Tuesday, April 21, 2009

ಋತು













ಬಾಗಿಲೊಳು ನಿಂತಿತ್ತು ನವ ವಸಂತ
ಸೊಂಪಾಗಿ ಬೀಸಿತ್ತು ತಂಪಾದ ಮಾರುತ
ತಂದಿತ್ತು ಮನಕೆ ಆಹ್ಲಾದ ಚೈತನ್ಯ
ಮಾಡಿತ್ತು ಎಲ್ಲ ದುಗುಡವನು ಶೂನ್ಯ

ಇಹವನು ಮರೆತು ಮನಸದು ಓಡಿತ್ತು
ಮುಂಬರುವ ಗ್ರೀಷ್ಮದ ತಾಪಕೆ ಹೆದರಿತ್ತು
ಹೇಗೆ ತಾಳುವುದು ವಿರಹದ ಬೇಗೆಯನು
ಎಂದು ಮಾಡಿತು ಈಗಲೇ ಚಿಂತೆಯನು

ವರ್ಷದ ನೆನಪಾಗಿ ಕನಸೊಂದು ಮೂಡಿತು
ಅರಳಿತು ಮನಸು ಸಂಗಮವ ನೆನೆದು
ಬಯಕೆ ಅತಿಯಾಯ್ತು ಜೋರಾಗೋ ಮಳೆಯಂತೆ
ಒಂದಾಗಿ ಹೋಗಲು ಸುರಿಮಳೆಯ ಜೊತೆ

ಮತ್ತೆ ಮನದಂಗಳದಿ ಬರುವವನು ಶರತ
ಎಲ್ಲವನೂ ಉದುರಿಸಿ ಆಗುವನು ಸಂಪ್ರೀತ
ಹೇಮಂತ ಕಾಲಿಡಲು ತಂಪನೆಯ ತಂಗಾಳಿ
ತನುಮನಕೆ ಹಿತ ತರುವ ಕುಳಿರ್ಗಾಳಿ

ಶಿಶಿರನು ಬರಲು ಎಲ್ಲೆಡೆಯೂ ಇಬ್ಬನಿ
ಕೇಳುವನು ಮನದ ಪ್ರೀತಿಯ ಇನಿದನಿ
ಮತ್ತೆ ಬರುವನು ಇದೇ ವಸಂತ
ತರುವನು ಮತ್ತದೇ ಭರಪೂರ ಸಂತಸ

ಎಣಿಕೆಯು ನಡೆದಿತ್ತು ಆಕೆಯ ಮನದಿ
ಫಲಿಸೀತೆ ಆಸೆ ಮುಂದಿನ ವಸಂತದಿ
ಕಾಯುತಿಹಳು ಆ ಸ್ತ್ರೀ-ಧಾರಿಣಿ
ಕಾಲ ಪುರುಷನ ಪ್ರೀತಿಯ ರಮಣಿ

6 comments:

  1. ದಿವ್ಯ,
    ನವ ವಸಂತನ ಆಗಮನವನ್ನು ಸ್ವಾಗತಿಸಲು ಹೊರಟಿದ್ದೀರಿ...
    ಚೆನ್ನಾಗಿದೆ, ಪ್ರತಿ ಸಾಲಿನಲ್ಲೂ ಹೊಸತನದ ಪ್ರಯೋಗವಿದೆ. ಮುಂದುವರೆಯಲಿ ಕವನಗಳ ಹರಿವು, ಮತ್ತೆ ಭಾವ ಜೀವ ತಳೆಯಲಿ ಇನ್ನಷ್ಟು ಮತ್ತಷ್ಟು ಸಾಲುಗಳಾಗಿ.

    ReplyDelete
  2. ಭಾವನೆಗಳು ಇದೇ ರೀತಿ ಉಕ್ಕಿ ಹರಿಯುತಿರಲಿ.

    ReplyDelete
  3. ಕವನ ತುಂಬಾ ಚನ್ನಾಗಿದೆ... ನಾನು ಪ್ರೈಮರಿ ಸ್ಕೂಲ್ ಓದುವಾಗ ಹಿಂದಿ ವಿಷಯದಲ್ಲಿ ಇದೆ ರೀತಿಯ ಎಲ್ಲ ಋತುಗಳನ್ನು ವರ್ಣಿಸುವ ಪದ್ಯವೊಂದು ಇತ್ತು. ನಿಮ್ಮ ಕವನ ಓದಿ ಅದರ ನೆನಪಾಯಿತು. ಪದಗಳ ಜೋಡಣೆ ಖುಷಿ ತಂದಿತು.. ಹೀಗೆ ಬರೆಯುತ್ತಿರಿ.

    ಶರಶ್ಚಂದ್ರ ಕಲ್ಮನೆ

    ReplyDelete
  4. ದಿವ್ಯಾ...ನಮಸ್ತೆ.
    ನೀವು ಚೆನ್ನಾಗಿ ಬರೇತೀರಿ..ತುಂಬಾ ಮುಗ್ಧವಾಗಿ ಋತುಗಳ ವರ್ಣನೆ ಮಾಡಿದ್ದೀರಿ. ಧನ್ಯವಾದಗಳು. ಓದಕ್ಕೆ ನಾವಿದ್ದೀವಿ. ಶುಭವಾಗಲೀ.
    -ಧರಿತ್ರಿ

    ReplyDelete
  5. ಕವನ ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು..
    -ದಿವ್ಯಾ

    ReplyDelete