Wednesday, October 28, 2009

ಕನ್ನಡಿ Vs ಹೆಣ್ಣು


ತ್ರಿಪುರ ಸುಂದರಿ ಹೆಣ್ಣಿಗೆ
ತನ್ನ ಮೊಗದ ಚೆಲುವನ್ನು
ತಾ ನೋಡಲಾಗದಿರುವುದು
ದೇವರು ಕೊಟ್ಟ ಶಿಕ್ಷೆ...
ಕನ್ನಡಿಯೇ ಆಕೆಗೆ ಶ್ರೀ ರಕ್ಷೆ


******************************************************

ಕಾರಣ ತಿಳಿಯಲಿಲ್ಲ ಯಾರಿಗೂ ಅಂದು
ಲೇಡಿಸ್ ಹಾಸ್ಟೆಲಿನ ಆ ಕನ್ನಡಿ
ಯಾಕೆ ಒಡೆದು ಹೋಯಿತೆಂದು...
ಹಿಂದಿದ್ದ ಗೋಡೆಗೆ ಮಾತ್ರ ತಿಳಿದಿತ್ತು
ರಾಶಿ ಸುಂದರ ಮುಖಗಳ ಸೆರೆ ಹಿಡಿದ
ಕನ್ನಡಿಗೆ - ಯಾರೂ ದೃಷ್ಟಿ ತೆಗೆದಿಲ್ಲವೆಂದು!

*******************************************************

ಅಂದು, ಹೊಸ ಕನ್ನಡಿ ತಂದಿರಿಸಿದಾಗ
ಉದ್ದುದ್ದ ಕಾಣ್ಸೋ ಮುಖವನ್ ನೋಡಿ
ಬೇಸರ ಪಟ್ಕೊಂಡ ಹುಡುಗಿ
ಇಂದು, ಯಾಕಿಷ್ಟಗಲ ನನ್ ಮುಖ ಎಂದು
ಬೇರೆ ಕನ್ನಡಿಲಿ ಮುಖವನ್ ನೋಡಿ
ಬೇಸರಿಸುತಿರುವ ಬೆಡಗಿ

Tuesday, October 13, 2009

ಭಾನುವಾರದ ಸಂಜೆಭಾನುವಾರದ ಸಂಜೆ ಬೇಸರಿಸುತಿದೆ !

ವಿಶಾಲ ಮೈದಾನದಿ ಕ್ರಿಕೆಟ್ಟು ಆಡುತಿಹ
ಪುಟ್ಟ ಹುಡುಗರ ಬಾಯಿಂದ ಹೊರಬಿದ್ದ
"ಛೆ ಸಂಡೇ ಆಗೋಯ್ತು ಕಣ್ರೋ" ಎನ್ನೋ
ಬೇಸರದ ಮಾತನ್ನು ಕೇಳಿಸಿಕೊಳ್ಳುತಾ....

ಕಬ್ಬನ್ ಪಾರ್ಕಿನ ಮೂಲೆ ಬೆಂಚಲ್ಲಿ
ಮೈಗೆ ಮೈ ತಾಗಿಸಿ ಲೋಕವನೇ ಮರೆತಿಹ
ಮಧುರ ಭಾನುವಾರ ಮುಗಿದ ಬೇಸರದಿ
ದೂರವಾಗುತಲಿರುವ ಪ್ರೇಮಿಗಳ
ವಿರಹ ವೇದನೆಯನು ತಾ ನೋಡುತಾ...

ಆರಂಭವಾಗಲಿಹ ಪರೀಕ್ಷಾ ತಯಾರಿಗೆ
ಪುಸ್ತಕ ರಾಶಿಯೆದುರು ಪ್ರತಿಷ್ಠಾಪಿಸಲ್ಪಟ್ಟಿರುವ,
ಹೊರಗಿನ ಆಗಸದಿ ಕವಿದಿರುವ ಮೋಡಕೂ
ಭಾನುವಾರದ ಸಂಜೆಯನು ಹಳಿಯುತಲಿರುವ
ವಿದ್ಯಾರ್ಥಿಗಳ ಕೋಪದ ತಾಪಕೆ....

ಮತ್ತೊಂದು ವಾರದ ಸಮರದ ತಯಾರಿಗೆ
ಸಜ್ಜಾಗುತಿಹ ಕಾರ್ಯ ಯೋಧರ
ಮನದಲ್ಲಿ ಮೂಡುತಿಹ ಆತಂಕ ಒತ್ತಡಕೆ...

ಮತ್ತಾರು ದಿನಗಳನು ಒಬ್ಬಂಟಿಯಾಗಿ
ಮಗ ಸೊಸೆ ಮೊಮ್ಮಕ್ಕಳಿಲ್ಲದೆ ದೂಡಬೇಕು
ಎಂಬ ಅಜ್ಜನ ಬೇಸರದ ನಿಟ್ಟುಸಿರಿಗೆ...

ಭಾನುವಾರದ ಸಂಜೆ ಬೇಸರಿಸುತಿದೆ !