Tuesday, October 13, 2009

ಭಾನುವಾರದ ಸಂಜೆ



ಭಾನುವಾರದ ಸಂಜೆ ಬೇಸರಿಸುತಿದೆ !

ವಿಶಾಲ ಮೈದಾನದಿ ಕ್ರಿಕೆಟ್ಟು ಆಡುತಿಹ
ಪುಟ್ಟ ಹುಡುಗರ ಬಾಯಿಂದ ಹೊರಬಿದ್ದ
"ಛೆ ಸಂಡೇ ಆಗೋಯ್ತು ಕಣ್ರೋ" ಎನ್ನೋ
ಬೇಸರದ ಮಾತನ್ನು ಕೇಳಿಸಿಕೊಳ್ಳುತಾ....

ಕಬ್ಬನ್ ಪಾರ್ಕಿನ ಮೂಲೆ ಬೆಂಚಲ್ಲಿ
ಮೈಗೆ ಮೈ ತಾಗಿಸಿ ಲೋಕವನೇ ಮರೆತಿಹ
ಮಧುರ ಭಾನುವಾರ ಮುಗಿದ ಬೇಸರದಿ
ದೂರವಾಗುತಲಿರುವ ಪ್ರೇಮಿಗಳ
ವಿರಹ ವೇದನೆಯನು ತಾ ನೋಡುತಾ...

ಆರಂಭವಾಗಲಿಹ ಪರೀಕ್ಷಾ ತಯಾರಿಗೆ
ಪುಸ್ತಕ ರಾಶಿಯೆದುರು ಪ್ರತಿಷ್ಠಾಪಿಸಲ್ಪಟ್ಟಿರುವ,
ಹೊರಗಿನ ಆಗಸದಿ ಕವಿದಿರುವ ಮೋಡಕೂ
ಭಾನುವಾರದ ಸಂಜೆಯನು ಹಳಿಯುತಲಿರುವ
ವಿದ್ಯಾರ್ಥಿಗಳ ಕೋಪದ ತಾಪಕೆ....

ಮತ್ತೊಂದು ವಾರದ ಸಮರದ ತಯಾರಿಗೆ
ಸಜ್ಜಾಗುತಿಹ ಕಾರ್ಯ ಯೋಧರ
ಮನದಲ್ಲಿ ಮೂಡುತಿಹ ಆತಂಕ ಒತ್ತಡಕೆ...

ಮತ್ತಾರು ದಿನಗಳನು ಒಬ್ಬಂಟಿಯಾಗಿ
ಮಗ ಸೊಸೆ ಮೊಮ್ಮಕ್ಕಳಿಲ್ಲದೆ ದೂಡಬೇಕು
ಎಂಬ ಅಜ್ಜನ ಬೇಸರದ ನಿಟ್ಟುಸಿರಿಗೆ...

ಭಾನುವಾರದ ಸಂಜೆ ಬೇಸರಿಸುತಿದೆ !

3 comments:

  1. ದಿವ್ಯ,
    ಕವನ ಓದಿ ಮುಗಿಸಿದ ಮೇಲೆ ಭಾನುವಾರದ ಸಂಜೆಯ ಮೇಲೆ ಅದೇನೋ ಅನುಕಂಪ. ಚೆನ್ನಾಗಿದೆ ಕವನ.

    ReplyDelete
  2. ದಿವ್ಯ,
    ಕವನ ತುಂಬು ಸೊಗಸಾಗಿದೆ,
    ಮತ್ತಾರು ದಿನಗಳನು ಒಬ್ಬಂಟಿಯಾಗಿ
    ಮಗ ಸೊಸೆ ಮೊಮ್ಮಕ್ಕಳಿಲ್ಲದೆ ದೂಡಬೇಕು
    ಎಂಬ ಅಜ್ಜನ ಬೇಸರದ ನಿಟ್ಟುಸಿರಿಗೆ..

    ಎಷ್ಟು ಸತ್ಯ ಅಲ್ವಾ?

    ಚಂದದ ಕವನಕ್ಕೆ ಅಭಿನಂದನೆಗಳು

    ReplyDelete
  3. ರಾಜೇಶ್, ಗುರು
    ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    -ದಿವ್ಯಾ.

    ReplyDelete