕೆಂದು ಸ್ವತಂತ್ರ ಸಂಚಾರ
ಅಷ್ಟರಲಿ ಹಿರಿಯರಿಗೆ ಆರಂಭ ಅವಸರ
ಇಳಿಸಲು ಹೊತ್ತಿರುವ ಕನ್ಯಾ ಸೆರೆ - ಭಾರ
ನೋಡುವರು ತಮ್ಮಂತಸ್ತಿಗೆ ತಕ್ಕನಾದ ವರ
ಆಗುವುವು ಅದಲು ಬದಲು ಹೂ-ಹಾರ
ಕೂಡಿದರೆ ಇವಳ ರಾಗಕೆ ಅವನ ತಾಳ
ಜೀವನ ಸುಂದರ ಸಂಗೀತ ಸಮ್ಮೇಳ
ಇಲ್ಲದಿರೆ ಸೂರು ಹಾರುವ ಜಗಳ
ಸದಾ ಮನೆಯಲಿ ಮದ್ದಲೆ - ತಾಳ !
ಅದಕಾಗೇ ಇರಲಿ, ಸಾಕಷ್ಟು ಸಮಯವು
ಮನದಲಿ ಅರಳಲು ಪ್ರೌಢಿಮೆಯ ಹೂವು
ಮತ್ತಿರಲಿ ಕಾಲ, ತಿಳಿಯಲು ಗೆಳೆಯನನು
ಜೀವನದ ತೇರಿನ ಜೋಡಿ ಹಯವನು
ಅನಿಸದೇ ಪ್ರತಿಯೊಂದು ಸ್ತ್ರೀ ಮನಕೆ
ತಿಳಿಯಬೇಕೆಂದು, ಮನದಿನಿಯನ ಪ್ರತಿ ಬಯಕೆ
ನೋಡಬೇಕೆಂದು ಲಾಲ್ ಬಾಗ್, ಜೊತೆಯಾಗಿ ಒಮ್ಮೆ
ಹರಿಸಬೇಕೆಂದು, ಒಲುಮೆಯ ಚಿಲುಮೆ
ಮತ್ತೆ ಬೇಡವೇ ಅವನದೊಂದು ಇವಳದೊಂದು B'day
ಜೊತೆಗೊಂದು ಇರಲಿ Valentine's day
ಕೊಡಲು ಉಡುಗೊರೆಗಳನು Special day
ಇರಲಿ ತಿಳಿಯಲು ಹುಡುಗನನು Many day
ಬದುಕಲು ಮುಂದೆ ಜೊತೆಯಾಗಿ Every day
ಮಾಡಲು ಭವಿಷ್ಯದ ಪ್ರತಿದಿನ Happy day !!!
ಉತ್ತಿ ಬಿತ್ತಿದ್ದು
8 months ago
ದಿವ್ಯಾ,
ReplyDeleteಬರಹದ ಹರಿವು ಚೆನ್ನಾಗಿದೆ ಮತ್ತು ನೇರವಾಗಿದೆ... ಕವನದ ಸಾಲುಗಳು ಮುದ್ದಾಗಿದೆ...ನಿಮ್ಮ ಸಾಹಿತ್ಯ ಕೃಷಿಗೆ ನನ್ನ ಹಾರ್ಧಿಕ ಅಭಿನಂದನೆಗಳು, ಹೀಗೆ ಹರಿದು ಬರಲಿ ಇನ್ನಷ್ಟು ಬರಹಗಳು.
ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು.. ನಿಮ್ಮ ಪ್ರೋತ್ಸಾಹ ಸದಾ ಇರಲಿ...
ReplyDeletedivya,nimma kavana adbhuta,naijateyannu bimbisuttide.
ReplyDeletedodda poet aaguvudara jotege ,hennumakkala eligegagi nimma contribution irli.
dr shashikala p krishnamurthy