Sunday, November 16, 2025

ಗಣೇಶ ಹಬ್ಬ

ಗೌರಿ ಗಣೇಶ ಹಬ್ಬ ಬಂತೆಂದರೆ

ಬಾಲ್ಯದಲಿ ನಮಗೆ ಇನ್ನಿಲ್ಲದುತ್ಸಾಹ

ಎಲ್ಲರೂ ಸೇರಿ ನಲಿಯುವ ಸಡಗರ

ಮನೆ ಮನವೆಲ್ಲಾ ಸಂತಸದ ಆಗರ!


ಬೆಳ್ಳಂಬೆಳಗ್ಗೆ ಹೋಗಿ ಶಿಲ್ಪಿಯ ಮನೆಗೆ

ನಮ್ಮನೆ ಗಣಪನ ಹುಡುಕಿ ಕೊನೆಗೆ

ದೃಷ್ಟಿಯ ಚಿತ್ರಿಸಿ ಕೊಡುವರು ನಮಗೆ

ಮತ್ತೆ ಜಾಗಟೆ ವಾದ್ಯದ ಮೆರವಣಿಗೆ


ಮನೆಯಲಿ ಸುಂದರ ಕಬ್ಬಿನ ಮಂಟಪ

ಅದರಲಿ ಕೂತಾಗ ನಮ್ಮ ಮುದ್ದುಗಣಪ

ತನು ಮನವೆಲ್ಲಾ ನವಿರಾದ ಪುಳಕ

ಗಣಪನ ಸುತ್ತ ಲೈಟುಗಳ ಚಕಮಕ 


ಗಣಪನ ಹಬ್ಬವೆಂದರೆ ಭೂರಿ ಭೋಜನ

ಬಗೆಬಗೆ ಉಂಡೆ ಮೋದಕ ಪಂಚಕಜ್ಜಾಯ

ಎಲ್ಲರೂ ಸೇರಿ ಮಾಡುತಿರೆ ಕೆಲಸ-ಸೇವೆ

ನಡೆಯುವುದು ಸಕಲವೂ ಸರಾಗವಾಗಿ..


ಸಂಜೆಯಾದೊಡೆ ನಮಗೆ ನವ ಚೈತನ್ಯ

ಊರ ದೇವಳವೆಲ್ಲಾ ಸುತ್ತಿ ನಾವು ಧನ್ಯ

ಮತ್ತೆ ಬಂದು ಗಣಪನ ಮುಂದೆ ತಲೆಬಾಗಿ

ಹಾಡುವೆವು ಭಜನೆ ಎಲ್ಲರೂ ಒಂದಾಗಿ..


ರಾತ್ರಿಯಾದಂತೆ ಒಂದು ವಿಚಿತ್ರ ತವಕ

ವಿಸರ್ಜನೆ ಪೂಜೆಯಲಿ ಏನೋ ಆತಂಕ!

ಮಣ್ಣಿನ ಗಣಪ ಮತ್ತೆ ಮಣ್ಣಾಗುತಿರಲು

ಕಣ್ಣಿನಣೆಕಟ್ಟು ದಾಟಿ ಹನಿ ಜಾರುತಿತ್ತು!!

 


No comments:

Post a Comment