Saturday, March 6, 2010

ಹೀಗೊಂದು ಪತ್ರ

ನನ್ನ ಪ್ರೀತಿಯ ಸಂಗಾತಿ,

ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಅಂತೆ - ಬದಲಾವಣೆಗಳ ಹೊರತು! ಬಹುಶಃ ನಮ್ಮ ಬಾಂಧವ್ಯದ ಮಧುರತೆಗೂ ಈ ಮಾತು ಹೊರತಲ್ಲ.

ಆ ಆರಂಭದ ದಿನಗಳು ಅದೆಷ್ಟು ಚೆನ್ನಾಗಿದ್ದವು? ಚಿಂತೆಯಿಲ್ಲದ ಸುಂದರ ದಿನಗಳು. ನಿನ್ನ ಜೊತೆಗಿನ ಕಾಲಯಾಪನೆ ಅದೆಷ್ಟು ಸುಂದರವಾಗಿತ್ತು! ದಿನದ ಕೆಲವೇ ಗಂಟೆಗಳನ್ನು ನಿನ್ನೊಡನೆ ಕಳೆದರೂ ಆ ಕ್ಷಣಗಳೆಲ್ಲ ಅತಿ ಮಧುರ. ಬಸ್ಸಿನಲ್ಲಿ ಆಫೀಸಿಗೆ ಸಾಗುವಾಗಲೂ ಪಕ್ಕದಲಿ ಕುಳಿತು, ನಡೆಯುವಾಗ ಹೆಗಲ ಮೇಲೆ, ನಿನ್ನ ಸಾನ್ನಿಧ್ಯವನ್ನು ಮೂಡಿಸುತ್ತ, ಸದಾ ಒಟ್ಟಿಗಿದ್ದು ನೀ ನೀಡುತ್ತಿದ್ದ ಅನುಭೂತಿ ಬಲು ನವಿರು! ಗೆಳತಿಯರಾರಿಗೂ, ನನಗೆ ನೀನು ದಕ್ಕಿದಂತೆ, ಯಾರೂ ಸಿಕ್ಕಿರಲಿಲ್ಲ. ಅದಕ್ಕಾಗಿ ಅವರೆಲ್ಲರ ಈರ್ಷ್ಯೆ ಭರಿತ ಅಭಿನಂದನೆಗೆ ನನಗೆ ಒಳಗೊಳಗೇ ಖುಷಿ. ಅದೇನು ಒಲವು ನಿನಗೆ ನನ್ನ ಮೇಲೆ? ಬಹುಶಃ ಕಳೆದೆಲ್ಲ ಇಷ್ಟು ದಿನಗಳಲ್ಲಿ, ನಾನು ನಿನ್ನೊಡನೆ ಕಳೆದಿರುವಷ್ಟು ಸಮಯ ಇನ್ಯಾರೊಂದಿಗೂ ಕಳೆದಿಲ್ಲ. ನನಗೂ ನೀನೆಂದರೆ ಅಷ್ಟೇ ಒಲವು. ನನ್ನ ಬಾಳಿನ ಅನ್ನದಾತ ನೀನು! ನಿನಗೆ ಒಂದಿನಿತು ಏನಾದರೂ ಘಾಸಿಯಾದರೂ ಅದೆಷ್ಟು ಆತಂಕ ಪಡುತ್ತಿದ್ದೆ ನಾನು! ನಿನ್ನ ಮೇಲಿನ ಕಾಳಜಿಯಿಂದ ದಿನವೂ ಅದೇನೆಲ್ಲಾ ಮಾಡುತ್ತಿದ್ದೆ.

ಎಲ್ಲಿ ಹೋದವು ಆ ಮಧುರ ದಿನಗಳು? ಯಾಕಿಲ್ಲ ಇಂದು ಆ ನವಿರು ಕ್ಷಣಗಳು? ಸಂತಸಕ್ಕಿಂತ ಚಿಂತೆಗಳೇ ಹೆಚ್ಚಾಗಿವೆ :( ನಾನಂತೂ ಬಲು ಶ್ರಧ್ಧೆಯಿಂದಲೇ ನಿನ್ನ ಜೊತೆ ನನ್ನ ಅಮೂಲ್ಯ ಕಾಲವನ್ನು ಕಳೆಯುತ್ತೇನೆ - ಇಂದು ಕೂಡಾ. ಆದರೂ, ಇತ್ತೀಚಿಗೆ ನಿನ್ನ ನಿರೀಕ್ಷೆ ಅತಿಯಾಗಿದೆ. ಅದೆಷ್ಟು ಹೊತ್ತು ನಿನ್ನ ಜೊತೆಗಿದ್ದರೂ ನಿನಗೆ ತೃಪ್ತಿಯಿಲ್ಲ ಅನ್ನುವಂತೆ ಆಡುತ್ತೀಯಾ! ನಿನ್ನಿಂದಾಗಿ, ಇನ್ನಿತರ ಯಾವುದೇ ಕೆಲಸ ಮಾಡಲಾಗುತ್ತಿಲ್ಲ.ಸದಾ ನಿನ್ನ ಜೊತೆಯಲ್ಲೇ ಕಾಲ ಕಳೆಯುವೆನೆಲ್ಲಾ? ಆದರೂ.. ಅದೆಷ್ಟು possessive ನೀನು ನನ್ನ ಬಗ್ಗೆ! ಮೊನ್ನೆ ಊರಿಗೆ ಹೊರಟಾಗ, ನಿನ್ನ ಜೊತೆಗೊಯ್ದರೆ, ಅಲ್ಲಿ ಮಾಡಲಿರುವ ನೂರೆಂಟು ಕೆಲಸದ ನಡುವೆ ನಿನ್ನತ್ತ ಗಮನ ಹರಿಸಲಾಗುವುದಿಲ್ಲವಲ್ಲಾ ಎಂದು ನಿನ್ನನ್ನು ಕರೆದೊಯ್ಯಲ್ಲಿಲ್ಲ. ಆ ಮೂರು ದಿನದ ಸಿಟ್ಟು ಇನ್ನೂ ತಣಿಯಲಿಲ್ಲವೇ? ನೀರಿಂದ ಪಾತ್ರೆಗೆ ವರ್ಗಾವಣೆಯಾಗುವಂತೆ, ನಿನ್ನ ತಾಪವೆಲ್ಲಾ, ನನ್ನ ತಲೆಗೇರಿ, ನೋಡು ಎಷ್ಟು ತಲೆ ಬಿಸಿ ಮಾಡಿಕೊಂಡಿದ್ದೇನೆಂದು! ದಿನವಿಡೀ ನಿನ್ನೆದುರು ಕುಳಿತರೆ ಸಾಲದೇ ? ಮತ್ತೆ ರಾತ್ರಿಯೂ ನನ್ನನು ನೆಮ್ಮದಿಯಾಗಿ ಇರಗೊಡೆಯಾ? ಅದೆಷ್ಟು ಬಯಸುತ್ತೀಯಾ ನನ್ನಿಂದ? ನನ್ನ ಮುದ್ದಿನ LapTop... ಇವತ್ತಿಗೆ ಸಾಕಿನ್ನು.. ನಾಳೆ ಮತ್ತೆ ಕಳೆಯೋಣ ಜೊತೆಯಾಗಿ ಸಮಯವನ್ನು.. ಈಗ ನೀನಿನ್ನು, ನನ್ನ ಕಾಲೆಂಬ ನಿನ್ನ ಸಿಂಹಾಸದಿಂದ ಕೆಳಗಿಳಿಯುವೆಯಾ?


- ಕೆಲಸದ ಹೊರೆ ಹೆಚ್ಚಾದಾಗ, ಸಮಯವಿಲ್ಲದ ಸಮಯದಲಿ ಪ್ರೀತಿ ಮತ್ತು ಕೋಪದಿಂದ, ಸಂಗಾತಿ laptop ಗೆ ಬರೆದ ಪತ್ರ :-)

14 comments:

  1. ಹ ಹ ಹ.... ಒಳ್ಳೇ ಟ್ವಿಸ್ಟ್ ಕೊಟ್ಟು ಬಿಟ್ಟಿರಿ... ಸರಾಗವಾಗಿ ಓದಿಸಿಕೊ೦ಡು ಹೋಯಿತು.... :)

    ReplyDelete
  2. ದಿವ್ಯ,
    ಒಳ್ಳೆ ಪತ್ರ ನಿರೂಪಣೆ......
    ಕೊನೆಯಲ್ಲಿ ಸಕ್ಕತ್ ಟ್ವಿಸ್ಟ್....

    ReplyDelete
  3. "ನನ್ನ ಬಾಳಿನ ಅನ್ನದಾತ ನೀನು!" - ಇಲ್ಲೇನೋ ಉಲ್ಟಾ ಹೋಡಿತಿದ್ದೀಯಲ್ಲಾ ಅನ್ನಿಸಿತು.ಆದರೂ ಟ್ವಿಸ್ಟ್ ತುಂಬಾ ಚೆನ್ನಾಗಿದೆ,ಅನಿರೀಕ್ಷಿತವಾಗಿದೆ!

    ReplyDelete
  4. ನಿಮ್ಮ ಸಂಗಾತಿಗೆ ತುರ್ತಾಗಿ ಸರ್ವಿಸಿಂಗ್ ಆಗ್ಬೇಕು ನೋಡಿ!

    ReplyDelete
  5. ಹಾ ಹಾ, ಒಳ್ಳೆಯ ಲೇಖನ,,,
    ಸಿಕ್ಕಾಪಟ್ಟೆ,,,tourcher ಕೊಡ ಬೇಡ್ರಿ ,,,,ಪಾಪ....laptop ಅದು ,,,, ಹುಡುಗರ ತರಹ ಅಲ್ಲ .... :-)

    ReplyDelete
  6. ಹಾಗಾದರೆ Laptops ಇರುವವರೆಲ್ಲರೂ ಒಂದು ರೀತಿ ಪ್ರೇಮಿಗಳೇ ಸರಿ

    ReplyDelete
  7. ನನಗೆ ಗೊತ್ತಿತ್ತು ದಿವ್ಯ ನೀವು ಇಂತದ್ದೆ ಒಂದು ಟ್ವಿಸ್ಟ್ ಇಟ್ಟಿರ್ತೀರಾ ಕೊನೆಯಲ್ಲಿ ಎಂದು :) ಸರಳವಾಗಿ ಮುದ್ದಾಗಿ ಬರೆದಿದ್ದೀರ ಪತ್ರವನ್ನು

    ReplyDelete
  8. ಕೊನೆಯಲ್ಲಿ ಚೆನ್ನಾಗಿದೆ

    ReplyDelete
  9. ದಿವ್ಯಾ...ಲ್ಯಾಪನ್ನು ಏರಿದ ಟಾಪಿಗೆ...ತಾಪ ಸಹಿಸಲಾಗದು...ಹಹಹ..
    ಚನ್ನಾಗಿದೆ...ಲೇಖನ

    ReplyDelete
  10. ಪ್ರತಿಕ್ರಿಯಿಸಿದ ಎಲ್ಲರಿಗೂ ಆತ್ಮೀಯ ವಂದನೆಗಳು
    -ದಿವ್ಯಾ.

    ReplyDelete
  11. did the laptop reply? (write another post as if laptop has replied...)

    ReplyDelete