Monday, July 12, 2010

ಪತ್ರ ಸಂಭ್ರಮ


"ಪತ್ರ ಬರವಣಿಗೆ ಎಂದರೆ ಅದು ನೇರ ಹೃದಯದೊಂದಿಗಿನ ಸಂಭಾಷಣೆ" ಹೀಗೆಂದು ನಮ್ಮ ಕನ್ನಡ ಅಧ್ಯಾಪಕರು ಹೇಳಿದ್ದು ನನಗಿನ್ನೂ ನೆನಪಿದೆ. ಮುಖತಃ ಮಾತನಾಡುವಾಗ ಹೇಳಲಾಗದ್ದು, ಅಥವಾ ಮಾತನಾಡುವಾಗ ಹೇಳಿದರೆ ಅಸಹಜ ಎಂದೆನಿಸುವ ವಿಚಾರಗಳನ್ನು ಬರೆಯಲು ಸಾಧ್ಯವಾಗುವುದು ಪತ್ರದಲ್ಲಿ ಮಾತ್ರ! ಹಾಗೆಯೇ, ಅದನ್ನು ಓದುವವರಿಗೆ ಪತ್ರ ಕೊಡುವ ಅನುಭೂತಿ, ಸಂತೋಷ ಅದಮ್ಯವಾದದ್ದು. ಮುಂಚಿನ ದಿನಗಳಲ್ಲಿ ಸುದ್ದಿ ರವಾನೆಗೆ ಬಳಕೆಯಾಗುತ್ತಿದ್ದ ಪತ್ರ ಮಾಧ್ಯಮ, ಇಂದಿನ ದಿನಗಳಲ್ಲಿ ತಲೆ ಎತ್ತಿರುವ ಆಧುನಿಕ ಸಂಪರ್ಕ ಮಾಧ್ಯಮಗಳಿಂದಾಗಿ ತೆರೆ ಮರೆಗೆ ಸರಿದಿರುವುದು ಬೇಸರದ ವಿಷಯ! ಆದಾಗ್ಯೂ, ಪತ್ರ ಬರವಣಿಗೆ ನೀಡುವ ಸಂತಸವನ್ನು ಮನಗೊಂಡವರು ಅದರ ಮಹತ್ವವನ್ನು ಕೊಂಡಾಡುತ್ತಾರೆ.

ನಾನೂ ಇದಕ್ಕೆ ಹೊರತಲ್ಲ. ನಿಜ ಹೇಳಬೇಕೆಂದರೆ, ಪತ್ರ ಓದಿದಾಗ ಆಗುವ ಖುಷಿಗಿಂತ ಬರೆದಾಗ ಆಗುವ ಖುಷಿ ಅನುಭವಿಸಿದ್ದೆ ಜಾಸ್ತಿ ನಾನು. ಇತ್ತೀಚಿಗೆ ಟೀಮ್ ಮೇಟ್ ಒಬ್ಬ ಉನ್ನತ ವ್ಯಾಸಂಗಕ್ಕಾಗಿ, ಕೆಲಸಕ್ಕೆ ರಾಜೀನಾಮೆ ಕೊಟ್ಟು ನಮ್ಮನ್ನೆಲ್ಲಾ ಬೀಳ್ಕೊಡುವ ಸಂದರ್ಭ ಬಂತು. ವಿದಾಯದ ಸಮಯ ಯಾವಾಗಲೂ ಹೃದಯಸ್ಪರ್ಶಿ. ವಿದಾಯಗೊಂಡು ತೆರಳುತ್ತಿರುವವರಿಗೆ, ಬೀಳ್ಕೊಡುವವರು ನೆನಪಿನ ಕಾಣಿಕೆಯಾಗಿ ಏನಾದರೂ ಉಡುಗೊರೆ ಕೊಡುವುದು ವಾಡಿಕೆ. ಒಂದು ಚಂದದ ಕವನ ಬರೆದು ಕೊಡೋಣ ಅಂದುಕೊಂಡರೆ ವ್ಯಾಸಂಗಕ್ಕಾಗಿ ತೆರಳುತ್ತಿರುವ ಈ ಮಿತ್ರ ಕನ್ನಡಿಗನಲ್ಲ (ಇಂಗ್ಲೀಷ್ ನಲ್ಲಿ ಕವನ ಬರೆಯುವಷ್ಟು ಸಿದ್ಧಿ ನನಗಿಲ್ಲ!). ಆದರೆ ಸಾಹಿತ್ಯ ಸಂಗೀತ ಅಂತೆಲ್ಲಾ ಆಸಕ್ತಿ ಇಟ್ಟುಕೊಂಡಿರುವವ. ನಾನು ಕನ್ನಡದಲ್ಲಿ ಬರೆದಿರುವ ಕವನ ಲೇಖನಗಳನ್ನು ಇಂಗ್ಲೀಷ್ ನಲ್ಲಿ ಅನುವಾದ ಮಾಡಿಕೊಡು ಅಂತಲೋ ಅಥವಾ ಸಂಜೆ ಕಾಫಿ ಸಮಯದಲ್ಲಿ ಹೇಳಿಸಿಕೊಂಡೋ, ಖುಷಿಪಡುವ ಆತ್ಮೀಯ ಮಿತ್ರ ಹಾಗೂ ಸ್ವಭಾವತಃ ಭಾವಜೀವಿ. ಇಂತಹ ಮಿತ್ರನಿಗೆ ಒಂದು ಪತ್ರ ಬರೆದುಕೊಟ್ಟರೆ ಹೇಗೆ ಎಂಬ ಯೋಚನೆ ಮನದಲ್ಲಿ ಸುಳಿದಿದ್ದೆ ತಡ, ಅದನ್ನು ಕಾರ್ಯಗತಗೊಳಿಸಿದೆ. ನಮ್ಮ ಟೀಮ್ ನಲ್ಲಿ ನಾವೆಲ್ಲಾ ಜೊತೆಯಾಗಿ ಕಳೆದ ಮಧುರ ಕ್ಷಣಗಳು("ಇಂದು ನಿನಗೆ ನೆನಪಿದ್ದರೂ, ಮುಂದೊಂದು ದಿನ ನೀನು ಪತ್ರ ತೆಗೆದು ನೋಡಿದಾಗ ಓದಿ, ನೆನಪು ಮಾಡಿಕೊಂಡು ಖುಷಿ ಪಡುವಂತಾಗಬೇಕು" ಎಂಬ ಒಕ್ಕಣಿಕೆಯೊಂದಿಗೆ), ಆತನಲ್ಲಿ ಎಲ್ಲರೂ ಮೆಚ್ಚುವ ಅಂಶಗಳು, ಏನು ಸುಧಾರಿಸಿಕೊಳ್ಳಬಹುದು, ಎಂದೆಲ್ಲಾ ಉದ್ದಕ್ಕೆ ಬರೆಯುತ್ತಾ ಹೋಗಿ ಕೊನೆಯಲ್ಲಿ ಶುಭ ಹಾರೈಕೆಗಳೊಂದಿಗೆ ಮುಗಿಸಿದ ಭಾವ ತುಂಬಿದ ಪತ್ರವನ್ನು ಓದಿ, ನಿಜಕ್ಕೂ ನಾನಂದು ಕೊಂಡದ್ದಕ್ಕಿಂತ ಅದೆಷ್ಟೋ ಜಾಸ್ತಿ ಖುಷಿ ಪಟ್ಟುಕೊಂಡ. ಅಲ್ಲಿಗೆ ನನ್ನ ಪತ್ರ ಬರವಣಿಗೆ ಸಾರ್ಥಕವಾಯಿತು.

ಈ ಹಿಂದೆಯೂ, ಪತ್ರ ಓದಿದವರೆಲ್ಲರ ಖುಷಿ ನೋಡಿಯೇ ನಾನು ಖುಷಿ ಪಟ್ಟಿದ್ದು ಹೆಚ್ಚು! ಕಳೆದ ಜೂನ್ ನಲ್ಲಿ ತಂಗಿಯ ಹುಟ್ಟು ಹಬ್ಬದ ದಿನ ಆಕೆಗೆ ಪತ್ರ ಬರೆದಾಗ, ಅವಳೂ ತುಂಬಾ ಖುಷಿ ಪಟ್ಟಿದ್ದಳು. ನನ್ನ ಒಬ್ಬಳು ಗೆಳತಿಯಂತೂ, ನಂಗೂ ಒಂದು ಪತ್ರ ಬರಿಯೇ ಅಂತ ಕೇಳಿಕೊಂಡಿದ್ದಳು! ಪದವಿಯಲ್ಲಿದ್ದಾಗ ಅಜ್ಜಿಯ 75 ನೆಯ ಹುಟ್ಟುಹಬ್ಬಕ್ಕೆ ಏನಾದರೂ ಅಮೂಲ್ಯ ಉಡುಗೊರೆ ಕೊಡಬೇಕು ಅಂತ ಯೋಚಿಸುತ್ತಿದ್ದಾಗಲೂ, ದೂರದ ಬೆಂಗಳೂರಲ್ಲಿದ್ದ ನನಗೆ ಹೊಳೆದದ್ದು ಪತ್ರ ಬರೆಯುವ ಯೋಚನೆಯೇ! ಅಜ್ಜಿಯಂತೂ ಪತ್ರ ಓದಿದ ನಂತರ "ಕಣ್ ತುಂಬಿ ಬಂತು" ಅಂತ ಹೇಳಿದಾಗ, ಪತ್ರ ಬರಹ ಇಷ್ಟೊಂದು ಪರಿಣಾಮಕಾರಿಯೇ ಅಂತ ನನಗೆ ಅನಿಸಿದ್ದು ಸುಳ್ಳಲ್ಲ! ಮೊದಲ ಬಾರಿಗೆ ನಾನು ಪತ್ರ ಬರೆದಿದ್ದು ಪ್ರಥಮ ಪಿ.ಯು.ಸಿ.ಯ ರಜಾ ಸಮಯದಲ್ಲಿ(ಶಾಲೆಯಲ್ಲಿ ಪ್ರಬಂಧ-ಪತ್ರ ಲೇಖನ ಪುಸ್ತಕದಲ್ಲಿ ಹಾಗೂ ಪರೀಕ್ಷೆಯಲ್ಲಿ ಬರೆದದನ್ನು ಹೊರತುಪಡಿಸಿ!). ಹಾಸ್ಟೆಲಲ್ಲಿ ಇರುತ್ತಿದ್ದ ನನ್ನ ಗೆಳತಿಯೊಬ್ಬಳು ಕೊಪ್ಪದ ಕಾನೂರಿನವಳು. ದೂರವಾಣಿ ಇದ್ದರೂ, ಅಲ್ಲಿ ಅದು ಬಹಳ ಸಲ ಜೀವಂತ ಸ್ಥಿತಿಯಲ್ಲಿರುತ್ತಿರಲಿಲ್ಲವಂತೆ! ಆಗ ನಾವು ನೆಚ್ಚಿಕೊಂಡದ್ದು ಪತ್ರ ಸಂವಹನವನ್ನು. ಅಂಥಾ ಏನೂ ಮಹಾನ್ ವಿಚಾರಗಳು ಇರುತ್ತಿರಲಿಲ್ಲವಾದರೂ, ರಜಾ ಸಮಯವನ್ನು ಹೇಗೆ ಕಳೆಯುತ್ತಿದ್ದೆವು ಏನು ಮಾಡಿದೆವು ಎನ್ನುವುದನ್ನೇ ರಮ್ಯವಾಗಿ ಬಣ್ಣಿಸಿ ಪತ್ರ ಬರೆಯುತ್ತಿದ್ದೆವು. ಒಂದು ವಾರ ನನ್ನ ಸರದಿಯಾದರೆ ಮತ್ತೊಂದು ವಾರ ಅವಳದು. ಹೀಗೆ ಎರಡು ತಿಂಗಳು ರಜೆಯಲ್ಲಿ ಬಹುಶಃ ಒಟ್ಟು ಎಂಟು ಪತ್ರಗಳು ನಮ್ಮ ನಡುವೆ ವಿನಿಮಯಗೊಂಡಿವೆ! ಆ ಕಾಯುವಿಕೆ, ಓದುವಿಕೆಯಲ್ಲಿ ಒಂಥರಾ ಖುಷಿಯಿತ್ತು.

ಅಭಾವ ಉಂಟಾದಾಗ ಭಾವ ಜೀವ ತಳೆಯುತ್ತೆ ಅಂತ ದೂರದ ಅಮೇರಿಕಾದಲ್ಲಿರುವ ಶ್ರೀವತ್ಸ ಜೋಷಿಯವರು ಅವರ ಬರವಣಿಗೆಯ ಸ್ಫೂರ್ತಿಯ ಕಾರಣವನ್ನು ಒಂದೆಡೆ ಹೇಳಿದ್ದರು. ನಿಜವಾದ ಮಾತು..ಅಲ್ಲವೇ? ಪಿ. ಯು. ಸಿ ಯಲ್ಲಿ ಊರಲ್ಲೇ ಇದ್ದಾಗ ಅಷ್ಟೊಂದು ಶಾಲೆಯ ನೆನಪು ಮಾಡಿಕೊಳ್ಳದ ನಾನು, ಮುಂದೆ ಪದವಿಗೆಂದು ದೂರದೂರಿಗೆ ಬಂದ ಮೇಲೆ, ಶಾಲೆಯ ನೆನಪು ಮಾಡಿಕೊಂಡಿದ್ದು, ಶಾಲೆಗೆ ಭೇಟಿ ನೀಡಿದ್ದು ತುಂಬಾ ಸಲ! ಅಧ್ಯಾಪಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿ ಪತ್ರವೂ ಬರೆದಿದ್ದೆ. ಆ ಪತ್ರ ಓದಿ ಅವರಿಗೆಲ್ಲಾ ಆದ ಸಂತೋಷವನ್ನು ಆಗ ಅಲ್ಲಿ ಕಲಿಯುತ್ತಿದ್ದ ತಂಗಿಯ ಮೂಲಕ ತಿಳಿದುಕೊಂಡು ನಾನೂ ಖುಷಿ ಪಟ್ಟಿದ್ದೆ :-) ಆದರೆ ಮಕ್ಕಳ ದಿನಾಚರಣೆಗೆ ಶುಭಾಶಯ ಕೋರಿ ಅವರು ಬರೆದ ಪತ್ರ ಯಾವಾಗ ನನ್ನ ಕೈ ತಲುಪಿತೋ ಆಗ ಮಾತ್ರ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ನನಗೆ ಅನಿರ್ವಚನೀಯ ಖುಷಿ ಕೊಟ್ಟ ಪತ್ರ ಅದು. ಅದೆಷ್ಟು ಸಲ ಓದಿದ್ದೇನೋ ಲೆಕ್ಕವಿಲ್ಲ. ನಾನು ಪತ್ರ ಬರೆಯುವಾಗ "ನೀವು ನಗರ ಸಭಾಧ್ಯಕ್ಷರಿಗೆ ಪತ್ರ, ತಂದೆಗೆ ಪತ್ರ ಅಂತೆಲ್ಲ ಪತ್ರ ಲೇಖನ ಕಲಿಸಿದ್ದೀರ ಸರ್, ಆದರೆ ಶಿಕ್ಷಕರಿಗೆ ಪತ್ರ ಬರೆಯುವುದು ಹೇಳಿ ಕೊಟ್ಟಿರಲೇ ಇಲ್ಲ! ಹಾಗಾಗಿ ಈ ಪತ್ರಕ್ಕೆ ಅದೆಷ್ಟು ಅಂಕಗಳು ಸಲ್ಲುತ್ತವೋ ನಾ ತಿಳಿಯೆ!" ಎಂದು ಕನ್ನಡ ಅಧ್ಯಾಪಕರನ್ನು ಪ್ರೀತಿಯಿಂದ ದೂರಿ, ಆ ಪತ್ರದ ತಪ್ಪು ಒಪ್ಪುಗಳೇನಿದ್ದರೂ ಅವರಿಗೆ ಸಮರ್ಪಿತ ಅನ್ನುವಂತೆ ಕೊನೆಯಲ್ಲಿ ಬರೆದಿದ್ದೆ :-) ಅದಕ್ಕೆ ಪ್ರತಿಯಾಗಿ ನನ್ನ ಅಧ್ಯಾಪಕರು "ನಿನ್ನ ಪತ್ರ ಹತ್ತಕ್ಕೆ ಹತ್ತು ಅಲ್ಲ ಅದಕ್ಕೂ ಜಾಸ್ತಿ ಅಂಕಗಳಿಗೆ ಅರ್ಹವಾಗಿದೆ. ಮುಂದೊಂದು ದಿನ ಹೃದಯ ಬುದ್ಧಿಗಳೆರಡೂ ಒಂದಾಗಿ ಸುಂದರ ಪತ್ರಕ್ಕೆ ಕಾರಣವಾಗುತ್ತದೆ ದಿವ್ಯಾ, ಆ ಪತ್ರದ ಓದುಗ ನಿಜಕ್ಕೂ ಅದೃಷ್ಟವಂತ" ಅಂತೆಲ್ಲಾ ಹೇಳಿ ನನ್ನಲ್ಲಿ ಸಂತೋಷ, ನಾಚಿಕೆ, ಹೆಮ್ಮೆ ಎಲ್ಲಾ ಭಾವಗಳು ಜೊತೆಜೊತೆಗೆ ಜನಿಸುವಂತೆ ಮಾಡಿದ್ದರು.

'ಶುಭಾಶಯ ಪತ್ರ' ಬ್ಲಾಗ್ ಪೋಸ್ಟ್ ನಲ್ಲಿ 'ಚುಕ್ಕಿ ಚಿತ್ತಾರ' ಅವರು, 'ಕಳೆದು ಹೋಗುತ್ತಿರುವ ಪತ್ರ ಸಂಭ್ರಮವನ್ನು ಇಲ್ಲಿ ಬೆಳಗಿದ್ದೀರಿ' ಎಂದು ಅಭಿನಂದಿಸಿದ್ದರು. ಹೌದು! ಪತ್ರ ಬರವಣಿಗೆ/ಓದುವಿಕೆ ನಿಜಕ್ಕೂ ಒಂದು ಸಂಭ್ರಮ! ಆದ್ದರಿಂದ ನಾವು ಅದನ್ನು ಕಳೆದು ಹೋಗಲು ಬಿಡದೆ, ಉಳಿಸಿಕೊಳ್ಳುವುದು ಉತ್ತಮ.. ಅಲ್ಲವೇ?