ಹೊರಡಿಸದೆ ಸದ್ದು
ಹೃದಯದಲಿ ಹೊರಡುತಿದೆ

ಬಾಯಲ್ಲಿ ಅಡಗುತಿದೆ
ಕೇಳಿಸುತಿಲ್ಲವೇ ಹತ್ತಿರದವರೇ
ಎರಡಡಿ ಅಂತರ ದೂರದವರೇ
ಹೇಳದೆ ನಿಮಗೆ ತಿಳಿಯುವುದಿಲ್ಲ
ಹೇಳಲು ನನಗೆ ದನಿಯಿಲ್ಲ
ಪಡೆಯಿರಿ ಒಂದಿನ ನನ್ನಯ ಸ್ಥಾನ
ದಿನದಾದ್ಯಂತ ಪಾಲಿಸಿ ಮೌನ
ಬಾಯಿಗೆ ದೊಡ್ಡ ಬೀಗವ ಜಡಿಯಿರಿ
ಕಿವಿಗೆ ಮಾತ್ರ ಕೆಲಸವ ಕೊಡಿರಿ
ತಿಳಿವುದು ಆಗ ದಿಟ ಏನೆಂದು
ಒಂಟಿತನದ ನೋವೇನೆಂದು
ಆದರೂ ಬೇಡ ನಿಮಗಾಕಷ್ಟ
ಅನುಬಂಧವಿರಲಿ ನೀರಂತೆ ಸ್ಪಷ್ಟ
ಹೇಗೆ ನಾ ಹೇಳಲಿ ನಾನೇನೆಂದು
ನಿಮ್ಮೊಡನೆ ಆಗಲಿ ನಾನೂ ಒಂದು
ಬರುವುದೇ ಆ ದಿನ ಬಾಳಲಿ ಒಮ್ಮೆ
ಈ ಕವನ ಮುಗಿವುದೆ ಎಂದಾದರೊಮ್ಮೆ
No comments:
Post a Comment