Thursday, July 16, 2009

ಕಳೆದುಹೋಗಿದೆ!



ಕಾಣಿಸುತ್ತಿಲ್ಲ ನನ್ನ ಮನಸು
ಎಲ್ಲೋ ಕಳೆದು ಹೋಗಿಬಿಟ್ಟಿದೆ
ಊರಲ್ಲಿ ಎರಡು ದಿನ ಕಳೆದಿದ್ದೆ ತಪ್ಪಾಯ್ತೋ
ನನ್ನ ಬಿಟ್ಟು ಅದು ಅಲ್ಲೇ ಉಳಿದುಬಿಟ್ಟಿದೆ

ಖುಷಿ ಪಡುತಿರಬೇಕು ನನ್ನ ಮನಸು
ಧೋ ಎಂದು ಸುರಿವ ಮಳೆಯಲ್ಲಿ ನೆನೆದು
ಅಲೆಯುತಿದೆಯೇನೋ ಕಡಲ ತೀರದಿ
ಭೋರ್ಗರೆದು ಅಪ್ಪಳಿಸುವ ಅಲೆಯ ನೋಡುತಾ

ಸುತ್ತಾಡುತಿರಬಹುದು ವಿಶಾಲ ಮೈದಾನದಿ
ಸೊಂಪನೆ ಬೆಳೆದಿರುವ ಹಸಿರ ಪೈರಿನ ಜೊತೆ
ಮೆಲ್ಲುತಿರಬಹುದು ಬಿಸಿಯಾದ ಗೋಳಿಬಜೆ
ಪುಟ್ಟ "ಮಿತ್ರ ಸಮಾಜ" ಹೋಟೆಲಿನ ಒಳಗೆ

ಹಾರಾಡುತಿದೆ ಅದು ಸಂತಸದ ಹೊನಲಿನಲ್ಲಿ
ಆ ಬ್ರಹ್ಮ ರಥದ ಪತಾಕೆಯ ತುದಿಯಲ್ಲಿ
ಓಡಾಡುತಿದೆ ಮನಸು ಅತ್ತಣಿಂದಿತ್ತ
ರಥಬೀದಿ ಪರಿಸರದ ಸುತ್ತ ಮುತ್ತ

ಬೆಚ್ಚಗೆ ಅಡಗಿ ಕೂತಿದೆ ಕೈಯೊಳಗೆ ಸಿಕ್ಕದೆ
ರಚ್ಚೆ ಹಿಡಿದಿದೆ ತಾ ಬರಲಾರದೆಂದು
ಎಳೆದು ತರಬೇಕಾಗಿದೆ ಮತ್ತೆ ಮಹಾನಗರಿಗೆ
ಅದಕಾಗೇ ಹೋಗುವೆನು ಮತ್ತೊಮ್ಮೆ ಊರಿಗೆ :-)

--------------------------------------------------------------------------------

ಕಿರು ಟಿಪ್ಪಣಿ :

ಗೋಳಿಬಜೆ - ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯನ್ನು ಹೊರತುಪಡಿಸಿ, ಉಳಿದೆಲ್ಲಾ ಕಡೆ "ಮಂಗಳೂರು ಬಜ್ಜಿ" ಎಂದು ಕರೆಯಲ್ಪಡುವ, ಮೈದಾ ಹಿಟ್ಟಿನಿಂದ ತಯಾರಿಸಲ್ಪಡುವ, ನಮ್ಮ ಊರಿನ ವಿಶಿಷ್ಟವಾದ ರುಚಿಯಾದ ಒಂದು ಖಾದ್ಯ.
ಮಿತ್ರ ಸಮಾಜ - ಉಡುಪಿಯ ರಥಬೀದಿಯಲ್ಲಿ ಬಹು ದಶಕಗಳಿಂದ ಪ್ರಖ್ಯಾತವಾಗಿರುವ, ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಲುವಾಗಿ, ಯಾವುದೇ ತಿಂಡಿಯ ತಯಾರಿಗೂ, ಈರುಳ್ಳಿ/ ಬೆಳ್ಳುಳ್ಳಿಯನ್ನು ಬಳಸದೆ ಇರುವ ಏಕಮಾತ್ರ ಹೋಟೆಲು.
ಬ್ರಹ್ಮ ರಥ - ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಗಾತ್ರದಲ್ಲಿ ವೈವಿಧ್ಯವಾಗಿರುವ ಮೂರು ರಥಗಳಿವೆ - ಬ್ರಹ್ಮ ರಥ, ಮಧ್ಯಮ ರಥ, ಸಣ್ಣ ರಥ ಎಂದು. ಇದರ ಜೊತೆಗೆ ಚಿನ್ನದ ಹಾಗೂ ಬೆಳ್ಳಿ ರಥಗಳೂ ಉಡುಪಿಯಲ್ಲಿ ಪ್ರಸಿದ್ಧ.

12 comments:

  1. ನಮಸ್ಕಾರ ದಿವ್ಯಾ,

    ನಿಮ್ಮ ಬ್ಲಾಗ್ ಗೆ ಇದು ನನ್ನ ಮೊದಲನೆಯ ಭೇಟಿ. ಊರಿನ ಮಳೆ, ಹಸಿರು, ಪೈರು, ಆ ಸಾಗರ, ಮತ್ತೆ ನಮ್ಮ ಫೆವರೇಟ್ ಗೋಳಿಬಜೆ ಹೀಗೆ ಊರಿನ ಎಲ್ಲವನ್ನೂ ಕಲಸಿ ಕೊಟ್ಟು ಸವಿ ನೆನಪುಗಳನ್ನು ಉಣ ಬಡಿಸಿದ್ದೀರಿ.
    ವಾವ್..
    "ಬೆಚ್ಚಗೆ ಅಡಗಿ ಕೂತಿದೆ ಕೈಯೊಳಗೆ ಸಿಕ್ಕದೆ
    ರಚ್ಚೆ ಹಿಡಿದಿದೆ ತಾ ಬರಲಾರದೆಂದು..."

    ಸುಂದರವಾದ ಕಲ್ಪನೆ...

    ಧನ್ಯವಾದಗಳು,
    -ಗಿರಿ

    ReplyDelete
  2. ಬೆಚ್ಚಗಿನ ಅನುಭವ........ಇದು ನನಗೆ ಅದ ಅನುಭವ... ನಿಮ್ಮ ಕವನ ಓದುತ್ತ ಇರಬೇಕಾದರೆ...
    ತುಂಬ ಚೆನ್ನಾಗಿ ವಿವರಣೆ ಸಹಿತ ಹೇಳಿದ್ದಿರ..... ಇಷ್ಟ ಆಯಿತು... ದಿವ್ಯ......

    ಗುರು

    ReplyDelete
  3. ದಿವ್ಯಾ..

    ತುಂಬಾ ಚೆನ್ನಾಗಿದೆ... ನನಗೂ ಊರಿಗೆ ಹೋದಾಗಲೆಲ್ಲ ಹೀಗೆ ಮನವನ್ನು ಒಲಿಸಿ ವಾಪಸ್ ಈ ಕಾಂಕ್ರೀಟ್ ಕಾಡಿಗೆ ಕರೆತರಲು ಸುಸ್ತಾಗಿ ಹೋಗುತ್ತದೆ... ರಚ್ಚೆ ಹಿಡಿದು ಕೂತಿರೋ ಮನವನ್ನ ಕರೆತರುವ ನೆವದಿಂದ ಮತ್ತೆ ಊರಿಗೆ ಹೋಗುವ ನಿಮ್ಮ ಪ್ಲಾನ್ ಸೂಪರ್...!!

    Dileep Hegde

    ReplyDelete
  4. ಮನಸನ್ನು ಅಲೆಯಲು ಬಿಡುವುದು ನಿಮ್ಮದು ಮೊದಲನೇ ತಪ್ಪು...ಬಿಟ್ಟರೂ..ಬಿಡಿ..ಆದ್ರೆ ಅದನ್ನು ಅಲ್ಲಿಯೇ ಬಿಡಬೇಕಿತ್ತು ಎನ್ನುವುದು ಎರಡನೇ ತಪ್ಪು ಎಲ್ಲತಿಳಿದೂ ಅದನ್ನು ನಿಯಂತ್ರಿಸಿದೇ..ಚೇಷ್ಟೆ ಮಾಡುವ ಮಗುವಿನ ಚೇಷ್ಟೆಯನ್ನೇ ನಗುತ್ತಾ ಅಸ್ವಾದಿಸುವ ಅಮ್ಮ-ಅಪ್ಪ-ಅಣ್ನ-ತಮ್ಮ-ಸಹೋದರಿಯರಂತೆ ಇರುವುದು ಮೂರನೇ ತಪ್ಪು...ಅದನ್ನೆಲ್ಲಾ ನಮಗೆ ತಿಳಿಸಿ ನಮಗೂ ಅದೇ ತಪ್ಪನ್ನು ಮಾಡಲು ದಾರಿತೋರುತ್ತಿರುವುದು ಮಹಾತಪ್ಪು....
    ಚನ್ನಾಗಿದೆ ಮನಸಿನ ಪರ್ಯಟನೆ....
    ದಿವ್ಯಾ ನನ್ನ ಬ್ಲಾಗಿಗೆ ಭೇಟಿಕೊಡಿ ಮೇಡಂ ಒಮ್ಮೆ....

    ReplyDelete
  5. ನಮಸ್ಕಾರ ಗಿರಿ,
    "ಭಾವ ಜೀವ ತಳೆದಾಗ"ಕ್ಕೆ ಸ್ವಾಗತ... ಉಣಬಡಿಸಿದ ನೆನಪುಗಳನ್ನು ಸವಿದು ಮೆಚ್ಚುಗೆ ಸೂಚಿಸಿದಕ್ಕೆ ಹೃತ್ಪೂರ್ವಕ ಧನ್ಯವಾದಗಳು.

    ಗುರು,
    ಕವನ ಓದಿದಾಗ ನಿಮಗಾದ ಅನುಭವ ಹಂಚಿಕೊಂಡಿದ್ದೀರಿ...ಸಂತೋಷ ! ಅಭಿಪ್ರಾಯಕ್ಕೆ, ಪ್ರತಿಕ್ರಿಯೆಗೆ ಕೃತಜ್ನತೆಗಳು.

    ದಿಲೀಪ್,
    ಹುಟ್ಟಿ ಬೆಳೆದ ಊರಿನ ಬಾಂಧವ್ಯವೇ ಹಾಗೆ .... ಅಲ್ಲವೇ? ಕವನ ಹಾಗೂ ನನ್ನ ಸೂಪರ್ ಪ್ಲಾನ್ ಮೆಚ್ಚಿದ್ದಕ್ಕೆ ಧನ್ಯವಾದಗಳು.

    ಆಜಾದ್ ರವರೆ,
    ಮನಸ್ಸನ್ನು ಅಲೆಯಲು ಬಿಡುವುದು ತಪ್ಪು ಎಂದು ನನಗೆ ಎಂದೂ ಅನಿಸಿಲ್ಲ. ಅಷ್ಟಕ್ಕೂ, ಮನಸಿನ ಮೇಲೆ ಹಿಡಿತ ಸಾಧಿಸುವುದು ತುಂಬಾ ಕಷ್ಟ ಅಲ್ಲವೇ? ನೆನಪುಗಳು ಮಧುರವಾಗಿದ್ದರೆ, ಅವು ತುಂಬಾ ಸಲ ಮನಸಿನ ಮೇಲೆ ದಾಳಿ ಇಡುವುದು ಸಹಜ. ಯಾವಾಗ ಏಕಾಗ್ರತೆ ಬೇಕೋ, ಅಲ್ಲಿ ಅದನ್ನು ಕಳೆದುಕೊಂಡರೆ, ನಾವು ನಿರ್ವಹಿಸಬೇಕಾದ ಕರ್ತವ್ಯಕ್ಕೆ, ಜವಾಬ್ದಾರಿಗೆ ಚ್ಯುತಿ ತಂದರೆ ಆಗ ಅದು ತಪ್ಪು... ನನ್ನೂರ ಸೊಬಗಿನಲ್ಲಿ ಕಳೆದು ಹೋಗಿರುವ ನನ್ನ ಮನಸಿನ ಬಗ್ಗೆ ಬರೆದ ಈ ಕವನದಲ್ಲಿ, ಓದುಗರನ್ನು ತಪ್ಪು ಮಾಡಲು ದಾರಿತೋರುವ ಯಾವುದೇ ಸಂದೇಶ ಅಭಿವ್ಯಕ್ತಿಯಾಗುತ್ತಿಲ್ಲ ಎಂದು ಭಾವಿಸುತ್ತೇನೆ. ಪ್ರತಿಕ್ರಿಯೆಗೆ ಧನ್ಯವಾದಗಳು...

    -ದಿವ್ಯಾ

    ReplyDelete
  6. ಚೆನ್ನಾಗಿದೆ.
    ಬೆಚ್ಚಗೆ ಅಡಗಿ....ರಚ್ಚೆ ಹಿಡಿದಿದೆ.....ದ್ವಿತೀಯಾಕ್ಷರ ಪ್ರಾಸದ ಸೊಗಸು ಹೆಚ್ಚು!

    ReplyDelete
  7. ಧನ್ಯವಾದಗಳು ಕಲ್ಯಾಣ್, ನಿಮ್ಮ observation ಗೆ ಖುಷಿಯಾಯಿತು !

    ReplyDelete
  8. ಊರು ಬಿಟ್ಟು ಬಂದು ಎರಡು ದಿನವಾದರೂ ಇನ್ನು ನನ್ನ ಮನವೂ ಊರಲ್ಲೇ ಉಳಿದಿದೆ... ನಿಮ್ಮ ಕವನ ನನ್ನ ಮನಸ್ತಿತಿಯನ್ನೇ ಬಿಂಬಿಸುವ ಹಾಗಿದೆ... ಮತ್ತೆ ಊರಿನ ನೆನಪುಗಳಾಗುತ್ತವೆ, ಸೇಡಿಗಾಗಿ ಸುರಿಯುವಂತ ಮಳೆ, ಬಿಸಿ ಬಿಸಿ ಕಾಫಿ... ಹೀಗೆ ಏನೇನೋ... ನಿಮ್ಮ ಕವಿತೆಗೆ ಧನ್ಯವಾದಗಳು :)

    ಶರಶ್ಚಂದ್ರ ಕಲ್ಮನೆ

    ReplyDelete
  9. ಹೀಗೆಯೇ ಬರೆಯುತ್ತಿರಿ

    ReplyDelete
  10. ಶರತ್ ಅಶರಫ್... ಪ್ರೋತ್ಸಾಹಕ್ಕೆ ಧನ್ಯವಾದಗಳು.

    ReplyDelete
  11. ನನ್ನ ಬ್ಲಾಗಿನ ಕೊಂಡಿ ನಿಮ್ಮ ಬ್ಲಾಗಲ್ಲಿ ಹಾಕಿದ್ದಕ್ಕೆ ಧನ್ಯವಾದಗಳು..:)

    ReplyDelete
  12. ಧನ್ಯವಾದ . ಕವನದ ಮೂಲಕ ಉಡುಪಿಯನ್ನು ಸ್ಮರಿಸಿದ್ದಕೆ ( ಮಿತ್ರ ಸಮಾಜದ ಗೋಳಿಬಜೆಯನ್ನು ಮತ್ತೆ ನೆನಪಿಸಿದ್ದಕ್ಕೆ.
    ಅದೆಷ್ಟೋ ಬಾರಿ ಮಣಿಪಾಲದಿಂದ ಉಡುಪಿಗೆ ವರದಿಗಾರಿಕೆಗೆ ಹೋಗುತ್ತಿದ್ದಾಗ ನನ್ನ ಹೊಟೆ ಹಾಳು ಮಾಡದೆ ಇದ್ದ ಹೋಟೆಲ್ ಅದು.) ಐದು ವರ್ಷ ಇದ್ದರೂ ಮಣಿಪಾಲ- ಉಡುಪಿಯ ಸುಂದರ ನೆನಪುಗಳಿಂದ ನಾನು ಇನ್ನೂ ಹೊರಬಂದಿಲ್ಲ. ಮತ್ತೊಮ್ಮೆ ಥ್ಯಾಂಕ್ಸ್..(ಇದರ ಮೂಲಕ ಇಡೀ ಮಿತ್ರರಿಗೆ)

    ReplyDelete