Tuesday, August 17, 2010

ಕೊಡಚಾದ್ರಿಯಲ್ಲಿ...

ಕೆಲ ತಿಂಗಳ ಹಿಂದೆ ಗೆಳತಿ ಭವ್ಯಾಳ ಟ್ರಿಪ್ ಫೋಟೋಗಳನ್ನು ನೋಡುತ್ತಿದ್ದಾಗ ತುಂಬಾ ಖುಷಿಯಾಗಿತ್ತು. ಘಾಟಿಕಲ್ಲಿನ ರಮಣೀಯ ದೃಶ್ಯಗಳನ್ನು ನೋಡುತ್ತಿದ್ದಂತೆ ಮನಸ್ಸು ಗರಿ ಬಿಚ್ಚಿ ಕುಣಿದಾಡಿತ್ತು. ಆಗಾಗ ಇಂಥ ಸುಂದರ ಸ್ಥಳಗಳಿಗೆ ಟ್ರಿಪ್ ಹೋಗುತ್ತಲೇ ಇರುವ ಗೆಳತಿಯ ಅದೃಷ್ಟದ ಬಗ್ಗೆ ನೆನೆಯುತ್ತಾ, ಜೊತೆಗೆ ಹೋಗಲು ಇಂಥದೊಂದು ಸ್ನೇಹಿತರ ಗುಂಪು ನನಗೆ ಇಲ್ಲವಲ್ಲ ಅಂತ ಸ್ವಲ್ಪ ಬೇಸರಿಸಿದ್ದೆ. ಆಕೆಯಾದರೋ, ಆಫೀಸು ಶಟಲ್ ನವರ ಗುಂಪಿನೊಂದಿಗೆ ಒಮ್ಮೆ ಹೋದರೆ, ಇನ್ನೊಮ್ಮೆ ಅವಳದೇ ಜೊತೆ ಆಫೀಸು ಸೇರಿದ್ದ ಬ್ಯಾಚ್ ಮೇಟ್ ಗಳ ಜೊತೆ, ಮಗದೊಮ್ಮೆ ಆಫೀಸು ಪ್ರಾಜೆಕ್ಟ್ ಟೀಮ್ ಜೊತೆ ಆಫಿಶೀಯಲ್ ಟ್ರಿಪ್ ಕಣೆ ಅಂತ ಒಂದರ ಹಿಂದೆ ಒಂದರಂತೆ ಟ್ರಿಪ್ಪು ಹೋದದ್ದೇ ಹೋದದ್ದು. ನಾವೆಲ್ಲ ಬರೀ ಕತೆ ಕೇಳಿದ್ದೇ ಕೇಳಿದ್ದು. ಇನ್ನೆಷ್ಟು ಕತೆ ಕೇಳುತ್ತಾ ಕೂರೋದು ಅಂತ ಒಂದು ದಿನ ಅನಿಸಿ 'ಲೇ ನಾವೂ ಒಂದು ಪ್ಲಾನ್ ಮಾಡಿ ಟ್ರಿಪ್ ಗೆ ಹೋಗೋಣ ಕಣೆ' ಅಂದೆ. ಕಾಲೇಜಲ್ಲಿ ತೀರ ಜಾಸ್ತಿ ಜನರೊಡನೆ ಬೆರೆಯದ ನಮಗೆ ಅಷ್ಟೊಂದು ದೊಡ್ಡ ಸ್ನೇಹಿತರ ಗುಂಪು ಇಲ್ಲ :( ಹಾಗಾಗಿ, ಭವ್ಯಾಳ ಆಫೀಸು ಗುಂಪು ಹಾಗೂ ನಮ್ಮದೊಂದು ಪುಟ್ಟ ಗುಂಪು ಸೇರಿ ಟ್ರಿಪ್ ಹೋಗುವುದು ಅಂತ ನಿರ್ಧಾರವಾಯಿತು.

ಶುಕ್ರವಾರ ರಾತ್ರಿ ಅದೆಷ್ಟು ಬೇಗ ಹೊರಡಬೇಕು ಅಂದುಕೊಂಡರೂ, ನಮ್ಮ ಗಾಡಿ ಬೆಂಗಳೂರು ಬಿಡುವಾಗ ಗಂಟೆ ಹತ್ತು ದಾಟಿತ್ತು. ಕುಡಿದರೆ, ಯಾವ ದಿಕ್ಕಿನಿಂದಲೂ ನಿದ್ದೆ ಸುಳಿಯದೇ, ಎಚ್ಚರವಾಗಿಡುವ (ರೆಡ್ ಬುಲ್ ನ ಜಾಹೀರಾತು ಅಲ್ಲ; ತಪ್ಪು ತಿಳಿಯಬೇಡಿ!) ರೆಡ್ ಬುಲ್ ಅನ್ನು ಇಡೀ ರಾತ್ರಿ ಜಾಗರಣೆ ಮಾಡುವ ಸಲುವಾಗಿ ಕುಡಿಯಲು ತಂದಿದ್ದರು. ಜೊತೆಗೆ ಮುಗಿಯದಷ್ಟು ಹಾಡುಗಳು. ಅವೂ ಕನ್ನಡ ಹಾಡುಗಳು :-) ಎರಡು ದಿನದ ಪ್ರವಾಸದಲ್ಲಿ ತುಂಬಾ ಖುಷಿ ಕೊಟ್ಟದ್ದೆಂದರೆ ಕನ್ನಡ! ಎಲ್ಲರೂ ಕನ್ನಡಿಗರೇ ಇದ್ದಿದ್ದರಿಂದ ಬೇರೆ ಭಾಷೆಯಿಂದ ವಿಮುಕ್ತರಾಗಿ ಇರುವಂತಾಯಿತು. ಆಫೀಸು, ಹಾಸ್ಟೆಲ್ಲು ಎಲ್ಲೆಂದರಲ್ಲಿ ಕನ್ನಡವನ್ನು ಕೇಳದೆ, ಕನ್ನಡಕ್ಕಾಗಿ ಕಾತರಿಸುವ ಕಿವಿಗಳು ಎರಡು ದಿನ ಕನ್ನಡ ಹಾಡು ಮಾತು ಎಲ್ಲಾ ಕೇಳಿ ಕೇಳಿ ತಂಪುಗೊಂಡವು. ಅಂತೂ ಇಂತೂ ದಾರಿ ಕೇಳಿ ಕೇಳಿ ಶಿವಮೊಗ್ಗ ಅಯ್ಯನೂರು ದಾಟಿ ಕೊಡಚಾದ್ರಿ ತಲುಪುವಾಗ ಬೆಳಗ್ಗೆ ಎಂಟು ಗಂಟೆಯಾಗಿತ್ತು. ರೆಸಾರ್ಟ್ ಎಂಬ ಹೆಸರು ಮನಸ್ಸಲ್ಲಿ ಕೂತು, ನಮ್ಮ ನಮ್ಮದೇ ಆದ ರಮ್ಯ ಕಲ್ಪನೆಗಳಿದ್ದವು. ಆದರೆ ಅಲ್ಲಿ ಹೋಗಿ ನೋಡಿದಾಗ ತಿಳಿಯಿತು ಅದು ಮೂಲಭೂತ ಅಗತ್ಯಗಳಷ್ಟೇ ಇರುವ 'ನಿಸರ್ಗಧಾಮ' ಎಂದು. ಎರಡು ಕಾಟೇಜ್ ಗಳು ಬೇಕು ಎಂದು ಮೊದಲೇ ಹೇಳಿದ್ದ ನಮಗೆ ಒಂದು ಮಾತ್ರ ಸಿಕ್ಕಿದ್ದು ಸ್ವಲ್ಪ ಅಸಮಾಧಾನಕ್ಕೆ ಕಾರಣವಾಯಿತು (ಸಂಜೆ ಹೊತ್ತಿಗೆ ಎರಡು ಸಿಕ್ಕಿತ್ತು). ಮತ್ತೊಂದು ತೊಂದರೆ ಆದದ್ದು - ಮಳೆ ಬಿದ್ದು, ಮೆದುವಾಗಿ, ಕಾಲಿಟ್ಟಲ್ಲೆಲ್ಲಾ ಜಾರಿ ಬೀಳುವಂತಿದ್ದ ಕೆಂಪು ಮಣ್ಣಿನ ನೆಲದಿಂದ. ಹಲವರೆಲ್ಲ ಜಾರಿ ಬಿದ್ದು, ಕೂಡಲೇ ಏಳಲು ಹೋಗಿ ಮತ್ತೆ ಮತ್ತೆ ಬಿದ್ದು ಉಳಿದವರಿಗೆ ಮನೋರಂಜನೆ ಒದಗಿಸುವಂತಾಯಿತು. ಒಮ್ಮೆಯೂ ಬೀಳದವರು ಬಿದ್ದ ಕೂಡಲೇ, ಅಷ್ಟರವರೆಗೆ ಬಿದ್ದವರಿಗೆಲ್ಲ ಖುಷಿಯೋ ಖುಷಿ - ನಮ್ಮ ಗುಂಪಿಗೆ ಒಂದು ಜನ ಸೇರ್ಪಡೆ ಆಯ್ತು ಅಂತ! ಜೋರಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗಾಳಿಪಟ ಫಿಲ್ಮ್ ನಲ್ಲಿ ಹೇಳಿದ ಹಾಗೆ 'ಈ ಊರೆಲ್ಲ ಬಚ್ಚಲ ಮನೆ ಥರ ಕಣ್ರೋ' ಅನ್ನೋ ಮಾತು ನಮ್ಮ ಗುಂಪಿನಲ್ಲಿ ಕೇಳಿ ಬಂತು. ಅಲ್ಲಿ ತಲುಪಿದ ದಿನ ಬೆಳಗ್ಗೆ, ಆ ಮಳೆ ಚಳಿಯಲ್ಲಿ ತಣ್ಣೀರು ಸ್ನಾನ ಮಾಡುವ ಸೌಭಾಗ್ಯ ನಮಗೆ ಒದಗಿ ಬಂತು. ಕೆಲವರಂತೂ ಸ್ನಾನ ಮಾಡಬೇಕೆ ಬೇಡವೇ ಎಂದೂ ಯೋಚಿಸುವಂತಾದರು! ಅಂತೂ ಇಂತೂ ಹೇಳಿದ ಸಮಯಕ್ಕೆ ತಯಾರಾಗಿ ಕೂತರೆ, ಚಾರಣ ಆರಂಭಿಸಲು ನಮ್ಮನ್ನು ಕಾಡಿನೊಳಗೆ ಒಂದು ಸ್ಥಳದವರೆಗೆ ಕರಕೊಂಡು ಹೋಗಬೇಕಾದ ಜೀಪ್ ಬರಲೇ ಇಲ್ಲ. ಎಲ್ಲರೂ ಅಲ್ಲೇ ನಿದ್ರೆ ಹೋದರು. ಎಲ್ಲರದ್ದೂ ಒಂದು ಕೋಳಿ ನಿದ್ದೆ ಆಗುವ ಹೊತ್ತಿಗೆ ಜೀಪ್ ಬಂತು. ಇದ್ದೆಲ್ಲ ಚೈತನ್ಯವನ್ನು ಒಗ್ಗೂಡಿಸಿಕೊಂಡು ಚಾರಣಕ್ಕೆ ಹೊರಟೆವು.

ಚಾರಣದ ಆರಂಭದಲ್ಲಿ ಎಲ್ಲರಿಗೂ ಲಾಲಿಪಾಪ್ ಥರ ಒಂದು ಕಡ್ಡಿಗೆ ಉಪ್ಪು ಸುಣ್ಣವನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಅದನ್ನು ನೀಲಗಿರಿ ಎಣ್ಣೆಯಲ್ಲಿ ಅದ್ದಿ ಕೊಟ್ಟಿದ್ದರು. "ಲೀಚ್ ಎಲ್ಲಾದ್ರೂ ಕಾಲ ಮೇಲೆ ಹತ್ತಿದ್ರೆ, ಇದ್ರಿಂದ ಸರಿಸಿ ಬಿಡಿ, ಹೋಗ್ಬಿಡುತ್ತೆ" ಅಂತ ಉಪಾಯ ಹೇಳಿಕೊಟ್ಟಾಗ ಮುದ್ದಾದ ಬಿಳಿ ಪಾದಗಳ ಲಲನೆಯರ ಮುಖದಲ್ಲೆಲ್ಲಾ ಏನೋ ಒಂದು ಭಯ ಮಿಶ್ರಿತ ಸಮಾಧಾನ. ೬ ಕಿ.ಮೀ. ಹತ್ತೋದು, ಮತ್ತೆ ೬ ಕಿ.ಮೀ. ಇಳಿಯೋದು, ಒಟ್ಟು ಹನ್ನೆರಡು ಕಿ.ಮೀ. ಗಳ ಚಾರಣ ಎಂಬ ಯೋಚನೆ ಮನದಲ್ಲಿ ಕೂತಿದ್ದರಿಂದಲೋ ಏನೋ, ಪ್ರತಿ ಹತ್ತು ನಿಮಿಷಕ್ಕೊಮ್ಮೆ, ಈಗೆಷ್ಟು ಕಿ.ಮೀ. ಬಂದಿದೀವಿ ಅಂತ ಚಿಕ್ಕ ಮಕ್ಕಳ ಥರ ಜೊತೆಯಲ್ಲಿದ್ದ ಗೈಡ್ ಹತ್ತಿರ ಒಮ್ಮೊಮ್ಮೆ ಒಬ್ಬೊಬ್ಬರು ಕೇಳುತ್ತಿದ್ದಾಗ ಅವರ ಮುಖದಲ್ಲಿ ಸುಂದರ ನಗು ಅರಳುತ್ತಿತ್ತು. 'ಯಾಕ್ರೀ ಆಗ್ಲೇ ಸುಸ್ತಾಯ್ತಾ' ಅಂತ ಅವ್ರು ಕೇಳಿದ್ರೆ ಮತ್ತೆ ಇಪ್ಪತ್ತು ನಿಮಿಷ ನಾವು ಆ ಪ್ರಶ್ನೆ ಕೇಳ್ತಿರಲಿಲ್ಲ. ಮೊದಲ ೧.೫ - ೨ ಕಿ.ಮೀ ಗಳ ನಡಿಗೆ ತುಂಬಾ ತ್ರಾಸದಾಯಕ ಅನಿಸಿತ್ತು. ಆಮೇಲೆ ಅದು ಹೇಗೋ ಹೊಂದಿಕೊಂಡು ಬಿಟ್ಟಿತು. ಆರಂಭದಲ್ಲಿ ಬರೀ ಕಡಿದಾದ ಸಣ್ಣ ಹಾದಿ ಇದ್ದರೆ, ಮುಂದೆ ಮುಂದೆ ಹೋದಂತೆ ಸ್ವಲ್ಪ ಇಳಿಜಾರು, ಮತ್ತೆ ಸ್ವಲ್ಪ ಹರಿಯುವ ನೀರು, ಇನ್ನೊಂದು ಕಡೆ ಸಮತಟ್ಟು ಹೀಗೆ ವೈವಿಧ್ಯಮಯವಾಗಿ ದಾರಿ ಸಾಗುತ್ತಿದ್ದುದರಿಂದ ಅಷ್ಟೊಂದು ತ್ರಾಸವಾಗಲಿಲ್ಲ. ಮೇಲೆ ಮೇಲಕ್ಕೆ ಹೋದಂತೆ ಒಂಥರಾ ವಿಶೇಷವಾದ ಅನುಭವ! ಒಂದು ಹಂತದವರೆಗೆ, ಮುಚ್ಚಿದ ಗಿಡ ಮರಗಳಿದ್ದ ಹಾದಿಯಲ್ಲಿ ಸಾಗುತ್ತಿದ್ದ ನಾವು ಒಮ್ಮೆಲೇ ತೆರೆದ ಪ್ರದೇಶಕ್ಕೆ ಬಂದೆವು.. ಸುತ್ತಲೂ ಬಿಳಿಯ ಮೋಡ, ಮಸುಕು ಮಸುಕು ಮಂಜು. ತಂಪಾದ ಗಾಳಿ. ಮುಖಕ್ಕೆ ಸವಿ ಮುತ್ತನ್ನಿಕ್ಕುವಂತೆ ಸುರಿಯುವ ತುಂತುರು. ಓಹ್!! ಅದೆಂಥಾ ಅನಿರ್ವಚನೀಯ ಆನಂದ! ಹಲವರ ಬಾಯಿಂದ ಆನಂದ ಅಭಿವ್ಯಕ್ತಿಗೊಳಿಸುವ ಉದ್ಗಾರಗಳು ಹೊರಬಂದರೆ, ಇನ್ನು ಕೆಲವರು ಮೂಕ ವಿಸ್ಮಿತರಾಗಿ ಒಳಗೊಳಗೇ ಸಂತಸ ಅನುಭವಿಸುತ್ತಿದ್ದರು. ಈ ಸಂತಸಕ್ಕೆ ನೀರೆರೆಚುವಂತೆ ಮಧ್ಯೆ ಮಧ್ಯೆ ಲೀಚ್ ಗಳ ಕಾಟ- ಹುಡುಗಿಯರ ಆರ್ತನಾದ! ಹುಡುಗರಂತೂ 'ಅದೇನಪ್ಪ ನೀವು ಹುಡುಗಿಯರು, 'in-built siren system' ಜೊತೆಗೆ ಹುಟ್ಟಿರ್ತೀರಾ? ಅಂತ ಕಿಚಾಯಿಸೋದಕ್ಕೆ. ಇದೆಲ್ಲವುಗಳ ಜೊತೆ ಆರು ಕಿ.ಮೀ. ಗಳ ದೂರ ಸಾಗಿ ಕೊನೆಗೂ ತುತ್ತ ತುದಿ ಬಂತು. ಅಲ್ಲೊಂದು ಪುಟ್ಟ ದೇವಸ್ಥಾನ. ಅಲ್ಲಿ ನಮಗೆ ಊಟಕ್ಕೆ ವ್ಯವಸ್ಥೆಯಾಗಿತ್ತು. ಆದರೆ ಅಲ್ಲಿ ತಲುಪಿದಾಗಲೇ ತಿಳಿದಿದ್ದು - ಇನ್ನೂ ಮೇಲೆ ೧.೫ ಕಿ.ಮೀ. ಎತ್ತರ ನಡೆದರೆ ಶಂಕರಾಚಾರ್ಯರ ಪೀಠವಿದೆ ಅಲ್ಲಿವರೆಗೂ ನಡೆಯುವಿರಾ ಅಂತ ಪ್ರಶ್ನೆ ಬಂತು! ಅಷ್ಟು ದೂರ ಬಂದು ಇನ್ನು ಒಂದುವರೆ ಕಿ.ಮೀ. ಏನು ಮಹಾ ಅಂದು ಒಮ್ಮತವಾಗಿ ನಿರ್ಧರಿಸಿ ಮತ್ತೆ ಪಯಣ ಮುಂದುವರೆಸಿದೆವು. ಕೇರಳದಿಂದ ಕೊಲ್ಲೂರಿಗೆ ಬರುವ ಭಕ್ತರು ಕೊಡಚಾದ್ರಿ ಬೆಟ್ಟದ ಮೇಲಿರುವ ಈ ಪೀಠವನ್ನು ಸಂದರ್ಶಿಸಿಯೇ ಹೋಗುತ್ತಾರೆ ಎಂದು ಜೊತೆಯಲ್ಲಿರುವ ಗೈಡ್ ಹೇಳುತ್ತಿದ್ದರು. ಅಲ್ಲಲ್ಲಿ ಬಂಡೆಯ ಬಳಿ ವಿಶಿಷ್ಟವಾಗಿ ಕಾಣಿಸುವ ಗುರುತುಗಳನ್ನು ತೋರಿಸಿ "ಅದೆಲ್ಲಾ ಮೈನಿಂಗ್ ಗಾಗಿ ನಡೆಸಿದ ಪರೀಕ್ಷೆಗಳು. ಆದರೆ ನಾವು ಇಲ್ಲಿ ಗಣಿಗಾರಿಕೆ ನಡೆಯಲು ಖಂಡಿತಾ ಬಿಡುವುದಿಲ್ಲ, ಕೈಗಾರಿಕೀಕರಣ ಆಗುವುದೂ ಬೇಡ, ಇಲ್ಲಿನ ಪರಿಸರ ಮಲಿನವಾಗುವುದೂ ಬೇಡ" ಎಂದು ಬೇಸರ, ರೋಷದಿಂದ ಅವರು ಹೇಳುವಾಗ ಆ ಹಸಿರು ಪರಿಸರದ ಬಗೆಗಿನ ಕಾಳಜಿ ಪ್ರೀತಿ ಅವರ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು.

ಹದಿನೈದು ಕಿ.ಮೀ.ಗಳ ನಡಿಗೆ ಮುಗಿಸಿ ವಾಪಸ್ಸು ಬಂದಾಗ ನಿಸರ್ಗಧಾಮದ ಜೊತೆ ನಮಗೆ ಒಂದು ನಂಟು ಬೆಸೆದಿತ್ತು. ಇಡೀ ದಿನ ಜೊತೆಯಲ್ಲಿದ್ದ ಗೈಡು, ಬೆಳಿಗ್ಗೆ ಬಿದ್ದಾಗ, ಎದ್ದಾಗ ಬೇಕೆನಿಸಿದಾಗ ಸಹಾಯ ಮಾಡಿದ ನಿಸರ್ಗಧಾಮದ ಕೆಲಸದಾಳುಗಳು, ಅಲ್ಲಿನ ಸ್ಥಳ ಮಹಾತ್ಮೆಯನ್ನು ಅಚ್ಚ ಕನ್ನಡದಲ್ಲಿ ಸೊಗಸಾಗಿ ವಿವರಿಸುತ್ತಿದ್ದ ಮಂಜಣ್ಣ, ಹೀಗೆ ಎಲ್ಲರೂ ಆಪ್ತರಾಗಿದ್ದರು. ಕಾಲಿಟ್ಟರೆ ಜಾರಿಸದೆ ಕಾಪಾಡುವ ಅಲ್ಲಿನ ಹುಲ್ಲು, ಗುಡಿಸಿಲಿನಂತಹ ಕಾಟೇಜು, ಸಂಜೆ ಕೊಟ್ಟ ಬಿಸಿ ಬಿಸಿ ಪಕೋಡ, ಕಷಾಯ, ಕಾಫಿ, ಒಲೆಯಲ್ಲಿಯೇ ತಯಾರಾಗುವ ಅನ್ನ ಸಾಂಬಾರಿನ ರುಚಿ, ಬೆಳಿಗ್ಗೆ ತಿಂದ ಚಿತ್ರಾನ್ನ, ಕಡುಬಿನಲ್ಲಿದ್ದ ಎಲ್ಲಿಯೂ ಸಿಗದ ಮಧುರ ಸ್ವಾದ ಇವೆಲ್ಲವೂ ನಿಸರ್ಗಧಾಮದ ಜೊತೆಗಿನ ಮಧುರ ನಂಟಿಗೆ ಕಾರಣವಾಗಿದ್ದವು. ಮರುದಿನ ಅಲ್ಲಿಯೇ ಹತ್ತಿರದಲ್ಲಿರುವ ಶರಾವತಿ ಹಿನ್ನೀರಿನಲ್ಲಿ ಮನ ತಣಿಯೆ ಆಟವಾಡಿ, ಬೋಟಿಂಗ್ ಮಾಡಿ ಮಧ್ಯಾಹ್ನ ಮತ್ತೆ ಅಲ್ಲಿನ ರುಚಿ ಶುಚಿಯಾದ ಊಟವನ್ನು, ನಿಸರ್ಗಧಾಮದವರ ಪ್ರೀತಿಯ ಆತಿಥ್ಯದೊಂದಿಗೆ ಉಂಡು ಅವರ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಅಲ್ಲಿಂದ ಮತ್ತೆ ಬೆಂಗಳೂರಿಗೆ ಹೊರಟೆವು.

ನಂತರದ ದುಷ್ಪರಿಣಾಮಗಳು :
  • ಟ್ರಿಪ್ಪು ಮುಗಿಸಿ ಬಂದು ಅಲ್ಲಿ ಕೊಳಚೆ ರಾಡಿಯಾಗಿದ್ದ ಬಟ್ಟೆ ಒಗೆಯೋದು ಚಾರಣಕ್ಕಿಂತ ತ್ರಾಸದಾಯಕವಾಗಿತ್ತು.
  • ವಿಪರೀತವಾಗಿ ಅಂತ್ಯಾಕ್ಷರಿ ಆಟ ಆಡಿದ್ದರ ಪರಿಣಾಮವಾಗಿ, ಟ್ರಿಪ್ಪಿನ ನಂತರ ಅದ್ಯಾವ ಹಾಡು ಕೇಳಿದರೂ, 'ಛೆ ಈ ಹಾಡು ನೆನಪಿಗೆ ಬಂದಿಲ್ವಲ್ಲ ಆ ಅಕ್ಷರ ಬಂದಾಗ' ಅನ್ನುವ ಪಶ್ಚಾತ್ತಾಪ!

Monday, July 12, 2010

ಪತ್ರ ಸಂಭ್ರಮ


"ಪತ್ರ ಬರವಣಿಗೆ ಎಂದರೆ ಅದು ನೇರ ಹೃದಯದೊಂದಿಗಿನ ಸಂಭಾಷಣೆ" ಹೀಗೆಂದು ನಮ್ಮ ಕನ್ನಡ ಅಧ್ಯಾಪಕರು ಹೇಳಿದ್ದು ನನಗಿನ್ನೂ ನೆನಪಿದೆ. ಮುಖತಃ ಮಾತನಾಡುವಾಗ ಹೇಳಲಾಗದ್ದು, ಅಥವಾ ಮಾತನಾಡುವಾಗ ಹೇಳಿದರೆ ಅಸಹಜ ಎಂದೆನಿಸುವ ವಿಚಾರಗಳನ್ನು ಬರೆಯಲು ಸಾಧ್ಯವಾಗುವುದು ಪತ್ರದಲ್ಲಿ ಮಾತ್ರ! ಹಾಗೆಯೇ, ಅದನ್ನು ಓದುವವರಿಗೆ ಪತ್ರ ಕೊಡುವ ಅನುಭೂತಿ, ಸಂತೋಷ ಅದಮ್ಯವಾದದ್ದು. ಮುಂಚಿನ ದಿನಗಳಲ್ಲಿ ಸುದ್ದಿ ರವಾನೆಗೆ ಬಳಕೆಯಾಗುತ್ತಿದ್ದ ಪತ್ರ ಮಾಧ್ಯಮ, ಇಂದಿನ ದಿನಗಳಲ್ಲಿ ತಲೆ ಎತ್ತಿರುವ ಆಧುನಿಕ ಸಂಪರ್ಕ ಮಾಧ್ಯಮಗಳಿಂದಾಗಿ ತೆರೆ ಮರೆಗೆ ಸರಿದಿರುವುದು ಬೇಸರದ ವಿಷಯ! ಆದಾಗ್ಯೂ, ಪತ್ರ ಬರವಣಿಗೆ ನೀಡುವ ಸಂತಸವನ್ನು ಮನಗೊಂಡವರು ಅದರ ಮಹತ್ವವನ್ನು ಕೊಂಡಾಡುತ್ತಾರೆ.

ನಾನೂ ಇದಕ್ಕೆ ಹೊರತಲ್ಲ. ನಿಜ ಹೇಳಬೇಕೆಂದರೆ, ಪತ್ರ ಓದಿದಾಗ ಆಗುವ ಖುಷಿಗಿಂತ ಬರೆದಾಗ ಆಗುವ ಖುಷಿ ಅನುಭವಿಸಿದ್ದೆ ಜಾಸ್ತಿ ನಾನು. ಇತ್ತೀಚಿಗೆ ಟೀಮ್ ಮೇಟ್ ಒಬ್ಬ ಉನ್ನತ ವ್ಯಾಸಂಗಕ್ಕಾಗಿ, ಕೆಲಸಕ್ಕೆ ರಾಜೀನಾಮೆ ಕೊಟ್ಟು ನಮ್ಮನ್ನೆಲ್ಲಾ ಬೀಳ್ಕೊಡುವ ಸಂದರ್ಭ ಬಂತು. ವಿದಾಯದ ಸಮಯ ಯಾವಾಗಲೂ ಹೃದಯಸ್ಪರ್ಶಿ. ವಿದಾಯಗೊಂಡು ತೆರಳುತ್ತಿರುವವರಿಗೆ, ಬೀಳ್ಕೊಡುವವರು ನೆನಪಿನ ಕಾಣಿಕೆಯಾಗಿ ಏನಾದರೂ ಉಡುಗೊರೆ ಕೊಡುವುದು ವಾಡಿಕೆ. ಒಂದು ಚಂದದ ಕವನ ಬರೆದು ಕೊಡೋಣ ಅಂದುಕೊಂಡರೆ ವ್ಯಾಸಂಗಕ್ಕಾಗಿ ತೆರಳುತ್ತಿರುವ ಈ ಮಿತ್ರ ಕನ್ನಡಿಗನಲ್ಲ (ಇಂಗ್ಲೀಷ್ ನಲ್ಲಿ ಕವನ ಬರೆಯುವಷ್ಟು ಸಿದ್ಧಿ ನನಗಿಲ್ಲ!). ಆದರೆ ಸಾಹಿತ್ಯ ಸಂಗೀತ ಅಂತೆಲ್ಲಾ ಆಸಕ್ತಿ ಇಟ್ಟುಕೊಂಡಿರುವವ. ನಾನು ಕನ್ನಡದಲ್ಲಿ ಬರೆದಿರುವ ಕವನ ಲೇಖನಗಳನ್ನು ಇಂಗ್ಲೀಷ್ ನಲ್ಲಿ ಅನುವಾದ ಮಾಡಿಕೊಡು ಅಂತಲೋ ಅಥವಾ ಸಂಜೆ ಕಾಫಿ ಸಮಯದಲ್ಲಿ ಹೇಳಿಸಿಕೊಂಡೋ, ಖುಷಿಪಡುವ ಆತ್ಮೀಯ ಮಿತ್ರ ಹಾಗೂ ಸ್ವಭಾವತಃ ಭಾವಜೀವಿ. ಇಂತಹ ಮಿತ್ರನಿಗೆ ಒಂದು ಪತ್ರ ಬರೆದುಕೊಟ್ಟರೆ ಹೇಗೆ ಎಂಬ ಯೋಚನೆ ಮನದಲ್ಲಿ ಸುಳಿದಿದ್ದೆ ತಡ, ಅದನ್ನು ಕಾರ್ಯಗತಗೊಳಿಸಿದೆ. ನಮ್ಮ ಟೀಮ್ ನಲ್ಲಿ ನಾವೆಲ್ಲಾ ಜೊತೆಯಾಗಿ ಕಳೆದ ಮಧುರ ಕ್ಷಣಗಳು("ಇಂದು ನಿನಗೆ ನೆನಪಿದ್ದರೂ, ಮುಂದೊಂದು ದಿನ ನೀನು ಪತ್ರ ತೆಗೆದು ನೋಡಿದಾಗ ಓದಿ, ನೆನಪು ಮಾಡಿಕೊಂಡು ಖುಷಿ ಪಡುವಂತಾಗಬೇಕು" ಎಂಬ ಒಕ್ಕಣಿಕೆಯೊಂದಿಗೆ), ಆತನಲ್ಲಿ ಎಲ್ಲರೂ ಮೆಚ್ಚುವ ಅಂಶಗಳು, ಏನು ಸುಧಾರಿಸಿಕೊಳ್ಳಬಹುದು, ಎಂದೆಲ್ಲಾ ಉದ್ದಕ್ಕೆ ಬರೆಯುತ್ತಾ ಹೋಗಿ ಕೊನೆಯಲ್ಲಿ ಶುಭ ಹಾರೈಕೆಗಳೊಂದಿಗೆ ಮುಗಿಸಿದ ಭಾವ ತುಂಬಿದ ಪತ್ರವನ್ನು ಓದಿ, ನಿಜಕ್ಕೂ ನಾನಂದು ಕೊಂಡದ್ದಕ್ಕಿಂತ ಅದೆಷ್ಟೋ ಜಾಸ್ತಿ ಖುಷಿ ಪಟ್ಟುಕೊಂಡ. ಅಲ್ಲಿಗೆ ನನ್ನ ಪತ್ರ ಬರವಣಿಗೆ ಸಾರ್ಥಕವಾಯಿತು.

ಈ ಹಿಂದೆಯೂ, ಪತ್ರ ಓದಿದವರೆಲ್ಲರ ಖುಷಿ ನೋಡಿಯೇ ನಾನು ಖುಷಿ ಪಟ್ಟಿದ್ದು ಹೆಚ್ಚು! ಕಳೆದ ಜೂನ್ ನಲ್ಲಿ ತಂಗಿಯ ಹುಟ್ಟು ಹಬ್ಬದ ದಿನ ಆಕೆಗೆ ಪತ್ರ ಬರೆದಾಗ, ಅವಳೂ ತುಂಬಾ ಖುಷಿ ಪಟ್ಟಿದ್ದಳು. ನನ್ನ ಒಬ್ಬಳು ಗೆಳತಿಯಂತೂ, ನಂಗೂ ಒಂದು ಪತ್ರ ಬರಿಯೇ ಅಂತ ಕೇಳಿಕೊಂಡಿದ್ದಳು! ಪದವಿಯಲ್ಲಿದ್ದಾಗ ಅಜ್ಜಿಯ 75 ನೆಯ ಹುಟ್ಟುಹಬ್ಬಕ್ಕೆ ಏನಾದರೂ ಅಮೂಲ್ಯ ಉಡುಗೊರೆ ಕೊಡಬೇಕು ಅಂತ ಯೋಚಿಸುತ್ತಿದ್ದಾಗಲೂ, ದೂರದ ಬೆಂಗಳೂರಲ್ಲಿದ್ದ ನನಗೆ ಹೊಳೆದದ್ದು ಪತ್ರ ಬರೆಯುವ ಯೋಚನೆಯೇ! ಅಜ್ಜಿಯಂತೂ ಪತ್ರ ಓದಿದ ನಂತರ "ಕಣ್ ತುಂಬಿ ಬಂತು" ಅಂತ ಹೇಳಿದಾಗ, ಪತ್ರ ಬರಹ ಇಷ್ಟೊಂದು ಪರಿಣಾಮಕಾರಿಯೇ ಅಂತ ನನಗೆ ಅನಿಸಿದ್ದು ಸುಳ್ಳಲ್ಲ! ಮೊದಲ ಬಾರಿಗೆ ನಾನು ಪತ್ರ ಬರೆದಿದ್ದು ಪ್ರಥಮ ಪಿ.ಯು.ಸಿ.ಯ ರಜಾ ಸಮಯದಲ್ಲಿ(ಶಾಲೆಯಲ್ಲಿ ಪ್ರಬಂಧ-ಪತ್ರ ಲೇಖನ ಪುಸ್ತಕದಲ್ಲಿ ಹಾಗೂ ಪರೀಕ್ಷೆಯಲ್ಲಿ ಬರೆದದನ್ನು ಹೊರತುಪಡಿಸಿ!). ಹಾಸ್ಟೆಲಲ್ಲಿ ಇರುತ್ತಿದ್ದ ನನ್ನ ಗೆಳತಿಯೊಬ್ಬಳು ಕೊಪ್ಪದ ಕಾನೂರಿನವಳು. ದೂರವಾಣಿ ಇದ್ದರೂ, ಅಲ್ಲಿ ಅದು ಬಹಳ ಸಲ ಜೀವಂತ ಸ್ಥಿತಿಯಲ್ಲಿರುತ್ತಿರಲಿಲ್ಲವಂತೆ! ಆಗ ನಾವು ನೆಚ್ಚಿಕೊಂಡದ್ದು ಪತ್ರ ಸಂವಹನವನ್ನು. ಅಂಥಾ ಏನೂ ಮಹಾನ್ ವಿಚಾರಗಳು ಇರುತ್ತಿರಲಿಲ್ಲವಾದರೂ, ರಜಾ ಸಮಯವನ್ನು ಹೇಗೆ ಕಳೆಯುತ್ತಿದ್ದೆವು ಏನು ಮಾಡಿದೆವು ಎನ್ನುವುದನ್ನೇ ರಮ್ಯವಾಗಿ ಬಣ್ಣಿಸಿ ಪತ್ರ ಬರೆಯುತ್ತಿದ್ದೆವು. ಒಂದು ವಾರ ನನ್ನ ಸರದಿಯಾದರೆ ಮತ್ತೊಂದು ವಾರ ಅವಳದು. ಹೀಗೆ ಎರಡು ತಿಂಗಳು ರಜೆಯಲ್ಲಿ ಬಹುಶಃ ಒಟ್ಟು ಎಂಟು ಪತ್ರಗಳು ನಮ್ಮ ನಡುವೆ ವಿನಿಮಯಗೊಂಡಿವೆ! ಆ ಕಾಯುವಿಕೆ, ಓದುವಿಕೆಯಲ್ಲಿ ಒಂಥರಾ ಖುಷಿಯಿತ್ತು.

ಅಭಾವ ಉಂಟಾದಾಗ ಭಾವ ಜೀವ ತಳೆಯುತ್ತೆ ಅಂತ ದೂರದ ಅಮೇರಿಕಾದಲ್ಲಿರುವ ಶ್ರೀವತ್ಸ ಜೋಷಿಯವರು ಅವರ ಬರವಣಿಗೆಯ ಸ್ಫೂರ್ತಿಯ ಕಾರಣವನ್ನು ಒಂದೆಡೆ ಹೇಳಿದ್ದರು. ನಿಜವಾದ ಮಾತು..ಅಲ್ಲವೇ? ಪಿ. ಯು. ಸಿ ಯಲ್ಲಿ ಊರಲ್ಲೇ ಇದ್ದಾಗ ಅಷ್ಟೊಂದು ಶಾಲೆಯ ನೆನಪು ಮಾಡಿಕೊಳ್ಳದ ನಾನು, ಮುಂದೆ ಪದವಿಗೆಂದು ದೂರದೂರಿಗೆ ಬಂದ ಮೇಲೆ, ಶಾಲೆಯ ನೆನಪು ಮಾಡಿಕೊಂಡಿದ್ದು, ಶಾಲೆಗೆ ಭೇಟಿ ನೀಡಿದ್ದು ತುಂಬಾ ಸಲ! ಅಧ್ಯಾಪಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿ ಪತ್ರವೂ ಬರೆದಿದ್ದೆ. ಆ ಪತ್ರ ಓದಿ ಅವರಿಗೆಲ್ಲಾ ಆದ ಸಂತೋಷವನ್ನು ಆಗ ಅಲ್ಲಿ ಕಲಿಯುತ್ತಿದ್ದ ತಂಗಿಯ ಮೂಲಕ ತಿಳಿದುಕೊಂಡು ನಾನೂ ಖುಷಿ ಪಟ್ಟಿದ್ದೆ :-) ಆದರೆ ಮಕ್ಕಳ ದಿನಾಚರಣೆಗೆ ಶುಭಾಶಯ ಕೋರಿ ಅವರು ಬರೆದ ಪತ್ರ ಯಾವಾಗ ನನ್ನ ಕೈ ತಲುಪಿತೋ ಆಗ ಮಾತ್ರ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ನನಗೆ ಅನಿರ್ವಚನೀಯ ಖುಷಿ ಕೊಟ್ಟ ಪತ್ರ ಅದು. ಅದೆಷ್ಟು ಸಲ ಓದಿದ್ದೇನೋ ಲೆಕ್ಕವಿಲ್ಲ. ನಾನು ಪತ್ರ ಬರೆಯುವಾಗ "ನೀವು ನಗರ ಸಭಾಧ್ಯಕ್ಷರಿಗೆ ಪತ್ರ, ತಂದೆಗೆ ಪತ್ರ ಅಂತೆಲ್ಲ ಪತ್ರ ಲೇಖನ ಕಲಿಸಿದ್ದೀರ ಸರ್, ಆದರೆ ಶಿಕ್ಷಕರಿಗೆ ಪತ್ರ ಬರೆಯುವುದು ಹೇಳಿ ಕೊಟ್ಟಿರಲೇ ಇಲ್ಲ! ಹಾಗಾಗಿ ಈ ಪತ್ರಕ್ಕೆ ಅದೆಷ್ಟು ಅಂಕಗಳು ಸಲ್ಲುತ್ತವೋ ನಾ ತಿಳಿಯೆ!" ಎಂದು ಕನ್ನಡ ಅಧ್ಯಾಪಕರನ್ನು ಪ್ರೀತಿಯಿಂದ ದೂರಿ, ಆ ಪತ್ರದ ತಪ್ಪು ಒಪ್ಪುಗಳೇನಿದ್ದರೂ ಅವರಿಗೆ ಸಮರ್ಪಿತ ಅನ್ನುವಂತೆ ಕೊನೆಯಲ್ಲಿ ಬರೆದಿದ್ದೆ :-) ಅದಕ್ಕೆ ಪ್ರತಿಯಾಗಿ ನನ್ನ ಅಧ್ಯಾಪಕರು "ನಿನ್ನ ಪತ್ರ ಹತ್ತಕ್ಕೆ ಹತ್ತು ಅಲ್ಲ ಅದಕ್ಕೂ ಜಾಸ್ತಿ ಅಂಕಗಳಿಗೆ ಅರ್ಹವಾಗಿದೆ. ಮುಂದೊಂದು ದಿನ ಹೃದಯ ಬುದ್ಧಿಗಳೆರಡೂ ಒಂದಾಗಿ ಸುಂದರ ಪತ್ರಕ್ಕೆ ಕಾರಣವಾಗುತ್ತದೆ ದಿವ್ಯಾ, ಆ ಪತ್ರದ ಓದುಗ ನಿಜಕ್ಕೂ ಅದೃಷ್ಟವಂತ" ಅಂತೆಲ್ಲಾ ಹೇಳಿ ನನ್ನಲ್ಲಿ ಸಂತೋಷ, ನಾಚಿಕೆ, ಹೆಮ್ಮೆ ಎಲ್ಲಾ ಭಾವಗಳು ಜೊತೆಜೊತೆಗೆ ಜನಿಸುವಂತೆ ಮಾಡಿದ್ದರು.

'ಶುಭಾಶಯ ಪತ್ರ' ಬ್ಲಾಗ್ ಪೋಸ್ಟ್ ನಲ್ಲಿ 'ಚುಕ್ಕಿ ಚಿತ್ತಾರ' ಅವರು, 'ಕಳೆದು ಹೋಗುತ್ತಿರುವ ಪತ್ರ ಸಂಭ್ರಮವನ್ನು ಇಲ್ಲಿ ಬೆಳಗಿದ್ದೀರಿ' ಎಂದು ಅಭಿನಂದಿಸಿದ್ದರು. ಹೌದು! ಪತ್ರ ಬರವಣಿಗೆ/ಓದುವಿಕೆ ನಿಜಕ್ಕೂ ಒಂದು ಸಂಭ್ರಮ! ಆದ್ದರಿಂದ ನಾವು ಅದನ್ನು ಕಳೆದು ಹೋಗಲು ಬಿಡದೆ, ಉಳಿಸಿಕೊಳ್ಳುವುದು ಉತ್ತಮ.. ಅಲ್ಲವೇ?

Monday, June 28, 2010

ದಾಂಪತ್ಯ

-ಬೀಚಿಯವರ 'ನನ್ನ ಭಯಾಗ್ರಫಿ'ಯಲ್ಲಿ ಬರುವ ಹರಪನ ಹಳ್ಳಿಯ ಒಬ್ಬ ಅಜ್ಜಿ ತನ್ನ ಗಂಡನ ಬಗ್ಗೆ ಹೇಳುವ ಮಾತಿನಿಂದ ಪ್ರೇರಿತವಾಗಿ ಜನಿಸಿದ ಸಾಲುಗಳು!

ನಿನ್ನೆ ನಡೆದ ಏನೋ ಕಲಹಕೆ
ಇಬ್ಬರೊಳು ಮೂಡಿದ ಭಿನ್ನ ಮತಕೆ
ಮಾತಿಗೆ ಮಾತು ಬೆಳೆದು
ಚರ್ಚೆ ಎತ್ತೆತ್ತಲೋ ಹರಿದು
ಅವನು ಪೂರ್ವಕೆ ಅವಳು ಪಶ್ಚಿಮಕೆ
ಮುಖ ಮಾಡಿ ಮಲಗಿರಲು,
ನಗಿಸುವ ಪಣ ತೊಟ್ಟವ ಅಳಿಸುತ್ತಿರಲು,
ಅವಳ ಮನದಲ್ಲೊಮ್ಮೆ ಅನಿಸಿದ್ದು ನಿಜವಂದು
-
"ಛೇ ನನ್ನ ಹಣೆಯಲ್ಲಿ ಬರೆದಿದ್ದೆ ಈ ಥರವೇ?"
ಎಂದು!!

ಆದರೆ...
ಮುಂಜಾನೆ ಬಚ್ಚಲಲಿ ಯೋಚನಾ ಗುಂಗಲ್ಲಿ
ಸಾಬೂನು ಹಚ್ಚಿ ಕಣ್ಮುಚ್ಚಿ ಬಗ್ಗಲು,
ಚಾಚಿದ್ದ ನಳದ ತುದಿಯು ಫಟಾರನೆ ರಭಸದಿ
ಹಣೆಯ ಮಧ್ಯಕ್ಕೆ ಬಡಿದು ಕೆಂಪು ಬರೆ ಬರಲು
ತಡೆಯಲಾಗದ ನೋವಲಿ ಕಣ್ಣೀರು ಹರಿದಿರಲು
ಓಡೋಡಿ ಬಂದು ಆತ ಸಂತೈಸುತಿರಲು
ಇದ್ದೆಲ್ಲ ಪ್ರೀತಿಯನು ಧಾರೆಯೆರೆಯಲು
ಮತ್ತೆ ನಗೆ ಹೂವು ಮನದಲ್ಲಿ ಅರಳಿರಲು
ದಿನವು ಸಂತಸದಿ ಸಾಗುತ್ತಲಿರಲು
ಹಣೆ ಬರಹ ಹಳಿದ ತಪ್ಪಿಗೆ ನೊಂದಳು

ಅದೇನಿದ್ದರೂ...
ಅವನು ನನ್ನವನು
ನಾನವನ ಮನದರಸಿ
ಸಮರಸವೇ ಜೀವನ
ಎಂದೆನುತ್ತಾ ನಿನ್ನೆ ಮರೆತಳು

Friday, June 4, 2010

'ಶುಭಾ'ಶಯ ಪತ್ರ

"ಶುಭಾ, ನಿಂಗೆ ಹುಟ್ಟು ಹಬ್ಬಕ್ಕೆ ಏನು ಗಿಫ್ಟ್ ಬೇಕು ಹೇಳು"
"ವಿಶ್ವ ಪರಿಸರ ದಿನ ಅಲ್ವಾ, so, ನೀನು ಪರಿಸರ ಮಾಲಿನ್ಯ ಕಮ್ಮಿ ಮಾಡೋಕೆ, ಪರಿಸರ ಹಸಿರಾಗಿಡೋಕೆ, ಪ್ರಯತ್ನ ಮಾಡು, ಅದೇ ನಂಗೆ ದೊಡ್ಡ ಗಿಫ್ಟು :) ಹಾಹಾ - ದೊಡ್ಡ ಜನರ ಥರ ದೊಡ್ಡ ಮಾತಾಡಿದೆ ಅಲ್ವಾ !"
***

"ಲೇ ಶುಭಾ, ಬೇಗ ಅಮ್ಮಂಗೆ ಫೋನ್ ಕೊಡು, ನಂಗೆ ಹಸಿವಾಗ್ತಾ ಇದೆ ಜೋರು, ಮಾತು ಮುಗಿಸಿ ಆಮೇಲೆ......."
"ಅಮ್ಮ ಬೇಗ ಬಾ, ಅಕ್ಕಂಗೆ ಜೋರು ಹಸಿವಂತೆ, ನಿನ್ನ ತಲೆ ತಿನ್ನೋಕೆ ಕರೀತಿದಾಳೆ!"
***

"ಹೇ ಅಕ್ಕಾ, ಇವತ್ತು ನನ್ ಫ್ರೆಂಡ್ಸ್ ಗೆಲ್ಲಾ ನಿನ್ನ ಬ್ಲಾಗ್ ತೋರಿಸಿದೆ ಕಣೆ, ಒಂದು ಫ್ರೀ ಪೀರಿಡ್ ಇತ್ತು.."

"ಓಹ್ ಪರ್ವಾಗಿಲ್ವೆ ನೀನು?"
"ಆದ್ರೆ ಜಾಸ್ತಿ ಟೈಮ್ ಇರ್ಲಿಲ್ಲ ಆಯ್ತಾ, ಅದಕ್ಕೆ ನೀ ನನ್ನ ಬರ್ತ್ ಡೇ ದಿನ ನನ್ನ ಬಗ್ಗೆ ಬರ್ದಿದ್ದೆ ಅಲ್ವಾ 'ಶುಭಾ'ಶಯ ಕವನ, ಅದನ್ನು ತೋರಿಸಿದೆ, ಖುಷಿಯಾಯ್ತು ಗೊತ್ತಾ ಅವರಿಗೆಲ್ಲಾ? :)"
"!!!"
***

"ಹೇ, ಶುಭಾ ನಮ್ಮ ಶಾಲೆಗೆ ಹೋಗಿ ಬರೋಣ್ವಾ, ಬರ್ತೀಯಾ? "

"ನೀನು ಬಿಡು, ಹೀರೋಯಿನ್ ಆಗಿದ್ದೆ ಸ್ಕೂಲ್ ನಲ್ಲಿ, ನಾನ್ಯಾಕೆ ಸೈಡ್ ಆಕ್ಟ್ರೆಸ್ಸ್ ಥರ ನಿನ್ ಜೊತೆ ಬರಲಿ ;-)"
"!!?"
***

"ಶುಭಾ, ಸೆಮಿಸ್ಟರ್ ಪರೀಕ್ಷೆ ಮುಗಿದ ಮೇಲೆ ಏನ್ ಪ್ಲಾನ್ ರಜಕ್ಕೆ?"

"ಬೆಂಗಳೂರಿಗೆ ಬರೋಣ ಅನ್ಕೊಂಡಿದ್ವಿ ನಾನು ಮತ್ತು ಅಪ್ಪ, ಆದ್ರೆ ನೀನೆ ಬರ್ತಿದೀಯಲ್ವಾ ಊರಿಗೆ ಮುಂದಿನ ವಾರದಲ್ಲಿ, ಹದಿನೈದು ದಿನದೊಳಗೆ ಮತ್ತೆ ನಿನ್ನ ಮುಖ ನೋಡೋಕೆ ಯಾಕೆ ಬರೋದು ಹೇಳು ಬೆಂಗಳೂರಿಗೆ :P ಅದ್ಕೆ ಏನೂ ಪ್ಲಾನ್ ಇಲ್ಲ ಈಗ!"
"!! "
***

ಪ್ರೀತಿಯ ಮುದ್ದು ತಂಗಿ ಶುಭಾ,

ನನಗೆ ಖಂಡಿತಾ ಗೊತ್ತಿದೆ, ಈ ಮೇಲಿನ ಸಾಲುಗಳನ್ನೆಲ್ಲ ನೀನು ಓದಿದಾಗ ನಂಗೆ ಚೆನ್ನಾಗಿ ಮಂಗಳಾರತಿ ಇದೆ ಎಂದು. ಆದರೆ ಏನಾದರೂ ವಿಶೇಷವಾಗಿ ನಿನ್ನ ಹುಟ್ಟು ಹಬ್ಬಕ್ಕೆ ನನ್ನ ಬ್ಲಾಗ್ ನಲ್ಲಿ ಬರೆಯೋಣ ಎಂದು ಮನಸ್ಸಿಗೆ ಬಂದು, ನನ್ನ ಮನದಲ್ಲಿ ಅಚ್ಚೊತ್ತಿದ ನಿನ್ನ ಕೆಲವು ಮುದ್ದು ಮಾತುಗಳನ್ನು ಹಾಗೆಯೇ ಅಕ್ಷರಕ್ಕಿಳಿಸಿದ್ದೇನೆ, ಬೇಸರವಿಲ್ಲವಷ್ಟೇ? ಕೆಲವೊಮ್ಮೆ ನೀನು ತಟ್ ಅಂತ ನೀಡುವ ಉತ್ತರಗಳು, ನಗು ತರುವ ನಿನ್ನ ಮಾತುಗಳು, ಆ ಚುರುಕುತನ ಅದೆಲ್ಲ ಎಷ್ಟು ಖುಷಿಯಾಗುತ್ತದೆಂದರೆ, ಆ ಕ್ಷಣ ನನ್ನ ಮನದ ದುಗುಡಗಳನ್ನೆಲ್ಲಾ ಮರೆತು ಬಿಡುತ್ತೇನೆ. ಇನ್ನು ಕೆಲವೊಮ್ಮೆ, ನೀನು ನನ್ನ ಅನುಪಸ್ಥಿತಿಯ ಬಗ್ಗೆ ದೂರಿದಾಗ, ನಾಲ್ಕು ದಿನಕ್ಕೆ ಬಂದ ನಾನು ಎರಡೇ ದಿನಕ್ಕೆ ಮನೆಯಿಂದ ಮತ್ತೆ ವಾಪಾಸು ಹೊರಟ ಸಂದರ್ಭದಲ್ಲಿ ಕಣ್ಣೀರು ಸುರಿಸಿದಾಗ, ಮನದ ಮೂಲೆಯಲ್ಲಿ ಬೇಸರವೂ ಮೂಡುತ್ತದೆ. ಆದರೆ ಬದುಕು ನಮ್ಮನ್ನು ಕೊಂಡೊಯ್ಯುವ ಕಡೆ ನಾವು ಸಾಗಬೇಕು ಅಲ್ಲವೇ?

ಮನೆಯಲ್ಲಿ ಸಣ್ಣ ಮಕ್ಕಳು ಯಾವತ್ತೂ ದೊಡ್ದವರಾಗುವುದೇ ಇಲ್ಲ ಎಂದು ನಂಗೆ ಹಲವು ಬಾರಿ ಅನಿಸುವುದಿದೆ. ನಾನು ಬಾಲವಾಡಿಯಲ್ಲಿದ್ದಾಗ ನೀನು ಹುಟ್ಟಿದಾಗಿಂದ ನಾನು ದೊಡ್ಡವಳು. ಆದರೆ ನೀನು ಕಾಲೇಜಿಗೆ ಬಂದರೂ ಇನ್ನು ಚಿಕ್ಕವಳು ಅನ್ನುವ ಮನೋಭಾವ ನನ್ನಲ್ಲಿತ್ತು. ಆದರೆ, ಇತ್ತೀಚೆಗೆ ಒಂದೆರಡು ವರ್ಷಗಳಿಂದ, ನಿನ್ನ ಸ್ನೇಹಿತೆಯರ ಗುಂಪಿನಲ್ಲಿ ನಿನ್ನ ಒಡನಾಟ, ನೀನು ಹೇಳುವ ಕೆಲ ಘಟನೆಗಳು, ನಿನ್ನ ವಿಚಾರ ಧಾರೆಯನ್ನು ಮಂಡಿಸುವ ಶೈಲಿ, ಇದೆಲ್ಲ ನೋಡಿದಾಗ, ಕೇಳಿದಾಗ, ನಂಗೂ ಖುಷಿಯಾಗಿತ್ತು - ನನ್ನ ಮುದ್ದು ತಂಗಿ ಆ ಮುದ್ದುತನ, ತುಂಟತನವನ್ನು ಉಳಿಸಿಕೊಂಡು, ಪ್ರೌಢಳೂ ಆಗಿದ್ದಾಳೆ ಅಂತ. I m happy and proud about you!

ಶುಭಾ, ಬದುಕಿನ ಒಂದು ಮುಖ್ಯವಾದ ಘಟ್ಟದಲ್ಲಿ ನೀನು ನಿಂತಿರುವ ಈ ಸಂದರ್ಭದಲ್ಲಿ ನಾನು ನಿನಗೆ ಹೇಳುವುದಿಷ್ಟೇ - "ಯಾವತ್ತೂ ಒಂದು ಸ್ಪಷ್ಟವಾದ ಗುರಿ ನಮ್ಮ ಮುಂದಿರಬೇಕು, ಆ ಗುರಿಯನ್ನು ತಲುಪುವ ದೃಢಸಂಕಲ್ಪ ಹಾಗೂ ಶ್ರಮ ನಮ್ಮದಾಗಿರಬೇಕು." ನನ್ನ ಶುಭ-ಹಾರೈಕೆಗಳು, ಸದಾ ನಿನ್ನ ಜೊತೆಗಿವೆ. ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು!

ಪ್ರೀತಿಯಿಂದ,
ನಿನ್ನ ಅಕ್ಕ.

ಮುಗಿಸುವ ಮುನ್ನ : ಹುಟ್ಟು ಹಬ್ಬಕ್ಕೆ ಉಡುಗೊರೆಯ ಜೊತೆ ನಿನಗೊಂದು ಪತ್ರ ಕಳುಹಿಸಬೇಕು ಎಂದು ಮನದಲ್ಲಿ ಅಂದುಕೊಂಡಿದ್ದೆನೋ ನಿಜ; ಆದರೆ, ಸಮಯದ ಅಭಾವದಿಂದಾಗಿ ಪತ್ರ ಬರೆದು ಕಳುಹಿಸಲಾಗಲಿಲ್ಲ. ಅದಕ್ಕಾಗಿ ಇಲ್ಲಿ ಬರೆದಿದ್ದೇನೆ. ಪತ್ರಗಳು ವೈಯಕ್ತಿಕ. ಆದರೆ ಮಹತ್ತರವಾದ ಯಾವುದೇ ವೈಯಕ್ತಿಕ ವಿಚಾರಗಳ ಪ್ರಸ್ತಾಪ ಇಲ್ಲಿ ಇಲ್ಲದಿರುವುದರಿಂದ ಹಾಗೂ ನಿನಗೆ ಖುಷಿಯಾಗುತ್ತದೆ ಎನ್ನುವ ಭರವಸೆಯೊಂದಿಗೆ, ಈ ಪತ್ರವನ್ನು 'ಭಾವ ಜೀವ ತಳೆದಾಗ'ದಲ್ಲಿ ದಾಖಲಿಸುತ್ತಿದ್ದೇನೆ.

Wednesday, May 19, 2010

ಹಾಗೆ ಸುಮ್ಮನೆ

ಹನಿ ಹನಿ

ಹೊರಗೆ ಭೋರೆಂದು ಹೊಯ್ಯುತಿಹ ಮಳೆಯು
ಒಳಗೆ ಅರ್ಧರ್ಧ ಬರೆದಿಟ್ಟಿಹ ಸಾಲುಗಳನು
ನೋಡಿ ನಕ್ಕಂತೆ, ಅಟ್ಟಹಾಸದ ಗಾಳಿ ಬೀರುತಿದೆ
ಅದಕೆ ಪ್ರತೀಕಾರಗೈಯಲು ಕುಳಿತಿರುವೆ ನಾನು
ಪ್ರಕೃತಿಯ ಎದುರು ನಾನೊಂದು ಹುಲು ಮಾನವ
ಬರೆದದ್ದು ಬರೀ ಹನಿ ಹನಿ!






ನಲ್ಲ ಹೇಳಿದ್ದು

ಅಗಲಗೊಳ್ಳುತ್ತಿರುವ ನಿನ್ನೂರ ರಸ್ತೆಗಳೆಲ್ಲಾ,
ನೀ ಕೈ ಅರಳಿಸಿ ಕರೆದಂತೆ ಸ್ವಾಗತ ನೀಡುತಿವೆ

ಕಾಮಗಾರಿ ನಡೆಯುತ್ತಾ ಏಳುತ್ತಿರುವ ಕೆಂಪು ಧೂಳು
ನಾಚಿದ ನಿನ್ನ ಕೆಂಪು ಕೆನ್ನೆಯ ನೆನಪ ತರುತ್ತಿವೆ






ಪ್ರಶ್ನೆ - ಉತ್ತರ

"ಯಾಕೆ ನನ್ನಿನಿಯ, ನಿನಗೆ
ತಲೆ ನೋವು, ಭಾರ?"
"ಏನು ಮಾಡಲಿ ಪ್ರಿಯೆ
ತಲೆಯ ತುಂಬೆಲ್ಲ
ನೀನೇ ಇರುವೆಯಲ್ಲಾ !"

Sunday, April 25, 2010

ಪ್ಲಾಟ್ ಫಾರ್ಮ್ ಅವಾಂತರ

ಬಹಳ ದಿನಗಳಿಂದ ಏನೇನೋ ಭಾವಗಳು ಮನದಲ್ಲಿ ಮಿಂಚಿ ಮರೆಯುಗುತ್ತಿದ್ದವಾದರೂ, ಅಕ್ಷರಕ್ಕೆ ಇಳಿಸುವಷ್ಟು ತೀವ್ರವಾಗಿರಲಿಲ್ಲ. ಎಲ್ಲೋ ಮನಸ್ಸಿನಾಳದಲ್ಲಿ ಯೋಚನೆಗಳು ಮೂಡಿದರೂ, ಬರೆಯುವ ಯೋಜನೆ ಕಾರ್ಯಗತ ಮಾಡುವುದಕ್ಕೆ ಸಮಯ ಸಿಕ್ಕಿರಲಿಲ್ಲ. ಬೆಂದಕಾಳೂರಿನ ಬಿಸಿಲ ಬೇಗೆಯಲ್ಲಿ ಬೇಯುತ್ತಾ, ಭಾವ ಯಾವಾಗ ಜೀವ ತಳೆಯುತ್ತೆ ಅಂತ ಅದೆಷ್ಟು ಕಾದರೂ ಬರದವುಗಳು, ಎದೆಯಾಳದಿಂದ ಚಿಮ್ಮಿ ಹೊರಬರಲು ಬೆಂಗಳೂರು ಬಿಟ್ಟು ಊರಿಗೆ ಹೊರಡಬೇಕಾಯ್ತು(ಆದರೆ ಭಾವ ಜೀವ ತಳೆದಿದ್ದು ಬೆಂಗಳೂರಿನಲ್ಲೇ!). ಊರಿಗೆ ಹೊರಡುವಾಗಿನ ಕ್ಷಣಗಳೇ ಹಾಗೆ! ಮನಸ್ಸು ಒಂಥರಾ ವಿಶೇಷ ಉತ್ಸಾಹದಿಂದ ಕೂಡಿರುತ್ತದೆ. ಇನ್ನು, ತುಂಬಾ ದಿನಗಳ ನಂತರ ಊರಿಗೆ ಹೊರಟದ್ದೆಂದರೆ ಹೇಳುವುದೇ ಬೇಡ, ಮನದ ಉಲ್ಲಾಸವೂ ದ್ವಿಗುಣವಾಗಿರುತ್ತದೆ. ಆದರೆ ಸಮುದ್ರ ಮಟ್ಟದಲ್ಲಿರುವ ಊರಿಗೆ, ಎತ್ತರ ಪ್ರದೇಶದಲ್ಲಿರುವ ಬೆಂಗಳೂರಿಂದ ಹೋಗುವಾಗ, ನಡುವೆ ಸಿಗುವ 36 ಕಿ.ಮೀ, ನ ಘಾಟಿ, ಯಾವತ್ತೂ ಒಂದು ದುಸ್ವಪ್ನ ! ಮಳೆಗಾಲದಲ್ಲಂತೂ ಪಯಣ ಇನ್ನೂ ಭೀಕರ! ಮುಂಜಾನೆ ತಲುಪಬೇಕಾಗಿದ್ದು, ಮಧ್ಯಾಹ್ನ, ಸಂಜೆ ತಲುಪಿದ ಉದಾಹರಣೆಗಳೂ ಇವೆ :( ಆದರೂ ಊರಿಗೆ ಹೋಗುವ ಉತ್ಸಾಹ ನೆನೆಸಿಕೊಂಡು ಇದನ್ನೆಲ್ಲಾ ಹತ್ತಿಕ್ಕುವುದು ಕಷ್ಟವಲ್ಲ. ಸಕಲ ಕಷ್ಟಗಳನ್ನು ದಾಟಿ, ಯುದ್ಧದಲ್ಲಿ ಗೆದ್ದ ಯೋಧನಂತೆ, ಸ್ವಾಗತ ಗೋಪುರವನ್ನು ದಾಟಿ, ಉಡುಪಿ ನಗರ ಪ್ರವೇಶಿಸುವಾಗ, ನನ್ನೊಳಗೆ ಅದೇನೋ ಒಂದು ಅದಮ್ಯವಾದ ಖುಷಿ! ಆದರೆ ಕೆಲವೊಮ್ಮೆ VRL ಬಸ್ ನವರು ಅವರ ಡಿಪೋಗೆ ಹೋಗಿ ಒಳದಾರಿಯಿಂದಲೇ, ಈ ಸ್ವಾಗತ ಗೋಪುರದ ಮೂಲಕ ಸಾಗದೆ ಉಡುಪಿ ಹೊಕ್ಕರೆ ನನಗೆ ಮನದಲ್ಲಿ ಏನೋ ಕಳೆದುಕೊಂಡ ಅನುಭವ. ಕಳ್ಳನಂತೆ ಅಡ್ಡ ದಾರಿಯಿಂದ ಊರು ಹೊಕ್ಕ ಅನುಭವ!

ಅಂದ ಹಾಗೆ ಮೊನ್ನೆ, ಮೆಜೆಸ್ಟಿಕ್ ನಿಂದ ಬಸ್ಸು ಹತ್ತಿ ಊರಿಗೆ ಹೋಗುವವಳಿದ್ದೆ. ಪ್ರತಿ ಸಲ, ಇಲ್ಲೇ ಹತ್ತಿರದಲ್ಲೇ ಪಿಕ್ ಅಪ್ ಇರುವ ಖಾಸಗಿ ಬಸ್ ನಲ್ಲಿ ಹೋಗುತ್ತಿದ್ದು, ಈಗ ಆ ಬಸ್ ಈ ಹಾದಿಯಲ್ಲಿ ಸಾಗದೆ, ಇನ್ನೊಂದು ಕಡೆಯಿಂದ ಹೋಗುವುದರಿಂದ, ಇನ್ನು ಮೆಜೆಸ್ಟಿಕ್ ನಿಂದ ಹೋಗಬೇಕಾದ ಅನಿವಾರ್ಯತೆ! ಎಲ್ಲರೂ, "ಓ ಮೆಜೆಸ್ಟಿಕ್ ನಿಂದನಾ ಬಸ್ಸು? ಬೇಗ ಹೊರಟು ಮೆಜೆಸ್ಟಿಕ್ ತಲುಪು, ಅಲ್ಲಿ ಮತ್ತೆ ಎಷ್ಟು ಹೊತ್ತು ಕೂತರೂ ಪರವಾಗಿಲ್ಲ" ಎನ್ನುವವರೇ! ಸ್ವಲ್ಪ ದಿನಗಳ ಮುಂಚೆ ಊರಿಗೆ ಹೊರಟ ಗೆಳತಿಯೊಬ್ಬಳು, ಬೆಂಗಳೂರಿನ ಟ್ರಾಫಿಕ್ ಜಾಮ್ ನಿಂದಾಗಿ ಬಸ್ಸು ಮಿಸ್ ಮಾಡಿಕೊಂಡ ಘಟನೆ ಇನ್ನೂ ಹಚ್ಚ ಹಸಿರಾಗಿರುವುದರಿಂದ, ನನಗೂ ಮೆಜೆಸ್ಟಿಕ್ ತಲುಪುವ ತನಕ ಒಂದು ಆತಂಕ ಇತ್ತು. ಆದರೆ ಯಾವಾಗ ಅರ್ಧ ಘಂಟೆ ಮೊದಲು ಹೋಗಿ ಅಲ್ಲಿ ಕೂತು ತಪಸ್ಸು ಮಾಡಬೇಕಾದ ಪರಿಸ್ಥಿತಿ ಬಂತು ನೋಡಿ, ಆಗ ಮಾತ್ರ "ಛೆ, ಇನ್ನೂ ಹತ್ತು ನಿಮಿಷ ತಡ ಮಾಡಿ ಹೊರಟಿದ್ದರೆ ಏನೂ ಆಗ್ತಿರಲಿಲ್ಲ" ಎಂದೆನಿಸಿದ್ದು ನಿಜ! ಆರಾಮಾಗಿ ಮೆಜೆಸ್ಟಿಕ್ ನ ಉಪಾಹಾರ ಗೃಹದಲ್ಲಿ ಚಪಾತಿ ತಿಂದು, ನನ್ನ ಪ್ಲಾಟ್ ಫಾರ್ಮ್ ಕಡೆ ಸಾಗಿದೆ. ಟಿಕೆಟ್ ನಲ್ಲಿ ಪ್ಲಾಟ್ ಫಾರ್ಮ್ ಸಂಖ್ಯೆ "1A" ಅಂತಿತ್ತು. ನಾನು ಪ್ಲಾಟ್ ಫಾರ್ಮ್ ನಾಲ್ಕು, ಮೂರು, ಎರಡು ಹೀಗೆ ಸಾಗುತ್ತ ನಡೆದೆ. ಕಡೆಗೆ ಪ್ಲಾಟ್ ಫಾರ್ಮ್ ಒಂದು ಸಿಕ್ಕಿತು, ವಿನಃ "1A" ಕುರುಹು ಕಾಣಲಿಲ್ಲ. ಅಲ್ಲೇ ವಿಚಾರಿಸಿದೆ. "ಉಡುಪಿಗೆ ಹೋಗುವ ಬಸ್ಸುಗಳು ಇಲ್ಲೇ ಬರೋದು" ಅಂದ್ರು. ಮೇಲೆ ತೂಗು ಹಾಕಿದ ಬೋರ್ಡುಗಳನ್ನು ಮಾತ್ರ ನೋಡುತ್ತಿದ್ದ ನನಗೆ, ಅಷ್ಟರಲ್ಲಿ ಕೆಳಗೆ ಒಂದು ಬೋರ್ಡು ಕಾಣಿಸಿತು. "ಊಟ ತಯಾರಿದೆ" ಅಂತ ಹೋಟೆಲಿನ ಮುಂದಿಡುವ ಬೋರ್ಡಿನಂತೆ ಇಟ್ಟ ಆ ಬೋರ್ಡಿನಲ್ಲಿ "1A" ಅಂತ ದೊಡ್ಡದಾಗಿ ಬರೆದಿಟ್ಟಿದ್ದು ಕಾಣಿಸಿತು! ಅರೆ ಇದೇನು ಪ್ಲಾಟ್ ಫಾರ್ಮ್ 1A ಗೆ ಮಾತ್ರ ವಿಶೇಷ ಬೋರ್ಡು ಅಂತ ನಗು ಬಂದು, ಆ ಬೋರ್ಡು ಕಣ್ಣಿಗೆ ಬಿದ್ದಿದ್ದಕ್ಕೆ ಬಹಳ ಹೆಮ್ಮೆ ಪಟ್ಟುಕೊಳ್ಳುತ್ತಾ, ಅಲ್ಲೇ ಕಲ್ಲು ಬೆಂಚಿನಲ್ಲಿ ಆರಾಮವಾಗಿ ಆಸೀನಳಾದೆ..

ಬೆಳಿಗ್ಗೆ ಟೀಂ ಮೇಟ್ ಒಬ್ಬ ಪಯಣದ ನೆನಪುಗಳನ್ನು ಬಿಚ್ಚುತ್ತಾ ಹೇಳಿದ್ದು ನೆನಪಿಗೆ ಬಂದು ಹಾಗೆಯೇ ಒಂದು ನಗು ಮುಖದ ಮೇಲೆ ತೇಲಿ ಹೋಯಿತು - "ಅರ್ಧ ಘಂಟೆ ಮೊದಲು ರೈಲ್ವೇ ಸ್ಟೇಷನ್ ತಲುಪಿದ ಆತ ಬೇಗ ತಲುಪಿದ ಖುಷಿಯಲ್ಲಿ, ಹಾಗೂ ಆತ ಹೋಗಬೇಕಾಗಿರುವ ರೈಲು ಎದುರಲ್ಲಿ ನಿಂತಿರುವುದನ್ನು (ಬಾಗಿಲು ಮುಚ್ಚಿದ ಸ್ಥಿತಿಯಲ್ಲಿ) ನೋಡಿ ಆದ ಸಂತೋಷಕ್ಕೆ ಗೆಳೆಯನ ಜೊತೆ ಫೋನಿನಲ್ಲಿ ಮಾತಾಡತೊಡಗಿದನಂತೆ ! ಇನ್ನೇನು ಐದು ನಿಮಿಷಗಳಿದ್ದರೂ ಬಾಗಿಲು ತೆರೆಯದಾದಾಗ, ಆತ ವಿಚಾರಿಸಿದಾಗ ತಿಳಿಯಿತಂತೆ - ಅದೇ ಹೆಸರಿನ ಆತ ಹೋಗಬೇಕಾಗಿರುವ ರೈಲು, ಇನ್ನೊಂದು ಪ್ಲಾಟ್ ಫಾರ್ಮ್ ನಲ್ಲಿ ಇದೆ" ಅಂತ!! ಅಲ್ಲಿಗೆ ಓಡಿ ಹೋದಾಗ ರೈಲು ಮಿಸ್! ಅರ್ಧ ಗಂಟೆ ಮುಂಚೆ ಬಂದು ತಲುಪಿದ್ದಕ್ಕೆ, ನಂಗೂ ಇವತ್ತು ಏನಾದರೂ ಆ ಥರ ಆದ್ರೆ, ಅಂತ ಯಾಕೋ ಒಂದು ಯೋಚನೆ ಹಾಗೇ ಹಾದುಹೋಯಿತು ಮನದಲ್ಲಿ.

ನನ್ನ ಮನದ ಯೋಚನೆಯ ಸರಣಿಗೆ ಕಡಿವಾಣ ಹಾಕುವಂತೆ, ನಾನು ಕುಳಿತ ಬೆಂಚಿನಲ್ಲಿ ಬಂದು ಕುಳಿತ ಒಬ್ಬರು ಅಜ್ಜಿ ಹಾಗೂ ಅವರ ಮಗನ ಸಂಭಾಷಣೆ ನನ್ನ ಗಮನ ಸೆಳೆಯಿತು. ಅಜ್ಜಿಗೆ ತಾವು ನಿಂತಿರುವ ಪ್ಲಾಟ್ ಫಾರ್ಮ್ ಸರಿಯೋ ಅಲ್ವೋ ಅಂತ ತುಂಬಾ ಆತಂಕ. ಪದೇ ಪದೇ ಮಗನಿಗೆ ವಿಚಾರಿಸಿ ಬರಲು ಹೇಳುತ್ತಿದ್ದರು. ಮಗನಿಗೋ ಒಂಥರಾ ಅಸಡ್ಡೆ. ಕೊನೆಗೆ ಮೇಲೆ ತೂಗು ಹಾಕಿದ್ದ ಬೋರ್ಡು ತೋರಿಸಿ ಸಮಜಾಯಿಸಿದ. ಅದರ ನಂತರ ಅಜ್ಜಿಗೆ ಸ್ವಲ್ಪ ಸಮಾಧಾನವಾದಂತೆ ಕಂಡು ಬಂತು. ಅಷ್ಟು ಹೊತ್ತು ಅಜ್ಜಿಯ ನಿರಂತರ ಮಾತುಗಳಿಗೆ ಬೇಸತ್ತರಿಂದಲೋ ಏನೋ, ಸ್ವಲ್ಪ ಆ ಕಡೆ ಹೋಗಿ ಬರುವೆ ಎಂದು ಮಗ ಜಾಗ ಖಾಲಿ ಮಾಡಿದ. ತದನಂತರ ಅಜ್ಜಿ ನನ್ನೆಡೆಗೆ ತಿರುಗಿ ಮಾತು ಆರಂಭಿಸಿದರು. "At what time is your bus" ಅಂತ ಕೇಳಿದ್ರು. ನಂಗೆ ಅಜ್ಜಿ ಇಂಗ್ಲಿಷ್ ನಲ್ಲಿ ಮಾತಾಡಿದ್ದು ಕೇಳಿ ಆಶ್ಚರ್ಯ ಹಾಗೂ ಸ್ವಲ್ಪ ಹೆಮ್ಮೆ ಆಯಿತು. ಪರ್ವಾಗಿಲ್ವೆ, ಜಾಗತೀಕರಣದ ಪ್ರಭಾವ ಹಿರಿ ತಲೆಮಾರಿಗೂ ಪಸರಿಸಿದೆ ಅಂತ ಅಂದುಕೊಂಡೆ! ಆದರೆ, ಇನ್ನು ಈ ಅಜ್ಜಿ ನನ್ನ ಪ್ಲಾಟ್ ಫಾರ್ಮ್ ಹಾಗೂ ಬಸ್ಸಿನ ಬಗ್ಗೆ ಚಿಂತೆ ಶುರು ಮಾಡ್ತಾರೆನೋ ಅಂತ ಸ್ವಲ್ಪ ಕಿರಿ ಕಿರಿಯೂ ಅನಿಸಿತು ಮನದಲ್ಲಿ. ಅದಕ್ಕೆ ಚಿಕ್ಕವಾಗಿ ಚೊಕ್ಕವಾಗಿ "10.10" ಅಂದೆ. ಅಜ್ಜಿ ಅಷ್ಟಕ್ಕೇ ಬಿಡದೆ "What is your destination?" ಅಂತ ಕೇಳಿದ್ರು. ಈಗ ನಾನೂ ಕೇಳದೆ ಇದ್ರೆ ಅವ್ರು ಬೇಜಾರಾಗ್ತಾರೆ, ಅಂದುಕೊಳ್ಳುತ್ತಾ, "Udupi, How about yours?" ಅಂತ ಕೇಳಿದೆ. ಅದಕ್ಕೆ ಪ್ರತಿಯಾಗಿ ಅವರು "Mumbai, Which is your platform?" ಅಂತ ಮತ್ತೆ ಪ್ರಶ್ನೆ ಎಸೆದರು. ಅಯ್ಯೋ ಇವರಿನ್ನು ಪ್ರಶ್ನೆಗಳ ಸುರಿಮಳೆ ಆರಂಭಿಸ್ತಾರೆ ಅಂತ "1A" ಎಂದು ಉತ್ತರ ನೀಡಿ ಮಾತು ನಿಲ್ಲಿಸಿದೆ. ಆದರೆ ಅಜ್ಜಿ ನಿಲ್ಲಿಸಲಿಲ್ಲ! "I think your platform is that side. See the board there; Its written - Platform 1A --- > Near Mysore Mallige platform" ಅಂತ ಅಂದ್ರು. ಆಗಲೇ ನಾನು ಆ ಬೋರ್ಡನ್ನು ಕಣ್ಣು ಬಿಟ್ಟು ನೋಡಿದ್ದು!! ಕೆಳಗಿನ ಸಾಲನ್ನು ನಾನು ಓದಿರಲೇ ಇಲ್ಲ. ಸಮಯ ಆಗಲೇ ಹತ್ತು ಸಮೀಪಿಸುತ್ತಿತ್ತು. ಕೂಡಲೇ ನಾನು ಎದ್ದು, ಅತ್ತ ಕಡೆ ಧಾವಿಸಿದೆ. ಉಡುಪಿಗೆ ಹೋಗುವ ಐರಾವತ ವಾಹನಗಳೆಲ್ಲ ಸಾಲಾಗಿ ಅಲ್ಲಿ ನಿಂತಿದ್ದವು. ನನ್ನ ಬಸ್ಸು ಕೂಡ ಬಂದು ನಿಂತಿತ್ತು! ಟಿಕೆಟ್ ತೋರಿಸಿ ಬಸ್ಸು ಹತ್ತಿ ನನ್ನ ಆಸನದಲ್ಲಿ ಕೂತು, ಒಮ್ಮೆ ನಿಟ್ಟುಸಿರು ಬಿಟ್ಟೆ.

ಆಗಲೇ ನೆನಪಾಗಿದ್ದು "ಅಯ್ಯೋ, ಆ ಅಜ್ಜಿಗೆ ಒಂದು ಥ್ಯಾಂಕ್ಸ್ ಕೂಡ ಹೇಳಲಿಲ್ಲವಲ್ಲಾ" ಎಂದು! ಕೂಡಲೇ ಇಳಿದು ಹೋಗಿ ಒಂದು ಹೃತ್ಪೂರ್ವಕ ಧನ್ಯವಾದ ಹೇಳಿ ಬರೋಣ ಅಂದುಕೊಂಡು ಗಡಿಯಾರ ನೋಡಿದರೆ, ಆಗಲೇ ಸಮಯ ಹತ್ತು ಹತ್ತು ಸಮೀಪಿಸುತ್ತಿತ್ತು. ಯಾಕೋ, ಗಡಿಯಾರದ ಆ ನಗು ಮುಖ ನನ್ನನ್ನು ನೋಡಿ ಅಣಕಿಸಿದಂತಾಯಿತು!

Tuesday, March 16, 2010

ಆರಂಭ


ಹೊಸ ವರುಷದ ನವ ವಸಂತಕೆ
ನೂತನ ಬದುಕಿನ ನವೀನ ಚಿತ್ರಕೆ
ಜೊತೆಸೇರಿ ನಾವು ರೇಖೆ ಎಳೆಯೋಣ
ಸುಂದರ ನಕಾಶೆಯ ಸಿದ್ಧಪಡಿಸೋಣ
ರಂಗುಗಳ ಸಂಗ್ರಹವ ಆರಂಭಿಸೋಣ

ಮಾಮರದ ಹೊಚ್ಚ-ಹೊಸ ಚಿಗುರಿಗೆ
ಚೈತ್ರದ ಮಧುರ ಬಿಸಿಲ ಝಳಕೆ
ಕೋಗಿಲೆ ನಲಿಯುತಾ ಹಾಡಿರಲು
ನನ್ನೆದೆಯ ತುಂಬಾ ಕಾರಂಜಿ ನರ್ತನ
ತಂಪನೆರೆವ ನಿನ್ನ ಸಾಮೀಪ್ಯದ ಪುಳಕಕೆ

ಸಾಗೋಣ ಬಾ ನಾವಿನ್ನು ಜೊತೆಯಾಗಿ
ಜೀವನ ತೇರಿನ ಜೋಡಿ ಹಯವಾಗಿ
ಚೈತ್ರದ ಚಂದ್ರಮ ನಮಗಾಗಿ ಕಾದಿಹನು
ಬೆಳಕ ಸೂಸುತಾ ಸ್ವಾಗತ ಕೋರಿಹನು
ನಮ್ಮ ಸಂಗಮಕೆ ಕಾಯುತಿಹನು

ನಾವು ಜೊತೆಗಿರುವ ಕ್ಷಣಗಳೆಲ್ಲಾ
ಅಂತ್ಯವಿಲ್ಲದ ಯುಗಗಳಾಗಲಿ
ನಾನಾಗುವೆನು ಯುಗಾದಿ
ನೀನಾಗು ಯುಗಪುರುಷ
ಕೂಡಿ ಹಾಡೋಣ ಬಾ
ನಮ್ಮ ಬಾಳ ಯುಗಳ ಗೀತೆಯನು