Tuesday, December 29, 2009

ಕವಿತೆ


ಮನದ ಕಲಸು ಮೇಲೋಗರ
ಜ್ವಾಲಾಮುಖಿಯ ಗೆದ್ದು
ಮತ್ತೆ ಎದ್ದ ಬಿರುಗಾಳಿಯ
ಹೊಯ್ದಾಟದಲೂ ದಿಟ್ಟನೆ ನಿಂದು
ಅಷ್ಟ ದಿಕ್ಕುಗಳಿಂದ ಬರುತಿಹ
ಭವ್ಯ ಆರ್ಭಟವ ಒದ್ದು
ಮೌನ ಭೂಮಿಕೆಯ ಅಂತಿಮ
ಘಟ್ಟದಲಿ - ಜೀವ ತಳೆದಿದೆ ಕವಿತೆ

ಲೇಖನಿ ಚಡಪಡಿಸುತಿದೆ

ಸುಂದರ ಪುಟವ ಅರಸುತಿದೆ
ಕವಿತೆ-ಪುಟದ ಸಂಗಮಕೆ ಕಾಯುತಿದೆ
ಮತ್ತೆ ಮೂಡುವ ನವಿಲುಗರಿಯ
ಕನಸ ಕಾಣುತಿದೆ

ಪುಟವೊಂದು ಹಾತೊರೆಯುತಿದೆ

ತನ್ನ ಸಂಪೂರ್ಣ ಆವರಿಸಿಬಿಡುವ ಕವಿತೆಗಾಗಿ
ಬಹುವಾಗಿ ತವಕಿಸುತಿದೆ
ಕವಿತೆಯ ತನ್ನದಾಗಿಸುವುದಕಾಗಿ

ಆಷಾಢದ ಗಾಳಿ ಭೋರೆಂದು ಬೀಸುತಿದೆ

ಎಲ್ಲವನೂ ಹಾರಿಸಿ ಅಟ್ಟಹಾಸ ಬೀರುತಿದೆ
ಪುಟವು ಪಟಪಟನೆ ಅಲುಗುತಿದೆ
ಲೇಖನಿ ಚಡಪಡಿಸುತಿದೆ
ಕವಿತೆ ಕಾಯುತಿದೆ !!

Thursday, December 10, 2009

ಮೌನ ರೋದನ

-- ಒಂದು ನೊಂದ ಹೃದಯದ ಮೂಕ ವೇದನೆ !


ಕಣ್ಣು ಮುಚ್ಚುತಿವೆ ಗೆಳೆಯಾ...
ನಿನ್ನ ಹುಡುಕಿದ ಕಣ್ಣುಗಳು ಮುಚ್ಚುತಿವೆ
ನಿನ್ನ ಬಯಸಿದ ಕಣ್ಣುಗಳು ಮುಚ್ಚುತಿವೆ
ಮುಷ್ಕರ ಹೂಡುತಾ ಹುಡುಕಾಟ ನಿಲ್ಲಿಸಿವೆ !

ನೀನಿರುವ ಬೀದಿಯಲಿ ಓಡಾಡುತಿರಲು
ನೀ ಬರುವ ಸಮಯದಲಿ ನಾನೂ ಹೊರಡಲು,
ನೀ ನಡೆವ ಹಾದಿಯಲಿ ನಾ ಚಲಿಸುತಿರಲು
ಹುಡುಕಿತ್ತು ಕಂಗಳು ಸದಾ ನಿನ್ನನ್ನು
ಜೊತೆಗೆ ಜೊತೆ ಸೇರುವ ನಿನ್ನ ಕಣ್ಣೋಟವನು

ಸಾವಿರ ಜನಗಳು ಸೇರಿದ್ದ ಮೇಳದಲಿ
ನಿನ್ನ ಜೊತೆ ಸೇರಿ ನಾ ನಡೆದ ಕ್ಷಣದಲ್ಲಿ
ನನ್ನೆದೆಗೆ ನಿನ್ನುಸಿರು ತಾಕಿದ ಘಳಿಗೆಯಲಿ
ಮನಸು ಬಯಸಿತ್ತು ಸದಾ ಸನಿಹವನು
ಪ್ರೀತಿ ಅಭಯ ನೀಡುವ ನಿನ್ನ ಕಂಗಳನು

ಲೋಕವನು ಕಣ್ತೆರೆದು ನೋಡುವ ಹೊತ್ತಿಗೆ
ನೀನೇ ಗೋಚರಿಸಿದ್ದು ನನ್ನ ಕಣ್ಣಿಗೆ
ಪಂಚಾಮೃತವಾದೆ ನೀ ನನ್ನ ಪಾಲಿಗೆ
ವಾಸ್ತವ-ಸಾಧ್ಯ ಕನಸನ್ನು ಕಂಡೆ
ಕನಸು ನನಸಾಗದಿರೆ? - ಎಂದು ಮರುಗುತಾ ನೊಂದೆ

ಇನ್ನೆಲ್ಲವೂ ಬರೀ ವಿಧಿಯಾಟ ಗೆಳೆಯಾ
ಕಣ್ಣು ಮುಚ್ಚುವ ಮುನ್ನ ನೀನೆದುರು ಬರುವೆಯಾ?
ಇಲ್ಲದಿರೆ ಮುಚ್ಚಿ ಹೋಗುತವೆ ಈ ಕಂಗಳು
ಮರೆಯಲಿಚ್ಚಿಸದ ನಿನ್ನನ್ನು ಮರೆಯಲು
ಮತ್ತೊಂದು ಹೊಸ ಕನಸ ಕಾಣಲು

ಕಣ್ಣು ಮುಚ್ಚುತಿವೆ ಗೆಳೆಯಾ...
ನಿನ್ನ ಹುಡುಕಿದ ಕಣ್ಣುಗಳು ಮುಚ್ಚುತಿವೆ
ನಿನ್ನ ಬಯಸಿದ ಕಣ್ಣುಗಳು ಮುಚ್ಚುತಿವೆ
ಮುಷ್ಕರ ಹೂಡುತಾ ಹುಡುಕಾಟ ನಿಲ್ಲಿಸಿವೆ !

Monday, November 9, 2009

ಬಾ..ನೋಡು ಗೆಳೆಯಾ!

-"ಬಾ.. ನೋಡು ಗೆಳತಿ... ನವಿಲುಗರಿಯು ಮರಿ ಹಾಕಿದೆ..." ಈ ಹಾಡಿನ ಸ್ಫೂರ್ತಿಯಿಂದ ಬರೆದ ಸಾಲುಗಳಿವು ! ಇತ್ತೀಚಿನ ಕೆಲವು ದಿನಗಳಲ್ಲಿ ಮನಸ್ಸಿಗೆ ತುಂಬಾ ಖುಷಿ ಕೊಟ್ಟ ಹಾಡಿದು... ಈ ಹಾಡನ್ನು ಕೇಳಿದ ಬಾಲ್ಯದ ಗೆಳತಿ, ಅದೇ ಹಾಡಿನ ಧಾಟಿಯಲ್ಲಿ, ಗೆಳೆಯನಿಗೆ ಹೇಗೆ ಪ್ರತಿಕ್ರಿಯಿಸಬಹುದು ? - ಎನ್ನುವುದನ್ನು ಕಲ್ಪಿಸಿದಾಗ ಜೀವ ತಳೆದ ಸಾಲುಗಳು...


ಬಾ ನೋಡು ಗೆಳೆಯಾ..ನನ್ನ ಮನವು ಅರಳಿ ನಿಂತಿದೆ...
ಕಣ್ಣ ರೆಪ್ಪೆ ಮುಚ್ಚದೆ.. ಬರುವ..ನಿನ್ನನೇ ನೆನೆಯುತಾ...
ನಾ..ಕಾದು ಕುಳಿತಿರುವೆ..ನಿನ್ನಾ ದಾರಿಯ ನೋಡುತಾ...

ಮರದ ತುಂಬಾ ಬೋರೆ ಹಣ್ಣು..ಮತ್ತೆ ಮಾಗಿ ಕೂತಿವೆ...
ನನ್ನ ನಿನ್ನ ಭೇಟಿಗಾಗಿ..ಮರದ ನೆರಳು ಕಾಯುತಿದೆ...
ಪಾರಿಜಾತ ಹೂವ ಹಾರ..ಮುಡಿಯನೇರಲು ತವಕಿಸಿದೆ...

ಬಾ...ಹನಿವ ಮಳೆಯಲಿ..ಹೊಳೆಯ ತಟದಲಿ..ಜೊತೆ ಸಾಗುವಾ...

ನಾನು ನೀನು ಸೇರಿಕೊಂಡು..ಕನಸ ತೇರನೆಳೆಯೋಣಾ...
ಊರ ಜಾತ್ರೆಯಲ್ಲಿ ನಾವು..ಕೈಯ ಹಿಡಿದು ನಲಿಯೋಣಾ..
ನಾನು ಬೇಕು ಅಂದ ಹೂವು...ಈಗಲಾದರೂ ಕೊಡು ಹುಡುಗಾ...

ಈ...ಗೆಳತಿ ಮನಕೂ..ನಿನ್ನ ಬಯಕೆ ಅತಿಯಾಗಿದೆ...

Tuesday, November 3, 2009

A "Happy" Birthday Story- This blog post is dedicated to all those who made my birthday a memorable one!


"It is called as "Happy" Birthday because its our duty, to make you happy on that day." I remember these words of my colleague, DeepShikha who said this on my Birthday, last year. It was just a week before of my Birthday, DeepShikha - my team lead, had relocated in Gurgaon, which is her native. In first few days of my professional life, she was the one who had stood as a role model for me and had become close, professionally as well as personally. I had pinged her on my birthday in chat, and told, "It was good if you were here today." Suddenly she asked "Is it your B'day today?" I said "Yes Deep, I need your well wishes.." She wished me right there in the chat and by the evening there was a gift on my table from DeepShikha - which was a big surprise to me. Being so far, she had arranged a gift for me by evening. I felt as if asking for a gift by telling that its my birthday and getting it, though I did not really mean it. However, my eyes were sparkling when receiving that surprise gift. I again pinged her and told what I felt. She made the above statement, and I thanked for making my B'day a "Happy Birthday"!


Its an year now and again the day had come. Last day of the last month was special one for me. But every plan which I was trying to make for the day was not working out for some or the other reason. One of my roommates and another best friend were going out of Bangalore. Though my another room mate was in Bangalore, it was not possible for her to be with me, on the midnight of my B'day. So, the previous day of my B'day, I was quite sad not only because I will be alone that night, but also for not having any plan for the next day.

But in life, nothing goes according the way we think. Exactly at 12.00AM my roommate VishnuPriya called on my mobile, to wish me. Before disconnecting the call, she left a bunch of exclamatory marks on my face by saying, "I will message you now as soon as I disconnect the phone. Please read that and .... !!" Though I insisted her to tell what the matter is, she did not utter a word except a smile on her face, which only I felt. The next minute I got an sms from her, which read "Now start searching in between your books". As a Birthday girl, I thought she would have kept a gift for me there. But nothing was I able to find there :( When I again searched there with a great concentration, I could find a cover which had a beautiful greeting card and a heart touching letter in it. After all those lines which said how special am I to her, at the end it was written "There is another sweet little friend for this card... For that you have to search in your cupboard. Its so sweet like you. Your next clue will be with that sweet little friend!!"

This is how the "Birthday Treasure Hunt" game started. And my dear friend had done a master plan for the game and made me sit and search for the gifts in midnight, without even being present in the scene. It was a pleasant experience of cracking the clue, guessing the place and tracing the gifts :) I wonder about her confidence of hiding the gifts inside my cupboard with the belief that me not seeing it till midnight. However, I made her confidence to come true. When I searched my cupboard, I got a cute beautiful angel as my gift with a clue for the second gift. The clue read "I am hiding at back of your sweet parents because I am so sweeeeet!" When I took the photo frame which has my parent's photo, in my hand, I found a cup-cake and a cadbury chocolate behind it!

Oh my God! I was falling into the well of surprises. The chit with next clue present with cake and chocolate read "I am in a well... Please go the next room.." Yes! now I guessed that the next gift must be in the bucket which is there in the other room. But I did not want to spoil the deep sleep of my friend in the other room, just because the day was special for me. So I sent an sms to my roommate asking whether the game can be continued on next day morning. She replied, the friend in the next room is supposed to open the door on my knock! Though I was not willing, I went and knocked the door with a soft bang. But the room door did not open. So it was finally decided to continue the game next morning. My guess went right. I got the gift next morning.

Similar way I got all five gifts playing treasure hunt game(My roommate had to help me for the last gift, next morning when she was back to room:) ) Unknowingly tears of happiness rolled down from my eyes at the end of the game while I was sitting in front of bunch of gifts and my dear roommate. I told her, "Your idea can be patented!"

The story of surprises did not end there. It was decided that, my lunch treat on that afternoon to two of them - i.e my room mate VishnuPriya and to the friend of other room Mayura. When we were on the way to Restaurant, Mayura escaped saying that she has to go to her friend's home near by to give there something. I did not doubt for any of that matter as Mayura goes to her friend's home often. She joined us in the Restaurant after 5-10 min of we reaching there, as she had assured before. After we placed the order, a waiter came and asked something with Mayura which I really did not understand. There was an anger mixed smile, present in both of my friends' faces but Mayura replied him saying a "yes". When I asked Mayura about what he was asking for, she said "he was asking whether to bring starters at the begining!" I was surprised on her statement as it was not a question which a supplier would ask for. However, as I wanted to wash my hands, I got up and went to wash room, without thinking much about what happened. When I returned to table, there was a delicious cake on which "Happy Birthday to Divya" was written!! Only at that moment, I was able to predict the real meaning behind all incidents which took place few minutes ago.

Well, this was my "Happy-Birthday" story. It was not only my roommates, but also many friends of school days, college days, colleagues, relatives and many more who were the co-passengers in my journey of life at different times- made it a memorable day. It was very nice to talk to so many near and dear ones on the same day.

All made it a "HAPPY" birthday. For sure, it is not the the value or number of gifts what one receives, bring the happiness; But its all about getting to know that how special we are to our near and dear ones - makes it a "Happy Birthday"

So friends, All I can say is....

Thanks would be less if I say
For making so special my day !!


Wednesday, October 28, 2009

ಕನ್ನಡಿ Vs ಹೆಣ್ಣು


ತ್ರಿಪುರ ಸುಂದರಿ ಹೆಣ್ಣಿಗೆ
ತನ್ನ ಮೊಗದ ಚೆಲುವನ್ನು
ತಾ ನೋಡಲಾಗದಿರುವುದು
ದೇವರು ಕೊಟ್ಟ ಶಿಕ್ಷೆ...
ಕನ್ನಡಿಯೇ ಆಕೆಗೆ ಶ್ರೀ ರಕ್ಷೆ


******************************************************

ಕಾರಣ ತಿಳಿಯಲಿಲ್ಲ ಯಾರಿಗೂ ಅಂದು
ಲೇಡಿಸ್ ಹಾಸ್ಟೆಲಿನ ಆ ಕನ್ನಡಿ
ಯಾಕೆ ಒಡೆದು ಹೋಯಿತೆಂದು...
ಹಿಂದಿದ್ದ ಗೋಡೆಗೆ ಮಾತ್ರ ತಿಳಿದಿತ್ತು
ರಾಶಿ ಸುಂದರ ಮುಖಗಳ ಸೆರೆ ಹಿಡಿದ
ಕನ್ನಡಿಗೆ - ಯಾರೂ ದೃಷ್ಟಿ ತೆಗೆದಿಲ್ಲವೆಂದು!

*******************************************************

ಅಂದು, ಹೊಸ ಕನ್ನಡಿ ತಂದಿರಿಸಿದಾಗ
ಉದ್ದುದ್ದ ಕಾಣ್ಸೋ ಮುಖವನ್ ನೋಡಿ
ಬೇಸರ ಪಟ್ಕೊಂಡ ಹುಡುಗಿ
ಇಂದು, ಯಾಕಿಷ್ಟಗಲ ನನ್ ಮುಖ ಎಂದು
ಬೇರೆ ಕನ್ನಡಿಲಿ ಮುಖವನ್ ನೋಡಿ
ಬೇಸರಿಸುತಿರುವ ಬೆಡಗಿ

Tuesday, October 13, 2009

ಭಾನುವಾರದ ಸಂಜೆಭಾನುವಾರದ ಸಂಜೆ ಬೇಸರಿಸುತಿದೆ !

ವಿಶಾಲ ಮೈದಾನದಿ ಕ್ರಿಕೆಟ್ಟು ಆಡುತಿಹ
ಪುಟ್ಟ ಹುಡುಗರ ಬಾಯಿಂದ ಹೊರಬಿದ್ದ
"ಛೆ ಸಂಡೇ ಆಗೋಯ್ತು ಕಣ್ರೋ" ಎನ್ನೋ
ಬೇಸರದ ಮಾತನ್ನು ಕೇಳಿಸಿಕೊಳ್ಳುತಾ....

ಕಬ್ಬನ್ ಪಾರ್ಕಿನ ಮೂಲೆ ಬೆಂಚಲ್ಲಿ
ಮೈಗೆ ಮೈ ತಾಗಿಸಿ ಲೋಕವನೇ ಮರೆತಿಹ
ಮಧುರ ಭಾನುವಾರ ಮುಗಿದ ಬೇಸರದಿ
ದೂರವಾಗುತಲಿರುವ ಪ್ರೇಮಿಗಳ
ವಿರಹ ವೇದನೆಯನು ತಾ ನೋಡುತಾ...

ಆರಂಭವಾಗಲಿಹ ಪರೀಕ್ಷಾ ತಯಾರಿಗೆ
ಪುಸ್ತಕ ರಾಶಿಯೆದುರು ಪ್ರತಿಷ್ಠಾಪಿಸಲ್ಪಟ್ಟಿರುವ,
ಹೊರಗಿನ ಆಗಸದಿ ಕವಿದಿರುವ ಮೋಡಕೂ
ಭಾನುವಾರದ ಸಂಜೆಯನು ಹಳಿಯುತಲಿರುವ
ವಿದ್ಯಾರ್ಥಿಗಳ ಕೋಪದ ತಾಪಕೆ....

ಮತ್ತೊಂದು ವಾರದ ಸಮರದ ತಯಾರಿಗೆ
ಸಜ್ಜಾಗುತಿಹ ಕಾರ್ಯ ಯೋಧರ
ಮನದಲ್ಲಿ ಮೂಡುತಿಹ ಆತಂಕ ಒತ್ತಡಕೆ...

ಮತ್ತಾರು ದಿನಗಳನು ಒಬ್ಬಂಟಿಯಾಗಿ
ಮಗ ಸೊಸೆ ಮೊಮ್ಮಕ್ಕಳಿಲ್ಲದೆ ದೂಡಬೇಕು
ಎಂಬ ಅಜ್ಜನ ಬೇಸರದ ನಿಟ್ಟುಸಿರಿಗೆ...

ಭಾನುವಾರದ ಸಂಜೆ ಬೇಸರಿಸುತಿದೆ !

Wednesday, September 23, 2009

ಲಹರಿ


ತೀರದಲಿ ಕಾಯುತಿಹ ಕಾಲ್ಗಳನು ತೋಯಿಸದೆ,
ಆಸೆ ತೋರಿಸಿ ಹಿಂದಿಕ್ಕುವ ಅಲೆಗಳಂತೆ...
ಕಡ್ಡಿ ಗೀರುತಿರೆ ಒಮ್ಮೆಲೇ ಬೆಳಗಿ ಹೊಳೆದು,
ಮತ್ತೆ ಜ್ವಾಲೆಯಾಗದ ಅಗ್ನಿ ಶಿಖೆಯಂತೆ...
ಮುಷ್ಟಿಯಲಿ ಬಂಧಿಸಿ ಖುಶಿಪಡುತಲಿರಲು,
ಸದ್ದಿರದೆ ಜಾರಿ ರಿಕ್ತ ಹಸ್ತವನುಳಿಸುವ ಮರಳಿನಂತೆ...
ದಿನದೆಲ್ಲಾ ಕ್ಷಣವೂ ರವಿಯನ್ನು ಮುಚ್ಚಿಟ್ಟು,
ಒಂದಿನಿತು ಹನಿಸದೆ ಓಡುವ ಮೋಡದಂತೆ...
ಮನಕೆ ದಾಳಿ ಇಡುತಲಿವೆ ಪರಿ ಪರಿ
ಅಕ್ಷರಕ್ಕೆ ಇಳಿಸಲಾಗದ ಅದೆಷ್ಟೋ ಲಹರಿ !

Wednesday, September 9, 2009

ಪ್ರಶ್ನೆ


ಪ್ರತಿ ನಾಳೆ ಇಂದಾಗುತ್ತಿದೆ
"ಇಂದು" ಗಳು ನಿನ್ನೆಗಳಾಗುತಿವೆ
ಬದುಕ ಹೊಳೆ ನಿಂತ ನೀರಾಗಿದೆ
ಮನಸು ಗೊಂದಲದ ಬೀಡಾಗಿದೆ

ಸರಣಿ ಅಲಂಕಾರ ದೀಪದಲ್ಲಿ
ಚಕಚಕನೆ ಓಡುವ ಬೆಳಕಿನಂತೆ
ಚಲನೆಯ ನೋಟ ಕಂಗಳಿಗೆ ಮಾತ್ರ
ವಾಸ್ತವದ ಬದುಕು ಸ್ಥಿರವಾದ ಸ್ಥಾವರ!

ಸುಂದರ ಕಾರಂಜಿ, ಚಿಮ್ಮುತಿಹ ನೀರು
ಮನಕೆ ಆಹ್ಲಾದ ಬಾಹ್ಯ ಸೌಂದರ್ಯ
ವಾಸ್ತವದಿ ಇರುವುದು ಅದೇ ನೀರು
ಆಂತರ್ಯ ಹುಡುಕುತಿದೆ ಹೊಸತನಕಾಗಿ

ಗರಗರನೆ ತಿರುಗುವ ಧರಣಿಯದೋ
ಚಲನೆ ಭ್ರಮೆಯಾದರೂ ವಾಸ್ತವದ ಸತ್ಯ
ಬದುಕಿನ ಚಲನೆ ನಿಜವೋ - ಭ್ರಮೆಯೋ
ಎಂಬ ಪ್ರಶ್ನೆಯೇ ಮನದಲ್ಲಿ ನಿತ್ಯ

Monday, August 31, 2009

ಅವಿಸ್ಮರಣೀಯ "ಲಗೇ ರಹೋ...."

"ಯಾವಾಗ ನೀನು ನಿನ್ನ ತಪ್ಪನ್ನು ಒಪ್ಪಿಕೊಂಡು, ಅದಕ್ಕಾಗಿ ಕ್ಷಮೆ ಕೇಳುತ್ತಿಯೋ, ಸತ್ಯವನ್ನೇ ಹೇಳುತ್ತೀಯೋ, ಆಗ ನಿನಗೆ ಖಂಡಿತಾ ವಿಜಯ ಪ್ರಾಪ್ತಿಯಾಗುತ್ತದೆ" ಇದು "ಲಗೇ ರಹೋ.. ಮುನ್ನಾಭಾಯಿ" ಚಿತ್ರದಲ್ಲಿ, ಗಾಂಧೀಜಿ ಮುನ್ನಾ ಭಾಯಿಗೆ ಹೇಳುವ ಮಾತುಗಳು! ತುಂಬಾ ಮೌಲ್ಯಯುತವಾದ ಮಾತುಗಳು. ಆದರೆ ಜೀವನದಲ್ಲಿ ಅದನ್ನು ಸದಾ ಅನುಸರಿಸುವುದು ಅಷ್ಟೊಂದು ಸುಲಭವಲ್ಲ. ಮೊನ್ನೆ ಸ್ವತಂತ್ರ ದಿನಾಚರಣೆಯಂದು ಬೆಳಿಗ್ಗೆ ಟಿ.ವಿ. ಚಾನಲೊಂದರಲ್ಲಿ ಈ ಚಿತ್ರದ ದೃಶ್ಯ ಮೂಡಿ ಬರುತ್ತಿತ್ತು. ಗಾಂಧೀಜಿ ಹೇಳಿದಂತೆ ಮುನ್ನಾ, ತನ್ನ ಆಪ್ತ ಸಖನ ಬಳಿ ಹೋಗಿ, ತನ್ನ ತಪ್ಪನ್ನು ಒಪ್ಪಿಕೊಂಡು ಅಳುವ ದೃಶ್ಯ ತುಂಬಾ ಹೃದಯಸ್ಪರ್ಶಿ!

ಇದು ನೋಡುತ್ತಿದ್ದಂತೆ, ನೆನಪಿನ ಸುರುಳಿಯಿಂದ ನನ್ನ ಪದವಿ ತರಗತಿಯ ಆ ಮಧುರ ದಿನಗಳು ತೇಲಿ ಬಂದವು. ಈ ಚಿತ್ರ ಮೊದಲು ತೆರೆ ಕಂಡಾಗ ನಾನು ಇಂಜಿನಿಯರಿಂಗ್ ಪದವಿಯ ಮೂರನೇ ವರ್ಷದಲ್ಲಿದ್ದೆ. ಈ ಚಿತ್ರಕ್ಕೂ ನಮ್ಮ ವಿದ್ಯಾರ್ಥಿ ಜೀವನಕ್ಕೂ ಒಂದು ಅಗಾಧವಾದ ನಂಟಿದೆ! ಮನದಾಳ ಸೇರಿದ್ದ ಈ ಕ್ಷಣಗಳೆಲ್ಲಾ ಮತ್ತೆ ಮೇಲಕ್ಕೆ ಬಂದು, ತುಟಿಯ ಮೇಲೊಂದು ನಗು ಮೂಡಿಸಿತು. ಈಗೇನೋ ನಗು ಬರುತ್ತೆ, ಆದರೆ ಆಗ ಮಾತ್ರ ಸಾಕು ಬೇಕಾಗಿ ಹೋಗಿತ್ತು.

ಹೇಳಿ ಕೇಳಿ ನಮ್ಮದು, ಶಿಸ್ತಿಗೆ ತುಂಬಾ ಹೆಸರುವಾಸಿಯಾದ ಕಾಲೇಜು. ಬೇರೆ ಕಾಲೇಜುಗಳಲ್ಲಿ ಯಾರೂ ತಲೆ ಕೆಡಿಸಿಕೊಳ್ಳದ ವಿಷಯಗಳು ನಮ್ಮಲ್ಲಿ ತಲೆ ಹೋಗುವಂತಹ ವಿಷಯಗಳಾಗಿ ಬಿಡುತ್ತಿದ್ದವು! ನಮ್ಮ ಕಾಲೇಜಿನ ನಿರ್ದೇಶಕರು " When you pay for whole year, why do you want to bunk the classes? You have to be keen to attend 100% classes............ಶಿಸ್ತಿಲ್ಲದಿದ್ದರೆ ಜೀವನದಲ್ಲಿ ಯಾವ ಯಶಸ್ಸನ್ನೂ ಸಾಧಿಸಲಾಗುವುದಿಲ್ಲ... ಹಾಗಿರುವಾಗ ನಿಮಗೆಲ್ಲಾ ಯಾಕೆ ಈ ಶಿಸ್ತು ಕ್ರಮಗಳ ಬಗ್ಗೆ ಬೇಸರ, ದ್ವೇಷ? ನೀವು ಹೆಮ್ಮೆಯಿಂದ ಇವುಗಳನ್ನು ಪಾಲಿಸಬೇಕು" ಅಂತೆಲ್ಲ ಹೇಳುವಾಗ ಅವರು ಹೇಳುವುದು ನಿಜ ಎಂದೆನಿಸಿದರೂ, ಮತ್ತೆಲ್ಲೋ, "ಅತಿಯಾದರೆ ಅಮೃತವೂ ವಿಷ" ಎಂದೆನಿಸುತ್ತಿತ್ತು... ನಮ್ಮ ಕಾಲೇಜಿನ ಕಟ್ಟು ನಿಟ್ಟುಗಳ ಬಗ್ಗೆ ಇಷ್ಟೆಲ್ಲಾ ತಿಳಿದಿದ್ದೂ, ಒಮ್ಮೆ ನಾವೆಲ್ಲಾ ಒಂದು ದಿಟ್ಟ(!!) ಹೆಜ್ಜೆ ಇಟ್ಟಿದ್ದೆವು. ತರಗತಿಯ ಎಲ್ಲಾ ಹುಡುಗಿಯರೂ ಜೊತೆಯಾಗಿ ಎಲ್ಲಾದರೂ ಹೋಗಬೇಕು ಎಂಬುದು ನಮ್ಮ ಬಹು ದಿನಗಳ ಅಪೇಕ್ಷೆಯಾಗಿತ್ತು. ಅಂತೂ ಇಂತೂ ಯಾವುದೋ ಒಂದು ಫ್ರೀ ಪೀರಿಡ್ ನಲ್ಲಿ ಕುಳಿತು ಪ್ಲಾನ್ ಹಾಕಿದೆವು - "ಲಗೇ ರಹೋ.." ಚಿತ್ರಕ್ಕೆ ಹೋಗುವುದು ಎಂದು. ಎಲ್ಲರಿಗೂ ಆದಿತ್ಯವಾರ ಬರಲಾಗದುದಕ್ಕೆ ಏನೇನೋ ಕಾರಣಗಳು. ಹಾಗಾಗಿ ಒಂದು ವಾರದ ದಿನವೇ ಬೆಳಗ್ಗೆಯ ಎರಡು ಅವಧಿಗಳ ಕಾಲ ಹಾಜರಾಗಿ, ಮತ್ತೆ ಊರ್ವಶಿ ಥೀಯೆಟರ್ ಗೆ ಹೋಗಿ, ಮಧಾಹ್ನ ಒಂದುವರೆಯ ಷೋಗೆ ಟಿಕೆಟ್ ಬುಕ್ ಮಾಡಿ, ಲಾಲ್ ಬಾಗ್ ನಲ್ಲಿ ಸುತ್ತಾಡಿ, ಒಂದು ಒಳ್ಳೆಯ ಹೋಟೆಲಿನಲ್ಲಿ ಉಂಡು, ಚಲನಚಿತ್ರ ನೋಡಿ ಮತ್ತೆ ಮನೆಗೆ ಹೋಗುವುದು ಎಂದು ನಮ್ಮ ಮಾಸ್ಟರ್(!) ಪ್ಲಾನ್ ರೆಡಿ ಆಯಿತು. ಆದರೆ, ಕ್ಲಾಸ್ ನಲ್ಲಿ ಎಲ್ಲಾ ಹುಡುಗಿಯರೂ ಒಟ್ಟಿಗೆ ನಾಪತ್ತೆಯಾದರೆ ಮತ್ತೆ ಡೌಟ್ ಬರುತ್ತಲ್ವಾ ಅಂತ ಅದಕ್ಕೊಂದು ಮಾಸ್ಟರ್ ಪ್ಲಾನ್ ರೆಡಿ ಆಯ್ತು.. ನಮ್ಮ ಗೆಳತಿಯರಲ್ಲೇ ಒಬ್ಬಳ ಮನೆಯಲ್ಲಿ "ಸತ್ಯನಾರಾಯಣ ಪೂಜೆ"; ಅದಕ್ಕೆ ನಾವೆಲ್ಲಾ ಹೋಗ್ತಿದಿವಿ ಅಂತ ನಮ್ಮ ನೆಚ್ಚಿನ (ನಾವು ಹೇಳಿದನ್ನು ಒಪ್ಪುವ!) ಲೆಕ್ಚರರ್ ಒಬ್ಬರ ಬಳಿ ಹೇಳಿ ಹೊರಟೆವು.

ಕಾಲೇಜಿನ ಗೇಟು ದಾಟಿ ಹೊರಗೆ ಕಾಲಿಟ್ಟಾಗ ನಮ್ಮ ಮುಖದಲ್ಲಿ ಯುದ್ಧದಲ್ಲಿ ಗೆದ್ದ ವಿಜಯೋತ್ಸಾಹ! ಮೂರು ಟೂ-ವೀಲರ್, ಒಂದು ಕಾರ್ ನಲ್ಲಿ ಸುಮಾರು ಹನ್ನೆರಡು ಜನರ ನಮ್ಮ ಗುಂಪು ಹೊರಟಿತು. ಹಳ್ಳಿ ಹಾಗೂ ಪುಟ್ಟ ಪಟ್ಟಣ ಪ್ರದೇಶಗಳಿಂದ ಬೆಂಗಳೂರಿಗೆ ಬಂದವರಿಗೆ, ಎರಡು ವರ್ಷದಲ್ಲಿ ಮೊದಲ ಬಾರಿಗೆ, ನಾವೆಲ್ಲೋ ಎಲ್ಲೆ ಮೀರುತ್ತಿದ್ದೇವಾ ಎಂದು ಅನಿಸಿದ ಕ್ಷಣ! ಮತ್ತೆ ಮರು ಕ್ಷಣ "ಅಯ್ಯೋ ಏನಿದೆ ಒಂದು ದಿನ ಪಿಕ್ಚರಿಗೆ ಹೋಗುವುದರಲ್ಲಿ" ಅಂತ ನಿರಪರಾಧಿ ಭಾವದ ಜನನ.

ಎಲ್ಲಾ ಯೋಜನೆಯಂತೆ ಸಾಗಿತು. ಚಿತ್ರವೂ ಅಷ್ಟೇ.. ತುಂಬಾ ಇಷ್ಟವಾಯಿತು. ಹೇಗಿರುತ್ತೇನೋ ಎಂದು ಮನದ ಮೂಲೆಯಲ್ಲಿದ್ದ ಆತಂಕ ಮಾಯವಾಗಿ ದುಡ್ಡು ಸುಮ್ಮನೆ ವ್ಯರ್ಥವಾಗದ ಸಾರ್ಥಕತೆ ಎಲ್ಲರ ಮುಖದ ಮೇಲೆ ರಾರಾಜಿಸಿತು. ಆದರೆ ಗಾಂಧೀಜಿಯವರ ಉನ್ನತ ಮೌಲ್ಯಗಳನ್ನು, ಹಾಸ್ಯ ಮಿಶ್ರಿತ ಗಂಭೀರದ ವಿಭಿನ್ನ ರೀತಿಯಲ್ಲಿ ಅಭಿವ್ಯಕ್ತಿಗೊಳಿಸಿದ ಈ ಚಿತ್ರಕ್ಕೆ ನಾವು ಸುಳ್ಳು ಹೇಳಿ ಬಂದಿದ್ದೇವಲ್ಲಾ ಎಂದು ಮನದಲೆಲ್ಲೋ ಅಪರಾಧಿ ಪ್ರಜ್ಞೆ ಕಾಡುತ್ತಿತ್ತು. ಚಿತ್ರ ಮುಗಿದು ಹೊರ ಬಂದಾಗ ಒಬ್ಬಳು ಹೇಳಿದಳು - "ನಾವು ಚಿತ್ರದಿಂದ ಪ್ರಭಾವಿತರಾಗಿದ್ದು ನಿಜ ಆಗಿದ್ದಲ್ಲಿ, ನಾಳೆ ಕಾಲೇಜಿನಲ್ಲಿ ಇದ್ದ ಸತ್ಯವನ್ನು ಹೇಳಿಬಿಡೋಣ". ಆಗ ಉಳಿದವರು ಬಾಯಿ ಮುಚ್ಚಿಸಿದರು - "ಅಮ್ಮ ತಾಯೆ, ಸಾಕು; ತೀರ ಒಳ್ಳೆಯವರಾಗಲು ಹೋಗೋದೇನೂ ಬೇಡ! ಈಗ ಹೇಳಿರುವುದನ್ನು ಮತ್ತೆ ಬದಲಾಯಿಸುವ ಯಾವ ಅವಶ್ಯಕತೆಯೂ ಇಲ್ಲ".

ನಾವು ಕಾಲೇಜಿಂದ ಹೋದ ಮೇಲೆ ಇತ್ತ ಕಾಲೇಜಿನಲ್ಲಿ ಏನಾಗಿರಬಹುದು ಎಂದು ನಾವು ಚಿಂತಿಸಿರಲೇ ಇಲ್ಲ.. ನಾವು ಹೋದುದನ್ನು ನೋಡಿ ತರಗತಿಯಲ್ಲಿದ್ದ ಹುಡುಗರಿಗೆ ಅದೆಲ್ಲಿಂದ ಜೋಶ್ ಬಂತೋ, ಅವರೂ ಮಧ್ಯಾಹ್ನದ ಯಾವ ತರಗತಿಗೂ ಹಾಜರಾಗಲೇ ಇಲ್ಲ. ಅಲ್ಲಿಗೆ, ಅಂದು ನಮ್ಮ ತರಗತಿಯದು "mass bunk" ಎಂದು ಪರಿಗಣಿಸಲಾಯಿತು.

ಮರುದಿನ ಕಾದಿತ್ತು ನೋಡಿ ನಮಗೆ! "ಅಧ್ಯಾಪಕರು ತಯಾರಿ ನಡೆಸಿಕೊಂಡು ತರಗತಿಗೆ ಬಂದಾಗ ವಿದ್ಯಾರ್ಥಿಗಳೇ ಇಲ್ಲ ಎಂಥಾ ಮಹಾಪರಾಧ!" ಎಂದು ನಮ್ಮ ದೂಷಣೆಯಾಯಿತು. HOD ಕೊಠಡಿಗೆ ಎಲ್ಲರನ್ನೂ ಕರೆಸಿ ವಿಚಾರಣೆ! ಯಾರಾದರೂ ಏನಾದರೂ ಹೇಳಬೇಕೆ? ಎಲ್ಲರೂ ಬಾಯಿ ಮುಚ್ಚಿ ನೆಲ ನೋಡುವ ಸುಬಗರು... ಮನಸ್ಸಿನಲ್ಲಿ ಮಾತ್ರ "ಅದೇನು ಅಂತಹಾ ಯಾರೂ ಮಾಡದ ಮಹಾಪರಾಧ ನಾವು ಮಾಡಿದ್ದೇವೆ ಅಂತ ನಮಗೆ ಶಿಕ್ಷೆ" ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರೂ, ಹಾಗೆ ಹೇಳಲಾಗುವುದಿಲ್ಲವಲ್ಲ! ಹುಡುಗರು ಹುಡುಗಿಯರತ್ತ ಬೊಟ್ಟು ತೋರಿಸಿದರೆ, ಹುಡುಗಿಯರು ನಾವು ಈಗಾಗಲೇ ಹೇಳಿರುವ ಸುಳ್ಳನ್ನು ಮತ್ತೆ ಪ್ರತಿಪಾದಿಸಿದೆವು. ಅಂತೂ HODಗೆ ನಮ್ಮ ಯಾರ ಉತ್ತರಗಳಿಂದಲೂ ಸಮಾಧಾನವಾಗಲಿಲ್ಲ. mass bunk ಯಾಕೆ ಮಾಡಿದ್ದು ಎಂದು ನೀವು ನಿಜವಾದ ಕಾರಣ ಹೇಳುವವರೆಗೆ ನಿಮ್ಮನ್ನು ಕ್ಷಮಿಸುವುದಿಲ್ಲ ಅಂತ ಅವರು. ಹೇಳುವುದಿಲ್ಲ ಅಂತ ನಾವು. ಅದೆಷ್ಟು ಹೊತ್ತು HOD ಕೋಣೆಯ ಹೊರಗೆ, ಇಡೀ dept ಎದುರು ಏನೋ ಮಹಾಪರಾಧ ಮಾಡಿದ ಹಾಗೆ ನಿಂತುಕೊಂಡಿದ್ದೇವೆ!

ವಿಷಯದ ಗಂಭೀರತೆ ಎಲ್ಲಿಯವರೆಗೆ ಹೋಯಿತೆಂದರೆ, 1st internals ಗೆ ತಪ್ಪು ಮಾಡಿದ ನಮ್ಮ ಸೆಕ್ಷನ್ ಗೆ ಕಷ್ಟದ ಪ್ರಶ್ನಾ ಪತ್ರಿಕೆಯನ್ನು, ಮತ್ತೊಂದು ಸೆಕ್ಷನ್ ನಲ್ಲಿರುವ ನಮ್ಮ ಸ್ನೇಹಿತರಿಗೆ ಮತ್ತೊಂದು ಪ್ರಶ್ನಾ ಪತ್ರಿಕೆ ಮಾಡುವಷ್ಟು! HOD ಗೆ ಅದು ಹೇಗೋ ಎಲ್ಲಾ ನಿಜ ವಿಷಯಗಳು ತಿಳಿದಿದ್ದವು. ನಮ್ಮಿಂದ ನಿಜ ಹೊರಬರುವುದು ಬೇಕಿತ್ತವರಿಗೆ... ನಾವಾದರೋ, ಯಾಕೆ ಸತ್ಯ ಹೇಳಿ ನಮ್ಮ ಮರ್ಯಾದೆ ಕಳೆದುಕೊಳ್ಳುವುದು ಅಂತ. ಕೊನೆಗೂ, ಬೇರೆ ವಿಧಿಯಿಲ್ಲದೆ(ಈ ನಡುವೆ ತುಂಬಾ ಘಟನೆಗಳು ನಡೆದು ಸತ್ಯ ಹೇಳಲೇ ಬೇಕಾದ ಸಂದರ್ಭ ಬಂತು ಬಿಡಿ! ಅದನ್ನೆಲ್ಲಾ, ಮಹಾಭಾರತದ ಉಪ ಕತೆಗಳಂತೆ ಮುಖ್ಯ ಕತೆಯಲ್ಲಿ ಈಗ ಹೇಳದೆ, ಮತ್ತೊಮ್ಮೆ ಯಾವಾಗಲಾದರೂ ಹೇಳುತ್ತೇನೆ) "ನಾವು ಸುಳ್ಳು ಹೇಳಿ ಪಿಕ್ಚರ್ ಗೆ ಹೋಗಿದ್ದು" ಅಂತ ಹೇಳಿ ಬಿಟ್ಟೆವು ಎನ್ನಿ. ಆಗಲೇ ಆ ವಿಷಯ ಮುಗಿದಿದ್ದು. ಗಾಂಧೀಜಿ ಹೇಳಿದಂತೆ ಇದ್ದುದನ್ನು ಇದ್ದ ಹಾಗೆ ಮೊದಲೇ ಒಪ್ಪಿದ್ದರೆ, ಇಷ್ಟೆಲ್ಲಾ ಅನುಭವಿಸ ಬೇಕಾಗುತ್ತಿರಲಿಲ್ಲವೇನೋ...

ಅದೇನೇ ಇರಲಿ...ಈ ಘಟನೆ ನಮ್ಮನ್ನು, ವಿದ್ಯಾರ್ಥಿ ಜೀವನದಲ್ಲಿ ಮುಂದೆಂದೂ mass bunk ಮಾಡದಿರುವಂತಹ ಒಳ್ಳೆಯ ವಿದ್ಯಾರ್ಥಿಗಳನ್ನಾಗಿ ಮಾಡಿದ್ದಂತೂ ಸತ್ಯ. ನಮ್ಮನ್ನು ಅದೆಷ್ಟೇ ಮೇಲೆ ಕೆಳಗೆ ಮಾಡಿದ್ದರೂ, ಕೊನೆಯ internals ನಲ್ಲಿ ಸುಲಭ ಪ್ರಶ್ನೆ ಪತ್ರಿಕೆಯಿತ್ತು, ಆ ರೀತಿಯಾಗಿ ನಮಗೆ ಇಂಟರ್ನಲ್ಸ್ ನಲ್ಲೂ, ಶಿಸ್ತು ಹಾಗು ಕ್ರಮಬದ್ಧ ಪರೀಕ್ಷಾ ವಿಧಾನಗಳಿಂದ( ಇಂಟರ್ನಲ್ಸ್ ಗೂ ಓದದೆ ಬೇರೆ ವಿಧಿಯಿರಲಿಲ್ಲ!) ಸೆಮಿಸ್ಟರಿನ ಕೊನೆಯ ಪರೀಕ್ಷೆಯಲ್ಲೂ ಉತ್ತಮ ಅಂಕ ಗಳಿಸಲು ಸಹಕಾರಿಯಾದ, ಎಲ್ಲಕ್ಕಿಂತ ಮುಖ್ಯವಾಗಿ, ಜೀವನದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಪಾಠ ಹೇಳಿಕೊಟ್ಟ ನಮ್ಮ ಶಿಕ್ಷಕರಿಗೆಲ್ಲಾ ನಮೋ ನಮಃ !

Friday, August 14, 2009

ಕಾಲಚಕ್ರ ತಿರುಗಿದಾಗ...


ಸ್ವಾತಂತ್ರ್ಯದಿನವೆಂದರೆ

ಅಂದು -
ಎಲ್ಲಿಲ್ಲದ ಹುರುಪು, ಚಿಮ್ಮುವ ಉತ್ಸಾಹ
ವಂದೇ ಮಾತರಂ, ಸಾರೇ ಜಹಾನ್ಸೆ ಹಾಡುವುದಕೆ
ಗಾಂಧೀ ಮೈದಾನಕೆ ಮೆರವಣಿಗೆಯಲಿ ಸಾಗುವುದಕೆ
ದೂರದರ್ಶನದಿ ದಿಲ್ಲಿ ಧ್ವಜಾರೋಹಣ ನೋಡುವುದಕೆ
ಇಂದು -
ಉಳಿದೆಲ್ಲವುಗಳಂತೆ ಮತ್ತೊಂದು ರಜಾದಿನ
ಹಳೆಯ ದಿನಗಳನು ನೆನಪಿಸಿಕೊಳ್ಳುವುದಕೆ
ಕಳೆದ ಬಾಲ್ಯದ ಮುಗ್ಧತೆಗೆ ಕೊರಗುವುದಕೆ
ಟಿ.ವಿ ಎದುರು ಕುಳಿತು ಚಾನಲ್ಲು ಬದಲಾಯಿಸುವುದಕೆ !
********

ಹಬ್ಬದ ದಿನ

ಅಂದು -
ಮೊದಲು ಮದುವೆಯಾದ ಕುಟುಂಬದ ಹಿರಿ ಮಗಳು
ಎಲ್ಲರೂ ಸೇರುವ ಗಣೇಶ ಹಬ್ಬಕೆ ತಾನು ತಪ್ಪಿದೆನಲ್ಲಾ
ಎಂದು ಕೊರಗಿದಳು
ಇಂದು -
ಮದುವೆಯಾಗಿಹರು ಬಹುತೇಕ ಹುಡುಗಿಯರು
ಎಲ್ಲರೂ ಸೇರುವ ಗಣೇಶ ಹಬ್ಬಕ್ಕೆ ಈಗ್ಯಾರು ಇಲ್ಲೆಂದು
ಕೊನೆಯ ಕಿರಿ ಮಕ್ಕಳು ಬೇಸರಿಸುತಿಹರು !
********

ಪರೀಕ್ಷೆ

ಅಂದು -
ಅನಿಸುತ್ತಿತ್ತು ಶಿಕ್ಷಣದ ಪ್ರತಿ ಮಜಲಿನಲ್ಲೂ
ಯಾವಾಗ ಮುಗಿಯುವುದೋ ಇವುಗಳ ಸಹವಾಸ
ಪ್ರತಿ ತಿಂಗಳು, ಪ್ರತಿ ಸೆಮಿಸ್ಟರು ಎಷ್ಟೊಂದು ಓದುವಿಕೆ
ಎಷ್ಟೊಂದು ಕಷ್ಟ ಏನು ಕರ್ಮವೋ
ಇಂದು -
ಯಾರದೇ ಕಟ್ಟು ನಿಟ್ಟಿಲ್ಲ... ವರ್ಷವಾದರೂ
ಗಳಿಸಬೇಕಂದುಕೊಂಡಿದ್ದು ಇನ್ನೂ ದಕ್ಕಿಲ್ಲ
ಅನಿಸುತಿದೆ - ಇರಬಾರದಿತ್ತೆ ಈಗಲೂ ಪರೀಕ್ಷೆ
ಹೇಗಾದರೂ ಮುಗಿಯುತ್ತಿತ್ತು ಪರೀಕ್ಷೆಯ ಮೊದಲು
ದಕ್ಕುತ್ತಿತ್ತೇನೋ ಎಲ್ಲವೂ ಅಂದುಕೊಂಡ ಸಮಯಕೆ !

Wednesday, July 29, 2009

ವಿದಾಯ

- ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುತ್ತಿರುವ, ಸಕಲರಿಗೂ ಆದರ್ಶಪ್ರಾಯ ಹಾಗೂ ಉತ್ತಮ ಮಾದರಿಯಾಗಿರುವ team-mate ಹರಿಹರನ್ ಗೆ, ಆತ್ಮೀಯ ವಿದಾಯ ಕೋರುತ್ತಾ ಬರೆದ ಕವನ...ನೂರಾರು ತಾರೆಗಳು ಮಿನುಗುತಿಹ ಆಗಸದಿ
ಸ್ಫುಟವಾಗಿ ಹೊಳೆದ ಧ್ರುವ ನಕ್ಷತ್ರ ನೀನು

ಕಣ್ಣು ಕೋರೈಸುವ ಸುವರ್ಣ ಹಾರದಲಿ
ಬೆಳಗಿದ ಸುಂದರ ಹವಳ-ಪದಕ ನೀನು

ಎರಡೇ ವರುಷಗಳಲಿ ಬಿಳಲು ಬಿಟ್ಟು
ಬಹು ಎತ್ತರಕೆ ಬೆಳೆದ ವೃಕ್ಷ ನೀನು

ಅಸಹಾಯಕತೆಯಲಿ ಕೊಚ್ಚಿಹೋಗುತಿಹರಿಗೆ
ಆಧಾರವಾಗಿ ಸಿಕ್ಕಿದ ಬೃಹತ್ ಬಂಡೆ ನೀನು

ಎಲ್ಲರೊಳು ಒಂದಾಗಿ, ಎಲ್ಲರೊಳು ಮುಂದಾಗಿ
ಎಲ್ಲರ ಪ್ರೀತಿಯನೂ ಗೆದ್ದಿರುವ ಧೀರ ನೀನು

ಗುರಿ ಸಾಧನೆಗಾಗಿ - ಸಪ್ತ ಸಾಗರ ದಾಟಿ
ಅದರಾಚೆಗಿನ ಮಾಯಾನಗರಿ ಸೇರುತಿಹ ನೀನು

ಬಿಟ್ಟು ಹೋಗುತಿರುವೆ ನಮ್ಮ ಮನಸುಗಳಲಿ
ಅಳಿಸಲಾಗದ ಹೆಜ್ಜೆ ಗುರುತುಗಳನು
ಆದರ್ಶಪ್ರಾಯ ಶ್ರಮದ ಹಾದಿಯನು
ಜೊತೆಗೆ ಒಂದಿಷ್ಟು ನೋವನ್ನೂ...

ಸುಂದರವಾಗಿರಲಿ ನಿನ್ನ ಬಾಳ ಪಯಣ
ನಿನಗಿದೋ ನಮ್ಮ ಆತ್ಮೀಯ ವಿದಾಯ....

Thursday, July 16, 2009

ಕಳೆದುಹೋಗಿದೆ!ಕಾಣಿಸುತ್ತಿಲ್ಲ ನನ್ನ ಮನಸು
ಎಲ್ಲೋ ಕಳೆದು ಹೋಗಿಬಿಟ್ಟಿದೆ
ಊರಲ್ಲಿ ಎರಡು ದಿನ ಕಳೆದಿದ್ದೆ ತಪ್ಪಾಯ್ತೋ
ನನ್ನ ಬಿಟ್ಟು ಅದು ಅಲ್ಲೇ ಉಳಿದುಬಿಟ್ಟಿದೆ

ಖುಷಿ ಪಡುತಿರಬೇಕು ನನ್ನ ಮನಸು
ಧೋ ಎಂದು ಸುರಿವ ಮಳೆಯಲ್ಲಿ ನೆನೆದು
ಅಲೆಯುತಿದೆಯೇನೋ ಕಡಲ ತೀರದಿ
ಭೋರ್ಗರೆದು ಅಪ್ಪಳಿಸುವ ಅಲೆಯ ನೋಡುತಾ

ಸುತ್ತಾಡುತಿರಬಹುದು ವಿಶಾಲ ಮೈದಾನದಿ
ಸೊಂಪನೆ ಬೆಳೆದಿರುವ ಹಸಿರ ಪೈರಿನ ಜೊತೆ
ಮೆಲ್ಲುತಿರಬಹುದು ಬಿಸಿಯಾದ ಗೋಳಿಬಜೆ
ಪುಟ್ಟ "ಮಿತ್ರ ಸಮಾಜ" ಹೋಟೆಲಿನ ಒಳಗೆ

ಹಾರಾಡುತಿದೆ ಅದು ಸಂತಸದ ಹೊನಲಿನಲ್ಲಿ
ಆ ಬ್ರಹ್ಮ ರಥದ ಪತಾಕೆಯ ತುದಿಯಲ್ಲಿ
ಓಡಾಡುತಿದೆ ಮನಸು ಅತ್ತಣಿಂದಿತ್ತ
ರಥಬೀದಿ ಪರಿಸರದ ಸುತ್ತ ಮುತ್ತ

ಬೆಚ್ಚಗೆ ಅಡಗಿ ಕೂತಿದೆ ಕೈಯೊಳಗೆ ಸಿಕ್ಕದೆ
ರಚ್ಚೆ ಹಿಡಿದಿದೆ ತಾ ಬರಲಾರದೆಂದು
ಎಳೆದು ತರಬೇಕಾಗಿದೆ ಮತ್ತೆ ಮಹಾನಗರಿಗೆ
ಅದಕಾಗೇ ಹೋಗುವೆನು ಮತ್ತೊಮ್ಮೆ ಊರಿಗೆ :-)

--------------------------------------------------------------------------------

ಕಿರು ಟಿಪ್ಪಣಿ :

ಗೋಳಿಬಜೆ - ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯನ್ನು ಹೊರತುಪಡಿಸಿ, ಉಳಿದೆಲ್ಲಾ ಕಡೆ "ಮಂಗಳೂರು ಬಜ್ಜಿ" ಎಂದು ಕರೆಯಲ್ಪಡುವ, ಮೈದಾ ಹಿಟ್ಟಿನಿಂದ ತಯಾರಿಸಲ್ಪಡುವ, ನಮ್ಮ ಊರಿನ ವಿಶಿಷ್ಟವಾದ ರುಚಿಯಾದ ಒಂದು ಖಾದ್ಯ.
ಮಿತ್ರ ಸಮಾಜ - ಉಡುಪಿಯ ರಥಬೀದಿಯಲ್ಲಿ ಬಹು ದಶಕಗಳಿಂದ ಪ್ರಖ್ಯಾತವಾಗಿರುವ, ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಲುವಾಗಿ, ಯಾವುದೇ ತಿಂಡಿಯ ತಯಾರಿಗೂ, ಈರುಳ್ಳಿ/ ಬೆಳ್ಳುಳ್ಳಿಯನ್ನು ಬಳಸದೆ ಇರುವ ಏಕಮಾತ್ರ ಹೋಟೆಲು.
ಬ್ರಹ್ಮ ರಥ - ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಗಾತ್ರದಲ್ಲಿ ವೈವಿಧ್ಯವಾಗಿರುವ ಮೂರು ರಥಗಳಿವೆ - ಬ್ರಹ್ಮ ರಥ, ಮಧ್ಯಮ ರಥ, ಸಣ್ಣ ರಥ ಎಂದು. ಇದರ ಜೊತೆಗೆ ಚಿನ್ನದ ಹಾಗೂ ಬೆಳ್ಳಿ ರಥಗಳೂ ಉಡುಪಿಯಲ್ಲಿ ಪ್ರಸಿದ್ಧ.

Monday, July 6, 2009

ಪಯಣ


ಪುಟ್ಟ ಜೀವವೊಂದು ಸಾಗುತಿದೆ ಬೇಸರದಿ
ತನ್ನ ಒಲವ ಗೂಡಿನಿಂದ ದೂರ ದೂರಕ್ಕೆ
ಅರಿವಿಲ್ಲದೆ ಜಾರಿದ್ದವು ಕಣ್ಣಿಂದ ಹನಿಗಳು
ಪ್ರತಿ ಹನಿಯಲೂ ಕಾಣುತಿತ್ತು
ಕಳೆದ ಕ್ಷಣಗಳ ಮಧುರ ನೆನಹುಗಳ
ಅಚ್ಚಳಿಯದ ಪ್ರತಿಬಿಂಬ
ಹರಿಯುತಿತ್ತು ಹನಿ ಸಾಲು ಒಂದಿನಿತು ನಿಲ್ಲದೆ
ಕಣ್ಮರೆಯಾಗುವ ಆ ಬಿಂಬವನ್ನು ನೆನೆಯುತ್ತಾ
ಸಿಹಿಯಾಗಿತ್ತು ಜಾರಿದ ಆ ಕಣ್ಣೀರ ಹನಿ ಬಿಂದು
ಜೇನುಗೂಡಿನಲಿ ಕಳೆದ ಸವಿಗೆ ಕುರುಹಾಗಿತ್ತು

Saturday, June 20, 2009

ಅವಳು ಮತ್ತು ಅವನು

ಅವಳು ಸುಮ್ಮನಿದ್ದಳು
ಯಾವುದರ ಪರಿವೆಯೇ ಇಲ್ಲದೆ
ಅವಳು ಖುಷಿಯಲಿದ್ದಳು
ಅವಳದೇ ಮುಗ್ಧ ಲೋಕದಲ್ಲಿ

ಅವನು ಬಂದನು ಆಗ
ಅವಳ ಲೋಕವನ್ನು ನೋಡಿದ
ಅವಳ ಖುಷಿಗೆ ತಾನೂ ಖುಷಿ ಪಟ್ಟ
ಇನ್ನೂ ಖುಷಿ ಪಡಿಸಲು ಪಣ ತೊಟ್ಟ

ಅವಳ ಬಾಳಿಗೆ ದೀಪವಾಗಲು
ತಾನು ಉರಿಯ ಹೊರಟನು
ಬೆಂಕಿಯ ತಾಪಕೆ ಹೆದರಿ
ದೂರ ಹೊರಟಳು ಆಕೆ

ತಂಪನೆರೆಯುವೆನೆಂದು ತಾನು
ಮಂಜುಗಡ್ಡೆಯಾಗಹೊರಟನು
ಆಕೆ ಆತನಿಗಾಗಿ ಕರಗಲಿಲ್ಲ
ಅತಿಯಾದ ತಂಪಿಗೆ ಶಿಲೆಯಾದಳು

ಆಕೆಯನು ಕಥಾನಾಯಕಿಯಾಗಿಸಲು
ಹೊರಟಿದ್ದ ಅವನು - ತಾನೇ ಕಥೆಯಾದ
ಆಕೆಯೋ ಕಥೆಯ ಓದುಗಳಾದಳು
ತನ್ನ ಬದುಕಿಗೊಂದು ನೀತಿ ಪಾಠ ಕಲಿತಳು

Friday, June 5, 2009

"ಶುಭಾ"ಶಯ!

-ಪ್ರೀತಿಯ ತಂಗಿ ಶುಭಾಳಿಗಾಗಿ, ಪ್ರೀತಿ ತುಂಬಿ ಬರೆದದ್ದು...


ಮುದ್ದಾದ ನೋಟದಿಂದ ಹೃದಯವನು ಗೆಲ್ಲುವ
ಒಮ್ಮೊಮ್ಮೆ, ಮುಗ್ಧ ಪ್ರಶ್ನೆಗಳಿಂದ ಮನಸೂರೆಗೊಳ್ಳುವ
ಇನ್ನೊಮ್ಮೆ, ಗಾಂಭೀರ್ಯ ಮೈವೆತ್ತು ಕಂಗೊಳಿಸುವ
ಮತ್ತೊಮ್ಮೆ, ಚತುರ ಮಾತುಗಳಿಂದ ನಕ್ಕು ನಗಿಸುವ
ಬೇಸರವಾದೊಡೆ ನನ್ನ ಬೊಗಸೆಯಲಿ ಕಣ್ಣೇರು ಹರಿಸುವ
ಸಂತೋಷವಾದೊಡೆ ನನ್ನೊಡನೆ ಹಂಚಿ, ಹಾರಾಡುವ
ನನ್ನ ಭಾವನೆಗಳನ್ನೆಲ್ಲಾ ಕೆದಕಿ ವಿಚಾರಿಸುವ
ನನ್ನ ಕೈಯೊಡನೆ ಕೈ ಸೇರಿಸಿ, ಶಾಲೆಗೆ ಜೊತೆ ನಡೆದ
ಎಂದಿಗೂ, ಯಾವುದಕೂ, ಬಹುವಾಗಿ ಚಿಂತಿಸದ
ನಗು ನಗುತಾ, ಎಲ್ಲರನೂ ನಗಿಸುತ್ತಲಿರುವ
ಪ್ರೀತಿಯ ಒಲುಮೆಯ ಮುದ್ದಿನ ತಂಗಿಗೆ
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು !

Saturday, May 30, 2009

ಜೊತೆಗಾರ - ಚಂದಿರ


ಚಂದಮಾಮ ಇಣುಕುತಿಹನು
ಕುಡಿ ನೋಟ ಬೀರಿ ನಗುತಲಿಹನು
ಜೀವನದುದ್ದದ ಜೊತೆಗಾರ
ಸದಾ ಖುಷಿ ಕೊಟ್ಟ ಗೆಣೆಕಾರ

ಪುಟ್ಟ ಕಂದನಾಗಿದ್ದಾಗ, ನೋಡುತಿದ್ದೆ
ಯಾರೂ ದೂರವಾದರೂ ನೀ ಜೊತೆಗೆ ಇದ್ದೆ
ದಿನವಿಡೀ ದಣಿದಾಗ, ನೀ ಎದುರು ಬರುವೆ
ಮಧುರ ಸಿಂಚನವ ಎರೆದು ಪುಳಕಿಸುವೆ

ಕುಗ್ಗುತಾ ಕಾಣೆಯಾದರೂ ಒಂದೊಮ್ಮೆ
ಹಿಗ್ಗುತಾ ನಗಿಸುವೆ ಮಗದೊಮ್ಮೆ
ಮರೆತು ಮರೆಯಾಗುವ ಉಳಿದವರಂತಲ್ಲ
ನೀ ಸದಾ ಜೊತೆಗಿರುವ ಪ್ರೀತಿಯ ನಲ್ಲ

ಎದುರಿಗಿಲ್ಲದಿರೂ ಆ ಒಂದು ದಿನ
ನೀಡುವೆ ಖುಷಿಯನು ಉಳಿದೆಲ್ಲ ದಿನ
ಮರೆಯಾಗುವ ಮೊದಲೇ ತಿಳಿಸುವೆ ಸ್ಪಷ್ಟ
ಅದಕಾಗೇ ಆಗುವೆ ನನಗೆ ನೀನಿಷ್ಟ

ಯಾರಿಹರು ಜಗದಿ ಪ್ರತಿಶತ ಪೂರ್ಣ
ಸಕಲರಿಗೂ ಅಸಾಧ್ಯ ಆಗಲು ಪರಿಪೂರ್ಣ
ಶ್ಯಾಮಲ ಕಳಂಕಗಳಿದ್ದರೇನಂತೆ
ಶುಭ್ರವಾಗಿರುವೆ ನಿನ್ನ ಬಿಳಿ ಬಣ್ಣದಂತೆ

ಇರುವುದೆಲ್ಲವನು ಇರುವಂತೆ ತೋರುವ
ಬೇಸತ್ತ ಹೃದಯಕೆ ಆಹ್ಲಾದ ನೀಡುವ
ಮೈ ಮನಗಳಿಗೆಲ್ಲ ತಂಪನೆರೆಯುವ
ನಿನ್ನಂತೆ ಸದಾ, ಜೊತೆಗಿರುವ ಜೊತೆಗಾರ
ಹುಡುಕಿಕೊಡುವೆಯಾ ನನಗೆ ಓ ಚಂದಿರ ?

Wednesday, May 13, 2009

ಒಂದು ಘಟನೆ - ನೂರೊಂದು ಪ್ರತಿಕ್ರಿಯೆ

ಅದೊಂದು ಮಾಮೂಲಿ ಸಂಜೆ. ಆಫೀಸಿನಲ್ಲಿ ಕುಳಿತು, ಕೆಲಸ ಮುಗಿದಿದ್ದರೂ, ಬಸ್ಸು ಹೊರಡುವ ಸಮಯ ಆಗಿಲ್ಲವಾದ್ದರಿಂದ, ಹೀಗೆ ಏನೋ ಮಾಡುತ್ತಾ ಕಾಲಹರಣ ಮಾಡುತ್ತಿದ್ದೆ. ಬೇರೆ ಹಲವು ರೂಟ್ ಗಳ ಬಸ್ಸುಗಳು, ಆಫೀಸಿಂದ ಬೇರೆ ಬೇರೆ ಸಮಯಕ್ಕೆ ಮೂರು ನಾಕು ಸಲ ಇವೆಯಾದರೂ, ನನ್ನ ರೂಟ್ ಬಸ್ಸಿರುವುದು ಬೆಳಗ್ಗೆ ಒಂದು ಸಲ, ಸಂಜೆ ಒಂದು ಸಲ ಮಾತ್ರ. ಹಾಗಾಗಿ ಅಷ್ಟೂ ಹೊತ್ತು, ಕೆಲಸ ಮುಗಿದಿದ್ದರೂ, ಆಫೀಸಿನಲ್ಲಿರುವುದು ಅನಿವಾರ್ಯ. ಹೀಗೆ ಬಸ್ಸುಗಳ ಸಮಯ ಉದ್ಯೋಗಿಗಳನ್ನು ವಿಧೇಯರನ್ನಾಗಿ ಮಾಡುವುದು ಸೋಜಿಗವಲ್ಲವೆ? :-) ಸಮಯದ ಬಗ್ಗೆ ಅಷ್ಟೇನೂ ಕಟ್ಟುನಿಟ್ಟು ಇರದ ಕಾರಣ, ಹಲವರೆಲ್ಲ ಬೆಳಗ್ಗೆಯೂ ತಡವಾಗಿ ಬಂದು ಸಂಜೆಯೂ ಬೇಗ (ಕೆಲಸ ಕಮ್ಮಿ ಇದ್ದ ದಿನ ಮಾತ್ರ! ) ಹೋಗುವುದನ್ನು ನೋಡಿ, ಹೊಟ್ಟೆ ಉರಿದುಕೊಳ್ಳುವುದದು, ನನ್ನಂಥ ತಡವಾಗಿ ಬಸ್ ಹೊರಡುವ ರೂಟ್ ನಲ್ಲಿರುವವರ ಕರ್ಮ.

ಇರಲಿ.. ಅಂಥ ಒಂದು ಸಂಜೆ ಏನಾಯ್ತೆಂದ್ರೆ.. ನನ್ನ ಜಂಗಮ ದೂರವಾಣಿ ಬಾರಿಸಲಾರಂಭಿಸಿತು. ನೋಡಿದರೆ, ಯಾವುದೋ ಅಪರಿಚಿತ ಸಂಖ್ಯೆ ! ಆರಂಭದ ಸಂಖ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ತಿಳಿಯಿತು ಓಹ್.. 022 ! ಇದು ಮುಂಬಯಿಯಿಂದ ಅಂತ. ಯಾರಪ್ಪ ನನಗೆ ಅಲ್ಲಿಂದ ಕರೆ ಮಾಡುವವರು ಎಂದು ಕುತೂಹಲಭರಿತಳಾಗಿ ಕರೆಯನ್ನು ಸ್ವೀಕರಿಸಿ "ಹಲೋ" ಎಂದೇ. ಒಂದು ಸುಮಧುರ ಕಂಠ "Am I speaking to Ms.Divya Mallya?" ಎಂದು ಉಲಿಯಿತು. ನಾನೂ ಅಷ್ಟೇ ಸುಮಧುರವಾಗಿ ಉಲಿಯಲು ಪ್ರಯತ್ನಿಸಿ "Ya.." ಅಂದೆ. "Mam, this is from Mahindra and Mahindra" ಅಂದಿತು ಮಧುರ ಕಂಠ. ನನಗೋ ಸರಿಯಾಗಿ ಕೇಳಲಿಲ್ಲ. ಯಾರಿದು ಅಂತ ಮನಸಿನಲ್ಲಿ ಪ್ರಶ್ನೆ ಮೂಡಿತು. "Sorry..." ಅಂದೆ. ಅದಕ್ಕೆ ಪ್ರತಿಯಾಗಿ "This is from Xylo Mahindra and Mahindra group" ಅಂತ ಉತ್ತರ ಬಂತು!!!!

ಅದು ಕೇಳಿದ್ದೆ ತಡ.. ನನ್ನ ತಲೆಯಲ್ಲಿ ನೆನಪಿನ ಸುರುಳಿ ಸರಸರನೆ Rewind ಆಯಿತು. ಕೆಲವು ತಿಂಗಳ ಹಿಂದೆ, Xylo ಕಾರು ಮಾರುಕಟ್ಟೆಗೆ ಬರಲು ಸ್ವಲ್ಪ ದಿನಗಳಿರುವಾಗ, ಸ್ನೇಹಿತರೊಬ್ಬರು ಲಿಂಕ್ ಕಳಿಸಿ, "ಇದಕ್ಕೆ ಏನಾದರೂ ಬರೆಯೋಕಾಗುತ್ತಾ ನೋಡು..ಯಾರಿಗ್ಗೊತ್ತು ನಿನ್ನ ಹಣೆಲೀ Xylo ಕಾರಿನ ಯೋಗ ಇದ್ರೆ..." ಅಂತ ಹೇಳಿ ಆಸೆ ಹುಟ್ಟಿಸಿದ್ದರು. Xylo ಕಾರಿನ ಅಂತರ್ಜಾಲ ತಾಣದಲ್ಲಿ, ಹೊಸದಾಗಿ ಬಿಡುಗಡೆಯಾಗುತ್ತಿರುವ ಕಾರಿನ ಪ್ರಚಾರಕ್ಕೆ, ಜಾಹೀರಾತಿಗೆ ಬಳಸಿಕೊಳ್ಳಲು ಕಾರಿನ ಬಗ್ಗೆ ನಿಮಗನಿಸಿದ್ದನ್ನು ಒಂದೆರಡು ವಾಕ್ಯದಲ್ಲಿ ಸೂಚಿಸಿ ಎಂದು ಆಹ್ವಾನ ನೀಡಿದ್ದರು. ಇಲ್ಲಿ ನೀವು ಸೂಚಿಸಲಾದ ನಿಮ್ಮ ಯಾವುದೇ ಹೇಳಿಕೆಯ ಕಾಪಿರೈಟ್ ನಮ್ಮದಾಗುತ್ತದೆ ಅಂತೆಲ್ಲ ಸೂಚನೆಗಳೂ ಇದ್ದವು... ಜೊತೆಗೆ, ಎಲ್ಲದಕ್ಕಿಂತ ಮುಖ್ಯವಾಗಿ "ಅತ್ಯುತ್ತಮವಾದ ಒಂದು ಹೇಳಿಕೆಗೆ Xylo ಕಾರು ಬಹುಮಾನ" ಎಂದಿತ್ತು!!! ಅದು ಓದಿದಾಗ, ಏನೇ ಆಗಲಿ, ಒಂದು ಕೈ ನೋಡಿಯೇ ಬಿಡಬೇಕು ಎಂದು ಅನಿಸಿತು. ಹಾಗೆಲ್ಲಾ ಅದೃಷ್ಟ ನನಗೆ ಯಾವತ್ತೂ ಒಲಿದಿಲ್ಲ. ಆದರೂ ಮನುಷ್ಯನಿಗೆ ಆಸೆ ಅಂತ ಒಂದಿರುತ್ತೆ ಅಲ್ವಾ? ಅದೃಷ್ಟದಲ್ಲಿ ಏನಾದರೂ ಸಿಗೋ ಹಾಗಿದ್ರೆ, ಸಿಕ್ಕಲಿ ಅಂತ. ಆದರೆ, ದಿನಗಳಲ್ಲಿದ್ದ ಕಾರ್ಯ ಬಾಹುಳ್ಯದಿಂದ, ಇದಕ್ಕಾಗಿ ಅದ್ಭುತವಾದ ಏನನ್ನಾದರೂ ಯೋಚಿಸಲು ಸಮಯವೇ ಸಿಗಲಿಲ್ಲ.. ಇನ್ನೇನು ಇವತ್ತು ಅದನ್ನು ಸೂಚಿಸಲು ಕೊನೆಯ ದಿನ ಅಂತಾದಾಗ, ತಾಣಕ್ಕೆ ಹೋಗಿ ಒಮ್ಮೆ ಕಣ್ಣಾಡಿಸಿದೆ. ಒಂದು ಕಡೆ ಹೀಗೆ ಬರೆದಿದ್ದರು "Tested in HELL.." ಅಂತ. ನಾನೋ, ಏನಾದರೂ ಒಂದು ಹೇಳಿಕೆಯನ್ನು ಸೂಚಿಸಲೇ ಬೇಕು ಎಂಬ ದೃಢಚಿತ್ತ(!!)ದೊಂದಿಗೆ "Tested in HELL.. Gives the warmth of HEAVEN" ಅಂತ ಹಾಕಿದೆ. ಮತ್ತೆ ದಿನಗಳು ಸರಿದಂತೆ ಅದನ್ನು ಮರೆತೇ ಬಿಟ್ಟಿದ್ದೆ.

ಈಗ ಅಲ್ಲಿಂದಲೇ ಕರೆ ಬಂದಾಗ.... ಮನಸು ಒಂದು ಸೆಕೆಂಡಿನಲ್ಲಿ ಎರಡು ತಿಂಗಳ ಹಿಂದಕ್ಕೂ, ಹಾಗೂ, ಕಾರು ಬಹುಮಾನವಾಗಿ ಬಂದು, ನಾನು ಸಂತಸದ ಸಾಗರದಲ್ಲಿ ತೇಲಾಡುತ್ತಿರುವ ಹಾಗೆ, ಒಂದು ತಿಂಗಳು ಮುಂದಕ್ಕೂ ಓಲಾಡಿತು. ಅಷ್ಟರಲ್ಲಿ ಧ್ವನಿ ನನ್ನನ್ನು ಕಲ್ಪನಾ ಲೋಕದಿಂದ ಎಚ್ಚರಿಸಿತು. "ನೀವು ಸೂಚಿಸಿದ ಹೇಳಿಕೆಗೆ, ಅರ್ಧ ಗಂಟೆಯ ಟೆಸ್ಟ್ ರೈಡ್ ಅನ್ನು, ನಮ್ಮ ಸಂಸ್ಥೆಯ ಬೆಂಗಳೂರು ವ್ಯಾಪ್ತಿಯಲ್ಲಿ ಗೆದ್ದೀದ್ದೀರಿ(??). ನಾಡಿದ್ದು ಗುರುವಾರ ಮಧ್ಯಾಹ್ನ ಒಂದುವರೆ ಗಂಟೆಗೆ ನೀವು ಲಭ್ಯವಿದ್ದೀರಾ?" ಎನ್ನುವುದೇ?! ನನಗೋ, ಸ್ವರ್ಗದಿಂದ ಪಾತಾಳಕ್ಕೆ ಬಿದ್ದ ಅನುಭವ... " ಛೆ ! ಇಷ್ಟೇನಾ " ಅಂತ ಒಂದು ಕ್ಷಣ ಅನಿಸಿತು. ದಿನ ನಾನು ಲಭ್ಯವಿರಲಾರೆ ಎಂದು ಹೇಳಿ ನುಣುಚಿಕೊಳ್ಳೋಣ (ನಿಜವಾಗಲೂ ದಿನ ಸಾದ್ಯವಿರಲಿಲ್ಲ ) ಅಂತ ಪ್ರಯತ್ನಿಸಿದರೂ, ಮತ್ತೊಂದು ದಿನದ ನನ್ನ ಲಭ್ಯತೆ ಕೇಳಿ, ಕೊನೆಗೆ, ಮುಂದಿನ ವಾರಾಂತ್ಯಕ್ಕೆ ನಾನು ಗೆದ್ದ(?!) ಟೆಸ್ಟ್ ರೈಡ್ ಸಮಯವನ್ನು ನಿಗದಿಮಾಡಿದರು. ಅದೇನೇ ಆಗಲಿ, ಎಷ್ಟೋ ಜನರಲ್ಲಿ, ನಾನು ಆಯ್ಕೆ ಆಗಿರುವೇನಲ್ಲ, ಅಷ್ಟಾದರೂ ಅದೃಷ್ಟ ಇದೆಯಲ್ಲ ಎಂದು ಸಮಾಧಾನಪಟ್ಟುಕೊಂಡೆ.

ಈಗ ಎಲ್ಲರಿಗೂ ಇದನ್ನು ಹೇಳುವ ಹುರುಪು ನನ್ನಲ್ಲಿ. ಏನೋ ಗೆದ್ದಿದ್ದೆ ತಾನೇ? ಎಲ್ಲರಿಗೂ ಫೋನಾಯಿಸಲಾರಂಭಿಸಿದೆ. ಹೀಗಿದೆ ನೋಡಿ ಒಂದು ಘಟನೆಯ ನೂರೊಂದು ಪ್ರತಿಕ್ರಿಯೆಗಳು -

ಅಪ್ಪ ಆಸಕ್ತಿಯಿಂದ ಕೇಳಿದ್ದು - "ಪರ್ವಾಗಿಲ್ವೆ? ಇನ್ನೇನಾದ್ರೂ offer ಇದೆಯಂತಾ ಇದರ ಜೊತೆಗೆ.. ಅಥವಾ ಅಷ್ಟೇನಾ?"
ಅಮ್ಮ ಕಾಳಜಿಯಿಂದ ಹೇಳಿದ್ದು - "ಟೆಸ್ಟ್ ರೈಡ್ ಅಂತೆಲ್ಲ ಒಬ್ಳೇ ಹೋಗಬೇಡಾ. ಜೊತೆಗೆ ನಿನ್ನ ಒಂದೆರಡು ಗೆಳತಿಯರನ್ನು ಕರೆದುಕೊಂಡು ಹೋಗು"
ನಾನು ಹೇಳುತ್ತಿದ್ದ ಹುರುಪಿನಲ್ಲಿ, ವಿಷಯ ಸರಿಯಾಗಿ ಅರ್ಥ ಆಗುವ ಮೊದಲೇ ತಂಗಿ ಉದ್ಗರಿಸಿದ್ದು - "ಏನಕ್ಕಾ ! ನಿಂಗೆ ಕಾರು ಬರುತ್ತಾ? !!!!!!!!"
ಒಲುಮೆಯ ಕೋಣೆವಾಸಿ(roommate!) ಹೇಳಿದ್ದು - "ನಾನು ನಿನಗೆ ದಿನವೆ ಹೇಳಿದ್ದೆ.. ಅದೃಷ್ಟ ಯಾವಾಗ ಬರುತ್ತೆ ಅಂತ ಗೊತ್ತಾಗಲ್ಲ.. ನೋಡು ಈಗ.. ಅದೇನೇ ಆಗಲಿ ಗೆದ್ದಿರುವೆ ತಾನೇ.. ಅರ್ಧ ಗಂಟೆ ಮಜಾ ಮಾಡಬಹುದು"
ಲಿಂಕ್ ಕೊಟ್ಟ ಸ್ನೇಹಿತರು ಜೋಶ್ ನಲ್ಲಿ ಹೇಳಿದ್ದು - "ಮೊದಲು ನೀನು car driving ತರಗತಿಗೆ ಸೇರಿಕೋ. ಹೇಗಿದ್ದರೂ ಎರಡು ವಾರ ಸಮಯ ಇದೆ. ಭರ್ಜರಿಯಾಗಿ ಚಲಾಯಿಸು. ನಿನಗೆ ಚಿಂತೆ ಬೇಡ, ಎಲ್ಲಾದರೂ ಹೋಗಿ ಗುದ್ದಿ ಕಾರಿಗೆ ಏನ್ ಆದ್ರೂ, ನೀನು ಸುರಕ್ಷಿತವಾಗಿ ಇರೋವಷ್ಟು ಸರಿಯಾಗಿ ಚಲಾಯಿಸಲು ಕಲಿ !!"
ಚಾರ್ಟರ್ಡ್ ಅಕೌಂಟೆಂಟ್ ಗೆಳತಿ ನುಡಿದಿದ್ದು - "ನಾನು ಚೆನ್ನಾಗಿ, ಚಲಾಯಿಸಿದರೆ, ನಂಗೆ ಕಾರು ಬಹುಮಾನವಾಗಿ ಕೊಡ್ತೀರಾ" ಅಂತ ಕೇಳಬೇಕಿತ್ತು ನೀನು!
ಸಾಹಿತಿ ಮಿತ್ರರೊಬ್ಬರು ಮೆಚ್ಚುಗೆಯಿಂದ ಹೇಳಿದ್ದು - "ಎಷ್ಟೋ ಜನರಲ್ಲಿ ನಿಮ್ಮನ್ನು ಆಯ್ಕೆ ಮಾಡಿರಬೇಕಾದರೆ, ಖಂಡಿತಾ ನೀವು ಸೂಚಿಸಿದ್ದು ಅವ್ರಿಗೆ ಇಷ್ಟವಾಗಿರಬೇಕು."
ಕೆಲಸದ ಒತ್ತಡದಲ್ಲಿದ್ದ ಇನ್ನೋರ್ವ ಗೆಳತಿ ಹೇಳಿದ್ದು - "ಅಯ್ಯೋ ಏನಿದೆಯೇ ಅದ್ರಲ್ಲಿ.. ಕಾರು ಖರೀದಿ ಮಾಡಬೇಕು ಅಂತ ಹೋದ್ರೆ, ಯಾರಿಗೆ ಕೂಡ ಟೆಸ್ಟ್ ರೈಡ್ ಮಾಡುವ ಅವಕಾಶ ಸಿಗುತ್ತೆ.. ನೀನು ಸುಮ್ಮನೆ ಅರ್ಧ ಗಂಟೆ ವ್ಯಯಿಸುವ ಬದಲು, ಬೇರೆ ಏನಾದರೂ ಮಾಡು.. ನನಗೆ ಆಸಕ್ತಿಯಿಲ್ಲ ಅಂತ ಹೇಳಿ ಬಿಡು."
ಸಹೋದ್ಯೋಗಿ ಮಿತ್ರೆ ಕೊಟ್ಟ ಐಡಿಯಾ - "ವಾವ್! ಒಂದು ದಿನ ಬೆಳಗ್ಗೆ ಸಮಯ ನಿಗದಿ ಮಾಡಿ ರಾಣಿ ಥರ ಕಾರಲ್ಲಿ ಆಫೀಸಿಗೆ ಬರಬಹುದಿತ್ತಲ್ಲಾ? "

ಅದಕ್ಕೆ ತಾನೇ ಹೇಳೋದು "ಅವರವರ ಭಾವಕ್ಕೆ!" ಎಂದು.. ಎಲ್ಲರ ಪ್ರತಿಕ್ರಿಯೆಯೂ ಅವರವರ ದೃಷ್ಟಿಕೋನದಿಂದ ನೋಡಿದರೆ ಸಮಂಜಸವಾದದ್ದೇ. ಯಾವುದೇ ವಿಷಯದ ಕುರಿತು, ನೂರು ಜನರ ದೃಷ್ಟಿಕೋನ ನೂರು ರೀತಿಯಾಗಿರುತ್ತದೆ ಅಲ್ಲವೇ? ಇದೊಂದು ಸಣ್ಣ ಉದಾಹರಣೆ ಅಷ್ಟೇ!

ಮುಗಿಸುವ ಮುನ್ನ - ಇಷ್ಟೆಲ್ಲಾ ಹೇಳಿದ ಮೇಲೆ ಟೆಸ್ಟ್ ರೈಡ್ ಗೆ ನಾನು ಹೋದೇನೋ ಇಲ್ಲವೋ ಅಂತ ನಿಮ್ಮಲ್ಲಿ ಕುತೂಹಲ ಹಾಗೇ ಉಳಿಸಿಬಿಟ್ಟು, ಮುಗಿಸಲಾರೆ. ಮುಂದಿನ ಶನಿವಾರ ಬೆಳಿಗ್ಗೆ ಅವರು ಕರೆ ಮಾಡಿದಾಗ, ನಾನು ಗೆಳತಿಯ ಹತ್ತಿರ ಮಾತಾಡ್ತಿದ್ದೆ. ಆಮೇಲೆ ಸುಮಾರು ಹೊತ್ತು ಅವರ ಕರೆಯ ಪತ್ತೆ ಇಲ್ಲ. ಮಧ್ಯಾಹ್ನ ಕರೆ ಮಾಡಿ ಸಂಜೆ ಆರುವರೆಗೆ ಆಗಬಹುದೋ ಎಂದು ಕೇಳಿದರು. ತುಂಬಾ ತಡವಾಗುತ್ತೆ ಅಂತ ಅನಿಸಿ "ಇಲ್ಲ, ಸಮಯ ಆಗದು.." ಅಂದೆ. ವಾರದ ದಿನಗಳೂ ಆಗುವದಿಲ್ಲ ಎಂದು ಹೇಳಿದಾಗ, " ಹಾಗಿದ್ರೆ ಮುಂದಿನ ವಾರಾಂತ್ಯ ಇಡುತ್ತೇವೆ " ಎಂದು ಪಟ್ಟು ಬಿಡದೆ ಹೇಳಿದಾಗ, "ಛೆ, ಅದೆಷ್ಟು ಛಲ ಇವರಿಗೆ, ಮುಂದಿನ ವಾರ ಅದೆಷ್ಟೇ ಸಮಯಕ್ಕೆ ಇಟ್ಟರೂ ಹೋಗೋಣ" ಎಂದೆಣಿಸಿ, "ಆಗಬಹುದು" ಅಂತ ಒಪ್ಪಿಗೆ ಸೂಚಿಸಿದೆ. ಅದರ ನಂತರ ಇವತ್ತಿನವರೆಗೆ ಅವರ ಕರೆಯಿಲ್ಲ! ಪಾಪ, ನನ್ನ ಅಷ್ಟೊಂದು "ಇಲ್ಲ"ಗಳಿಂದ ಬೇಸತ್ತು ಮತ್ತೆ ಕರೆ ಮಾಡುವ ಗೋಜಿಗೆ ಹೋಗಿಲ್ಲವೇನೋ?

Sunday, May 10, 2009

ನಮನ


ಶೈಶವದಾರಂಭದಲಿ ಅಂಬೆಗಾಲಿಡುವಾಗ
ಪ್ರಥಮ ಹೆಜ್ಜೆಗೆ ಕಾಲೂರಿದಾಗ
ಓಡುತ, ಆಡುತ ಜಾರಿ ಬಿದ್ದಾಗ
ಕೈ ಹಿಡಿದು ನಡೆಸಿದ ಮಾತೆಗೆ ನಮನ

ಬಾಲ್ಯದಲಿ ಎಲ್ಲದಕೂ ಹಠ ಮಾಡಿದಾಗ
ಊಟಕ್ಕೆ ತಿಂಡಿಗೆ ರಚ್ಚೆ ಹಿಡಿದಾಗ
ಚಂದಮಾಮನ ತೋರಿಸಿ ಕಥೆ ಹೇಳಿದಮ್ಮನಿಗೆ
ತಲೆ ಬಾಗಿ ಮಾಡುವೆ, ಪ್ರೀತಿಯ ನಮನ

ಗುರಿಯತ್ತ ಸಾಗಲು ದೂರಕ್ಕೆ ಹೊರಟಾಗ,
ಕಣ್ಣಿಂದ ಹನಿ ಬಿಂದು, ನಿಲ್ಲದೆ ಹರಿದಾಗ
ಅದ ತಡೆದು, ದೃಷ್ಟಿಯನು ಗುರಿಯೆಡೆಗೆ ಹಾಯಿಸಿದ
ನಲ್ಮೆಯ ಮಾತೆಗೆ ಒಲುಮೆಯ ನಮನ

ಸಂತಸದ ನಗುವನ್ನು ಹೆಚ್ಚಿಸಿದಳಾಕೆ
ಮನದ ದುಗುಡವನು ಇಲ್ಲವಾಗಿಸಿದಾಕೆ
ಸುಂದರ ಬಾಳನ್ನು ಕೊಟ್ಟ ಅಮ್ಮ
ನಿನಗಿದೋ ನನ್ನ ಸಾಷ್ಟಾಂಗ ಪ್ರಣಾಮ...

Monday, May 4, 2009

ಕಲ್ಲು


ಉರುಳುವ ಕಲ್ಲಿಗೆ ನೆಲೆಯಿಲ್ಲ ಬೇರಿಲ್ಲ
ನಿಂತು ಅದನಾರೂ ನೋಡುವರೇ ಇಲ್ಲ
ಫುಟ್ ಬಾಲಿನಂತೆ ತಳ್ಳುವರೆ ಎಲ್ಲಾ
ಜಗಕೆಂದು ಅದರ ಪರಿವೆಯೇ ಇಲ್ಲಾ

ಪುಟ್ಟ ಕಲ್ಲೆಂದು ಜನಕೆ ತಾತ್ಸಾರ
ಸುಲಭದಲಿ ಎಸೆದು ಮಾಡುವರು ಜಯಕಾರ
ಒಂದಿನಿತು ಇಲ್ಲ ಅದರೆಡೆಗೆ ಮಮಕಾರ
ನೀಡರು ಯಾರೂ ಅದಕೆ ಸಹಕಾರ

ಅನುಭವಿಸುತಿದೆ ಅದು ಸಕಲ ನೋವನ್ನು
ಸಹಿಸುತಿದೆ ಉಳಿಯ ಪ್ರತಿ ಹೊಡೆತವನ್ನು
ಮುಂದುವರೆಸುತಿದೆ ತನ್ನ ಪ್ರಯತ್ನವನ್ನು
ತಾನೂ ಆಗಲು ಹೊಳೆವ ಹೊನ್ನು

ಸುತ್ತುಗಟ್ಟಿವೆ ರಾಶಿ ಮುತ್ತು ರತ್ನ
ಮುಚ್ಚಿಹಾಕಿವೆ ಈ ಪುಟ್ಟ ಕಲ್ಲನ್ನ
ಹೋರಾಡುತಿದೆ ಕಲ್ಲು ಅಸ್ತಿತ್ವಕ್ಕಾಗಿ
ತನ್ನ ಮಹಿಮೆಯನೂ ತೋರಿಸುವುದಕಾಗಿ

ಹೊಡೆತಗಳು ರೂಪಿಸುತಿವೆ ಭವ್ಯ ಕಾಯಕಲ್ಪ
ಭವಿಷ್ಯದಲಿ ಕಲ್ಲಾಗುವುದು ಸುಂದರ ಶಿಲ್ಪ
ನೆಲೆ ನಿಂತ ಕಲ್ಲಾಗಿ ಗಳಿಸುವುದು ಮರ್ಯಾದೆ
ಸಕಲರಿಗೂ ಮೂಡುವುದು ಪೂಜಿಸುವ ಇರಾದೆ

Tuesday, April 21, 2009

ಋತು

ಬಾಗಿಲೊಳು ನಿಂತಿತ್ತು ನವ ವಸಂತ
ಸೊಂಪಾಗಿ ಬೀಸಿತ್ತು ತಂಪಾದ ಮಾರುತ
ತಂದಿತ್ತು ಮನಕೆ ಆಹ್ಲಾದ ಚೈತನ್ಯ
ಮಾಡಿತ್ತು ಎಲ್ಲ ದುಗುಡವನು ಶೂನ್ಯ

ಇಹವನು ಮರೆತು ಮನಸದು ಓಡಿತ್ತು
ಮುಂಬರುವ ಗ್ರೀಷ್ಮದ ತಾಪಕೆ ಹೆದರಿತ್ತು
ಹೇಗೆ ತಾಳುವುದು ವಿರಹದ ಬೇಗೆಯನು
ಎಂದು ಮಾಡಿತು ಈಗಲೇ ಚಿಂತೆಯನು

ವರ್ಷದ ನೆನಪಾಗಿ ಕನಸೊಂದು ಮೂಡಿತು
ಅರಳಿತು ಮನಸು ಸಂಗಮವ ನೆನೆದು
ಬಯಕೆ ಅತಿಯಾಯ್ತು ಜೋರಾಗೋ ಮಳೆಯಂತೆ
ಒಂದಾಗಿ ಹೋಗಲು ಸುರಿಮಳೆಯ ಜೊತೆ

ಮತ್ತೆ ಮನದಂಗಳದಿ ಬರುವವನು ಶರತ
ಎಲ್ಲವನೂ ಉದುರಿಸಿ ಆಗುವನು ಸಂಪ್ರೀತ
ಹೇಮಂತ ಕಾಲಿಡಲು ತಂಪನೆಯ ತಂಗಾಳಿ
ತನುಮನಕೆ ಹಿತ ತರುವ ಕುಳಿರ್ಗಾಳಿ

ಶಿಶಿರನು ಬರಲು ಎಲ್ಲೆಡೆಯೂ ಇಬ್ಬನಿ
ಕೇಳುವನು ಮನದ ಪ್ರೀತಿಯ ಇನಿದನಿ
ಮತ್ತೆ ಬರುವನು ಇದೇ ವಸಂತ
ತರುವನು ಮತ್ತದೇ ಭರಪೂರ ಸಂತಸ

ಎಣಿಕೆಯು ನಡೆದಿತ್ತು ಆಕೆಯ ಮನದಿ
ಫಲಿಸೀತೆ ಆಸೆ ಮುಂದಿನ ವಸಂತದಿ
ಕಾಯುತಿಹಳು ಆ ಸ್ತ್ರೀ-ಧಾರಿಣಿ
ಕಾಲ ಪುರುಷನ ಪ್ರೀತಿಯ ರಮಣಿ

Sunday, April 19, 2009

ಸಾಂತ್ವನ


ನೊಂದ ಜೀವವೊಂದಳುತಲಿದೆ ಖಾಲಿ ಹೃದಯದಲಿ
ಹುಡುಕಾಟ ನಡೆಸುತಿದೆ ಏಕಾಂತದೂರಿನಲಿ
ಪಯಣವ ಸಾಗಿಸುತಿದೆ ಒಂಟಿ ಹಾದಿಯಲಿ
ಕಂಬನಿಯು ಜಾರುತಿದೆ ಕಣ್ಣಿನಣೆಕಟ್ಟೆಯಲಿ...

ನೋಡುವೆಯಾ ನೀನೊಮ್ಮೆ ಹೊಳೆವ ರವಿಯನ್ನು
ವಿಶಾಲಾಗಸದಿ ಏಕಾಂಗಿಯವನು,
ನಲಿಸುವನು ಸಕಲ ಜೀವ ರಾಶಿಯನು
ನೀಡುವನು ಎಲ್ಲರಿಗೂ ಬಾಳ್ವ ಶಕ್ತಿಯನು

ಮಿನುಗುತಿರುವನು ನೋಡು ಆ ಚಂದಿರ
ತಾರೆಗಳು ನೂರಾರು, ದೂರ ದೂರ
ಕಾರಿರುಳ ನಡುವೆ ಒಬ್ಬಂಟಿಯವನು
ಆದರೂ ತಂಪ ಬೀರಿ, ನಗುತಲಿಹನು

ಅಬ್ಬರದಿ ಭೋರ್ಗರೆವ ಸಾಗರವ ನೋಡು
ಏನಾದರೂ ನಿಲ್ಲದು ಮೊರೆವ ಅಲೆಗಳ ಬೀಡು
ಸಂಜೆಯಾದಂತೆ, ಬಹು ಜನರ ನಾಡು
ಮತ್ತೆಲ್ಲ ಸಮಯದಲಿ ಮೌನದ ಹಾಡು

ಸಾಕಿನ್ನು ರೋಧನ, ಓ ನೊಂದ ಜೀವವೇ..
ನಾವಿಹೆವು ಜೊತೆಗೆ, ಕಣ್ಣೀರ ತಡೆಯುವೆವು
ಬಾಡಿರುವ ಬೇರನು ಮತ್ತೆ ಚಿಗುರಿಸುವೆವು
ಚಿಗುರಿಸಿದ ಮನದಲಿ ಹೊನ್ನ ಹೂವರಳಿಸುವೆವು

ಹೊರಹಾಕು ಅಮುಕಿಟ್ಟ ಜ್ವಾಲಾಮುಖಿಯನು
ಆರಂಭಿಸು ಮತ್ತೆ ಹೊಸ ಜೀವನವನು
ಮೂಡಲಿ ಮನದಲಿ ಹೊಸ ಲಾವಣ್ಯ
ನವೀನ ಆರಂಭಕೆ ನವ ಚೈತನ್ಯ .....

Wednesday, April 8, 2009

ಚಿಕಣಿ ಸಾಲುಗಳು

ನಾಕು ಮೂಲೆಯಿರುವ ವಿನ್ಯಾಸ ಕ್ಯುಬಿಕಲ್ಲು
ಒಳಗಿರುವ ಅಭಿಯಂತರ ಆಗುವನು ಜೀವ ಇಲ್ಲದ ಕಲ್ಲು !
ಖುಷಿ ಪಟ್ಟು ಒಪ್ಪಿದ್ದ ಆಕೆಯನು
ಹೇಳಲು ಅವಳೊಂದು ದಿನ...
"ಸದಾ ಅನಿಸುವುದು ಪ್ರಿಯ,
ಕನ್ನಡಿಯಲ್ಲಿ ನಿಂತಂತೆ ನೀ ನನ್ನ ಹಿಂದೆ"
ಈಗ ಅವನದು ಪಾಪ ನಾಯಿ ಪಾಡು
ಅವಳು ಸದಾ ಮುಂದೆ
ಅವನು ಅವಳ ಹಿಂದೆ !
ಬಂದಿದೆ ಮಾರುಕಟ್ಟೆಗೆ ಅಗ್ಗದ ಕಾರು ನ್ಯಾನೋ
ಪೈಪೋಟಿ ಕೊಳ್ಳುವುದಕೆ ಮೊದಲಾರೆಂದು, ನೀನೋ ನಾನೋ ?

Wednesday, March 25, 2009

ಅವರವರ ಭಾವಕ್ಕೆ...
ಪ್ರಕೃತಿಯ ಮಡಿಲಿನ ಸೃಷ್ಟಿ ನೂರಾರು
ಗಿಡ
ಮರ ಬಳ್ಳಿ ನದಿ ತೊರೆ ನೀರು
ಒಂದೆಡೆ ಪರ್ವತ ಒಂದೆಡೆ ಇಳಿಜಾರು
ಕರ್ತನ ಮಹಿಮೆ ತಿಳಿಯದವರಾರು?

ಜುಳು
ಜುಳು ಹರಿವ ನದಿಯೊಂದ ಕಂಡು

ಅಳುತ್ತಿತ್ತು
ಒಳಗೊಳಗೇ ಹಿಮ ನದಿಯೊಂದು
ಮೇಲ್ನೋಟಕೆ ತಾನು, ಬರಿ ಮಂಜಾದರೇನು
ಹರಿಯುವೆನು
ಒಳಗೊಳಗೇ ನನ್ನೊಳು ನಾನು
ತಟಸ್ಥ ನಿರ್ಜೀವಿ ನೋಡುಗರಿಗೆಲ್ಲಾ
ಮೋಹಕ
ಸಂಜೀವಿ, ನಿಜ ತಿಳಿದವರಿಗೆಲ್ಲಾ

ಬೇಸರಿಸುತಿತ್ತೊಂದು
ಎಲೆ ಮರೆಯ ಕಾಯಿ
ನೋಡುವರೇ ಇಲ್ಲೆಂದು ಚಪ್ಪರಿಸಿ ಬಾಯಿ
ಬರಿಗಣ್ಣಿಗೆ
ನಾ ಕಾಣದಿರೆ ಏನು
ಪಕ್ವವಾಗಿಹೆನು ಮರೆಯಲ್ಲಿ ನಾನು
ಬೀಸಲು ಗಾಳಿ ಆಗುವೆನು ಗೋಚರ
ಮೂಡಿಸುವೆ
ನನ್ನಿರುವನು ಮನದಲಿ ಎಲ್ಲರ


ಹರಿಯುವ
ನದಿಗೆ ಅದರದೇ ಚಿಂತೆ

ಬಂದು
ಸೇರುವುದದಕೆ ಎಲ್ಲ ಅಂತೆ-ಕಂತೆ
ಸರ್ವ ಗೋಚರ ಕಾಯಿಗೆ ತನ್ನದೇ ಯೋಚನೆ
ಭಯವದಕೆ ನೆನೆಸಿ ಕಲ್ಲೇಟಿನ ಬೇನೆ
ಬೇಗುದಿಯು
ಇರುವುದು, ಪ್ರತಿಯೊಂದು ಜೀವಕ್ಕೆ

ಯೋಚನಾ
ಲಹರಿ, ಅವರವರ ಭಾವಕ್ಕೆ...

Friday, March 20, 2009

ಹನಿ..


ಇರಬೇಕು ಶಾಪ ನಮ್ಮನೆಯ ನಳಕೆ
ಮಹಾಭಾರತದ ಕರ್ಣನಂತೆ
ಬೇಕಿರಲು ಬರದ ವಿದ್ಯೆಯಂತೆ

ಸಂಜೆ ತಿರುಗಿಸಿದರೆ ಭೋರ್ಗರೆವ ಬಿಸಿನೀರು
ಭೋರೆಂದು ಅಳುವ ನವ ವಧುವಿನಂತೆ
ಮುಂಜಾನೆ ನೋಡಲು ತಂಪನೆ ತಣ್ಣೀರು
ಬೆಟ್ಟದಿಂ ತೊಟ್ಟಿಕ್ಕುವ ಹನಿ ತೀರ್ಥದಂತೆ !

Thursday, March 19, 2009

ಪಥ


ನೆನಪಿನಾ ಸಾಗರದಿ ಉಕ್ಕುತಿವೆ ಅಲೆಗಳು
ಮುತ್ತಿಡುತಲಿವೆ ಓಡೋಡಿ ಹರಿದು ಬಂದು
ಹಿಂದಿರುಗಿ ನೋಡಲು ತೀರದಲಿ ನಿಂದು...

ಬದುಕಿನ ವಿಪರ್ಯಾಸ ಅದೇನೋ ತಿಳಿಯದು
ಕೆಲವೊಮ್ಮೆ ಭರತ, ಇನ್ನೊಮ್ಮೆ ಇಳಿತ
ಸದ್ದಿರದೆ ದಾಳಿ ಇಡೋ ನೆನಹುಗಳ ಮೊರೆತ

ಆ ಏಳು ವರುಷಗಳ ಪ್ರಾಥಮಿಕ ಶಿಕ್ಷಣ
ಕಾಣುತಿರಲೆಲ್ಲೆಲ್ಲೂ ಏಳು ಬಣ್ಣ
ಸಂತಸವೇ ತುಂಬಿತ್ತು ಬಾಳ ಪ್ರತಿ ಕ್ಷಣ

ಮತ್ತೆ ಹೋದ ಆ ಪ್ರೌಢ ಶಾಲೆ
ಅರಳುವ ಮನಸಲಿ ಸುಂದರ ಹೂ ಮಳೆ
ಎಂದೂ ಬತ್ತದ ನೆನಪಿನ ಸೆಲೆ

ಕಾಲಿಡಲು ಷೋಡಶದಿ, ಸುತ್ತಲೂ ಮಾಯೆ
ಕನಸಿನ ಲೋಕದಿ ನಸುನಗೆಯ ಛಾಯೆ
ಹೂ-ದುಂಬಿ ಸಂಗಮಕೆ ಪ್ರಕೃತಿಯ ಧಾರೆ

ಯೌವನದ ಕಾಲದಿ ವಸಂತನಾಗಮನ
ಪ್ರೇಮದ ಮೋಹಕ ಭಾವಾನುಜನನ
ಆರಂಭ ಸಮರಸದ ನವಜೀವನ

ಕಂಪನರಿಯುವ ಮುನ್ನ ನಿಂತಿತು ಸಿಹಿಗಾಳಿ
ಒಂದಿನಿತು ದಯೆ ತೋರದೆ ಬಂತು ಬಿರುಗಾಳಿ
ಜೀವನದಿ ಮಾಡಿತು, ಮುಚ್ಚಲಾಗದ ಕುಳಿ

ಅಲ್ಲಿಗೆ ಮುಕ್ತಾಯ ಸಂತಸದ ಭರತ
ಮತ್ತೆ ಕಂಡದ್ದು ಪಾತಾಳದ ಇಳಿತ
ಭರತವನು ಅಳಿಸಿದ ಚಂಡಮಾರುತ

ಜೀವನ ಸೂರ್ಯನ ಅಸ್ತಂಗತದಿ
ಬಾಳ ಸಂಜೆಯ ಈ ಸಮಯದಿ
ಅಲ್ಲೋಲ ಕಲ್ಲೋಲವೀ ನೆನಪಿನ ಸಾಗರ
ನೂರಾರು ನೆನಪುಗಳ ಬೆಂಬಿಡದ ಸಮರ

ಅಧಿಕವಾಗುತಲಿದೆ ಕಾಯುವಿಕೆ
ಮುಂದಾಗಲಿರುವ ಸಂಪೂರ್ಣ ಅಸ್ತಕೆ
ರವಿಯು ಸಾಗರದ ಜೊತೆ ಲೀನವಾಗುವುದಕೆ

ಗಾಢಾಂಧಕಾರಕೆ ಕಾಯುತಿಹೆನಲ್ಲ..
ಆದರೂ ಇರುಳು ಕವಿಯುತಿಲ್ಲಾ
ಕಂಡದ್ದೇ ಕಾರಿರುಳೋ ? ತಿಳಿಯುತಿಲ್ಲ..
ಅಸ್ತವೋ ಉದಯವೋ ದೇವನೇ ಬಲ್ಲ !

ಅಗೋ, ಕಾಣುತಿದೆ ಒಂದು ಕಿರಣ
ತರುತಲಿದೆ ಮೆಲ್ಲಗೆ ಹೊನ್ನ ಬಣ್ಣ
ಆರಂಭವಾಯಿತೇ ಹೊಸ ಪಯಣ?

Saturday, March 7, 2009

ಮಹಿಳಾ ದಿನಾಚರಣೆ - ಒಂದು ಸುತ್ತುನೋಟ

ರೇಡಿಯೋ ತಿರುಗಿಸಿದರೆ ಸಾಕು, ಟಿ.ವಿ ಹಾಕಿದರೆ ಅಲ್ಲೂ, ಮತ್ತೆ ಓದುವ ದಿನಪತ್ರಿಕೆಯಲ್ಲೂ ನಿನ್ನೆ, ಇಂದು ನಾಳೆ ನಾವು ಕೇಳುತ್ತಿರುವುದು, ನೋಡುವುದು, ಓದುವುದು ಅಂತರ ರಾಷ್ಟ್ರೀಯ ಮಹಿಳಾ ದಿನ - ಅದರ ಮಹತ್ವ, ಮಹಿಳೆಯರ ಮಹಾನ್ ಗುಣಗಳು, ಮಹಿಳೆಯರಿಗಾಗಿ ಸ್ಪರ್ಧೆ, ಬಹುಮಾನ - ಇವೆಲ್ಲದರ ಕುರಿತು. ಆದರೆ ಇವೆಲ್ಲಾ ಮಾಡಿದಾಕ್ಷಣ ಅದರ ಅರ್ಥ ಪೂರ್ಣ ಆಚರಣೆ ಸಾಧ್ಯವೇ? ರೇಡಿಯೋದಲ್ಲಿ, ಒಂದು ಸ್ಪರ್ಧೆಯಲ್ಲಿ, ಮಹಿಳೆಯರು ಮಾಡುವ ಏನನ್ನೆಲ್ಲ ಪುರುಷರು ಮಾಡಲು ಸಾಧ್ಯವೇ ಇಲ್ಲ ಎಂದೆಲ್ಲಾ ಪಟಪಟನೆ ಹೇಳುವುದರಿಂದ ಏನು ಸಾಧನೆ ಮಾಡಿದಂತಾಗುವುದು? ವಾಸ್ತವದಲ್ಲಿ "Rose is red, Grass is green" ಎಂಬ ನಾಣ್ಣುಡಿಯಂತೆ, ಪ್ರಕೃತಿಯಲ್ಲಿ ಏನೇನು ಹೇಗಿರಬೇಕೋ ಹಾಗೆ ಇರುವುದು ಚಂದ.

ಮಹಿಳಾ ದಿನದ ಅರ್ಥ ಪೂರ್ಣ ಆಚರಣೆ ಆಗಬೇಕಾಗಿರುವುದು - ಒಂದು ದಿನದ ಮಹಿಳಾ ಮಹಿಮೆಯ ಗುಣಗಾನದಿಂದ ಅಲ್ಲ. ನಮ್ಮ ಇಂದಿನ ಸಮಾಜದಲ್ಲಿ, ಇಷ್ಟೊಂದು ವಿಜ್ಞಾನ ತಂತ್ರಜ್ಞಾನದ ಪ್ರಗತಿಯ ದಿನದಲ್ಲಿಯೂ ಮಹಿಳೆಯರು ಎಷ್ಟೊಂದು ಕಷ್ಟಗಳನ್ನು ಎದುರಿಸುತ್ತಿದ್ದಾರೆ, ಬವಣೆ ಪಡುತ್ತಿದ್ದಾರೆ - ಎನ್ನುವುದನ್ನು ಎಲ್ಲರೂ ಮನಗಂಡು, ಆಕೆಗೂ, ಅವಳ ಕನಸುಗಳನ್ನು ನನಸು ಮಾಡುವ ಸಮಯ ಕೊಟ್ಟರೆ, ಆಗ ಮಹಿಳಾ ದಿನಕ್ಕೆ ಅರ್ಥ ಬರಲು ಸಾಧ್ಯ. ಇತ್ತೀಚಿಗೆ ನೋಡಿದ, ಕೇಳಿದ ಕೆಲ ಮನ ಕಲಕುವ ಘಟನೆಗಳ ನೊಂದ ಜೀವಗಳು - ತುಂಬಾ ಸಣ್ಣ ಪ್ರಾಯದಲ್ಲಿಯೇ ಭಾವನೆಗಳ ಅಮಲಿನಲ್ಲಿ, ಮದುವೆಯಾಗಿ ಮತ್ತೆ ಜೀವನದ ವಾಸ್ತವದಲ್ಲಿ ಕಣ್ಣೀರು ಕಂಡವರು, ಒಂದು ಕಡೆಯಾದರೆ, ಅನುರೂಪ ಎಂದೆನಿಸುವ ವರನನ್ನು ತಾವೇ ಹುಡುಕಿ, ನೋಡಿ, ಮದುವೆ ಮಾಡುವ ಒಂದೇ ಒಂದು ಗುರಿಯನ್ನಿಟ್ಟುಕೊಂಡು, ಆತುರದಲ್ಲಿ ಮದುವೆ ಮುಗಿಸಿ, ಆಮೇಲೆ ಮಗಳ ಬಾಳಿನ ದುರಂತ ನೋಡಿದ ಹೆತ್ತವರು ಮತ್ತೊಂದು ಕಡೆ.. ಇವೆಲ್ಲಾ ಈ ಒಂದು ಕವನಕ್ಕೆ ಜನ್ಮ ಕೊಟ್ಟಿವೆ. ಇಂದಿನ ಈ ಯುಗದಲ್ಲೂ, ಹುಡುಗಿಯನ್ನು ಓದಿಸಿ, ಕೆಲಸಕ್ಕೆ ಕಳಿಸುವಷ್ಟು ಹಿರಿದಾದ ಮನಸು ಹಲಮಂದಿ ಹಿರಿಯರಲ್ಲಿ ಇದ್ದರೂ, ಅದರ ನಂತರದ ಪ್ರತಿ ದಿನವೂ ಅವರಿಗೆ, ಹುಡುಗಿ ಮತ್ತೊಬ್ಬರಿಗೆ ದಾಟಿಸಬೇಕಾದ ಒಂದು ಜವಾಬ್ದಾರಿ. ಆ ಜವಾಬ್ದಾರಿಯಿಂದ ಆದಷ್ಟು ಬೇಗ ಕಳಚಿಕೊಳ್ಳುವ ಅವರ ಪ್ರಯತ್ನದಲ್ಲಿ, ಹುಡುಗಿಯ ಕನಸುಗಳು, ಮುಂದಿನ ಜೀವನ ಏನೇನೋ ಆಗುವ ಸಾಧ್ಯತೆಗಳು ! ಇದು ಆಗಬಾರದು. ಜೀವನದ ಪ್ರತಿ ಘಟ್ಟದಲ್ಲೂ ಆಕೆಗೆ, ಆಕೆಯ ಕನಸುಗಳಿಗೆ ಸಾಕಷ್ಟು ಸಮಯ ನೀಡಬೇಕು.

ಪುಟ್ಟ ಮಗುವಾಗಿದ್ದಾಗಿಂದಲೇ, ಯಾವುದೇ ತಾರತಮ್ಯವಿಲ್ಲದೆ ಮಗುವಿನಲ್ಲಿ ಜೀವನದ ಗುರಿಯ ಬಗ್ಗೆ ಮಹತ್ವಾಕಾಂಕ್ಷೆ ಮೂಡಿಸಬೇಕು. ಪುಟ್ಟ (ಗಂಡು) ಮಗುವಿನ ತಾಯಿಯೊಬ್ಬಳು ಹೇಳಿದ್ದು ನೆನಪಿಗೆ ಬರುತ್ತಿದೆ - ಮಗುವಿನ ಮುಖದ ಮೇಲೆ ಒಂದು ಸಣ್ಣ ಮಚ್ಚೆಯ ಥರ ಇರುವ ಒಂದು ಕಲೆಯನ್ನು ನೋಡಿ - "ಇರಲಿ ಬಿಡು..ಗಂಡು ಹುಡುಗ ತಾನೇ" ಎಂದು; ಹೌದು! ಹುಡುಗ ಹೇಗಿದ್ದರೂ ಯಾರಿಗೂ ಚಿಂತೆಯಿಲ್ಲ. ಅದು ಪುಟ್ಟ ಮಗುವಾಗಿರಲಿ, ಮದುವೆಯ ವರವಾಗಿರಲಿ; ಅದೇ, ಹುಡುಗಿ ರೂಪದಲ್ಲಿ ಒಂದಿಷ್ಟು ಕಡಿಮೆಯಿದ್ದರೂ, ಹೆತ್ತವರಾದಿಯಾಗಿ, ಬಳಗದವರಿಗೆಲ್ಲಾ ಚಿಂತೆ! ಇವೆಲ್ಲಾ ಯಾವ ದಿನ ನಮ್ಮ ಸಮಾಜದಲ್ಲಿ ಇಲ್ಲವಾಗುತ್ತದೋ (?!) ಆ ದಿನ, ಮಹಿಳಾ ದಿನದ ಆಚರಣೆ ಸಾರ್ಥಕ.


ಇರಲಾರದೆ ಆಸೆ, ಹರೆಯದ ಹುಡುಗಿಯರಿಗೆ
ಆಗಸದಿ ಹಾರಾಡಲು ಹಕ್ಕಿಯ ಹಾಗೆ
ಏಕೆ ಕಟ್ಟುವಿರಿ ಜವಾಬ್ದಾರಿಯ ದಾರ
ಹಾರಲಾಗದಂತೆ ದೂರ ದೂರ...

ಆಕೆಗೂ ಇರುವುದೊಂದು ಕನಸ ಗೋಪುರ
ಮುಗಿಸಲು ಶಿಕ್ಷಣ, ಆಗಬೇಕೆಂದು ವೃತ್ತಿಪರ
ಪಡೆಯಬೇಕೆಂದು ತಾನೂ, ಪಗಾರ
ಮಾಡಬೇಕೆಂದು ಸ್ವತಂತ್ರ ಸಂಚಾರ

ಅಷ್ಟರಲಿ ಹಿರಿಯರಿಗೆ ಆರಂಭ ಅವಸರ
ಇಳಿಸಲು ಹೊತ್ತಿರುವ ಕನ್ಯಾ ಸೆರೆ - ಭಾರ
ನೋಡುವರು ತಮ್ಮಂತಸ್ತಿಗೆ ತಕ್ಕನಾದ ವರ
ಆಗುವುವು ಅದಲು ಬದಲು ಹೂ-ಹಾರ

ಕೂಡಿದರೆ ಇವಳ ರಾಗಕೆ ಅವನ ತಾಳ
ಜೀವನ ಸುಂದರ ಸಂಗೀತ ಸಮ್ಮೇಳ
ಇಲ್ಲದಿರೆ ಸೂರು ಹಾರುವ ಜಗಳ
ಸದಾ ಮನೆಯಲಿ ಮದ್ದಲೆ - ತಾಳ !

ಅದಕಾಗೇ ಇರಲಿ, ಸಾಕಷ್ಟು ಸಮಯವು
ಮನದಲಿ ಅರಳಲು ಪ್ರೌಢಿಮೆಯ ಹೂವು
ಮತ್ತಿರಲಿ ಕಾಲ, ತಿಳಿಯಲು ಗೆಳೆಯನನು
ಜೀವನದ ತೇರಿನ ಜೋಡಿ ಹಯವನು

ಅನಿಸದೇ ಪ್ರತಿಯೊಂದು ಸ್ತ್ರೀ ಮನಕೆ
ತಿಳಿಯಬೇಕೆಂದು, ಮನದಿನಿಯನ ಪ್ರತಿ ಬಯಕೆ
ನೋಡಬೇಕೆಂದು ಲಾಲ್ ಬಾಗ್, ಜೊತೆಯಾಗಿ ಒಮ್ಮೆ
ಹರಿಸಬೇಕೆಂದು, ಒಲುಮೆಯ ಚಿಲುಮೆ

ಮತ್ತೆ ಬೇಡವೇ ಅವನದೊಂದು ಇವಳದೊಂದು B'day
ಜೊತೆಗೊಂದು ಇರಲಿ Valentine's day
ಕೊಡಲು ಉಡುಗೊರೆಗಳನು Special day
ಇರಲಿ ತಿಳಿಯಲು ಹುಡುಗನನು Many day
ಬದುಕಲು ಮುಂದೆ ಜೊತೆಯಾಗಿ Every day
ಮಾಡಲು ಭವಿಷ್ಯದ ಪ್ರತಿದಿನ Happy day !!!

Friday, February 27, 2009

ಮಾಯದಾಟ

ಉದಯ ರವಿಯೊಡನೆ ಸಕಲವೂ ಗೋಚರ
ಆರಂಭವಾಗುವುದು ಮುಂಜಾನೆ ಸಂಚಾರ
ಪುಟ್ಟ ಮಗುವೊಂದು ಮನಸ ತಟ್ಟುವುದು ತೀರಾ

ಆ ನೋಟಕಾಗುವುದು ಹೃದಯವು ಭಾರ


ಓಡಾಡುವ ಜನರೆಷ್ಟೋ ಆ ಪಾರ್ಕಿನೊಳಗೆ

ಇದರ ಪರಿವೆಯಿಲ್ಲ ಆ ಮಗುವಿನೊಳಗೆ
ಅಲ್ಲೇ ಅದರಾಟ, ಪುಟ್ಟ ಗುಡಿಸಲಿನ ಹೊರಗೆ
ಕಿತ್ತ ಬಾಟಲಿಯ ಸೂತ್ರವಿದೆ, ಅವನ ಕೈಯೊಳಗೆ
ಅವನ ಲೋಕಕೆ, ಅವನೇ ರಾಜ ಆ ಮರದ ಕೆಳಗೆ
ಮೇಲೆ ಹಾರಲು ಬಾಟಲಿ, ಕೆಳಗೆ ಸಂತಸದ ಬುಗ್ಗೆ

ಅಷ್ಟರಲಿ ಕರೆಯುವನು, ಅಲ್ಲಿರುವ ತಂದೆ
ಬಿಟ್ಟು ಬರುವನು ಹುಡುಗ, ಓಡೋಡಿ ಮುಂದೆ
ಓಡಿಸಲು, ಕಿತ್ತಾಡುವ ನಾಯಿಯ ಮಂದೆ

ಇದೇ ಅವರ ದಿನ ನಿತ್ಯದ ಧಂದೆ

ಸ್ಥಾಪಿಸಲು ಪಾರ್ಕಿನೊಳು ಶಾಂತಿಯ ಸುಧೆ


ಅತ್ತ ಬಾನಂಗಳದಲಿ ಏರೋ ಇಂಡಿಯಾ ಹಾರಾಟ
ಶ್ರೀಮಂತ ಮಕ್ಕಳ ಸಂತಸದ ಕೂಗಾಟ
ತಿಂಡಿ ತೀರ್ಥಗಳು, ಮಿಕ್ಕಿ, ಚೆಲ್ಲಾಟ

ಇತ್ತ ಕೂಳು ಅನ್ನಕಾಗಿ ಪರದಾಟ

ಮತ್ತೆ ಸಾಗುವುದು ಕಿತ್ತ ಬಾಟಲಿಯ ಆಟ

ನೋಡುಗರ ಮನದಲ್ಲಿ ಏನೂ ಮಾಡಲಾಗದ ಚಟಪಟ...

ಯಾರು ಬಲ್ಲರು ಆ ದೇವರ ಮಾಯದಾಟ ?
ಸೂತ್ರ ಅವನ ಕೈಯಲ್ಲಿ, ನಾವು ಬರಿಯ ಪಟ !!

Friday, February 13, 2009

ಆದರೇನು?

ಕಾಯುತಿರುವೆ ನಾ, ನಿನಗಾಗಿ ಸಂಗಾತಿ
ಭೂಮಿ
ಆಗಸದಿ ನೋಡಿದಂತೆ ತಲೆಯೆತ್ತಿ
ಯಾವ
ಮೇಘವು ವರ್ಷ ಸೂಸುವುದೋ
ಎಂದು
ಎಲ್ಲೆಡೆಯು ತಂಪ ತರುವುದೋ
ಆದರೇನು
? ಈಗಿನ್ನೂ ಚಳಿಗಾಲವಲ್ಲಾ?

ಎಲ್ಲೆಡೆಯು
ಅರಸುತಿದೆ ಮನವಿಂದು ಬಯಸುತಿದೆ
ಬಾಳ
ಗೀತೆಯ ಸ್ವರವಾಗುವ ಗೆಳೆಯನನು
ಹೃದಯ
ರಾಗಕೆ ತಾಳವಾಗುವ ಇನಿಯನನು
ಒಂಟಿ
ಜೀವನ ಮುಗಿಸುವ ಜಂಟಿ ವಾದ್ಯವನು
ಆದರೇನು
? ನಾನಿನ್ನೂ ಸಂಗೀತ ಕಲಿತಿಲ್ಲವಲ್ಲಾ ?

ಕೊನೆಗೂ
ಮಳೆಗಾಲ ಬಂದಿತ್ತು
ಮೇಘವೊಂದು
ವರ್ಷ ಸುರಿದಿತ್ತು
ನಾನೂ
ಸಂಗೀತ ಕಲಿತಿದ್ದೆ
ಜತೆ
ವಾದ್ಯದಿ ಗೀತೆಯ ಹಾಡಿದ್ದೆ
ಮನವದು
ನಲ್ಲನ ಜೊತೆಗಿತ್ತು
ಖುಷಿಯಲಿ
ಹಿರಿ ಹಿರಿ ಹಿಗ್ಗಿತ್ತು
ಆದರೇನು
.........?
ರಾತ್ರಿಯ
ಕನಸದು ಮುಗಿದಿತ್ತು
ತನು
ಮನ ಜೊತೆಯಲಿ ನೊಂದಿತ್ತು !!


ಈ ಕವನ, ಬಾಳ ವೀಣೆಯನ್ನು ಮೀಟಲಿರುವ ವೈಣಿಕನನ್ನು ನೆನೆಯುತ್ತಾ...

Thursday, January 29, 2009

ಒಂದು ಕ್ಷಣ ಅನಿಸಿದ್ದು...

ಯಾಕೋ ಹರಿಯುತಿದೆ ಸದ್ದಿಲ್ಲದೆ ಕಣ್ಣೀರು
ಹೃದಯದಲಿ ಮಡುಗಟ್ಟಿವೆ ನೋವುಗಳು ನೂರಾರು
ಒಂದು ಕ್ಷಣ ಮಾತ್ರ ಅನಿಸಿದ್ದು ನಿಜವಿಂದು
ನಾನೂ ಆಗಬೇಕಿತ್ತು ಹುಡುಗನೆಂದು!

ಷರ್ಟ ಜೇಬಲಿ ಫೋನನು ಮಿಂಚಿಸಿ
ಅದರ ಬಾಲವನು ಕಿವಿಯಲ್ಲಿ ತುರುಕಿಸಿ
ವಾಹನ ಚಾಲನೆಯಲೂ ಸಂಗೀತವನಾಲಿಸಿ
ಮಜಾ ಉಡಾಯಿಸುವ ಹುಡುಗರ ನೋಡುತಿರೆ
ತಪ್ಪೇ ಹೀಗೆಂದು ಅನಿಸಿದರೆ -
"ನಾನೂ ಹುಡುಗನಾಗಿದ್ದರೆ?"


ಆಫೀಸು ಬಾಗಿಲಲಿ ಗಂಟೆ ಎಂಟಾದಾಗ
ಇರುಳುಗತ್ತಲಲಿ ಭಯ ಬಳಿಗೆ ಸುಳಿದಾಗ
ಗಂಟೆ ಕಾದರೂ ಬಸ್ಸು ಬರದಾಗ
ಮತ್ತೆ ಮತ್ತೆ ಗಡಿಯಾರದಿ ದೃಷ್ಟಿ ಹರಿಸುವಾಗ
ನನಗೂ ಅನಿಸಿದ್ದು ನಿಜವಿಂದು
ಆಗಬೇಕಿತ್ತು ನಾ ಹುಡುಗನೆಂದು!


"ಹುಡುಗಿ ನಾನೆಂದು ಚಿಂತೆ ನಿಮಗೇಕೆ?"
ಎಂದು ವಾದಿಸುವ ಈ ನನ್ನ ಮನಕೆ
ಸದಾ ಜೊತೆಗಿರುವ ಭಾರೀ ಛಲಕೆ
ಹೀಗೆಲ್ಲಾ ಅನಿಸುತಿರೆ ಇನ್ನೇನು ಬೇಕೆ?


ಸ್ನೇಹಿತರೇ,

ಈ ಕವನದ ಶೀರ್ಷಿಕೆ "ಒಂದು ಕ್ಷಣ ಅನಿಸಿದ್ದು" - ಯಾಕೆಂದರೆ ಆ ಭಾವನೆ ಬಂದಿದ್ದು ಬರಿಯ ಒಂದು ಕ್ಷಣ ಮಾತ್ರ! ಹುಡುಗಿಯೊಬ್ಬಳಿಗೆ ಈ ನಮ್ಮ ಸಮಾಜದಲ್ಲಿ ಇರುವ ನಿರ್ಬಂಧಗಳು, ಒಂದು ಕ್ಷಣ ಹಾಗೆ ಅನಿಸುವಂತೆ ಮಾಡಿದ್ದು ನಿಜ... ಆದರೆ, ಹಾಗೆ ಅನಿಸಿದ ಕ್ಷಣಗಳನ್ನೆಲ್ಲಾ ಕವನದಲ್ಲಿ ಬರೆಯಾಗಲಿಲ್ಲ... ಅದೇನೇ ಇರಲಿ, ಆ ಭಾವನೆಗಳೆಲ್ಲಾ ಕ್ಷಣಿಕ ; "ಹುಡುಗಿಯಾಗಿ ಹುಟ್ಟಿದ್ದಕ್ಕೆ ಸದಾ ಹೆಮ್ಮೆ ಪಡುವವಳು ನಾನು!" - ಇದು ಮಾತ್ರ ಸತ್ಯWednesday, January 14, 2009

ಸದ್ದಿಲ್ಲದ ಧ್ವನಿ

ಹುಟ್ಟುತಿದೆ ಧ್ವನಿಯೊಂದು
ಹೊರಡಿಸದೆ ಸದ್ದು
ಹೃದಯದಲಿ ಹೊರಡುತಿದೆ
ಬಾಯಲ್ಲಿ ಅಡಗುತಿದೆ

ಕೇಳಿಸುತಿಲ್ಲವೇ ಹತ್ತಿರದವರೇ
ಎರಡಡಿ ಅಂತರ ದೂರದವರೇ
ಹೇಳದೆ ನಿಮಗೆ ತಿಳಿಯುವುದಿಲ್ಲ
ಹೇಳಲು ನನಗೆ ದನಿಯಿಲ್ಲ

ಪಡೆಯಿರಿ ಒಂದಿನ ನನ್ನಯ ಸ್ಥಾನ
ದಿನದಾದ್ಯಂತ ಪಾಲಿಸಿ ಮೌನ
ಬಾಯಿಗೆ ದೊಡ್ಡ ಬೀಗವ ಜಡಿಯಿರಿ
ಕಿವಿಗೆ ಮಾತ್ರ ಕೆಲಸವ ಕೊಡಿರಿ

ತಿಳಿವುದು ಆಗ ದಿಟ ಏನೆಂದು
ಒಂಟಿತನದ ನೋವೇನೆಂದು
ಆದರೂ ಬೇಡ ನಿಮಗಾಕಷ್ಟ
ಅನುಬಂಧವಿರಲಿ ನೀರಂತೆ ಸ್ಪಷ್ಟ

ಹೇಗೆ ನಾ ಹೇಳಲಿ ನಾನೇನೆಂದು
ನಿಮ್ಮೊಡನೆ ಆಗಲಿ ನಾನೂ ಒಂದು
ಬರುವುದೇ ದಿನ ಬಾಳಲಿ ಒಮ್ಮೆ
ಕವನ ಮುಗಿವುದೆ ಎಂದಾದರೊಮ್ಮೆ

Sunday, January 11, 2009

ಗೊಂದಲ

ಕಾಡುತಿದೆ ಪ್ರಶ್ನೆ ಮನದಾಳದಲ್ಲಿ
"ನಾನೆಂಬ" ಒಗಟಿಗೆ ಉತ್ತರವದೆಲ್ಲಿ?
ಸತ್ಯ - ಭ್ರಮೆಯ ಅಂತರ
ಆಗುತಿದೆ ಅಗೋಚರ
ದರ್ಪಣದ ಮುಂದಿದೆ ದಿವ್ಯ ಬಿಂಬ
ನೋಡುತಿಹರೆಲ್ಲ ಒಳಗಿರುವ ಪ್ರತಿಬಿಂಬ
ಕಾಣುತಿಹರೆಲ್ಲ ಏನೋ ಸಂಪೂರ್ಣತೆ
ನನಗಷ್ಟೇ ಕಾಣುತಿದೆ ಎಲ್ಲೋ ಕೊರತೆ
ನಿಜ ಯಾವುದಿದರೊಳಗೆ ಎಂಬುದೇ ಚಿಂತೆ
ಕರುಣಾಳು ಶಕ್ತಿಯೇ, ಬಂದೆನ್ನ ಸಂತೈಸು
ನಿಜವಾದ "ನಾನು" ಏನೆಂದು ಮನಗಾಣಿಸು

Wednesday, January 7, 2009

ಏನು ಹೇಳಲಿ ?

ಅವಳು ಬಂದರೆ ಹತ್ತಿರ
ಏನು ಹೇಳಲಿ ಉತ್ತರ
ನನ್ನನೇಕೆ ಕೊಟ್ಟಿರೆಂದು?
ಅದೇನು ಎಂತದು ಒದಗಿತೆಂದು ?

ಕೊಟ್ಟರವಳನು ಹೆಣ್ಣು ಮಗುವನು
ಅಮ್ಮನಿಲ್ಲದ ಪುಟ್ಟ ಮಗುವನು
ಮಳೆಯ ಸುರಿಸುವ ಮೇಘವನ್ನು
ಕುಲವ ಬೆಳಗುವ ದೀಪವನ್ನು

"ಕೊಟ್ಟ ಹೆಣ್ಣು ಕುಲಕೆ ಹೊರಗೆ"
ಗಾದೆ ನೆನೆಸುತ ಅಂದು ನಾವು
ಎಂದೋ ಕೊಡುವುದ ಇಂದೇ ಕೊಟ್ಟೆವು
ಎಂದೆನುತ್ತಾ ಕೈಯ ತೊಳೆದೆವು

ಎಲ್ಲೋ ಇರುವ ಪುಟ್ಟ ಹುಡುಗಿ
ಬಾಳು ಧೈರ್ಯದಿ ಕಷ್ಟ ನುಂಗಿ
ನಮ್ಮ ಜೊತೆಯಲಿ ನಮ್ಮ ಸಂಗಡ
ಇರುವೆ ನೀನು ಇಂದು ಕೂಡ

Monday, January 5, 2009

ದಿನಚರಿ

ಓ ಪೃಥ್ವಿ ಹೇಳೇ, ಸಾಕಾಗದೇ ನಿನಗೆ
ದಿನಾ ಸುತ್ತುತಾ ಅದೇ ದಿನಕರನಿಗೆ

ಕೇಳೇ ಒಮ್ಮೆ ನನ್ನಯ ಪಾಡು
ದಿನಾ ಹಾಡುವೆ ಒಂದೇ ಹಾಡು


ಮುಂಜಾನೆಯಾದೊಡೆ ಹೊರಡುವ ಅವಸರ

ಪ್ರತಿ ಹೆಜ್ಜೆಗೂ ಹೆಚ್ಚುವ ಆತುರ

ಮತ್ತೆ ಬರುವ ಬಸ್ಸಿಗೆ ಕಾಯುತಾ
ಸದಾ ಕಾಯುವ ಮುಖಗಳ ನೋಡುತಾ


ಸಂಚಾರ ದೀಪದಿ ಬೆಳಗಲು ಕೆಂಪು

ಮಂಪರು ಕಣ್ಣಿಗೆ ಬರುವುದು ಜೊಂಪು

ಬೆಳಗಲು ಅಲ್ಲಿ ಹಚ್ಚನೆ ಹಸಿರು

ಎಲ್ಲರ ಮುಖದಲಿ ನೆಮ್ಮದಿ ನಿಟ್ಟುಸಿರು


ಎಲ್ಲರ ಗುರಿಯು ಗಮ್ಯದ ಕಡೆಗೆ

ಆದಷ್ಟು ಬೇಗ ಅದ ತಲುಪುವೆಡೆಗೆ

ಸಂಜೆಯಾದೊಡೆ ಮರಳಿ ಗೂಡಿಗೆ

ಮತ್ತೊಂದು ದಿನದ ಸಮರದ ತಯಾರಿಗೆ


ಮತ್ತದೇ ಮುಂಜಾನೆ ದಿನದಾರಂಭ

ಅದೇ ರಾಗ ತಾಳದ ಸಂಗೀತ ಸೌರಭ

ಒಂದೇ ಧ್ವನಿ ಸುರುಳಿಯ ನುಡಿಸಿದಂತೆ

ತಿರುಗಿಸಿ ಮತ್ತೆ ಮತ್ತೆ ಮತ್ತೆ !!

ನನ್ನ ಕವನ

ಮನದ ತುಂಬಾ ಯೋಚನಾ ಲಹರಿ
ಅಲ್ಲೇ ಸುತ್ತುತ್ತಲಿವೆ ಪರಿ ಪರಿ
ಹರಿದು ಬರಲು ಬೇಕು ಸಮಯ ಸಂದರ್ಭ
ಒಳಗೇ ಬಹುಕಾಲವಿರುವ ಗಜ ಗರ್ಭ
ನನ್ನ ಕವನ !!!