Sunday, December 26, 2010

ಇಲ್ಲ !!

ಮಂಜು ಕವಿದಿದೆ ಎಲ್ಲೆಡೆ
ದಾರಿ ತಿಳಿಯುತಿಲ್ಲ
ಭಾವ ಜೀವ ತಳೆಯುತಿಲ್ಲ

ವಸಂತವಿನ್ನೂ ದೂರವಿದೆ
ಹಸಿರ ಚಿಗುರು ಕಾಣುತಿಲ್ಲ
ಕೋಗಿಲೆ ಹಾಡುತಿಲ್ಲ

ತಂಪನೆ ಚಳಿ ಕೊರೆಯುತಿದೆ
ಇನಿಯ ಸನಿಹದಲಿಲ್ಲ
ರಸಿಕತೆಯ ಸುಳಿವಿಲ್ಲ

ಹಾಸಿ ಹೊದೆವಷ್ಟು ರಾಶಿ ಕೆಲಸ
ಭಾವನೆಗೆ ಸಮಯವಿಲ್ಲ
ಹಾಡಿಗೆ ಕೊನೆಯಿಲ್ಲ !

Friday, October 1, 2010

ಯಾಕಿದು ಹೀಗಾಯ್ತು?














ಯಾಕಿದು ಹೀಗಾಯ್ತು?
ಮೈಯ ಶಕ್ತಿಯೆಲ್ಲ ಯಾರೋ ಕಿತ್ತೊಯ್ದಂತೆ
ಒಳಗಿನ ಚಿಲುಮೆಯೆಲ್ಲ ಬತ್ತಿ ಹೋದಂತೆ
ಬದುಕಿನ ಬಗ್ಗೆ ಭಯ ಹುಟ್ಟಿದಂತೆ
ಸಮಯ ಸಾಗದೆ ನಿಂತಂತೆ
ಕನಸಿನಲ್ಲಿ ಸಾವಿನ ಕದವ ಕಂಡಂತೆ

ಯಾಕಿದು ಹೀಗಾಯ್ತು?
ಮೊನ್ನೆ ಲಾಂಗ್ ಲೀವ್ ಎಂದು ಖುಷಿಯಿಂದ
ನಾ ಬೀಗುತಿರೆ - ಯಾರದ್ದೋ ದೃಷ್ಟಿ ತಾಕಿತಾ?
ಅಥವಾ ಅಂದು ತಲೆ ಮೇಲೆ ಕಾಗೆ ಹಾರಿದ್ದು
ಅದರ ಬಗ್ಗೆ ಗೂಗಲ್ಲು ಮಾಡಿ ಓದಿದ್ದು
ಆ ಶಕುನ ಶಾಸ್ತ್ರ ನಿಜವಾಗುತ್ತಿದೆಯಾ?

ಯಾಕಿದು ಹೀಗಾಯ್ತು?
ನಾನೊಬ್ಬಳೆ ಸಾಗುತಿರೆ ಆ ಕದದತ್ತ
ಎಲ್ಲೆಡೆಯಿಂದ ಅಮ್ಮ ಅಪ್ಪ ಮತ್ತೆಲ್ಲರೂ
ನನ್ನ ಹಿಂದೆ ಹಿಂದಕೆ ಎಳೆಯುತ್ತಿದ್ದರೂ
ಇಚ್ಛೆಯಿಲ್ಲದ ಪ್ರಚ್ಚನ್ನ ಶಕ್ತಿಯೊಂದು
ಸೆಳೆಯುತ್ತಿತ್ತೆ ನನ್ನನ್ನು ಮುಂದು?

ಯಾಕಿದು ಹೀಗಾಯ್ತು
ಎಂದು ನಾ ಹೆಜ್ಜೆಯಿಡುತಾ ಹೋಗಲು
ಸಾಗುತ್ತಾ ಆ ಗುರಿಯ ಬಳಿ ತಲುಪಲು
ತೆರೆದಂತಿದ್ದ
ಕದ ಪೂರ್ತಿ ಮುಚ್ಚಿ ಹೋಗಲು
ಅದೆಷ್ಟು ಹುಡುಕಿದರೂ ಕದ ಕಾಣದಿರಲು


ನಿದ್ದೆಯಿಂದ ನಾ ಎದ್ದು ಕೂತಿದ್ದೆ
ಸಂಪೂರ್ಣವಾಗಿ ಬೆವತು ಹೋಗಿದ್ದೆ
ಆ ದಿನದಿಂದ ನಾ ಚೇತರಿಸುತಿದ್ದೆ
!!

Tuesday, August 17, 2010

ಕೊಡಚಾದ್ರಿಯಲ್ಲಿ...

ಕೆಲ ತಿಂಗಳ ಹಿಂದೆ ಗೆಳತಿ ಭವ್ಯಾಳ ಟ್ರಿಪ್ ಫೋಟೋಗಳನ್ನು ನೋಡುತ್ತಿದ್ದಾಗ ತುಂಬಾ ಖುಷಿಯಾಗಿತ್ತು. ಘಾಟಿಕಲ್ಲಿನ ರಮಣೀಯ ದೃಶ್ಯಗಳನ್ನು ನೋಡುತ್ತಿದ್ದಂತೆ ಮನಸ್ಸು ಗರಿ ಬಿಚ್ಚಿ ಕುಣಿದಾಡಿತ್ತು. ಆಗಾಗ ಇಂಥ ಸುಂದರ ಸ್ಥಳಗಳಿಗೆ ಟ್ರಿಪ್ ಹೋಗುತ್ತಲೇ ಇರುವ ಗೆಳತಿಯ ಅದೃಷ್ಟದ ಬಗ್ಗೆ ನೆನೆಯುತ್ತಾ, ಜೊತೆಗೆ ಹೋಗಲು ಇಂಥದೊಂದು ಸ್ನೇಹಿತರ ಗುಂಪು ನನಗೆ ಇಲ್ಲವಲ್ಲ ಅಂತ ಸ್ವಲ್ಪ ಬೇಸರಿಸಿದ್ದೆ. ಆಕೆಯಾದರೋ, ಆಫೀಸು ಶಟಲ್ ನವರ ಗುಂಪಿನೊಂದಿಗೆ ಒಮ್ಮೆ ಹೋದರೆ, ಇನ್ನೊಮ್ಮೆ ಅವಳದೇ ಜೊತೆ ಆಫೀಸು ಸೇರಿದ್ದ ಬ್ಯಾಚ್ ಮೇಟ್ ಗಳ ಜೊತೆ, ಮಗದೊಮ್ಮೆ ಆಫೀಸು ಪ್ರಾಜೆಕ್ಟ್ ಟೀಮ್ ಜೊತೆ ಆಫಿಶೀಯಲ್ ಟ್ರಿಪ್ ಕಣೆ ಅಂತ ಒಂದರ ಹಿಂದೆ ಒಂದರಂತೆ ಟ್ರಿಪ್ಪು ಹೋದದ್ದೇ ಹೋದದ್ದು. ನಾವೆಲ್ಲ ಬರೀ ಕತೆ ಕೇಳಿದ್ದೇ ಕೇಳಿದ್ದು. ಇನ್ನೆಷ್ಟು ಕತೆ ಕೇಳುತ್ತಾ ಕೂರೋದು ಅಂತ ಒಂದು ದಿನ ಅನಿಸಿ 'ಲೇ ನಾವೂ ಒಂದು ಪ್ಲಾನ್ ಮಾಡಿ ಟ್ರಿಪ್ ಗೆ ಹೋಗೋಣ ಕಣೆ' ಅಂದೆ. ಕಾಲೇಜಲ್ಲಿ ತೀರ ಜಾಸ್ತಿ ಜನರೊಡನೆ ಬೆರೆಯದ ನಮಗೆ ಅಷ್ಟೊಂದು ದೊಡ್ಡ ಸ್ನೇಹಿತರ ಗುಂಪು ಇಲ್ಲ :( ಹಾಗಾಗಿ, ಭವ್ಯಾಳ ಆಫೀಸು ಗುಂಪು ಹಾಗೂ ನಮ್ಮದೊಂದು ಪುಟ್ಟ ಗುಂಪು ಸೇರಿ ಟ್ರಿಪ್ ಹೋಗುವುದು ಅಂತ ನಿರ್ಧಾರವಾಯಿತು.

ಶುಕ್ರವಾರ ರಾತ್ರಿ ಅದೆಷ್ಟು ಬೇಗ ಹೊರಡಬೇಕು ಅಂದುಕೊಂಡರೂ, ನಮ್ಮ ಗಾಡಿ ಬೆಂಗಳೂರು ಬಿಡುವಾಗ ಗಂಟೆ ಹತ್ತು ದಾಟಿತ್ತು. ಕುಡಿದರೆ, ಯಾವ ದಿಕ್ಕಿನಿಂದಲೂ ನಿದ್ದೆ ಸುಳಿಯದೇ, ಎಚ್ಚರವಾಗಿಡುವ (ರೆಡ್ ಬುಲ್ ನ ಜಾಹೀರಾತು ಅಲ್ಲ; ತಪ್ಪು ತಿಳಿಯಬೇಡಿ!) ರೆಡ್ ಬುಲ್ ಅನ್ನು ಇಡೀ ರಾತ್ರಿ ಜಾಗರಣೆ ಮಾಡುವ ಸಲುವಾಗಿ ಕುಡಿಯಲು ತಂದಿದ್ದರು. ಜೊತೆಗೆ ಮುಗಿಯದಷ್ಟು ಹಾಡುಗಳು. ಅವೂ ಕನ್ನಡ ಹಾಡುಗಳು :-) ಎರಡು ದಿನದ ಪ್ರವಾಸದಲ್ಲಿ ತುಂಬಾ ಖುಷಿ ಕೊಟ್ಟದ್ದೆಂದರೆ ಕನ್ನಡ! ಎಲ್ಲರೂ ಕನ್ನಡಿಗರೇ ಇದ್ದಿದ್ದರಿಂದ ಬೇರೆ ಭಾಷೆಯಿಂದ ವಿಮುಕ್ತರಾಗಿ ಇರುವಂತಾಯಿತು. ಆಫೀಸು, ಹಾಸ್ಟೆಲ್ಲು ಎಲ್ಲೆಂದರಲ್ಲಿ ಕನ್ನಡವನ್ನು ಕೇಳದೆ, ಕನ್ನಡಕ್ಕಾಗಿ ಕಾತರಿಸುವ ಕಿವಿಗಳು ಎರಡು ದಿನ ಕನ್ನಡ ಹಾಡು ಮಾತು ಎಲ್ಲಾ ಕೇಳಿ ಕೇಳಿ ತಂಪುಗೊಂಡವು. ಅಂತೂ ಇಂತೂ ದಾರಿ ಕೇಳಿ ಕೇಳಿ ಶಿವಮೊಗ್ಗ ಅಯ್ಯನೂರು ದಾಟಿ ಕೊಡಚಾದ್ರಿ ತಲುಪುವಾಗ ಬೆಳಗ್ಗೆ ಎಂಟು ಗಂಟೆಯಾಗಿತ್ತು. ರೆಸಾರ್ಟ್ ಎಂಬ ಹೆಸರು ಮನಸ್ಸಲ್ಲಿ ಕೂತು, ನಮ್ಮ ನಮ್ಮದೇ ಆದ ರಮ್ಯ ಕಲ್ಪನೆಗಳಿದ್ದವು. ಆದರೆ ಅಲ್ಲಿ ಹೋಗಿ ನೋಡಿದಾಗ ತಿಳಿಯಿತು ಅದು ಮೂಲಭೂತ ಅಗತ್ಯಗಳಷ್ಟೇ ಇರುವ 'ನಿಸರ್ಗಧಾಮ' ಎಂದು. ಎರಡು ಕಾಟೇಜ್ ಗಳು ಬೇಕು ಎಂದು ಮೊದಲೇ ಹೇಳಿದ್ದ ನಮಗೆ ಒಂದು ಮಾತ್ರ ಸಿಕ್ಕಿದ್ದು ಸ್ವಲ್ಪ ಅಸಮಾಧಾನಕ್ಕೆ ಕಾರಣವಾಯಿತು (ಸಂಜೆ ಹೊತ್ತಿಗೆ ಎರಡು ಸಿಕ್ಕಿತ್ತು). ಮತ್ತೊಂದು ತೊಂದರೆ ಆದದ್ದು - ಮಳೆ ಬಿದ್ದು, ಮೆದುವಾಗಿ, ಕಾಲಿಟ್ಟಲ್ಲೆಲ್ಲಾ ಜಾರಿ ಬೀಳುವಂತಿದ್ದ ಕೆಂಪು ಮಣ್ಣಿನ ನೆಲದಿಂದ. ಹಲವರೆಲ್ಲ ಜಾರಿ ಬಿದ್ದು, ಕೂಡಲೇ ಏಳಲು ಹೋಗಿ ಮತ್ತೆ ಮತ್ತೆ ಬಿದ್ದು ಉಳಿದವರಿಗೆ ಮನೋರಂಜನೆ ಒದಗಿಸುವಂತಾಯಿತು. ಒಮ್ಮೆಯೂ ಬೀಳದವರು ಬಿದ್ದ ಕೂಡಲೇ, ಅಷ್ಟರವರೆಗೆ ಬಿದ್ದವರಿಗೆಲ್ಲ ಖುಷಿಯೋ ಖುಷಿ - ನಮ್ಮ ಗುಂಪಿಗೆ ಒಂದು ಜನ ಸೇರ್ಪಡೆ ಆಯ್ತು ಅಂತ! ಜೋರಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗಾಳಿಪಟ ಫಿಲ್ಮ್ ನಲ್ಲಿ ಹೇಳಿದ ಹಾಗೆ 'ಈ ಊರೆಲ್ಲ ಬಚ್ಚಲ ಮನೆ ಥರ ಕಣ್ರೋ' ಅನ್ನೋ ಮಾತು ನಮ್ಮ ಗುಂಪಿನಲ್ಲಿ ಕೇಳಿ ಬಂತು. ಅಲ್ಲಿ ತಲುಪಿದ ದಿನ ಬೆಳಗ್ಗೆ, ಆ ಮಳೆ ಚಳಿಯಲ್ಲಿ ತಣ್ಣೀರು ಸ್ನಾನ ಮಾಡುವ ಸೌಭಾಗ್ಯ ನಮಗೆ ಒದಗಿ ಬಂತು. ಕೆಲವರಂತೂ ಸ್ನಾನ ಮಾಡಬೇಕೆ ಬೇಡವೇ ಎಂದೂ ಯೋಚಿಸುವಂತಾದರು! ಅಂತೂ ಇಂತೂ ಹೇಳಿದ ಸಮಯಕ್ಕೆ ತಯಾರಾಗಿ ಕೂತರೆ, ಚಾರಣ ಆರಂಭಿಸಲು ನಮ್ಮನ್ನು ಕಾಡಿನೊಳಗೆ ಒಂದು ಸ್ಥಳದವರೆಗೆ ಕರಕೊಂಡು ಹೋಗಬೇಕಾದ ಜೀಪ್ ಬರಲೇ ಇಲ್ಲ. ಎಲ್ಲರೂ ಅಲ್ಲೇ ನಿದ್ರೆ ಹೋದರು. ಎಲ್ಲರದ್ದೂ ಒಂದು ಕೋಳಿ ನಿದ್ದೆ ಆಗುವ ಹೊತ್ತಿಗೆ ಜೀಪ್ ಬಂತು. ಇದ್ದೆಲ್ಲ ಚೈತನ್ಯವನ್ನು ಒಗ್ಗೂಡಿಸಿಕೊಂಡು ಚಾರಣಕ್ಕೆ ಹೊರಟೆವು.

ಚಾರಣದ ಆರಂಭದಲ್ಲಿ ಎಲ್ಲರಿಗೂ ಲಾಲಿಪಾಪ್ ಥರ ಒಂದು ಕಡ್ಡಿಗೆ ಉಪ್ಪು ಸುಣ್ಣವನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಅದನ್ನು ನೀಲಗಿರಿ ಎಣ್ಣೆಯಲ್ಲಿ ಅದ್ದಿ ಕೊಟ್ಟಿದ್ದರು. "ಲೀಚ್ ಎಲ್ಲಾದ್ರೂ ಕಾಲ ಮೇಲೆ ಹತ್ತಿದ್ರೆ, ಇದ್ರಿಂದ ಸರಿಸಿ ಬಿಡಿ, ಹೋಗ್ಬಿಡುತ್ತೆ" ಅಂತ ಉಪಾಯ ಹೇಳಿಕೊಟ್ಟಾಗ ಮುದ್ದಾದ ಬಿಳಿ ಪಾದಗಳ ಲಲನೆಯರ ಮುಖದಲ್ಲೆಲ್ಲಾ ಏನೋ ಒಂದು ಭಯ ಮಿಶ್ರಿತ ಸಮಾಧಾನ. ೬ ಕಿ.ಮೀ. ಹತ್ತೋದು, ಮತ್ತೆ ೬ ಕಿ.ಮೀ. ಇಳಿಯೋದು, ಒಟ್ಟು ಹನ್ನೆರಡು ಕಿ.ಮೀ. ಗಳ ಚಾರಣ ಎಂಬ ಯೋಚನೆ ಮನದಲ್ಲಿ ಕೂತಿದ್ದರಿಂದಲೋ ಏನೋ, ಪ್ರತಿ ಹತ್ತು ನಿಮಿಷಕ್ಕೊಮ್ಮೆ, ಈಗೆಷ್ಟು ಕಿ.ಮೀ. ಬಂದಿದೀವಿ ಅಂತ ಚಿಕ್ಕ ಮಕ್ಕಳ ಥರ ಜೊತೆಯಲ್ಲಿದ್ದ ಗೈಡ್ ಹತ್ತಿರ ಒಮ್ಮೊಮ್ಮೆ ಒಬ್ಬೊಬ್ಬರು ಕೇಳುತ್ತಿದ್ದಾಗ ಅವರ ಮುಖದಲ್ಲಿ ಸುಂದರ ನಗು ಅರಳುತ್ತಿತ್ತು. 'ಯಾಕ್ರೀ ಆಗ್ಲೇ ಸುಸ್ತಾಯ್ತಾ' ಅಂತ ಅವ್ರು ಕೇಳಿದ್ರೆ ಮತ್ತೆ ಇಪ್ಪತ್ತು ನಿಮಿಷ ನಾವು ಆ ಪ್ರಶ್ನೆ ಕೇಳ್ತಿರಲಿಲ್ಲ. ಮೊದಲ ೧.೫ - ೨ ಕಿ.ಮೀ ಗಳ ನಡಿಗೆ ತುಂಬಾ ತ್ರಾಸದಾಯಕ ಅನಿಸಿತ್ತು. ಆಮೇಲೆ ಅದು ಹೇಗೋ ಹೊಂದಿಕೊಂಡು ಬಿಟ್ಟಿತು. ಆರಂಭದಲ್ಲಿ ಬರೀ ಕಡಿದಾದ ಸಣ್ಣ ಹಾದಿ ಇದ್ದರೆ, ಮುಂದೆ ಮುಂದೆ ಹೋದಂತೆ ಸ್ವಲ್ಪ ಇಳಿಜಾರು, ಮತ್ತೆ ಸ್ವಲ್ಪ ಹರಿಯುವ ನೀರು, ಇನ್ನೊಂದು ಕಡೆ ಸಮತಟ್ಟು ಹೀಗೆ ವೈವಿಧ್ಯಮಯವಾಗಿ ದಾರಿ ಸಾಗುತ್ತಿದ್ದುದರಿಂದ ಅಷ್ಟೊಂದು ತ್ರಾಸವಾಗಲಿಲ್ಲ. ಮೇಲೆ ಮೇಲಕ್ಕೆ ಹೋದಂತೆ ಒಂಥರಾ ವಿಶೇಷವಾದ ಅನುಭವ! ಒಂದು ಹಂತದವರೆಗೆ, ಮುಚ್ಚಿದ ಗಿಡ ಮರಗಳಿದ್ದ ಹಾದಿಯಲ್ಲಿ ಸಾಗುತ್ತಿದ್ದ ನಾವು ಒಮ್ಮೆಲೇ ತೆರೆದ ಪ್ರದೇಶಕ್ಕೆ ಬಂದೆವು.. ಸುತ್ತಲೂ ಬಿಳಿಯ ಮೋಡ, ಮಸುಕು ಮಸುಕು ಮಂಜು. ತಂಪಾದ ಗಾಳಿ. ಮುಖಕ್ಕೆ ಸವಿ ಮುತ್ತನ್ನಿಕ್ಕುವಂತೆ ಸುರಿಯುವ ತುಂತುರು. ಓಹ್!! ಅದೆಂಥಾ ಅನಿರ್ವಚನೀಯ ಆನಂದ! ಹಲವರ ಬಾಯಿಂದ ಆನಂದ ಅಭಿವ್ಯಕ್ತಿಗೊಳಿಸುವ ಉದ್ಗಾರಗಳು ಹೊರಬಂದರೆ, ಇನ್ನು ಕೆಲವರು ಮೂಕ ವಿಸ್ಮಿತರಾಗಿ ಒಳಗೊಳಗೇ ಸಂತಸ ಅನುಭವಿಸುತ್ತಿದ್ದರು. ಈ ಸಂತಸಕ್ಕೆ ನೀರೆರೆಚುವಂತೆ ಮಧ್ಯೆ ಮಧ್ಯೆ ಲೀಚ್ ಗಳ ಕಾಟ- ಹುಡುಗಿಯರ ಆರ್ತನಾದ! ಹುಡುಗರಂತೂ 'ಅದೇನಪ್ಪ ನೀವು ಹುಡುಗಿಯರು, 'in-built siren system' ಜೊತೆಗೆ ಹುಟ್ಟಿರ್ತೀರಾ? ಅಂತ ಕಿಚಾಯಿಸೋದಕ್ಕೆ. ಇದೆಲ್ಲವುಗಳ ಜೊತೆ ಆರು ಕಿ.ಮೀ. ಗಳ ದೂರ ಸಾಗಿ ಕೊನೆಗೂ ತುತ್ತ ತುದಿ ಬಂತು. ಅಲ್ಲೊಂದು ಪುಟ್ಟ ದೇವಸ್ಥಾನ. ಅಲ್ಲಿ ನಮಗೆ ಊಟಕ್ಕೆ ವ್ಯವಸ್ಥೆಯಾಗಿತ್ತು. ಆದರೆ ಅಲ್ಲಿ ತಲುಪಿದಾಗಲೇ ತಿಳಿದಿದ್ದು - ಇನ್ನೂ ಮೇಲೆ ೧.೫ ಕಿ.ಮೀ. ಎತ್ತರ ನಡೆದರೆ ಶಂಕರಾಚಾರ್ಯರ ಪೀಠವಿದೆ ಅಲ್ಲಿವರೆಗೂ ನಡೆಯುವಿರಾ ಅಂತ ಪ್ರಶ್ನೆ ಬಂತು! ಅಷ್ಟು ದೂರ ಬಂದು ಇನ್ನು ಒಂದುವರೆ ಕಿ.ಮೀ. ಏನು ಮಹಾ ಅಂದು ಒಮ್ಮತವಾಗಿ ನಿರ್ಧರಿಸಿ ಮತ್ತೆ ಪಯಣ ಮುಂದುವರೆಸಿದೆವು. ಕೇರಳದಿಂದ ಕೊಲ್ಲೂರಿಗೆ ಬರುವ ಭಕ್ತರು ಕೊಡಚಾದ್ರಿ ಬೆಟ್ಟದ ಮೇಲಿರುವ ಈ ಪೀಠವನ್ನು ಸಂದರ್ಶಿಸಿಯೇ ಹೋಗುತ್ತಾರೆ ಎಂದು ಜೊತೆಯಲ್ಲಿರುವ ಗೈಡ್ ಹೇಳುತ್ತಿದ್ದರು. ಅಲ್ಲಲ್ಲಿ ಬಂಡೆಯ ಬಳಿ ವಿಶಿಷ್ಟವಾಗಿ ಕಾಣಿಸುವ ಗುರುತುಗಳನ್ನು ತೋರಿಸಿ "ಅದೆಲ್ಲಾ ಮೈನಿಂಗ್ ಗಾಗಿ ನಡೆಸಿದ ಪರೀಕ್ಷೆಗಳು. ಆದರೆ ನಾವು ಇಲ್ಲಿ ಗಣಿಗಾರಿಕೆ ನಡೆಯಲು ಖಂಡಿತಾ ಬಿಡುವುದಿಲ್ಲ, ಕೈಗಾರಿಕೀಕರಣ ಆಗುವುದೂ ಬೇಡ, ಇಲ್ಲಿನ ಪರಿಸರ ಮಲಿನವಾಗುವುದೂ ಬೇಡ" ಎಂದು ಬೇಸರ, ರೋಷದಿಂದ ಅವರು ಹೇಳುವಾಗ ಆ ಹಸಿರು ಪರಿಸರದ ಬಗೆಗಿನ ಕಾಳಜಿ ಪ್ರೀತಿ ಅವರ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು.

ಹದಿನೈದು ಕಿ.ಮೀ.ಗಳ ನಡಿಗೆ ಮುಗಿಸಿ ವಾಪಸ್ಸು ಬಂದಾಗ ನಿಸರ್ಗಧಾಮದ ಜೊತೆ ನಮಗೆ ಒಂದು ನಂಟು ಬೆಸೆದಿತ್ತು. ಇಡೀ ದಿನ ಜೊತೆಯಲ್ಲಿದ್ದ ಗೈಡು, ಬೆಳಿಗ್ಗೆ ಬಿದ್ದಾಗ, ಎದ್ದಾಗ ಬೇಕೆನಿಸಿದಾಗ ಸಹಾಯ ಮಾಡಿದ ನಿಸರ್ಗಧಾಮದ ಕೆಲಸದಾಳುಗಳು, ಅಲ್ಲಿನ ಸ್ಥಳ ಮಹಾತ್ಮೆಯನ್ನು ಅಚ್ಚ ಕನ್ನಡದಲ್ಲಿ ಸೊಗಸಾಗಿ ವಿವರಿಸುತ್ತಿದ್ದ ಮಂಜಣ್ಣ, ಹೀಗೆ ಎಲ್ಲರೂ ಆಪ್ತರಾಗಿದ್ದರು. ಕಾಲಿಟ್ಟರೆ ಜಾರಿಸದೆ ಕಾಪಾಡುವ ಅಲ್ಲಿನ ಹುಲ್ಲು, ಗುಡಿಸಿಲಿನಂತಹ ಕಾಟೇಜು, ಸಂಜೆ ಕೊಟ್ಟ ಬಿಸಿ ಬಿಸಿ ಪಕೋಡ, ಕಷಾಯ, ಕಾಫಿ, ಒಲೆಯಲ್ಲಿಯೇ ತಯಾರಾಗುವ ಅನ್ನ ಸಾಂಬಾರಿನ ರುಚಿ, ಬೆಳಿಗ್ಗೆ ತಿಂದ ಚಿತ್ರಾನ್ನ, ಕಡುಬಿನಲ್ಲಿದ್ದ ಎಲ್ಲಿಯೂ ಸಿಗದ ಮಧುರ ಸ್ವಾದ ಇವೆಲ್ಲವೂ ನಿಸರ್ಗಧಾಮದ ಜೊತೆಗಿನ ಮಧುರ ನಂಟಿಗೆ ಕಾರಣವಾಗಿದ್ದವು. ಮರುದಿನ ಅಲ್ಲಿಯೇ ಹತ್ತಿರದಲ್ಲಿರುವ ಶರಾವತಿ ಹಿನ್ನೀರಿನಲ್ಲಿ ಮನ ತಣಿಯೆ ಆಟವಾಡಿ, ಬೋಟಿಂಗ್ ಮಾಡಿ ಮಧ್ಯಾಹ್ನ ಮತ್ತೆ ಅಲ್ಲಿನ ರುಚಿ ಶುಚಿಯಾದ ಊಟವನ್ನು, ನಿಸರ್ಗಧಾಮದವರ ಪ್ರೀತಿಯ ಆತಿಥ್ಯದೊಂದಿಗೆ ಉಂಡು ಅವರ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಅಲ್ಲಿಂದ ಮತ್ತೆ ಬೆಂಗಳೂರಿಗೆ ಹೊರಟೆವು.

ನಂತರದ ದುಷ್ಪರಿಣಾಮಗಳು :
  • ಟ್ರಿಪ್ಪು ಮುಗಿಸಿ ಬಂದು ಅಲ್ಲಿ ಕೊಳಚೆ ರಾಡಿಯಾಗಿದ್ದ ಬಟ್ಟೆ ಒಗೆಯೋದು ಚಾರಣಕ್ಕಿಂತ ತ್ರಾಸದಾಯಕವಾಗಿತ್ತು.
  • ವಿಪರೀತವಾಗಿ ಅಂತ್ಯಾಕ್ಷರಿ ಆಟ ಆಡಿದ್ದರ ಪರಿಣಾಮವಾಗಿ, ಟ್ರಿಪ್ಪಿನ ನಂತರ ಅದ್ಯಾವ ಹಾಡು ಕೇಳಿದರೂ, 'ಛೆ ಈ ಹಾಡು ನೆನಪಿಗೆ ಬಂದಿಲ್ವಲ್ಲ ಆ ಅಕ್ಷರ ಬಂದಾಗ' ಅನ್ನುವ ಪಶ್ಚಾತ್ತಾಪ!

Monday, July 12, 2010

ಪತ್ರ ಸಂಭ್ರಮ


"ಪತ್ರ ಬರವಣಿಗೆ ಎಂದರೆ ಅದು ನೇರ ಹೃದಯದೊಂದಿಗಿನ ಸಂಭಾಷಣೆ" ಹೀಗೆಂದು ನಮ್ಮ ಕನ್ನಡ ಅಧ್ಯಾಪಕರು ಹೇಳಿದ್ದು ನನಗಿನ್ನೂ ನೆನಪಿದೆ. ಮುಖತಃ ಮಾತನಾಡುವಾಗ ಹೇಳಲಾಗದ್ದು, ಅಥವಾ ಮಾತನಾಡುವಾಗ ಹೇಳಿದರೆ ಅಸಹಜ ಎಂದೆನಿಸುವ ವಿಚಾರಗಳನ್ನು ಬರೆಯಲು ಸಾಧ್ಯವಾಗುವುದು ಪತ್ರದಲ್ಲಿ ಮಾತ್ರ! ಹಾಗೆಯೇ, ಅದನ್ನು ಓದುವವರಿಗೆ ಪತ್ರ ಕೊಡುವ ಅನುಭೂತಿ, ಸಂತೋಷ ಅದಮ್ಯವಾದದ್ದು. ಮುಂಚಿನ ದಿನಗಳಲ್ಲಿ ಸುದ್ದಿ ರವಾನೆಗೆ ಬಳಕೆಯಾಗುತ್ತಿದ್ದ ಪತ್ರ ಮಾಧ್ಯಮ, ಇಂದಿನ ದಿನಗಳಲ್ಲಿ ತಲೆ ಎತ್ತಿರುವ ಆಧುನಿಕ ಸಂಪರ್ಕ ಮಾಧ್ಯಮಗಳಿಂದಾಗಿ ತೆರೆ ಮರೆಗೆ ಸರಿದಿರುವುದು ಬೇಸರದ ವಿಷಯ! ಆದಾಗ್ಯೂ, ಪತ್ರ ಬರವಣಿಗೆ ನೀಡುವ ಸಂತಸವನ್ನು ಮನಗೊಂಡವರು ಅದರ ಮಹತ್ವವನ್ನು ಕೊಂಡಾಡುತ್ತಾರೆ.

ನಾನೂ ಇದಕ್ಕೆ ಹೊರತಲ್ಲ. ನಿಜ ಹೇಳಬೇಕೆಂದರೆ, ಪತ್ರ ಓದಿದಾಗ ಆಗುವ ಖುಷಿಗಿಂತ ಬರೆದಾಗ ಆಗುವ ಖುಷಿ ಅನುಭವಿಸಿದ್ದೆ ಜಾಸ್ತಿ ನಾನು. ಇತ್ತೀಚಿಗೆ ಟೀಮ್ ಮೇಟ್ ಒಬ್ಬ ಉನ್ನತ ವ್ಯಾಸಂಗಕ್ಕಾಗಿ, ಕೆಲಸಕ್ಕೆ ರಾಜೀನಾಮೆ ಕೊಟ್ಟು ನಮ್ಮನ್ನೆಲ್ಲಾ ಬೀಳ್ಕೊಡುವ ಸಂದರ್ಭ ಬಂತು. ವಿದಾಯದ ಸಮಯ ಯಾವಾಗಲೂ ಹೃದಯಸ್ಪರ್ಶಿ. ವಿದಾಯಗೊಂಡು ತೆರಳುತ್ತಿರುವವರಿಗೆ, ಬೀಳ್ಕೊಡುವವರು ನೆನಪಿನ ಕಾಣಿಕೆಯಾಗಿ ಏನಾದರೂ ಉಡುಗೊರೆ ಕೊಡುವುದು ವಾಡಿಕೆ. ಒಂದು ಚಂದದ ಕವನ ಬರೆದು ಕೊಡೋಣ ಅಂದುಕೊಂಡರೆ ವ್ಯಾಸಂಗಕ್ಕಾಗಿ ತೆರಳುತ್ತಿರುವ ಈ ಮಿತ್ರ ಕನ್ನಡಿಗನಲ್ಲ (ಇಂಗ್ಲೀಷ್ ನಲ್ಲಿ ಕವನ ಬರೆಯುವಷ್ಟು ಸಿದ್ಧಿ ನನಗಿಲ್ಲ!). ಆದರೆ ಸಾಹಿತ್ಯ ಸಂಗೀತ ಅಂತೆಲ್ಲಾ ಆಸಕ್ತಿ ಇಟ್ಟುಕೊಂಡಿರುವವ. ನಾನು ಕನ್ನಡದಲ್ಲಿ ಬರೆದಿರುವ ಕವನ ಲೇಖನಗಳನ್ನು ಇಂಗ್ಲೀಷ್ ನಲ್ಲಿ ಅನುವಾದ ಮಾಡಿಕೊಡು ಅಂತಲೋ ಅಥವಾ ಸಂಜೆ ಕಾಫಿ ಸಮಯದಲ್ಲಿ ಹೇಳಿಸಿಕೊಂಡೋ, ಖುಷಿಪಡುವ ಆತ್ಮೀಯ ಮಿತ್ರ ಹಾಗೂ ಸ್ವಭಾವತಃ ಭಾವಜೀವಿ. ಇಂತಹ ಮಿತ್ರನಿಗೆ ಒಂದು ಪತ್ರ ಬರೆದುಕೊಟ್ಟರೆ ಹೇಗೆ ಎಂಬ ಯೋಚನೆ ಮನದಲ್ಲಿ ಸುಳಿದಿದ್ದೆ ತಡ, ಅದನ್ನು ಕಾರ್ಯಗತಗೊಳಿಸಿದೆ. ನಮ್ಮ ಟೀಮ್ ನಲ್ಲಿ ನಾವೆಲ್ಲಾ ಜೊತೆಯಾಗಿ ಕಳೆದ ಮಧುರ ಕ್ಷಣಗಳು("ಇಂದು ನಿನಗೆ ನೆನಪಿದ್ದರೂ, ಮುಂದೊಂದು ದಿನ ನೀನು ಪತ್ರ ತೆಗೆದು ನೋಡಿದಾಗ ಓದಿ, ನೆನಪು ಮಾಡಿಕೊಂಡು ಖುಷಿ ಪಡುವಂತಾಗಬೇಕು" ಎಂಬ ಒಕ್ಕಣಿಕೆಯೊಂದಿಗೆ), ಆತನಲ್ಲಿ ಎಲ್ಲರೂ ಮೆಚ್ಚುವ ಅಂಶಗಳು, ಏನು ಸುಧಾರಿಸಿಕೊಳ್ಳಬಹುದು, ಎಂದೆಲ್ಲಾ ಉದ್ದಕ್ಕೆ ಬರೆಯುತ್ತಾ ಹೋಗಿ ಕೊನೆಯಲ್ಲಿ ಶುಭ ಹಾರೈಕೆಗಳೊಂದಿಗೆ ಮುಗಿಸಿದ ಭಾವ ತುಂಬಿದ ಪತ್ರವನ್ನು ಓದಿ, ನಿಜಕ್ಕೂ ನಾನಂದು ಕೊಂಡದ್ದಕ್ಕಿಂತ ಅದೆಷ್ಟೋ ಜಾಸ್ತಿ ಖುಷಿ ಪಟ್ಟುಕೊಂಡ. ಅಲ್ಲಿಗೆ ನನ್ನ ಪತ್ರ ಬರವಣಿಗೆ ಸಾರ್ಥಕವಾಯಿತು.

ಈ ಹಿಂದೆಯೂ, ಪತ್ರ ಓದಿದವರೆಲ್ಲರ ಖುಷಿ ನೋಡಿಯೇ ನಾನು ಖುಷಿ ಪಟ್ಟಿದ್ದು ಹೆಚ್ಚು! ಕಳೆದ ಜೂನ್ ನಲ್ಲಿ ತಂಗಿಯ ಹುಟ್ಟು ಹಬ್ಬದ ದಿನ ಆಕೆಗೆ ಪತ್ರ ಬರೆದಾಗ, ಅವಳೂ ತುಂಬಾ ಖುಷಿ ಪಟ್ಟಿದ್ದಳು. ನನ್ನ ಒಬ್ಬಳು ಗೆಳತಿಯಂತೂ, ನಂಗೂ ಒಂದು ಪತ್ರ ಬರಿಯೇ ಅಂತ ಕೇಳಿಕೊಂಡಿದ್ದಳು! ಪದವಿಯಲ್ಲಿದ್ದಾಗ ಅಜ್ಜಿಯ 75 ನೆಯ ಹುಟ್ಟುಹಬ್ಬಕ್ಕೆ ಏನಾದರೂ ಅಮೂಲ್ಯ ಉಡುಗೊರೆ ಕೊಡಬೇಕು ಅಂತ ಯೋಚಿಸುತ್ತಿದ್ದಾಗಲೂ, ದೂರದ ಬೆಂಗಳೂರಲ್ಲಿದ್ದ ನನಗೆ ಹೊಳೆದದ್ದು ಪತ್ರ ಬರೆಯುವ ಯೋಚನೆಯೇ! ಅಜ್ಜಿಯಂತೂ ಪತ್ರ ಓದಿದ ನಂತರ "ಕಣ್ ತುಂಬಿ ಬಂತು" ಅಂತ ಹೇಳಿದಾಗ, ಪತ್ರ ಬರಹ ಇಷ್ಟೊಂದು ಪರಿಣಾಮಕಾರಿಯೇ ಅಂತ ನನಗೆ ಅನಿಸಿದ್ದು ಸುಳ್ಳಲ್ಲ! ಮೊದಲ ಬಾರಿಗೆ ನಾನು ಪತ್ರ ಬರೆದಿದ್ದು ಪ್ರಥಮ ಪಿ.ಯು.ಸಿ.ಯ ರಜಾ ಸಮಯದಲ್ಲಿ(ಶಾಲೆಯಲ್ಲಿ ಪ್ರಬಂಧ-ಪತ್ರ ಲೇಖನ ಪುಸ್ತಕದಲ್ಲಿ ಹಾಗೂ ಪರೀಕ್ಷೆಯಲ್ಲಿ ಬರೆದದನ್ನು ಹೊರತುಪಡಿಸಿ!). ಹಾಸ್ಟೆಲಲ್ಲಿ ಇರುತ್ತಿದ್ದ ನನ್ನ ಗೆಳತಿಯೊಬ್ಬಳು ಕೊಪ್ಪದ ಕಾನೂರಿನವಳು. ದೂರವಾಣಿ ಇದ್ದರೂ, ಅಲ್ಲಿ ಅದು ಬಹಳ ಸಲ ಜೀವಂತ ಸ್ಥಿತಿಯಲ್ಲಿರುತ್ತಿರಲಿಲ್ಲವಂತೆ! ಆಗ ನಾವು ನೆಚ್ಚಿಕೊಂಡದ್ದು ಪತ್ರ ಸಂವಹನವನ್ನು. ಅಂಥಾ ಏನೂ ಮಹಾನ್ ವಿಚಾರಗಳು ಇರುತ್ತಿರಲಿಲ್ಲವಾದರೂ, ರಜಾ ಸಮಯವನ್ನು ಹೇಗೆ ಕಳೆಯುತ್ತಿದ್ದೆವು ಏನು ಮಾಡಿದೆವು ಎನ್ನುವುದನ್ನೇ ರಮ್ಯವಾಗಿ ಬಣ್ಣಿಸಿ ಪತ್ರ ಬರೆಯುತ್ತಿದ್ದೆವು. ಒಂದು ವಾರ ನನ್ನ ಸರದಿಯಾದರೆ ಮತ್ತೊಂದು ವಾರ ಅವಳದು. ಹೀಗೆ ಎರಡು ತಿಂಗಳು ರಜೆಯಲ್ಲಿ ಬಹುಶಃ ಒಟ್ಟು ಎಂಟು ಪತ್ರಗಳು ನಮ್ಮ ನಡುವೆ ವಿನಿಮಯಗೊಂಡಿವೆ! ಆ ಕಾಯುವಿಕೆ, ಓದುವಿಕೆಯಲ್ಲಿ ಒಂಥರಾ ಖುಷಿಯಿತ್ತು.

ಅಭಾವ ಉಂಟಾದಾಗ ಭಾವ ಜೀವ ತಳೆಯುತ್ತೆ ಅಂತ ದೂರದ ಅಮೇರಿಕಾದಲ್ಲಿರುವ ಶ್ರೀವತ್ಸ ಜೋಷಿಯವರು ಅವರ ಬರವಣಿಗೆಯ ಸ್ಫೂರ್ತಿಯ ಕಾರಣವನ್ನು ಒಂದೆಡೆ ಹೇಳಿದ್ದರು. ನಿಜವಾದ ಮಾತು..ಅಲ್ಲವೇ? ಪಿ. ಯು. ಸಿ ಯಲ್ಲಿ ಊರಲ್ಲೇ ಇದ್ದಾಗ ಅಷ್ಟೊಂದು ಶಾಲೆಯ ನೆನಪು ಮಾಡಿಕೊಳ್ಳದ ನಾನು, ಮುಂದೆ ಪದವಿಗೆಂದು ದೂರದೂರಿಗೆ ಬಂದ ಮೇಲೆ, ಶಾಲೆಯ ನೆನಪು ಮಾಡಿಕೊಂಡಿದ್ದು, ಶಾಲೆಗೆ ಭೇಟಿ ನೀಡಿದ್ದು ತುಂಬಾ ಸಲ! ಅಧ್ಯಾಪಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿ ಪತ್ರವೂ ಬರೆದಿದ್ದೆ. ಆ ಪತ್ರ ಓದಿ ಅವರಿಗೆಲ್ಲಾ ಆದ ಸಂತೋಷವನ್ನು ಆಗ ಅಲ್ಲಿ ಕಲಿಯುತ್ತಿದ್ದ ತಂಗಿಯ ಮೂಲಕ ತಿಳಿದುಕೊಂಡು ನಾನೂ ಖುಷಿ ಪಟ್ಟಿದ್ದೆ :-) ಆದರೆ ಮಕ್ಕಳ ದಿನಾಚರಣೆಗೆ ಶುಭಾಶಯ ಕೋರಿ ಅವರು ಬರೆದ ಪತ್ರ ಯಾವಾಗ ನನ್ನ ಕೈ ತಲುಪಿತೋ ಆಗ ಮಾತ್ರ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ನನಗೆ ಅನಿರ್ವಚನೀಯ ಖುಷಿ ಕೊಟ್ಟ ಪತ್ರ ಅದು. ಅದೆಷ್ಟು ಸಲ ಓದಿದ್ದೇನೋ ಲೆಕ್ಕವಿಲ್ಲ. ನಾನು ಪತ್ರ ಬರೆಯುವಾಗ "ನೀವು ನಗರ ಸಭಾಧ್ಯಕ್ಷರಿಗೆ ಪತ್ರ, ತಂದೆಗೆ ಪತ್ರ ಅಂತೆಲ್ಲ ಪತ್ರ ಲೇಖನ ಕಲಿಸಿದ್ದೀರ ಸರ್, ಆದರೆ ಶಿಕ್ಷಕರಿಗೆ ಪತ್ರ ಬರೆಯುವುದು ಹೇಳಿ ಕೊಟ್ಟಿರಲೇ ಇಲ್ಲ! ಹಾಗಾಗಿ ಈ ಪತ್ರಕ್ಕೆ ಅದೆಷ್ಟು ಅಂಕಗಳು ಸಲ್ಲುತ್ತವೋ ನಾ ತಿಳಿಯೆ!" ಎಂದು ಕನ್ನಡ ಅಧ್ಯಾಪಕರನ್ನು ಪ್ರೀತಿಯಿಂದ ದೂರಿ, ಆ ಪತ್ರದ ತಪ್ಪು ಒಪ್ಪುಗಳೇನಿದ್ದರೂ ಅವರಿಗೆ ಸಮರ್ಪಿತ ಅನ್ನುವಂತೆ ಕೊನೆಯಲ್ಲಿ ಬರೆದಿದ್ದೆ :-) ಅದಕ್ಕೆ ಪ್ರತಿಯಾಗಿ ನನ್ನ ಅಧ್ಯಾಪಕರು "ನಿನ್ನ ಪತ್ರ ಹತ್ತಕ್ಕೆ ಹತ್ತು ಅಲ್ಲ ಅದಕ್ಕೂ ಜಾಸ್ತಿ ಅಂಕಗಳಿಗೆ ಅರ್ಹವಾಗಿದೆ. ಮುಂದೊಂದು ದಿನ ಹೃದಯ ಬುದ್ಧಿಗಳೆರಡೂ ಒಂದಾಗಿ ಸುಂದರ ಪತ್ರಕ್ಕೆ ಕಾರಣವಾಗುತ್ತದೆ ದಿವ್ಯಾ, ಆ ಪತ್ರದ ಓದುಗ ನಿಜಕ್ಕೂ ಅದೃಷ್ಟವಂತ" ಅಂತೆಲ್ಲಾ ಹೇಳಿ ನನ್ನಲ್ಲಿ ಸಂತೋಷ, ನಾಚಿಕೆ, ಹೆಮ್ಮೆ ಎಲ್ಲಾ ಭಾವಗಳು ಜೊತೆಜೊತೆಗೆ ಜನಿಸುವಂತೆ ಮಾಡಿದ್ದರು.

'ಶುಭಾಶಯ ಪತ್ರ' ಬ್ಲಾಗ್ ಪೋಸ್ಟ್ ನಲ್ಲಿ 'ಚುಕ್ಕಿ ಚಿತ್ತಾರ' ಅವರು, 'ಕಳೆದು ಹೋಗುತ್ತಿರುವ ಪತ್ರ ಸಂಭ್ರಮವನ್ನು ಇಲ್ಲಿ ಬೆಳಗಿದ್ದೀರಿ' ಎಂದು ಅಭಿನಂದಿಸಿದ್ದರು. ಹೌದು! ಪತ್ರ ಬರವಣಿಗೆ/ಓದುವಿಕೆ ನಿಜಕ್ಕೂ ಒಂದು ಸಂಭ್ರಮ! ಆದ್ದರಿಂದ ನಾವು ಅದನ್ನು ಕಳೆದು ಹೋಗಲು ಬಿಡದೆ, ಉಳಿಸಿಕೊಳ್ಳುವುದು ಉತ್ತಮ.. ಅಲ್ಲವೇ?

Monday, June 28, 2010

ದಾಂಪತ್ಯ

-ಬೀಚಿಯವರ 'ನನ್ನ ಭಯಾಗ್ರಫಿ'ಯಲ್ಲಿ ಬರುವ ಹರಪನ ಹಳ್ಳಿಯ ಒಬ್ಬ ಅಜ್ಜಿ ತನ್ನ ಗಂಡನ ಬಗ್ಗೆ ಹೇಳುವ ಮಾತಿನಿಂದ ಪ್ರೇರಿತವಾಗಿ ಜನಿಸಿದ ಸಾಲುಗಳು!

ನಿನ್ನೆ ನಡೆದ ಏನೋ ಕಲಹಕೆ
ಇಬ್ಬರೊಳು ಮೂಡಿದ ಭಿನ್ನ ಮತಕೆ
ಮಾತಿಗೆ ಮಾತು ಬೆಳೆದು
ಚರ್ಚೆ ಎತ್ತೆತ್ತಲೋ ಹರಿದು
ಅವನು ಪೂರ್ವಕೆ ಅವಳು ಪಶ್ಚಿಮಕೆ
ಮುಖ ಮಾಡಿ ಮಲಗಿರಲು,
ನಗಿಸುವ ಪಣ ತೊಟ್ಟವ ಅಳಿಸುತ್ತಿರಲು,
ಅವಳ ಮನದಲ್ಲೊಮ್ಮೆ ಅನಿಸಿದ್ದು ನಿಜವಂದು
-
"ಛೇ ನನ್ನ ಹಣೆಯಲ್ಲಿ ಬರೆದಿದ್ದೆ ಈ ಥರವೇ?"
ಎಂದು!!

ಆದರೆ...
ಮುಂಜಾನೆ ಬಚ್ಚಲಲಿ ಯೋಚನಾ ಗುಂಗಲ್ಲಿ
ಸಾಬೂನು ಹಚ್ಚಿ ಕಣ್ಮುಚ್ಚಿ ಬಗ್ಗಲು,
ಚಾಚಿದ್ದ ನಳದ ತುದಿಯು ಫಟಾರನೆ ರಭಸದಿ
ಹಣೆಯ ಮಧ್ಯಕ್ಕೆ ಬಡಿದು ಕೆಂಪು ಬರೆ ಬರಲು
ತಡೆಯಲಾಗದ ನೋವಲಿ ಕಣ್ಣೀರು ಹರಿದಿರಲು
ಓಡೋಡಿ ಬಂದು ಆತ ಸಂತೈಸುತಿರಲು
ಇದ್ದೆಲ್ಲ ಪ್ರೀತಿಯನು ಧಾರೆಯೆರೆಯಲು
ಮತ್ತೆ ನಗೆ ಹೂವು ಮನದಲ್ಲಿ ಅರಳಿರಲು
ದಿನವು ಸಂತಸದಿ ಸಾಗುತ್ತಲಿರಲು
ಹಣೆ ಬರಹ ಹಳಿದ ತಪ್ಪಿಗೆ ನೊಂದಳು

ಅದೇನಿದ್ದರೂ...
ಅವನು ನನ್ನವನು
ನಾನವನ ಮನದರಸಿ
ಸಮರಸವೇ ಜೀವನ
ಎಂದೆನುತ್ತಾ ನಿನ್ನೆ ಮರೆತಳು

Friday, June 4, 2010

'ಶುಭಾ'ಶಯ ಪತ್ರ

"ಶುಭಾ, ನಿಂಗೆ ಹುಟ್ಟು ಹಬ್ಬಕ್ಕೆ ಏನು ಗಿಫ್ಟ್ ಬೇಕು ಹೇಳು"
"ವಿಶ್ವ ಪರಿಸರ ದಿನ ಅಲ್ವಾ, so, ನೀನು ಪರಿಸರ ಮಾಲಿನ್ಯ ಕಮ್ಮಿ ಮಾಡೋಕೆ, ಪರಿಸರ ಹಸಿರಾಗಿಡೋಕೆ, ಪ್ರಯತ್ನ ಮಾಡು, ಅದೇ ನಂಗೆ ದೊಡ್ಡ ಗಿಫ್ಟು :) ಹಾಹಾ - ದೊಡ್ಡ ಜನರ ಥರ ದೊಡ್ಡ ಮಾತಾಡಿದೆ ಅಲ್ವಾ !"
***

"ಲೇ ಶುಭಾ, ಬೇಗ ಅಮ್ಮಂಗೆ ಫೋನ್ ಕೊಡು, ನಂಗೆ ಹಸಿವಾಗ್ತಾ ಇದೆ ಜೋರು, ಮಾತು ಮುಗಿಸಿ ಆಮೇಲೆ......."
"ಅಮ್ಮ ಬೇಗ ಬಾ, ಅಕ್ಕಂಗೆ ಜೋರು ಹಸಿವಂತೆ, ನಿನ್ನ ತಲೆ ತಿನ್ನೋಕೆ ಕರೀತಿದಾಳೆ!"
***

"ಹೇ ಅಕ್ಕಾ, ಇವತ್ತು ನನ್ ಫ್ರೆಂಡ್ಸ್ ಗೆಲ್ಲಾ ನಿನ್ನ ಬ್ಲಾಗ್ ತೋರಿಸಿದೆ ಕಣೆ, ಒಂದು ಫ್ರೀ ಪೀರಿಡ್ ಇತ್ತು.."

"ಓಹ್ ಪರ್ವಾಗಿಲ್ವೆ ನೀನು?"
"ಆದ್ರೆ ಜಾಸ್ತಿ ಟೈಮ್ ಇರ್ಲಿಲ್ಲ ಆಯ್ತಾ, ಅದಕ್ಕೆ ನೀ ನನ್ನ ಬರ್ತ್ ಡೇ ದಿನ ನನ್ನ ಬಗ್ಗೆ ಬರ್ದಿದ್ದೆ ಅಲ್ವಾ 'ಶುಭಾ'ಶಯ ಕವನ, ಅದನ್ನು ತೋರಿಸಿದೆ, ಖುಷಿಯಾಯ್ತು ಗೊತ್ತಾ ಅವರಿಗೆಲ್ಲಾ? :)"
"!!!"
***

"ಹೇ, ಶುಭಾ ನಮ್ಮ ಶಾಲೆಗೆ ಹೋಗಿ ಬರೋಣ್ವಾ, ಬರ್ತೀಯಾ? "

"ನೀನು ಬಿಡು, ಹೀರೋಯಿನ್ ಆಗಿದ್ದೆ ಸ್ಕೂಲ್ ನಲ್ಲಿ, ನಾನ್ಯಾಕೆ ಸೈಡ್ ಆಕ್ಟ್ರೆಸ್ಸ್ ಥರ ನಿನ್ ಜೊತೆ ಬರಲಿ ;-)"
"!!?"
***

"ಶುಭಾ, ಸೆಮಿಸ್ಟರ್ ಪರೀಕ್ಷೆ ಮುಗಿದ ಮೇಲೆ ಏನ್ ಪ್ಲಾನ್ ರಜಕ್ಕೆ?"

"ಬೆಂಗಳೂರಿಗೆ ಬರೋಣ ಅನ್ಕೊಂಡಿದ್ವಿ ನಾನು ಮತ್ತು ಅಪ್ಪ, ಆದ್ರೆ ನೀನೆ ಬರ್ತಿದೀಯಲ್ವಾ ಊರಿಗೆ ಮುಂದಿನ ವಾರದಲ್ಲಿ, ಹದಿನೈದು ದಿನದೊಳಗೆ ಮತ್ತೆ ನಿನ್ನ ಮುಖ ನೋಡೋಕೆ ಯಾಕೆ ಬರೋದು ಹೇಳು ಬೆಂಗಳೂರಿಗೆ :P ಅದ್ಕೆ ಏನೂ ಪ್ಲಾನ್ ಇಲ್ಲ ಈಗ!"
"!! "
***

ಪ್ರೀತಿಯ ಮುದ್ದು ತಂಗಿ ಶುಭಾ,

ನನಗೆ ಖಂಡಿತಾ ಗೊತ್ತಿದೆ, ಈ ಮೇಲಿನ ಸಾಲುಗಳನ್ನೆಲ್ಲ ನೀನು ಓದಿದಾಗ ನಂಗೆ ಚೆನ್ನಾಗಿ ಮಂಗಳಾರತಿ ಇದೆ ಎಂದು. ಆದರೆ ಏನಾದರೂ ವಿಶೇಷವಾಗಿ ನಿನ್ನ ಹುಟ್ಟು ಹಬ್ಬಕ್ಕೆ ನನ್ನ ಬ್ಲಾಗ್ ನಲ್ಲಿ ಬರೆಯೋಣ ಎಂದು ಮನಸ್ಸಿಗೆ ಬಂದು, ನನ್ನ ಮನದಲ್ಲಿ ಅಚ್ಚೊತ್ತಿದ ನಿನ್ನ ಕೆಲವು ಮುದ್ದು ಮಾತುಗಳನ್ನು ಹಾಗೆಯೇ ಅಕ್ಷರಕ್ಕಿಳಿಸಿದ್ದೇನೆ, ಬೇಸರವಿಲ್ಲವಷ್ಟೇ? ಕೆಲವೊಮ್ಮೆ ನೀನು ತಟ್ ಅಂತ ನೀಡುವ ಉತ್ತರಗಳು, ನಗು ತರುವ ನಿನ್ನ ಮಾತುಗಳು, ಆ ಚುರುಕುತನ ಅದೆಲ್ಲ ಎಷ್ಟು ಖುಷಿಯಾಗುತ್ತದೆಂದರೆ, ಆ ಕ್ಷಣ ನನ್ನ ಮನದ ದುಗುಡಗಳನ್ನೆಲ್ಲಾ ಮರೆತು ಬಿಡುತ್ತೇನೆ. ಇನ್ನು ಕೆಲವೊಮ್ಮೆ, ನೀನು ನನ್ನ ಅನುಪಸ್ಥಿತಿಯ ಬಗ್ಗೆ ದೂರಿದಾಗ, ನಾಲ್ಕು ದಿನಕ್ಕೆ ಬಂದ ನಾನು ಎರಡೇ ದಿನಕ್ಕೆ ಮನೆಯಿಂದ ಮತ್ತೆ ವಾಪಾಸು ಹೊರಟ ಸಂದರ್ಭದಲ್ಲಿ ಕಣ್ಣೀರು ಸುರಿಸಿದಾಗ, ಮನದ ಮೂಲೆಯಲ್ಲಿ ಬೇಸರವೂ ಮೂಡುತ್ತದೆ. ಆದರೆ ಬದುಕು ನಮ್ಮನ್ನು ಕೊಂಡೊಯ್ಯುವ ಕಡೆ ನಾವು ಸಾಗಬೇಕು ಅಲ್ಲವೇ?

ಮನೆಯಲ್ಲಿ ಸಣ್ಣ ಮಕ್ಕಳು ಯಾವತ್ತೂ ದೊಡ್ದವರಾಗುವುದೇ ಇಲ್ಲ ಎಂದು ನಂಗೆ ಹಲವು ಬಾರಿ ಅನಿಸುವುದಿದೆ. ನಾನು ಬಾಲವಾಡಿಯಲ್ಲಿದ್ದಾಗ ನೀನು ಹುಟ್ಟಿದಾಗಿಂದ ನಾನು ದೊಡ್ಡವಳು. ಆದರೆ ನೀನು ಕಾಲೇಜಿಗೆ ಬಂದರೂ ಇನ್ನು ಚಿಕ್ಕವಳು ಅನ್ನುವ ಮನೋಭಾವ ನನ್ನಲ್ಲಿತ್ತು. ಆದರೆ, ಇತ್ತೀಚೆಗೆ ಒಂದೆರಡು ವರ್ಷಗಳಿಂದ, ನಿನ್ನ ಸ್ನೇಹಿತೆಯರ ಗುಂಪಿನಲ್ಲಿ ನಿನ್ನ ಒಡನಾಟ, ನೀನು ಹೇಳುವ ಕೆಲ ಘಟನೆಗಳು, ನಿನ್ನ ವಿಚಾರ ಧಾರೆಯನ್ನು ಮಂಡಿಸುವ ಶೈಲಿ, ಇದೆಲ್ಲ ನೋಡಿದಾಗ, ಕೇಳಿದಾಗ, ನಂಗೂ ಖುಷಿಯಾಗಿತ್ತು - ನನ್ನ ಮುದ್ದು ತಂಗಿ ಆ ಮುದ್ದುತನ, ತುಂಟತನವನ್ನು ಉಳಿಸಿಕೊಂಡು, ಪ್ರೌಢಳೂ ಆಗಿದ್ದಾಳೆ ಅಂತ. I m happy and proud about you!

ಶುಭಾ, ಬದುಕಿನ ಒಂದು ಮುಖ್ಯವಾದ ಘಟ್ಟದಲ್ಲಿ ನೀನು ನಿಂತಿರುವ ಈ ಸಂದರ್ಭದಲ್ಲಿ ನಾನು ನಿನಗೆ ಹೇಳುವುದಿಷ್ಟೇ - "ಯಾವತ್ತೂ ಒಂದು ಸ್ಪಷ್ಟವಾದ ಗುರಿ ನಮ್ಮ ಮುಂದಿರಬೇಕು, ಆ ಗುರಿಯನ್ನು ತಲುಪುವ ದೃಢಸಂಕಲ್ಪ ಹಾಗೂ ಶ್ರಮ ನಮ್ಮದಾಗಿರಬೇಕು." ನನ್ನ ಶುಭ-ಹಾರೈಕೆಗಳು, ಸದಾ ನಿನ್ನ ಜೊತೆಗಿವೆ. ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು!

ಪ್ರೀತಿಯಿಂದ,
ನಿನ್ನ ಅಕ್ಕ.

ಮುಗಿಸುವ ಮುನ್ನ : ಹುಟ್ಟು ಹಬ್ಬಕ್ಕೆ ಉಡುಗೊರೆಯ ಜೊತೆ ನಿನಗೊಂದು ಪತ್ರ ಕಳುಹಿಸಬೇಕು ಎಂದು ಮನದಲ್ಲಿ ಅಂದುಕೊಂಡಿದ್ದೆನೋ ನಿಜ; ಆದರೆ, ಸಮಯದ ಅಭಾವದಿಂದಾಗಿ ಪತ್ರ ಬರೆದು ಕಳುಹಿಸಲಾಗಲಿಲ್ಲ. ಅದಕ್ಕಾಗಿ ಇಲ್ಲಿ ಬರೆದಿದ್ದೇನೆ. ಪತ್ರಗಳು ವೈಯಕ್ತಿಕ. ಆದರೆ ಮಹತ್ತರವಾದ ಯಾವುದೇ ವೈಯಕ್ತಿಕ ವಿಚಾರಗಳ ಪ್ರಸ್ತಾಪ ಇಲ್ಲಿ ಇಲ್ಲದಿರುವುದರಿಂದ ಹಾಗೂ ನಿನಗೆ ಖುಷಿಯಾಗುತ್ತದೆ ಎನ್ನುವ ಭರವಸೆಯೊಂದಿಗೆ, ಈ ಪತ್ರವನ್ನು 'ಭಾವ ಜೀವ ತಳೆದಾಗ'ದಲ್ಲಿ ದಾಖಲಿಸುತ್ತಿದ್ದೇನೆ.

Wednesday, May 19, 2010

ಹಾಗೆ ಸುಮ್ಮನೆ

ಹನಿ ಹನಿ

ಹೊರಗೆ ಭೋರೆಂದು ಹೊಯ್ಯುತಿಹ ಮಳೆಯು
ಒಳಗೆ ಅರ್ಧರ್ಧ ಬರೆದಿಟ್ಟಿಹ ಸಾಲುಗಳನು
ನೋಡಿ ನಕ್ಕಂತೆ, ಅಟ್ಟಹಾಸದ ಗಾಳಿ ಬೀರುತಿದೆ
ಅದಕೆ ಪ್ರತೀಕಾರಗೈಯಲು ಕುಳಿತಿರುವೆ ನಾನು
ಪ್ರಕೃತಿಯ ಎದುರು ನಾನೊಂದು ಹುಲು ಮಾನವ
ಬರೆದದ್ದು ಬರೀ ಹನಿ ಹನಿ!






ನಲ್ಲ ಹೇಳಿದ್ದು

ಅಗಲಗೊಳ್ಳುತ್ತಿರುವ ನಿನ್ನೂರ ರಸ್ತೆಗಳೆಲ್ಲಾ,
ನೀ ಕೈ ಅರಳಿಸಿ ಕರೆದಂತೆ ಸ್ವಾಗತ ನೀಡುತಿವೆ

ಕಾಮಗಾರಿ ನಡೆಯುತ್ತಾ ಏಳುತ್ತಿರುವ ಕೆಂಪು ಧೂಳು
ನಾಚಿದ ನಿನ್ನ ಕೆಂಪು ಕೆನ್ನೆಯ ನೆನಪ ತರುತ್ತಿವೆ






ಪ್ರಶ್ನೆ - ಉತ್ತರ

"ಯಾಕೆ ನನ್ನಿನಿಯ, ನಿನಗೆ
ತಲೆ ನೋವು, ಭಾರ?"
"ಏನು ಮಾಡಲಿ ಪ್ರಿಯೆ
ತಲೆಯ ತುಂಬೆಲ್ಲ
ನೀನೇ ಇರುವೆಯಲ್ಲಾ !"

Sunday, April 25, 2010

ಪ್ಲಾಟ್ ಫಾರ್ಮ್ ಅವಾಂತರ

ಬಹಳ ದಿನಗಳಿಂದ ಏನೇನೋ ಭಾವಗಳು ಮನದಲ್ಲಿ ಮಿಂಚಿ ಮರೆಯುಗುತ್ತಿದ್ದವಾದರೂ, ಅಕ್ಷರಕ್ಕೆ ಇಳಿಸುವಷ್ಟು ತೀವ್ರವಾಗಿರಲಿಲ್ಲ. ಎಲ್ಲೋ ಮನಸ್ಸಿನಾಳದಲ್ಲಿ ಯೋಚನೆಗಳು ಮೂಡಿದರೂ, ಬರೆಯುವ ಯೋಜನೆ ಕಾರ್ಯಗತ ಮಾಡುವುದಕ್ಕೆ ಸಮಯ ಸಿಕ್ಕಿರಲಿಲ್ಲ. ಬೆಂದಕಾಳೂರಿನ ಬಿಸಿಲ ಬೇಗೆಯಲ್ಲಿ ಬೇಯುತ್ತಾ, ಭಾವ ಯಾವಾಗ ಜೀವ ತಳೆಯುತ್ತೆ ಅಂತ ಅದೆಷ್ಟು ಕಾದರೂ ಬರದವುಗಳು, ಎದೆಯಾಳದಿಂದ ಚಿಮ್ಮಿ ಹೊರಬರಲು ಬೆಂಗಳೂರು ಬಿಟ್ಟು ಊರಿಗೆ ಹೊರಡಬೇಕಾಯ್ತು(ಆದರೆ ಭಾವ ಜೀವ ತಳೆದಿದ್ದು ಬೆಂಗಳೂರಿನಲ್ಲೇ!). ಊರಿಗೆ ಹೊರಡುವಾಗಿನ ಕ್ಷಣಗಳೇ ಹಾಗೆ! ಮನಸ್ಸು ಒಂಥರಾ ವಿಶೇಷ ಉತ್ಸಾಹದಿಂದ ಕೂಡಿರುತ್ತದೆ. ಇನ್ನು, ತುಂಬಾ ದಿನಗಳ ನಂತರ ಊರಿಗೆ ಹೊರಟದ್ದೆಂದರೆ ಹೇಳುವುದೇ ಬೇಡ, ಮನದ ಉಲ್ಲಾಸವೂ ದ್ವಿಗುಣವಾಗಿರುತ್ತದೆ. ಆದರೆ ಸಮುದ್ರ ಮಟ್ಟದಲ್ಲಿರುವ ಊರಿಗೆ, ಎತ್ತರ ಪ್ರದೇಶದಲ್ಲಿರುವ ಬೆಂಗಳೂರಿಂದ ಹೋಗುವಾಗ, ನಡುವೆ ಸಿಗುವ 36 ಕಿ.ಮೀ, ನ ಘಾಟಿ, ಯಾವತ್ತೂ ಒಂದು ದುಸ್ವಪ್ನ ! ಮಳೆಗಾಲದಲ್ಲಂತೂ ಪಯಣ ಇನ್ನೂ ಭೀಕರ! ಮುಂಜಾನೆ ತಲುಪಬೇಕಾಗಿದ್ದು, ಮಧ್ಯಾಹ್ನ, ಸಂಜೆ ತಲುಪಿದ ಉದಾಹರಣೆಗಳೂ ಇವೆ :( ಆದರೂ ಊರಿಗೆ ಹೋಗುವ ಉತ್ಸಾಹ ನೆನೆಸಿಕೊಂಡು ಇದನ್ನೆಲ್ಲಾ ಹತ್ತಿಕ್ಕುವುದು ಕಷ್ಟವಲ್ಲ. ಸಕಲ ಕಷ್ಟಗಳನ್ನು ದಾಟಿ, ಯುದ್ಧದಲ್ಲಿ ಗೆದ್ದ ಯೋಧನಂತೆ, ಸ್ವಾಗತ ಗೋಪುರವನ್ನು ದಾಟಿ, ಉಡುಪಿ ನಗರ ಪ್ರವೇಶಿಸುವಾಗ, ನನ್ನೊಳಗೆ ಅದೇನೋ ಒಂದು ಅದಮ್ಯವಾದ ಖುಷಿ! ಆದರೆ ಕೆಲವೊಮ್ಮೆ VRL ಬಸ್ ನವರು ಅವರ ಡಿಪೋಗೆ ಹೋಗಿ ಒಳದಾರಿಯಿಂದಲೇ, ಈ ಸ್ವಾಗತ ಗೋಪುರದ ಮೂಲಕ ಸಾಗದೆ ಉಡುಪಿ ಹೊಕ್ಕರೆ ನನಗೆ ಮನದಲ್ಲಿ ಏನೋ ಕಳೆದುಕೊಂಡ ಅನುಭವ. ಕಳ್ಳನಂತೆ ಅಡ್ಡ ದಾರಿಯಿಂದ ಊರು ಹೊಕ್ಕ ಅನುಭವ!

ಅಂದ ಹಾಗೆ ಮೊನ್ನೆ, ಮೆಜೆಸ್ಟಿಕ್ ನಿಂದ ಬಸ್ಸು ಹತ್ತಿ ಊರಿಗೆ ಹೋಗುವವಳಿದ್ದೆ. ಪ್ರತಿ ಸಲ, ಇಲ್ಲೇ ಹತ್ತಿರದಲ್ಲೇ ಪಿಕ್ ಅಪ್ ಇರುವ ಖಾಸಗಿ ಬಸ್ ನಲ್ಲಿ ಹೋಗುತ್ತಿದ್ದು, ಈಗ ಆ ಬಸ್ ಈ ಹಾದಿಯಲ್ಲಿ ಸಾಗದೆ, ಇನ್ನೊಂದು ಕಡೆಯಿಂದ ಹೋಗುವುದರಿಂದ, ಇನ್ನು ಮೆಜೆಸ್ಟಿಕ್ ನಿಂದ ಹೋಗಬೇಕಾದ ಅನಿವಾರ್ಯತೆ! ಎಲ್ಲರೂ, "ಓ ಮೆಜೆಸ್ಟಿಕ್ ನಿಂದನಾ ಬಸ್ಸು? ಬೇಗ ಹೊರಟು ಮೆಜೆಸ್ಟಿಕ್ ತಲುಪು, ಅಲ್ಲಿ ಮತ್ತೆ ಎಷ್ಟು ಹೊತ್ತು ಕೂತರೂ ಪರವಾಗಿಲ್ಲ" ಎನ್ನುವವರೇ! ಸ್ವಲ್ಪ ದಿನಗಳ ಮುಂಚೆ ಊರಿಗೆ ಹೊರಟ ಗೆಳತಿಯೊಬ್ಬಳು, ಬೆಂಗಳೂರಿನ ಟ್ರಾಫಿಕ್ ಜಾಮ್ ನಿಂದಾಗಿ ಬಸ್ಸು ಮಿಸ್ ಮಾಡಿಕೊಂಡ ಘಟನೆ ಇನ್ನೂ ಹಚ್ಚ ಹಸಿರಾಗಿರುವುದರಿಂದ, ನನಗೂ ಮೆಜೆಸ್ಟಿಕ್ ತಲುಪುವ ತನಕ ಒಂದು ಆತಂಕ ಇತ್ತು. ಆದರೆ ಯಾವಾಗ ಅರ್ಧ ಘಂಟೆ ಮೊದಲು ಹೋಗಿ ಅಲ್ಲಿ ಕೂತು ತಪಸ್ಸು ಮಾಡಬೇಕಾದ ಪರಿಸ್ಥಿತಿ ಬಂತು ನೋಡಿ, ಆಗ ಮಾತ್ರ "ಛೆ, ಇನ್ನೂ ಹತ್ತು ನಿಮಿಷ ತಡ ಮಾಡಿ ಹೊರಟಿದ್ದರೆ ಏನೂ ಆಗ್ತಿರಲಿಲ್ಲ" ಎಂದೆನಿಸಿದ್ದು ನಿಜ! ಆರಾಮಾಗಿ ಮೆಜೆಸ್ಟಿಕ್ ನ ಉಪಾಹಾರ ಗೃಹದಲ್ಲಿ ಚಪಾತಿ ತಿಂದು, ನನ್ನ ಪ್ಲಾಟ್ ಫಾರ್ಮ್ ಕಡೆ ಸಾಗಿದೆ. ಟಿಕೆಟ್ ನಲ್ಲಿ ಪ್ಲಾಟ್ ಫಾರ್ಮ್ ಸಂಖ್ಯೆ "1A" ಅಂತಿತ್ತು. ನಾನು ಪ್ಲಾಟ್ ಫಾರ್ಮ್ ನಾಲ್ಕು, ಮೂರು, ಎರಡು ಹೀಗೆ ಸಾಗುತ್ತ ನಡೆದೆ. ಕಡೆಗೆ ಪ್ಲಾಟ್ ಫಾರ್ಮ್ ಒಂದು ಸಿಕ್ಕಿತು, ವಿನಃ "1A" ಕುರುಹು ಕಾಣಲಿಲ್ಲ. ಅಲ್ಲೇ ವಿಚಾರಿಸಿದೆ. "ಉಡುಪಿಗೆ ಹೋಗುವ ಬಸ್ಸುಗಳು ಇಲ್ಲೇ ಬರೋದು" ಅಂದ್ರು. ಮೇಲೆ ತೂಗು ಹಾಕಿದ ಬೋರ್ಡುಗಳನ್ನು ಮಾತ್ರ ನೋಡುತ್ತಿದ್ದ ನನಗೆ, ಅಷ್ಟರಲ್ಲಿ ಕೆಳಗೆ ಒಂದು ಬೋರ್ಡು ಕಾಣಿಸಿತು. "ಊಟ ತಯಾರಿದೆ" ಅಂತ ಹೋಟೆಲಿನ ಮುಂದಿಡುವ ಬೋರ್ಡಿನಂತೆ ಇಟ್ಟ ಆ ಬೋರ್ಡಿನಲ್ಲಿ "1A" ಅಂತ ದೊಡ್ಡದಾಗಿ ಬರೆದಿಟ್ಟಿದ್ದು ಕಾಣಿಸಿತು! ಅರೆ ಇದೇನು ಪ್ಲಾಟ್ ಫಾರ್ಮ್ 1A ಗೆ ಮಾತ್ರ ವಿಶೇಷ ಬೋರ್ಡು ಅಂತ ನಗು ಬಂದು, ಆ ಬೋರ್ಡು ಕಣ್ಣಿಗೆ ಬಿದ್ದಿದ್ದಕ್ಕೆ ಬಹಳ ಹೆಮ್ಮೆ ಪಟ್ಟುಕೊಳ್ಳುತ್ತಾ, ಅಲ್ಲೇ ಕಲ್ಲು ಬೆಂಚಿನಲ್ಲಿ ಆರಾಮವಾಗಿ ಆಸೀನಳಾದೆ..

ಬೆಳಿಗ್ಗೆ ಟೀಂ ಮೇಟ್ ಒಬ್ಬ ಪಯಣದ ನೆನಪುಗಳನ್ನು ಬಿಚ್ಚುತ್ತಾ ಹೇಳಿದ್ದು ನೆನಪಿಗೆ ಬಂದು ಹಾಗೆಯೇ ಒಂದು ನಗು ಮುಖದ ಮೇಲೆ ತೇಲಿ ಹೋಯಿತು - "ಅರ್ಧ ಘಂಟೆ ಮೊದಲು ರೈಲ್ವೇ ಸ್ಟೇಷನ್ ತಲುಪಿದ ಆತ ಬೇಗ ತಲುಪಿದ ಖುಷಿಯಲ್ಲಿ, ಹಾಗೂ ಆತ ಹೋಗಬೇಕಾಗಿರುವ ರೈಲು ಎದುರಲ್ಲಿ ನಿಂತಿರುವುದನ್ನು (ಬಾಗಿಲು ಮುಚ್ಚಿದ ಸ್ಥಿತಿಯಲ್ಲಿ) ನೋಡಿ ಆದ ಸಂತೋಷಕ್ಕೆ ಗೆಳೆಯನ ಜೊತೆ ಫೋನಿನಲ್ಲಿ ಮಾತಾಡತೊಡಗಿದನಂತೆ ! ಇನ್ನೇನು ಐದು ನಿಮಿಷಗಳಿದ್ದರೂ ಬಾಗಿಲು ತೆರೆಯದಾದಾಗ, ಆತ ವಿಚಾರಿಸಿದಾಗ ತಿಳಿಯಿತಂತೆ - ಅದೇ ಹೆಸರಿನ ಆತ ಹೋಗಬೇಕಾಗಿರುವ ರೈಲು, ಇನ್ನೊಂದು ಪ್ಲಾಟ್ ಫಾರ್ಮ್ ನಲ್ಲಿ ಇದೆ" ಅಂತ!! ಅಲ್ಲಿಗೆ ಓಡಿ ಹೋದಾಗ ರೈಲು ಮಿಸ್! ಅರ್ಧ ಗಂಟೆ ಮುಂಚೆ ಬಂದು ತಲುಪಿದ್ದಕ್ಕೆ, ನಂಗೂ ಇವತ್ತು ಏನಾದರೂ ಆ ಥರ ಆದ್ರೆ, ಅಂತ ಯಾಕೋ ಒಂದು ಯೋಚನೆ ಹಾಗೇ ಹಾದುಹೋಯಿತು ಮನದಲ್ಲಿ.

ನನ್ನ ಮನದ ಯೋಚನೆಯ ಸರಣಿಗೆ ಕಡಿವಾಣ ಹಾಕುವಂತೆ, ನಾನು ಕುಳಿತ ಬೆಂಚಿನಲ್ಲಿ ಬಂದು ಕುಳಿತ ಒಬ್ಬರು ಅಜ್ಜಿ ಹಾಗೂ ಅವರ ಮಗನ ಸಂಭಾಷಣೆ ನನ್ನ ಗಮನ ಸೆಳೆಯಿತು. ಅಜ್ಜಿಗೆ ತಾವು ನಿಂತಿರುವ ಪ್ಲಾಟ್ ಫಾರ್ಮ್ ಸರಿಯೋ ಅಲ್ವೋ ಅಂತ ತುಂಬಾ ಆತಂಕ. ಪದೇ ಪದೇ ಮಗನಿಗೆ ವಿಚಾರಿಸಿ ಬರಲು ಹೇಳುತ್ತಿದ್ದರು. ಮಗನಿಗೋ ಒಂಥರಾ ಅಸಡ್ಡೆ. ಕೊನೆಗೆ ಮೇಲೆ ತೂಗು ಹಾಕಿದ್ದ ಬೋರ್ಡು ತೋರಿಸಿ ಸಮಜಾಯಿಸಿದ. ಅದರ ನಂತರ ಅಜ್ಜಿಗೆ ಸ್ವಲ್ಪ ಸಮಾಧಾನವಾದಂತೆ ಕಂಡು ಬಂತು. ಅಷ್ಟು ಹೊತ್ತು ಅಜ್ಜಿಯ ನಿರಂತರ ಮಾತುಗಳಿಗೆ ಬೇಸತ್ತರಿಂದಲೋ ಏನೋ, ಸ್ವಲ್ಪ ಆ ಕಡೆ ಹೋಗಿ ಬರುವೆ ಎಂದು ಮಗ ಜಾಗ ಖಾಲಿ ಮಾಡಿದ. ತದನಂತರ ಅಜ್ಜಿ ನನ್ನೆಡೆಗೆ ತಿರುಗಿ ಮಾತು ಆರಂಭಿಸಿದರು. "At what time is your bus" ಅಂತ ಕೇಳಿದ್ರು. ನಂಗೆ ಅಜ್ಜಿ ಇಂಗ್ಲಿಷ್ ನಲ್ಲಿ ಮಾತಾಡಿದ್ದು ಕೇಳಿ ಆಶ್ಚರ್ಯ ಹಾಗೂ ಸ್ವಲ್ಪ ಹೆಮ್ಮೆ ಆಯಿತು. ಪರ್ವಾಗಿಲ್ವೆ, ಜಾಗತೀಕರಣದ ಪ್ರಭಾವ ಹಿರಿ ತಲೆಮಾರಿಗೂ ಪಸರಿಸಿದೆ ಅಂತ ಅಂದುಕೊಂಡೆ! ಆದರೆ, ಇನ್ನು ಈ ಅಜ್ಜಿ ನನ್ನ ಪ್ಲಾಟ್ ಫಾರ್ಮ್ ಹಾಗೂ ಬಸ್ಸಿನ ಬಗ್ಗೆ ಚಿಂತೆ ಶುರು ಮಾಡ್ತಾರೆನೋ ಅಂತ ಸ್ವಲ್ಪ ಕಿರಿ ಕಿರಿಯೂ ಅನಿಸಿತು ಮನದಲ್ಲಿ. ಅದಕ್ಕೆ ಚಿಕ್ಕವಾಗಿ ಚೊಕ್ಕವಾಗಿ "10.10" ಅಂದೆ. ಅಜ್ಜಿ ಅಷ್ಟಕ್ಕೇ ಬಿಡದೆ "What is your destination?" ಅಂತ ಕೇಳಿದ್ರು. ಈಗ ನಾನೂ ಕೇಳದೆ ಇದ್ರೆ ಅವ್ರು ಬೇಜಾರಾಗ್ತಾರೆ, ಅಂದುಕೊಳ್ಳುತ್ತಾ, "Udupi, How about yours?" ಅಂತ ಕೇಳಿದೆ. ಅದಕ್ಕೆ ಪ್ರತಿಯಾಗಿ ಅವರು "Mumbai, Which is your platform?" ಅಂತ ಮತ್ತೆ ಪ್ರಶ್ನೆ ಎಸೆದರು. ಅಯ್ಯೋ ಇವರಿನ್ನು ಪ್ರಶ್ನೆಗಳ ಸುರಿಮಳೆ ಆರಂಭಿಸ್ತಾರೆ ಅಂತ "1A" ಎಂದು ಉತ್ತರ ನೀಡಿ ಮಾತು ನಿಲ್ಲಿಸಿದೆ. ಆದರೆ ಅಜ್ಜಿ ನಿಲ್ಲಿಸಲಿಲ್ಲ! "I think your platform is that side. See the board there; Its written - Platform 1A --- > Near Mysore Mallige platform" ಅಂತ ಅಂದ್ರು. ಆಗಲೇ ನಾನು ಆ ಬೋರ್ಡನ್ನು ಕಣ್ಣು ಬಿಟ್ಟು ನೋಡಿದ್ದು!! ಕೆಳಗಿನ ಸಾಲನ್ನು ನಾನು ಓದಿರಲೇ ಇಲ್ಲ. ಸಮಯ ಆಗಲೇ ಹತ್ತು ಸಮೀಪಿಸುತ್ತಿತ್ತು. ಕೂಡಲೇ ನಾನು ಎದ್ದು, ಅತ್ತ ಕಡೆ ಧಾವಿಸಿದೆ. ಉಡುಪಿಗೆ ಹೋಗುವ ಐರಾವತ ವಾಹನಗಳೆಲ್ಲ ಸಾಲಾಗಿ ಅಲ್ಲಿ ನಿಂತಿದ್ದವು. ನನ್ನ ಬಸ್ಸು ಕೂಡ ಬಂದು ನಿಂತಿತ್ತು! ಟಿಕೆಟ್ ತೋರಿಸಿ ಬಸ್ಸು ಹತ್ತಿ ನನ್ನ ಆಸನದಲ್ಲಿ ಕೂತು, ಒಮ್ಮೆ ನಿಟ್ಟುಸಿರು ಬಿಟ್ಟೆ.

ಆಗಲೇ ನೆನಪಾಗಿದ್ದು "ಅಯ್ಯೋ, ಆ ಅಜ್ಜಿಗೆ ಒಂದು ಥ್ಯಾಂಕ್ಸ್ ಕೂಡ ಹೇಳಲಿಲ್ಲವಲ್ಲಾ" ಎಂದು! ಕೂಡಲೇ ಇಳಿದು ಹೋಗಿ ಒಂದು ಹೃತ್ಪೂರ್ವಕ ಧನ್ಯವಾದ ಹೇಳಿ ಬರೋಣ ಅಂದುಕೊಂಡು ಗಡಿಯಾರ ನೋಡಿದರೆ, ಆಗಲೇ ಸಮಯ ಹತ್ತು ಹತ್ತು ಸಮೀಪಿಸುತ್ತಿತ್ತು. ಯಾಕೋ, ಗಡಿಯಾರದ ಆ ನಗು ಮುಖ ನನ್ನನ್ನು ನೋಡಿ ಅಣಕಿಸಿದಂತಾಯಿತು!

Tuesday, March 16, 2010

ಆರಂಭ


ಹೊಸ ವರುಷದ ನವ ವಸಂತಕೆ
ನೂತನ ಬದುಕಿನ ನವೀನ ಚಿತ್ರಕೆ
ಜೊತೆಸೇರಿ ನಾವು ರೇಖೆ ಎಳೆಯೋಣ
ಸುಂದರ ನಕಾಶೆಯ ಸಿದ್ಧಪಡಿಸೋಣ
ರಂಗುಗಳ ಸಂಗ್ರಹವ ಆರಂಭಿಸೋಣ

ಮಾಮರದ ಹೊಚ್ಚ-ಹೊಸ ಚಿಗುರಿಗೆ
ಚೈತ್ರದ ಮಧುರ ಬಿಸಿಲ ಝಳಕೆ
ಕೋಗಿಲೆ ನಲಿಯುತಾ ಹಾಡಿರಲು
ನನ್ನೆದೆಯ ತುಂಬಾ ಕಾರಂಜಿ ನರ್ತನ
ತಂಪನೆರೆವ ನಿನ್ನ ಸಾಮೀಪ್ಯದ ಪುಳಕಕೆ

ಸಾಗೋಣ ಬಾ ನಾವಿನ್ನು ಜೊತೆಯಾಗಿ
ಜೀವನ ತೇರಿನ ಜೋಡಿ ಹಯವಾಗಿ
ಚೈತ್ರದ ಚಂದ್ರಮ ನಮಗಾಗಿ ಕಾದಿಹನು
ಬೆಳಕ ಸೂಸುತಾ ಸ್ವಾಗತ ಕೋರಿಹನು
ನಮ್ಮ ಸಂಗಮಕೆ ಕಾಯುತಿಹನು

ನಾವು ಜೊತೆಗಿರುವ ಕ್ಷಣಗಳೆಲ್ಲಾ
ಅಂತ್ಯವಿಲ್ಲದ ಯುಗಗಳಾಗಲಿ
ನಾನಾಗುವೆನು ಯುಗಾದಿ
ನೀನಾಗು ಯುಗಪುರುಷ
ಕೂಡಿ ಹಾಡೋಣ ಬಾ
ನಮ್ಮ ಬಾಳ ಯುಗಳ ಗೀತೆಯನು

Saturday, March 6, 2010

ಹೀಗೊಂದು ಪತ್ರ

ನನ್ನ ಪ್ರೀತಿಯ ಸಂಗಾತಿ,

ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಅಂತೆ - ಬದಲಾವಣೆಗಳ ಹೊರತು! ಬಹುಶಃ ನಮ್ಮ ಬಾಂಧವ್ಯದ ಮಧುರತೆಗೂ ಈ ಮಾತು ಹೊರತಲ್ಲ.

ಆ ಆರಂಭದ ದಿನಗಳು ಅದೆಷ್ಟು ಚೆನ್ನಾಗಿದ್ದವು? ಚಿಂತೆಯಿಲ್ಲದ ಸುಂದರ ದಿನಗಳು. ನಿನ್ನ ಜೊತೆಗಿನ ಕಾಲಯಾಪನೆ ಅದೆಷ್ಟು ಸುಂದರವಾಗಿತ್ತು! ದಿನದ ಕೆಲವೇ ಗಂಟೆಗಳನ್ನು ನಿನ್ನೊಡನೆ ಕಳೆದರೂ ಆ ಕ್ಷಣಗಳೆಲ್ಲ ಅತಿ ಮಧುರ. ಬಸ್ಸಿನಲ್ಲಿ ಆಫೀಸಿಗೆ ಸಾಗುವಾಗಲೂ ಪಕ್ಕದಲಿ ಕುಳಿತು, ನಡೆಯುವಾಗ ಹೆಗಲ ಮೇಲೆ, ನಿನ್ನ ಸಾನ್ನಿಧ್ಯವನ್ನು ಮೂಡಿಸುತ್ತ, ಸದಾ ಒಟ್ಟಿಗಿದ್ದು ನೀ ನೀಡುತ್ತಿದ್ದ ಅನುಭೂತಿ ಬಲು ನವಿರು! ಗೆಳತಿಯರಾರಿಗೂ, ನನಗೆ ನೀನು ದಕ್ಕಿದಂತೆ, ಯಾರೂ ಸಿಕ್ಕಿರಲಿಲ್ಲ. ಅದಕ್ಕಾಗಿ ಅವರೆಲ್ಲರ ಈರ್ಷ್ಯೆ ಭರಿತ ಅಭಿನಂದನೆಗೆ ನನಗೆ ಒಳಗೊಳಗೇ ಖುಷಿ. ಅದೇನು ಒಲವು ನಿನಗೆ ನನ್ನ ಮೇಲೆ? ಬಹುಶಃ ಕಳೆದೆಲ್ಲ ಇಷ್ಟು ದಿನಗಳಲ್ಲಿ, ನಾನು ನಿನ್ನೊಡನೆ ಕಳೆದಿರುವಷ್ಟು ಸಮಯ ಇನ್ಯಾರೊಂದಿಗೂ ಕಳೆದಿಲ್ಲ. ನನಗೂ ನೀನೆಂದರೆ ಅಷ್ಟೇ ಒಲವು. ನನ್ನ ಬಾಳಿನ ಅನ್ನದಾತ ನೀನು! ನಿನಗೆ ಒಂದಿನಿತು ಏನಾದರೂ ಘಾಸಿಯಾದರೂ ಅದೆಷ್ಟು ಆತಂಕ ಪಡುತ್ತಿದ್ದೆ ನಾನು! ನಿನ್ನ ಮೇಲಿನ ಕಾಳಜಿಯಿಂದ ದಿನವೂ ಅದೇನೆಲ್ಲಾ ಮಾಡುತ್ತಿದ್ದೆ.

ಎಲ್ಲಿ ಹೋದವು ಆ ಮಧುರ ದಿನಗಳು? ಯಾಕಿಲ್ಲ ಇಂದು ಆ ನವಿರು ಕ್ಷಣಗಳು? ಸಂತಸಕ್ಕಿಂತ ಚಿಂತೆಗಳೇ ಹೆಚ್ಚಾಗಿವೆ :( ನಾನಂತೂ ಬಲು ಶ್ರಧ್ಧೆಯಿಂದಲೇ ನಿನ್ನ ಜೊತೆ ನನ್ನ ಅಮೂಲ್ಯ ಕಾಲವನ್ನು ಕಳೆಯುತ್ತೇನೆ - ಇಂದು ಕೂಡಾ. ಆದರೂ, ಇತ್ತೀಚಿಗೆ ನಿನ್ನ ನಿರೀಕ್ಷೆ ಅತಿಯಾಗಿದೆ. ಅದೆಷ್ಟು ಹೊತ್ತು ನಿನ್ನ ಜೊತೆಗಿದ್ದರೂ ನಿನಗೆ ತೃಪ್ತಿಯಿಲ್ಲ ಅನ್ನುವಂತೆ ಆಡುತ್ತೀಯಾ! ನಿನ್ನಿಂದಾಗಿ, ಇನ್ನಿತರ ಯಾವುದೇ ಕೆಲಸ ಮಾಡಲಾಗುತ್ತಿಲ್ಲ.ಸದಾ ನಿನ್ನ ಜೊತೆಯಲ್ಲೇ ಕಾಲ ಕಳೆಯುವೆನೆಲ್ಲಾ? ಆದರೂ.. ಅದೆಷ್ಟು possessive ನೀನು ನನ್ನ ಬಗ್ಗೆ! ಮೊನ್ನೆ ಊರಿಗೆ ಹೊರಟಾಗ, ನಿನ್ನ ಜೊತೆಗೊಯ್ದರೆ, ಅಲ್ಲಿ ಮಾಡಲಿರುವ ನೂರೆಂಟು ಕೆಲಸದ ನಡುವೆ ನಿನ್ನತ್ತ ಗಮನ ಹರಿಸಲಾಗುವುದಿಲ್ಲವಲ್ಲಾ ಎಂದು ನಿನ್ನನ್ನು ಕರೆದೊಯ್ಯಲ್ಲಿಲ್ಲ. ಆ ಮೂರು ದಿನದ ಸಿಟ್ಟು ಇನ್ನೂ ತಣಿಯಲಿಲ್ಲವೇ? ನೀರಿಂದ ಪಾತ್ರೆಗೆ ವರ್ಗಾವಣೆಯಾಗುವಂತೆ, ನಿನ್ನ ತಾಪವೆಲ್ಲಾ, ನನ್ನ ತಲೆಗೇರಿ, ನೋಡು ಎಷ್ಟು ತಲೆ ಬಿಸಿ ಮಾಡಿಕೊಂಡಿದ್ದೇನೆಂದು! ದಿನವಿಡೀ ನಿನ್ನೆದುರು ಕುಳಿತರೆ ಸಾಲದೇ ? ಮತ್ತೆ ರಾತ್ರಿಯೂ ನನ್ನನು ನೆಮ್ಮದಿಯಾಗಿ ಇರಗೊಡೆಯಾ? ಅದೆಷ್ಟು ಬಯಸುತ್ತೀಯಾ ನನ್ನಿಂದ? ನನ್ನ ಮುದ್ದಿನ LapTop... ಇವತ್ತಿಗೆ ಸಾಕಿನ್ನು.. ನಾಳೆ ಮತ್ತೆ ಕಳೆಯೋಣ ಜೊತೆಯಾಗಿ ಸಮಯವನ್ನು.. ಈಗ ನೀನಿನ್ನು, ನನ್ನ ಕಾಲೆಂಬ ನಿನ್ನ ಸಿಂಹಾಸದಿಂದ ಕೆಳಗಿಳಿಯುವೆಯಾ?


- ಕೆಲಸದ ಹೊರೆ ಹೆಚ್ಚಾದಾಗ, ಸಮಯವಿಲ್ಲದ ಸಮಯದಲಿ ಪ್ರೀತಿ ಮತ್ತು ಕೋಪದಿಂದ, ಸಂಗಾತಿ laptop ಗೆ ಬರೆದ ಪತ್ರ :-)

Tuesday, February 9, 2010

ಹುಡುಗಿಯರಿಗೇಕೆ ಟೆಡ್ಡಿಗಳು ಇಷ್ಟ?

-ಕನ್ನಡ ಪ್ರಭದ "ಸಖಿ"ಗಾಗಿ ಬರೆದದ್ದು. ಫೆಬ್ರವರಿ 1-15 ಸಂಚಿಕೆಯಲ್ಲಿ ಪ್ರಕಟಿತ.


ಮೊನ್ನೆ ಗೆಳತಿಯೊಬ್ಬಳ ಹುಟ್ಟು ಹಬ್ಬವಿತ್ತು. ನಿಜ ಹೇಳಬೇಕು ಅಂದರೆ ಮುಂಜಾನೆ ಗಡಿಬಿಡಿಯಲ್ಲಿ ನನಗೆ ಆಕೆಯ ಹುಟ್ಟು ಹಬ್ಬ ಎನ್ನುವುದೇ ಮರೆತು ಹೋಗಿತ್ತು! ಮತ್ತೆ ಸಂಜೆ ವಾಪಾಸ್ ಬಂದಾಗ ಯೋಚನೆ ಶುರು ಆಯಿತು - ಏನಪ್ಪಾ ಗಿಫ್ಟ್ ಕೊಡುವುದು ಎಂದು. ಉಡುಗೊರೆ ಕೊಡುವಾಗ ಏನಾದರೂ ಉಪಯೋಗಕ್ಕೆ ಬರುವಂಥದ್ದು ಕೊಡಬೇಕು ಅಥವಾ ಕೊಟ್ಟವರಿಗೆ ತುಂಬಾ ಸಂತೋಷ ಆಗುವಂಥ ವಸ್ತುವನ್ನು ನೀಡಬೇಕು. ಆದರೆ ಆ ಕತ್ತಲು ಕವಿಯುತ್ತಿರುವ ಮುಸ್ಸಂಜೆಯಲ್ಲಿ, ಎಲ್ಲಿ ಏನು ಹುಡುಕಿಕೊಂಡು ಹೋಗುವುದು ಅಂತ ಯೋಚಿಸುತ್ತಿದ್ದಾಗ, ಥಟ್ ಅಂತ ಹೊಳೆದದ್ದು - ಒಂದು ಚಂದದ ಟೆಡ್ಡಿ ಕೊಟ್ಟರೆ, ಗೆಳತಿ ಖಂಡಿತಾ ಖುಷಿ ಪಡುತ್ತಾಳೆ ಎಂದು. ಕೂಡಲೇ ಹತ್ತಿರದ, ಮಕ್ಕಳ ಆಕರ್ಷಕ ಉಡುಗೊರೆಗಳು ದೊರೆಯುವ ಅಂಗಡಿಗೆ ಕಾಲಿಟ್ಟೆ. ಅಲ್ಲಿ ಒಂದು ಮಹಡಿ ತುಂಬಾ ಟೆಡ್ಡಿಗಳನ್ನೇ ತುಂಬಿಟ್ಟಿದ್ದಾರೆ. ಸುತ್ತ ಒಮ್ಮೆ ಕಣ್ಣು ಹಾಯಿಸಿದರೆ, ಏನು ಆರಿಸುವುದೆಂದೇ ತಿಳಿಯದಷ್ಟು ಗೊಂದಲವಾಗುವುದಂತೂ ನಿಜ. ಅಂತೂ ಒಂದು ಬಿಳಿ - ಗುಲಾಲಿ ಮಿಶ್ರ ಬಣ್ಣಗಳಿರುವ, ಕುತ್ತಿಗೆಗೊಂದು ಚಂದದ ಸ್ಕಾರ್ಫ್ ಅನ್ನು ತೂಗು ಬಿಟ್ಟು, ತನ್ನನ್ನು ಹಿಡಿದವರ ಮನ ಸೂರೆಗೊಳ್ಳುವಂತಹ ಮುದ್ದು ನಗೆಯನ್ನು ಬೀರುತ್ತಿರುವ ಒಂದು ಟೆಡ್ಡಿಯನ್ನು ಆರಿಸಿ ತಂದು ಗೆಳತಿಗೆ ಉಡುಗೊರೆ ನೀಡಿದೆ. ಅದನ್ನು ನೋಡಿದಾಗ ಅವಳ ಖುಷಿಗೆ ಪಾರವೇ ಇರಲಿಲ್ಲ. ಪುಟ್ಟ ಮಗುವನ್ನು ಮುದ್ದಾಡಿದಂತೆ ಅಪ್ಪಿ ಮುದ್ದಾಡಿದಳು! ಜೊತೆಗೆ ಫೋಟೋ ಸೆಶ್ಶನ್ ಕೂಡ ಆರಂಭವಾಯಿತು - ಅವಳು ಮಾತ್ರವಲ್ಲ, ಜೊತೆಗಿರುವ ಉಳಿದ ಹುಡುಗಿಯರೂ ಅದನ್ನು ಮುದ್ದಾಡಿ ಹಿಡಿದು ಒಂದೊಂದು ಫೋಟೋ ತೆಗೆಸಿಕೊಂಡರು. (ಯಾರಾದರೂ ಹುಡುಗರು ಸುತ್ತ ಇದ್ದಿದ್ದರೆ, ಆ ಟೆಡ್ಡಿಯ ಅದೃಷ್ಟ ಕಂಡು ಕರುಬುತ್ತಿದ್ದರೇನೋ! ಆದರೆ ಯಾರೂ ಇರಲಿಲ್ಲ ಬಿಡಿ)

ಹುಡುಗಿಯರೇ ಹಾಗೆ.. ಟೆಡ್ಡಿ ಬೇರ್ ಗೊಂಬೆಗಳಿಗೂ ಹುಡುಗಿಯರಿಗೂ ಅದೇನೋ ಒಂದು ಆಪ್ತ ನಂಟು. ಪುಟ್ಟ ಹುಡುಗಿಯರಿಂದ ಹಿಡಿದು, ಕಾಲೇಜು ತರುಣಿಯವರೆಗೆ ಎಲ್ಲ ಪ್ರಾಯದ ಹುಡುಗಿಯರು ಟೆಡ್ಡಿ ಗೊಂಬೆಗಳನ್ನು ಇಷ್ಟ ಪಡುವವರೇ. ಮುಂದೆ ಸಂಗಾತಿಯಾಗಲಿರುವ ಪ್ರಿಯ ಗೆಳತಿಗೆ ಆಕೆಯ ಗೆಳೆಯ, ಬಾಲ್ಯದ ಗೆಳತಿಗಾಗಿ ಒಬ್ಬಳು ಪ್ರೀತಿಯ ಗೆಳತಿ, ಹೀಗೆ ಕೊಡುವವರು ಯಾರೇ ಆಗಿದ್ದರೂ, ಉಡುಗೊರೆ ಪಡೆಯುವ ಸ್ಥಾನದಲ್ಲಿ ಇರುವುದು ಹುಡುಗಿಯಾದಲ್ಲಿ, ಉಡುಗೊರೆಯಾಗಿ ಕೊಡಲು ಮೊದಲು ಹೊಳೆಯುವುದೇ ಈ ಟೆಡ್ಡಿ. ಹುಡುಗಿಯರು ಯಾಕೆ ಟೆಡ್ಡಿ ಗೊಂಬೆಗಳನ್ನೂ ಅಷ್ಟೊಂದು ಇಷ್ಟ ಪಡುತ್ತಾರೆ ಎನ್ನಲು ಅವರವರದೇ ಆದ ಕಾರಣಗಳಿವೆ. ಟೆಡ್ಡಿ ಗೊಂಬೆಗಳು ಯಾರನ್ನೇ ಆಗಲಿ ಮತ್ತೆ ಬಾಲ್ಯದ ನೆನಪಿಗೆ ಕೊಂಡೊಯ್ಯುತ್ತವೆ. ಮತ್ತೆ ಮಕ್ಕಳನ್ತಾಗುವುದು ಏನೋ ಒಂದು ಸಂಭ್ರಮ. ಇದು ಒಂದು ಕಾರಣವಾದರೆ, ಇನ್ನು ಕೆಲವರಿಗೆ ಬೇರೆ ಥರದ ಅನುಭವ! ಹುಡುಗಿಯರಿಗೆ, ಒಂಥರಾ ಸೆಕ್ಯೂರ್ ಫೀಲ್ ಮಾಡಿಕೊಳ್ಳುವುದು ಏನೋ ಒಂದು ಸಮಾಧಾನ, ಖುಷಿ ನೀಡುತ್ತದೆ. ಈ ಟೆಡ್ಡಿಬೇರ್ ಪಡಕೊಂಡಾಗ, ಇನ್ನೂ ತಮ್ಮನ್ನು ಪುಟ್ಟ ಮಕ್ಕಳಂತೆ ಪರಿಗಣಿಸುತ್ತಾರೆ ಎಂಬ ಭಾವನೆಯೇ ಒಂದು ರೀತಿಯ ಖುಷಿಗೆ ಕಾರಣವಾಗುತ್ತದೆ. ಟೆಡ್ಡಿಯಂತೆ ಹುಡುಗಿಯರದ್ದೂ ಕೋಮಲ ಮೃದು ಸ್ವಭಾವ ಆಗಿರುವುದರಿಂದಲೂ ಬಹುಷಃ ಹುಡುಗಿಯರು ಟೆಡ್ಡಿಯನ್ನು ಉಡುಗೊರೆಯಾಗಿ ಸ್ವೀಕರಿಸಿದಾಗ ಖುಷಿ ಪಡಲು ಮತ್ತೊಂದು ಕಾರಣವಿರಬಹುದು. ಅದರಲ್ಲೂ ಹುಡುಗ, ತನ್ನ ಹುಡುಗಿಗೆ ಒಂದು ಟೆಡ್ಡಿ ಕೊಟ್ಟರಂತೂ ಅಲ್ಲಿ ನಾನಾ ಕಾರಣಗಳು, ಸಂತೋಷಕ್ಕೆ ನಾಂದಿಯಾಗುತ್ತವೆ. ಟೆಡ್ಡಿಗೊಂದು ಹೆಸರಿಟ್ಟು, ಅದನ್ನು ಜೊತೆಗಿಟ್ಟುಕೊಂಡು ಸದಾ ಸನಿಹದಲ್ಲಿರುವ ಸಂಗಾತಿಯಂತೆ, ಅದರ ಜೊತೆಗಿನ ಸಖ್ಯದ ಅನುಭೂತಿ ಪಡೆಯುವುದು, ಭವಿಷ್ಯದ ಬಗ್ಗೆ ಸುಂದರ ಕನಸು ಕಾಣುತ್ತಿರುವ ಹುಡುಗಿಯರ ಜಾಯಮಾನ.

ಇನ್ನು ಕೆಲವು ಹುಡುಗಿಯರಿಗೆ ನಾನಾ ವಿಧದ ಟೆಡ್ಡಿ ಸಂಗ್ರಹಿಸುವ, ಅವುಗಳಿಂದಲೇ ತಮ್ಮ ವಾಸದ ಕೋಣೆಯನ್ನು ಅಲಂಕರಿಸುವ ಅಭಿರುಚಿಯಿರುತ್ತದೆ. ಮಿಕ್ಕಿ ಮೌಸ್, ಡೊನಾಲ್ಡ್, ಡಕ್, ಪೂ, ಹೀಗೆ ತಾವು ಪುಟ್ಟ ಮಗುವಾಗಿದ್ದಾಗಿನಿಂದ, ದೊಡ್ಡವರಾಗುವ ತನಕ ಉಡುಗೊರೆಯಾಗಿ ಪಡೆದ ಎಲ್ಲಾ ಥರದ ಗೊಂಬೆಗಳನ್ನೂ ತಮ್ಮ ಸಂಗ್ರಹಕ್ಕೆ ಸೇರಿಸುತ್ತಾ ಹೋಗುವುದೇ ಒಂದು ಖುಷಿ. ಪುಟ್ಟ ಮಕ್ಕಳಿಗೆ ಉಡುಗೊರೆ ಕೊಡುವಾಗ ಬೇರೆ ಬೇರೆ ಕಾರ್ಟೂನ್ ಗೊಂಬೆಗಳನ್ನು ಕೊಡುವುದು ವಾಡಿಕೆಯಾದರೆ, ಒಲುಮೆಯ ಗೆಳತಿಗೆ ಕೊಡುವಾಗ, ಚಂದದ ಮನಸೆಳೆಯುವ ಗೊಂಬೆಯನ್ನು ಆರಿಸುತ್ತಾರೆ. ಇನ್ನು ವಾಲಂಟೈನ್ಸ್ ದಿನ ಹತ್ತಿರ ಬಂದಾಗಲಂತೂ ಮಾರಾಟವಾಗುವುದು ಪ್ರೇಮ ಸಂಕೇತವಾಗಿರುವ ಕೆಂಪು ಹೃದಯವನ್ನು ಹಿಡಿದಿರುವ ಜೋಡಿ ಗೊಂಬೆಗಳು. ಜೀವನದ ಬೇರೆ ಬೇರೆ ಸ್ಥರಗಳಲ್ಲಿ, ಈ ಗೊಂಬೆಗಳನ್ನು, ಉಡುಗೊರೆಯಾಗಿ ಪಡೆದಾಗ ದೊರಕುವ ಖುಷಿ ಬೇರೆ ಬೇರೆಯಾಗಿರುತ್ತದೆ - ಅದು ಅನುಭವಿಸಿದವರಿಗೆ ಮಾತ್ರ ಗೊತ್ತು! ಈಚಿನ ದಿನಗಳಲ್ಲಿ ಅದನ್ನು ತಯಾರಿಸುವುದನ್ನು ಕಲಿಸುವ ತರಗತಿಗಳೂ ಆರಂಭವಾಗಿದ್ದು, ಅವು ಹಲವು ಹೆಣ್ಣು ಮಕ್ಕಳ ಗಮನ ಸೆಳೆದಿವೆ. ಅದನ್ನು ತಯಾರಿಸುವ ವಿಧಾನವನ್ನು ಕಲಿತು, ತಮ್ಮ ಕೈಯಿಂದಲೇ ಮಾಡಿದ ಟೆಡ್ಡಿ ಗೊಂಬೆಗಳನ್ನು ಸ್ನೇಹಿತರಿಗೆ ಉಡುಗೊರೆ ನೀಡಿ, ಅವರ ಸಂತೋಷಕ್ಕೂ, ನಾವೇ ಮಾಡಿದ್ದೂ ಅಂತ ಹೇಳಿ ತಮ್ಮ ಸಂತೋಷಕ್ಕೂ ಜೊತೆ ಜೊತೆಗೆ ಕಾರಣರಾಗುತ್ತಾರೆ.

ಆದರೆ ಎಲ್ಲಾ ಹುಡುಗಿಯರೂ ಟೆಡ್ಡಿ ಬೇರ್ ನಂತಹ ಸಾಫ್ಟ್ ಟಾಯ್ಸ್ ಗಳನ್ನು ಇಷ್ಟಪಡುತ್ತಾರೆ ಎಂದೇನೂ ಇಲ್ಲ. ಅಂತಹ ಜೀವ ಇಲ್ಲದ ವಸ್ತುವೊಂದಕ್ಕೆ ಹೆಸರಿಡುವುದು, ಅದನ್ನು ಒಂದು ಜೀವ ಇರುವ ವ್ಯಕ್ತಿಯಂತೆ ಪರಿಗಣಿಸುವುದು ಇದೆಲ್ಲ ತುಂಬಾ ಬಾಲಿಶ ಎಂಬ ಭಾವನೆಯೂ ಕೆಲವರಲ್ಲಿರುತ್ತದೆ. ಆದರೆ ಅಂಥ ಹುಡುಗಿಯರ ಸಂಖ್ಯೆ ಸ್ವಲ್ಪ ಕಡಿಮೆಯಿರಬಹುದೇನೋ. ಅಷ್ಟಕ್ಕೂ ನೀವು ಯಾರಿಗೆ ಉಡುಗೊರೆ ನೀಡುತ್ತಿದ್ದೀರಿ, ಅವರ ಅಭಿರುಚಿ-ಆಸಕ್ತಿಗಳನ್ನು ಸ್ವಲ್ಪ ಮಟ್ಟಿಗಾದರೂ ತಿಳಿದುಕೊಂಡಿರರಬೇಕಾಗಿರುವುದು ಉಡುಗೊರೆ ನೀಡಲು ಇರಬೇಕಾದ ಒಂದು ಪೂರ್ವ ಭಾವಿ ಅಗತ್ಯ. ಅದೇನೇ ಇರಲಿ, ಸದಾ ಜೊತೆಗಿರಿಸಿ, ಹೆಸರಿಟ್ಟು, ಜೊತೆಗೆ ಮಲಗಿಸಿಕೊಳ್ಳುವಷ್ಟು ತೀರಾ ಇಷ್ಟ ಪಡದೆ ಇರುವ ಹುಡುಗಿಯರೂ, ಟೆಡ್ಡಿಯನ್ನು ಉಡುಗೊರೆಯಾಗಿ ಪಡೆದಾಗ, ಮುಖ ಅರಳಿಸಿ ಒಂದು ಅವ್ಯಕ್ತ ಸಂತೋಷವನ್ನು ಅನುಭವಿಸುವುದಂತೂ ಸತ್ಯ. "ಬೆಳೆಯುವ ಸಿರಿ ಮೊಳಕೆಯಲ್ಲಿಯೇ" ಎಂಬ ಮಾತಿನಂತೆ ಮುಂದಿನ ಮಾತೆಯರಾಗುವ ಆ ಮಾತ್ರತ್ವದ ಭಾವ, ಹುಡುಗಿಯರ ಹೃದಯದಾಳದಲ್ಲಿ ಹುದುಗಿರುವುದರಿಂದಲೇ, ಅಪ್ಪಿ ಮುದ್ದಾಡಿ ತಮ್ಮ ಪ್ರೀತಿಯನ್ನು ಸುರಿಸಲು ಸಾಧ್ಯವಾಗುವ ಟೆಡ್ಡಿಗಳು ಅವರಿಗೆ ಇಷ್ಟವಾಗುತ್ತವೆ ಎಂದರೆ ಉತ್ಪ್ರೇಕ್ಷೆಯಾಗಲಾರದು !

Saturday, January 30, 2010

ಕರವಸ್ತ್ರ ಪುರಾಣ


ಪ್ರೌಢ ಶಾಲಾ ವಾರ್ಷಿಕೋತ್ಸವ ಸಮಾರಂಭ. ಮಕ್ಕಳಿಗೆಲ್ಲ ಇನ್ನಿಲ್ಲದ ಸಂಭ್ರಮ. ನೃತ್ಯ ನಾಟಕ ಯಕ್ಷಗಾನದಲ್ಲಿ ಭಾಗವಹಿಸುವವರೆಲ್ಲಾ ಆಯಾ ಪ್ರಕಾರ/ಪಾತ್ರಕ್ಕೆ ತಕ್ಕಂತೆ ಸಕಲ ವೇಷ ಭೂಷಣಗಳೊಂದಿಗೆ ಸಜ್ಜಿತರಾಗಿ ಪರದೆಯ ಹಿಂಭಾಗಕ್ಕೆ ಬಂದು ನಿಲ್ಲುತ್ತಿದ್ದಾರೆ. ಪ್ರತಿ ಒಂದು ಕಾರ್ಯಕ್ರಮ ಮುಗಿದಾಗಲೂ ಮುಂದಿನ ಕಾರ್ಯಕ್ರಮ ನೀಡಲಿರುವ ಮಕ್ಕಳ ಉತ್ಸಾಹ ದ್ವಿಗುಣಗೊಳ್ಳುತ್ತಿದೆ! ಇದೀಗ ಮುಂದಿನ ಕಾರ್ಯಕ್ರಮ "ಸಂಸ್ಕ್ರತ ನಾಟಕ - ಶಾಲಾ ವಿದ್ಯಾರ್ಥಿಗಳಿಂದ" ಎಂಬ ನಿರ್ವಾಹಕರ ಘೋಷಣೆಯ ನಂತರ ವೇದಿಕೆಯ ಪರದೆ ಸರಿಯುತ್ತದೆ. ಮಹಾರಾಜ ವೇದಿಕೆಗೆ ಬರುತ್ತಾನೆ. ಉನ್ನತ ವಿಚಾರ ಧಾರೆಯ ಸಂಭಾಷಣೆ ಆರಂಭವಾಗುತ್ತದೆ... ಆಗ ಪ್ರೇಕ್ಷಕರ ಮಧ್ಯೆ ಕೂತಿರುವ ಒಂದು ಧ್ವನಿ ತನ್ನ ಪಕ್ಕದಲ್ಲಿರುವ ಅಮ್ಮನ ಕಿವಿಯಲ್ಲಿ ಉಸುರುತ್ತದೆ "ಅಯ್ಯೋ ಇದೇನು ಅಕ್ಕ ಮಹಾರಾಜನಾದಾಗ್ಲೂ ಕರ್ ಚೀಫ್ ಹಿಡ್ ಕೊಳ್ಳೋದ್ ಬಿಟ್ಟಿಲ್ವಲ್ಲಾ :-( " ಎಂದು! ಮತ್ತೆ ನಾಟಕ ಮುಗಿದ ಮೇಲೆ ಮಹಾರಾಜನಿಗೆ ಎಲ್ಲ ಗೆಳತಿಯರ ತಮಾಷೆ! ತಂಗಿಯ ಬಯ್ಗುಳ!!

*****

ಹೌದು.. ಇದು ನನ್ನದೇ ಇತಿಹಾಸ! ನನಗೂ ಕರವಸ್ತ್ರಕ್ಕೂ ಒಂದು ಅಭೇದ್ಯ ನಂಟು - ಯಾರಿಂದಲೂ ಬಿಡಿಸಲಾಗದ್ದು ; ಏನೇ ಆದರೂ ತೊರೆಯಲಾಗದ್ದು! ಬಹುಷಃ ಜೀವನದಲ್ಲಿ ಈ ತನಕ ಯಾರ ಜೊತೆಯೂ ಇಲ್ಲದಷ್ಟು ;-) ಅದು ನನ್ನ ದೇಹದ ಒಂದು ಅವಿಭಾಜ್ಯ ಅಂಗವಾಗಿದೆಯೇನೋ ಎಂಬಷ್ಟು! ಕೆಲವೊಮ್ಮೆ ನನಗೇ ಆಶ್ಚರ್ಯ ಆಗುತ್ತೆ - ಅದೇಕೆ ನನಗೆ ಅದರ ಜೊತೆ ಅಂತಹ ನಂಟು ಎಂದು. ಯಾಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕಬಹುದೇನೋ. ಆದರೆ ಬೆಸೆದಿರುವ ನಂಟನ್ನು ಮಾತ್ರ ತೊರೆಯುವುದು ಅಸಾಧ್ಯ. ಎಲ್ಲೋ ಒಂದೆರಡು ಕ್ಷಣ ಅದು ನನ್ನ ಕೈಯಲ್ಲಿರದಿದ್ದರೆ ಏನೋ ಕಳಕೊಂಡಂತೆ ಭಾಸವಾಗಿ, ಕೂಡಲೇ ಹುಡುಕಿ ಅದನ್ನು ಮತ್ತೆ ಕೈಯೊಳಗೆ ಸೇರಿಸದಿದ್ದರೆ ನನ್ನ ಮುಂದಿನ ಕೆಲಸ ಆಗುವುದೇ ಇಲ್ಲವೇನೋ ಅನ್ನುವಷ್ಟು ಕಷ್ಟ!

ಛೆ ಅದೇಕೆ ಹಾಗೆ ಎಂದು ಎಷ್ಟೋ ಸಲ ಯೋಚಿಸುವುದಿದೆ. 'ರಾಜ್ಹ್ - ಪಿಚ್ಲೇ ಜನಮ್ ಕಾ' ದಲ್ಲಿ ತೋರಿಸುವಂತೆ ನಾನು ನನ್ನ ನೆನಪಿನ ಗಡಿಯಾರವನ್ನು ಹಿಂದಿರುಗಿಸಿದರೆ(ಹಿಂದಿನ ಜನ್ಮದ ತನಕ ಅಲ್ಲ ಬಿಡಿ) ನನ್ನ ಕಣ್ಣೆದುರು ಬಂದು ನಿಲ್ಲುವುದು ನೆಗಡಿ ರಾಯ! ನೆಗಡಿಯೆಂದರೆ ನನ್ನ ಜೀವನದಲ್ಲಿ ನಿರಂತರ ನೆಂಟ - ಕರೆಯದೆ ಬರುವ ಅತಿಥಿ! ಅತಿ ಚಿಕ್ಕಂದಿನಿಂದ ಕರವಸ್ತ್ರದ ಜೊತೆ ನಂಟು ಬೆಸೆಯಲು ಈ ನೆಂಟನೆ ಕಾರಣ. ದಿನವೂ ಬೆಳಿಗ್ಗೆ ಸೂರ್ಯ ನೆತ್ತಿಯ ಮೇಲೆ ಬರುವ ತನಕ ನನಗೂ ನೆಗಡಿಗೂ ಭಾರೀ ಸಖ್ಯ ಇತ್ತು. ಹಾಗಾಗಿ ಈ ಕರವಸ್ತ್ರ ಮಹಾಶಯನನ್ನು ನಾನು ಅದೆಷ್ಟು ನೆಚ್ಚಿಕೊಂಡುಬಿಟ್ಟೆನೆಂದರೆ - ಎಂದೂ ಬಿಡಲಾರದಷ್ಟು!! ಶಾಲೆಗೆ ಹೋಗುವ, ಸಮವಸ್ತ್ರ ಧರಿಸಿರುವ ಪುಟ್ಟ ಮಕ್ಕಳ ಅಂಗಿಗೆ ಅವರ ಅಮ್ಮಂದಿರು ಪಿನ್ ಮಾಡಿರುವ ಕರವಸ್ತ್ರವನ್ನು ನೋಡಿದಾಗಲಂತೂ "ಅಯ್ಯೋ ನನಗೂ ಇದೇ ಥರ ಮಾಡಿದ್ದರೆ ಪರಿಸ್ಥಿತಿ ಈ ಮಟ್ಟಿಗೆ ಬರುತ್ತಿರಲಿಲ್ಲವೇನೋ" ಎಂದು ಅನಿಸುವುದಂತೂ ನಿಜ!

ಈ ಶಾಲಾ ನಾಟಕದ ಪ್ರಸಂಗವಾದ ನಂತರವಂತೂ ತೀರಾ ಆಪ್ತವಲಯದಲ್ಲಿ ಕರವಸ್ತ್ರಕ್ಕೆ ನನ್ನ 'ಗಧೆ' ಅಂತ ನಾಮಕರಣ ಮಾಡಲಾಯಿತು. ಆಪ್ತ ಗೆಳತಿಯರಂತೂ ಕರವಸ್ತ್ರವನ್ನು ಬೇಕೆಂದೇ ಅಡಗಿಸಿಟ್ಟು ಆಟ ಆಡಿಸಿದ್ದೂ ಇದೆ. ಕರವಸ್ತ್ರ ಒಂದೆರಡು ನಿಮಿಷ ಕಾಣೆಯಾದರೆ, ಅದನ್ನು ಹುಡುಕುತ್ತ ನಾನು ಚಡಪಡಿಸುವುದನ್ನು ನೋಡಿ ಮಜಾ ತಗೋಳೋದು ಕೂಡ ನನ್ನ ಗೆಳತಿಯರ ಸಂತೋಷದ ಟೈಮ್ ಪಾಸ್! ರಾವಣ ಶಿವಲಿಂಗವನ್ನು ಹಿಡಿದಂತೆ ನಾನೂ ನನ್ನ ಕರವಸ್ತ್ರವನ್ನು ಕೆಳಗೆ ಇಡುವುದೇ ಕಡಿಮೆ. ಸದಾ ಕೈಯಲ್ಲಿ ಅದೂ 'ಮುದ್ದೆ'ಯಾಗಿರುವ ಸ್ಥಿತಿಯಲ್ಲಿ ಹಿಡಿದುಕೊಂಡರೇನೆ ನನಗೆ ನೆಮ್ಮದಿ:-) ಆದರೂ ಎಲ್ಲೋ ಒಂದು ಕಡೆ ಕೈ ತಪ್ಪಿ ಇಟ್ಟೆನೆಂದರೆ ನೋಡಿದವರು, 'ಓಹ್ ಯಾವುದೋ ಒಗೆಯಲಿಕ್ಕೆ ಹಾಕಬೇಕಾಗಿರುವ ಬಟ್ಟೆ' ಎಂದೆನಿಸಿ, ಇನ್ನಾವುದೇ(!) ಕಾರ್ಯಕ್ಕೆ ಉಪಯೋಗಿಸಿ , ಮತ್ತೆ ಒಗೆಯಲಿರುವ ಬಟ್ಟೆಗಳ ಗುಂಪಿಗೆ ಸೇರಿಸಿದ್ದೂ ಉಂಟು!! (ಒಮ್ಮೆ ಗೊತ್ತಾದ್ರೆ ಆಮೇಲೆ ಮಾಡೋಲ್ಲ.) ಇನ್ನು ಕೆಲವೊಮ್ಮೆ ಅಸ್ಪ್ರಶ್ಯ ವಸ್ತುವಿನಂತೆ ಪರಿಗಣಿಸಿದ್ದೂ ಇದೆ!! ಏನೋ ಒಂದು ಡಬ್ಬಿಯಿಂದ ಇನ್ನೊಂದು ಪಾತ್ರೆಗೆ ವರ್ಗಾವಣೆ ಮಾಡುವಾಗ ಕೈ ತಪ್ಪಿ ಸಾಮಾನೆಲ್ಲಾ ನೆಲದ ಪಾಲಾದುದರ ಶಾಪ/ಪಾಪ ಕರವಸ್ತ್ರಕ್ಕೆ ಬರುತ್ತಿತ್ತು (ಯಾಕೆಂದ್ರೆ ಕರವಸ್ತ್ರ ಹಿಡಿದುಕೊಂಡೆ ಆ ಕೆಲಸ ಮಾಡಿರುತ್ತೇನೆ) . ಇನ್ನು ಸಂದರ್ಶನಗಳನ್ನು ಎದುರಿಸುವ ಸಂದರ್ಭದಲ್ಲಿ ಈ ರೀತಿ ಕರವಸ್ತ್ರ ಹಿಡಿಯೋದು 'ಆತ್ಮವಿಶ್ವಾಸದ ಕೊರತೆ'ಯ ಸಂಕೇತ ಅಂತೆಲ್ಲ ಹಿತವಚನಗಳು ಕೇಳಿ ಬಂದರೂ, ನಾನು ಕರವಸ್ತ್ರವಿಹೀನಳಾಗಿ ಸಂದರ್ಶನ ಎದುರಿಸಲಿಲ್ಲ ಬಿಡಿ. ಅಂತೂ ಆ ಸಂದರ್ಭದಲ್ಲಿ ಏನೂ ತೊಂದರೆ ಆಗಿಲ್ಲ ನನ್ನ ಕರವಸ್ತ್ರದಿಂದ.

ಆದರೆ, ಪ್ರತಿಕೂಲತೆಗಳಷ್ಟೇ ಅನುಕೂಲಗಳು ಇದ್ದವು ಅನ್ನೋದು ಸಂತೋಷದ ವಿಚಾರ! ಕರವಸ್ತ್ರದ ಕುರಿತು ಯಾರ ಜೊತೆಯಲ್ಲಿಯಾದರೂ ಮಾತಾಡಿದರೆ ಮೊದ್ಲು ಗೊತ್ತಾಗೋದು ಎಷ್ಟು ಬೇಗ ಎಷ್ಟು ಕರವಸ್ತ್ರಗಳನ್ನು ಕಳೆದು ಕೊಳ್ಳುತ್ತಾರೆ ಅಂತ! ಆದ್ರೆ ಈ ಥರ ನಂಟು ಇರೋ ನಾನು ಕರವಸ್ತ್ರಗಳನ್ನು ಕಳಕೊಂಡಿದ್ದೆ ಇಲ್ಲ ಅನ್ನಬಹುದೇನೋ! ಇನ್ನು 'rapid game' ನಂತಹ ಆಟಗಳಲ್ಲಿ ಕರವಸ್ತ್ರ(ಅದೂ ladies ಅಂತಾನೆ specific ಆಗಿ) ಕೇಳಿದಾಗೆಲ್ಲಾ ನಾನಿರೋ ಟೀಂ ಯಾವತ್ತೂ ಲಕ್ಕಿ :-) ದೇವಸ್ಥಾನಕ್ಕೆ ಊಟಕ್ಕೆ ಹೋದಾಗ (ಕೆಳಗೆ ಕೂರೋವಾಗ) ಚಂದದ ಚೂಡಿಯನ್ನು ಕಾಪಾಡಿದ ಹೆಗ್ಗಳಿಕೆಯೂ ನನ್ನ ಕರವಸ್ತ್ರಕ್ಕೆ ಸಲ್ಲುತ್ತದೆ! ಮಲ್ಪೆ ಸಮುದ್ರ ತೀರದ ಮರಳಿನಲ್ಲಿ "ಸೊಪ್ಪಾಟ" ಆಡುವ ಭರದಲ್ಲಿ ಪಾದದೊಳಗೆ ಗಾಜಿನ ಚೂರು ಪ್ರವೇಶಿಸಿ, ನೆತ್ತರು ಹರಿದಾಗಲೂ, ಕೂಡಲೇ ಅದನ್ನು ತಡೆಯಲು ದೊರೆತಿದ್ದು ನನ್ನ ಕರವಸ್ತ್ರವೇ ಹೊರತು ಯಾವ ಫಸ್ಟ್ ಏಡ್ ಕಿಟ್ಟೂ ಅಲ್ಲ ! ಇನ್ನು ಸಂದರ್ಶನದಲ್ಲಿ "what are different uses of hanky" ಅಂತ ಕೇಳಿದಾಗ ಬಹುಷಃ ನನ್ನಷ್ಟು ದೊಡ್ಡ ಪಟ್ಟಿ ಯಾರೂ ಹೇಳಿರಲಿಕ್ಕಿಲ್ಲ! ಮುಂದೊಂದು ದಿನ ಪ್ರಿಯತಮನಿಗಾಗಿಯೂ ನಾನು ದುಪಟ್ಟಾ ಅಥವಾ ಸೆರಗಿನ ತುದಿ ಉಪಯೋಗಿಸುವ ಅವಶ್ಯಕತೆಯನ್ನು ನನ್ನ ಕರವಸ್ತ್ರವೇ ಪೂರೈಸಬಹುದೇನೋ! :-)

Monday, January 4, 2010

ವರ್ಷ ತುಂಬಿದ ಸಂಭ್ರಮದಲ್ಲಿ!


ಇಂದು "ಭಾವ ಜೀವ ತಳೆದಾಗ"ಕ್ಕೆ ವರ್ಷ ತುಂಬಿದ ಸಂಭ್ರಮ. ಒಮ್ಮೆ ಹಿನ್ನೋಟ ಬೀರಿದಾಗ ಆಶ್ಚರ್ಯ ಖುಷಿ ಜೊತೆಜೊತೆಗೆ ಆಗುತ್ತಿದೆ. ಆಶ್ಚರ್ಯ ಯಾಕೆಂದರೆ - ಬ್ಲಾಗು ಆರಂಭ ಮಾಡುವಾಗ, ಅಂತರ್ಜಾಲದಲ್ಲಿ ಇಷ್ಟೊಂದು ಕನ್ನಡ ಬ್ಲಾಗುಗಳಿವೆ ಎಂದಾಗಲೀ, ಇಷ್ಟೊಂದು ಸಂಖ್ಯೆಯ ಕನ್ನಡ ಅಭಿಮಾನ, ಸಾಹಿತ್ಯಾಸಕ್ತಿ ಇರುವ ಮಿತ್ರರೂ ಸಿಗುತ್ತಾರೆ ಎಂಬ ಯೋಚನೆಯಾಗಲೀ ನನಗೆ ಇರಲೇ ಇಲ್ಲ ಎನ್ನುವುದಕ್ಕೆ. ಖುಷಿ ಯಾಕೆಂದರೆ - ನಿರೀಕ್ಷೆಗೆ ಮೀರಿ ಕನ್ನಡ ಬರಹಗಳನ್ನು, ಬ್ಲಾಗುಗಳನ್ನು, ಸ್ನೇಹಿತರನ್ನು ಕಂಡುಕೊಂಡಿದ್ದಕ್ಕೆ, ಎಲ್ಲರ ಪ್ರೋತ್ಸಾಹ ದೊರಕಿದ್ದಕ್ಕೆ. ಈ ಅಭಿಯಾನದಲ್ಲಿ ನಿರಂತರ ಪ್ರೋತ್ಸಾಹ, ಸಲಹೆ ಸೂಚನೆಗಳನ್ನು ನೀಡಿದ ಸಹೃದಯ ಮಿತ್ರರಿಗೆಲ್ಲಾ ನಾನು ಸದಾ ಋಣಿ.

ಈ ಸಂದರ್ಭದಲ್ಲಿ ನಾನು ಬ್ಲಾಗು ಆರಂಭಿಸಿದ ಹಿನ್ನೆಲೆ, ನನ್ನಲ್ಲಿ ಮೂಲತಹ ಸಾಹಿತ್ಯಾಸಕ್ತಿ ಮೂಡಿದ ಬಗೆ - ಇವೆಲ್ಲಾ ನನ್ನ ನೆನಪಿನಾಳದಿಂದ ಸುರುಳಿಯಾಗಿ ಬಿಚ್ಚಿಕೊಳ್ಳುತ್ತಿವೆ. ಪ್ರಥಮವಾಗಿ ನನ್ನಲ್ಲಿ ಸಾಹಿತ್ಯಾಸಕ್ತಿ ಮಾಡಿದ್ದು - ಶಾಲಾ ದಿನಗಳಲ್ಲಿ. ನನ್ನ ಪ್ರಾಥಮಿಕ ಪ್ರೌಢ ಶಾಲೆಗಳಲ್ಲಿ ಪಾಠ ಪ್ರವಚನಗಳಷ್ಟೇ, ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹವಿತ್ತು. ಅದಕ್ಕಾಗಿಯೇ ನನ್ನ ಶಾಲೆ, ಶಾಲಾ ಶಿಕ್ಷಕ-ಶಿಕ್ಷಕಿಯರ ಬಗ್ಗೆ ನನಗೆ ತುಂಬಾ ಅಭಿಮಾನ, ಪ್ರೀತಿ. ಬಹುಷಃ ಎಲ್ಲರ ಜೀವನದಲ್ಲೂ, ಕಾಲೇಜಿನ ದಿನಗಳಿಗಿಂತ ಶಾಲಾ ದಿನಗಳ ನೆನಪುಗಳೇ ಮಧುರವಾಗಿರಬಹುದು. ಆ ಪ್ರಾಯವೇ ಅಂಥದ್ದು - ಮುಗ್ಧತೆ ಇನ್ನೂ ಮಾಸಿರುವುದಿಲ್ಲ; ಮಹತ್ತರವಾದ ಬೇರೆ ಜವಾಬ್ದಾರಿ/ಒತ್ತಡಗಳೂ ಇರುವುದಿಲ್ಲ (ಈಗಿನ ಮಕ್ಕಳ ಬಗ್ಗೆ ಗೊತ್ತಿಲ್ಲ :-( !! ). ನನ್ನ ಬಾಲ್ಯವನ್ನು ಅತ್ಯಂತ ಮಧುರವನ್ನಾಗಿಸಿದ್ದು - ನಾನು ಕಲಿತ ಶಾಲೆ, ನನ್ನ ಅಧ್ಯಾಪಕ-ಅಧ್ಯಾಪಕಿಯರು. ಆದ್ದರಿಂದ, ಹಲವು ವರ್ಷಗಳು ಕಳೆದಿದ್ದರೂ, ಈಗಲೂ ಆ ಕ್ಷಣಗಳೆಲ್ಲ ಇನ್ನೂ ಕಣ್ಣಿಗೆ ಕಟ್ಟಿದಂತೆ ಇವೆ, ನಿನ್ನೆಯೋ ಮೊನ್ನೆಯೋ ನಡೆದಂತಿವೆ. ಆ ಕಾಲದಲ್ಲಿಯೇ ನನಗೆ ಕವನ ಬರೆಯುವ ಆಸಕ್ತಿ ಮೂಡಿದ್ದು. ಪ್ರಾಥಮಿಕ ಶಾಲೆಯ 'ನೀತಿ ಅವಧಿ (moral period)' ಯಲ್ಲಿ ಮಕ್ಕಳು ಬರೆದ ಕವನಗಳನ್ನು ನಮ್ಮ ಅಧ್ಯಾಪಕರೊಬ್ಬರು ಇಡೀ ತರಗತಿಗೆ ಓದಿ ಹೇಳುತ್ತಿದ್ದುದೇ ನನಗೆ ಕವನ ಬರೆಯಲು ಸ್ಫೂರ್ತಿಯಾಗಿತ್ತು! "ರಸ್ತೆಯ ಅಳು" ಎಂಬ ಶೀರ್ಷಿಕೆಯ ನನ್ನ ಕವನವೊಂದನ್ನು ಆ ಅಧ್ಯಾಪಕರು ಅಳುವ ಧ್ವನಿಯಲ್ಲಿಯೇ ಓದಿ, ಕವನದಲ್ಲಿರುವ ರಸ್ತೆಯ ಬೇಸರದ ಭಾವವನ್ನು ಹಾಗೆಯೇ ಅಭಿವ್ಯಕ್ತಿಗೊಳಿಸಿದಾಗ, ನಾವೆಲ್ಲಾ ನಕ್ಕಿದ್ದು ನನಗಿನ್ನೂ ನೆನಪಿದೆ. ಇದು ಪ್ರಾಥಮಿಕ ಶಾಲೆಯ ಸುಂದರ ಅನುಭವವಾದರೆ ಪ್ರೌಢ ಶಾಲೆಯದು ಇನ್ನೂ ಸುಮಧುರವಾಗಿತ್ತು! ಪ್ರೌಢ ಶಾಲೆಯಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಂಘ, ಕಥೆ-ಕವನ ರಚನಾ ಕಮ್ಮಟ, ವಾರ್ಷಿಕೋತ್ಸವಕ್ಕೆ ನಡೆಸುತ್ತಿದ್ದ ಆಶು ಕಥಾ/ಕವಿತಾ ರಚನೆ ಸ್ಪರ್ಧೆ, "ನ ಭೂತೋ ನ ಭವಿಷ್ಯತಿ" ಎಂಬಂತೆ ನಡೆದ ಪ್ರೌಢಶಾಲಾ ಮಟ್ಟದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ - ಇವೆಲ್ಲವೂ ನನ್ನ ಬಾಲ್ಯವನ್ನು ಜೀವನದಾದ್ಯಂತ, ಮತ್ತೆ ಮತ್ತೆ ಮೆಲುಕುವ ಸವಿನೆನಪಿನ ಕಣಜವನ್ನಾಗಿಸಿವೆ.

ಆದರೆ ಕಾಲಚಕ್ರ ತಿರುಗಿ ಕಾಲೇಜಿಗೆ ಕಾಲಿಟ್ಟಾಗ, ಶಾಲಾ ದಿನಗಳಲ್ಲಿದ್ದ ಬರವಣಿಗೆಯ ಹವ್ಯಾಸ, ತೆರೆಮರೆಗೆ ಸರಿಯಿತು(ಕಲಿಕೆಗೆ ನೀಡಬೇಕಾದ ಮಹತ್ವದಿಂದಲೋ ಅಥವಾ ಪ್ರೋತ್ಸಾಹ ನೀಡುವ ಕೈಗಳು ಕಾಣೆಯಾಗಿದ್ದರಿಂದಲೋ!). ಆದರೆ ಇಂಜಿನಿಯರಿಂಗ್ ಪದವಿಯ ಕೊನೆಯ ವರುಷದಲ್ಲಿ ಮುನ್ನಾರಿಗೆ ಪ್ರವಾಸಕ್ಕೆ ಹೋದಾಗ, ಆ ಪ್ರಕೃತಿ ವೈಭವಕ್ಕೆ ಮಣಿದು, ಆಗ ಬಹು ಜನಪ್ರಿಯವಾಗಿದ್ದ "ಅನಿಸುತಿದೆ ಯಾಕೋ ಇಂದು" ಹಾಡಿನ ರಾಗದಲ್ಲಿ ಹಾಡಲು ಸಾಧ್ಯವಾಗುವಂತೆ ಒಂದು ಕವಿತೆ ಬರೆದಿದ್ದೆ. ಅದು ಹೊರತು ಪಡಿಸಿದರೆ ಬೇರೇನೂ ಬರೆದೇ ಇಲ್ಲ. ಇಂಜಿನಿಯರಿಂಗ್ ಮುಗಿದು, ವೃತ್ತಿಪರಳಾಗುವ ಮುನ್ನ ಕೆಲ ದಿನಗಳ ಕಾಲ ಮನೆಯಲ್ಲಿದ್ದ ಸಂದರ್ಭದಲ್ಲಿ ಒಮ್ಮೆ ಶಾಲೆಗೆ ಹೋಗಿದ್ದೆ. ಆಗ ನನ್ನ ನೆಚ್ಚಿನ ಕನ್ನಡ ಅಧ್ಯಾಪಕರು ಶಾಲೆಯ ಸಾಹಿತ್ಯ ಸಂಘದ ವಾರದ ಸಭೆಗೆ ಬರಲು ಆಹ್ವಾನವಿತ್ತರು. ತುಂಬಾ ಖುಷಿಯಿಂದ ಸಾಹಿತ್ಯ ಸಂಘ ಈಗ ಹೇಗೆ ನಡೆಯುತ್ತಿದೆ ಎಂದು ನೋಡಹೊರಟೆ. ಆದರೆ ಹಾಗೆ ವೀಕ್ಷಕಳಾಗಿ ನೋಡಲು ಹೋದ ನನಗೆ, ಯಾವ ಪೂರ್ವ ಸೂಚನೆಯನ್ನು ನೀಡದೆ, ಆ ಸಮಯದಲ್ಲಿಯೇ ಮಕ್ಕಳನ್ನುದ್ದೇಶಿಸಿ ಮಾತನಾಡಬೇಕೆಂದು ಅಧ್ಯಾಪಕರು ಹೇಳಿಬಿಡುವುದೇ!? ಅಂತೂ ಅವರ ಪ್ರೀತಿ ಪೂರ್ವಕ ಆದೇಶವನ್ನು ಒಪ್ಪಿಕೊಂಡು ನಾನು ಮಾತನಾಡಲೇಬೇಕಾಯಿತು. ಓದು, ಬರವಣಿಗೆಯಂತಹ ಹವ್ಯಾಸ, ಸಾಹಿತ್ಯಾಸಕ್ತಿ ಮನಸಿಗೆ ಅದೆಷ್ಟು ಆನಂದ ನೀಡುತ್ತದೆ ಎಂದು ಹೇಳುತ್ತಾ, ಕೊನೆಯಲ್ಲಿ ನಾನು ಮುನ್ನಾರಿನಲ್ಲಿ ಬರೆದ ಕವಿತೆಯನ್ನು ಹಾಡಿದೆ.

ನಾನೇನೋ ಹುರುಪಿನಲ್ಲಿ ಮಕ್ಕಳಿಗೆ ಪ್ರೇರಣೆ ನೀಡುವ ಉದ್ದೇಶದಿಂದ, ಮಾತಿನ ನಂತರ ಆ ಕವನವನ್ನು ವಾಚಿಸಿದೆ. ಆಮೇಲೆ ಬಂತು ನೋಡಿ ಫಜೀತಿ. ಸಭೆಯ ನಂತರದಲ್ಲಿ ಅಧ್ಯಾಪಕರೆಲ್ಲಾ ತುಂಬಾ ಖುಷಿಯಿಂದ, "ದಿವ್ಯಾ, ನೀನು ಈಗಲೂ ಬರವಣಿಗೆಯ ಹವ್ಯಾಸ ಇಟ್ಟುಕೊಂಡಿರುವುದು ನಮಗೆಲ್ಲ ತುಂಬಾ ಸಂತಸ ನೀಡಿದೆ; ಮತ್ತೊಮ್ಮೆ ನೀನು ಬರಬೇಕು; ನಿನ್ನ ಕವನಗಳನ್ನು ವಾಚಿಸಬೇಕು. ಒಂದು ಸಾಹಿತ್ಯ ಸಂಘದ ವಾರದ ಸಭೆಯ ಸಂಪೂರ್ಣ ಸಮಯವನ್ನು ನಿನಗೇ ಕೊಡುತ್ತೇವೆ. ಮಕ್ಕಳನ್ನುದ್ದೇಶಿಸಿ ಮಾತನಾಡಬೇಕು ಎಂದೇನೂ ಹೇಳುವುದಿಲ್ಲ... ನಿನ್ನ ಕವನ ವಾಚನದ್ದೆ ಕಾರ್ಯಕ್ರಮ ಅಂತ ಇಟ್ಟುಕೊಳ್ಳೋಣ" ಅನ್ನುವುದೇ? ನನಗಾದರೋ ಏನೂ ಬರೆದೇ ಇಲ್ಲ ಈ ಒಂದು ಕವನದ ಹೊರತಾಗಿ - ಎಂದು ನೇರವಾಗಿ ಹೇಳುವುದಕ್ಕೆ ಬೇಸರ; ಆದರೆ ಹೇಳದೆ ಇರಲೂ ಆಗದು ಎನ್ನುವ ಪರಿಸ್ಥಿತಿ! ನಾನು "ಸರ್, ನಾನು ಶಾಲಾ ದಿನಗಳ ನಂತರ ಬರೆದದ್ದು ತುಂಬಾ ಕಡಿಮೆ... ನೀವು ಹಾಗೆ ಕಾರ್ಯಕ್ರಮ ಇಟ್ಟುಕೊಂಡು ಕರೆದರೆ, ಓದುವಷ್ಟು ಕವನಗಳ ಸಂಗ್ರಹ ನನ್ನ ಬಳಿ ಇಲ್ಲ" ಅಂದೆ. ಆದರೂ ಅವರು ನನ್ನ ಮಾತನ್ನು ನಂಬಲು ತಯಾರಿಲ್ಲ! ನಾನು ಸುಮ್ಮನೆ ನಿರಾಕರಿಸುತ್ತಿದ್ದೇನೆ ಅಂತ ಅಂದುಕೊಂಡರೇನೋ...ನನ್ನೊಳಗೆ ಮಾತ್ರ ಬೇಸರ, ಅಪರಾಧಿ ಭಾವ(ಅವರಿಟ್ಟ ನಂಬಿಕೆ ವಿಶ್ವಾಸಗಳನ್ನು ಹುಸಿಗೊಳಿಸುತ್ತಿದ್ದೇನೆ ಎಂದು).

ಇದು ನಡೆದು ಸ್ವಲ್ಪ ದಿನಗಳಿಗೆ ವೃತ್ತಿಜೀವನಕ್ಕಾಗಿ ಮತ್ತೆ ಬೆಂಗಳೂರಿಗೆ ಬರಬೇಕಾಯಿತು. ಹೊಸ ಜನರು, ಹೊಸ ಪರಿಸರ, ಹೊಸ ಜೀವನ ಆರಂಭವಾಯಿತು. ಬಹುಷಃ ನನ್ನ ಶಾಲೆಯಲ್ಲಿ ನಡೆದ ಆ ಘಟನೆಯಿಂದಾಗಿ ನನ್ನಲ್ಲಿ ಮೂಡಿದ ಭಾವನೆಗಳಿಂದಾಗಿಯೋ, ಅಥವಾ ಪ್ರತಿ ತಿಂಗಳೂ ಇಂಟರ್ನಲ್ಸ್ ಬರೆಯುವ ಟೆನ್ಶನ್, ನಾಲ್ಕು ತಿಂಗಳಾಗುತ್ತಲೇ ಓಡೋಡಿ ಬರುವ ಸೆಮಿಸ್ಟರ್ ಪರೀಕ್ಷೆ - ಇವುಗಳಿಂದ ಮುಕ್ತಿ ದೊರೆತದ್ದರಿಂದಲೋ, ಅಥವಾ ಹೊಸ ಪರಿಸರದ ಹೊಸ ಮುಖಗಳ ನಡುವೆ ನಾನು ಏಕಾಂಗಿ ಅಂತ ಎಲ್ಲೋ ಒಂದು ಮೂಲೆಯಲ್ಲಿ ಮೂಡಿದ ಬೇಸರದಿಂದಲೋ, ವೃತ್ತಿ ದಿನಚರಿಯ ಏಕತಾನತೆಯಿಂದಲೋ, - ತೆರೆಮರೆಗೆ ಸರಿದ ನನ್ನ ಬರವಣಿಗೆ ಮತ್ತೆ ಬೆಳಕಿಗೆ ಬಂತು! ಅದಕ್ಕಾಗಿ ನನಗೆ ಸಂತೋಷವಿದೆ. ಇನ್ನು ಮುಂಬರುವ ದಿನಗಳಲ್ಲಿ ಕವನಗಳ ಜೊತೆಗೆ ಲೇಖನ/ಪ್ರಬಂಧ/ಕಥನ ಹೀಗೆ ಇತರ ಪ್ರಕಾರಗಳಿಗೂ ನನ್ನ ಆಸಕ್ತಿಯನ್ನು ಬೆಳೆಸಬೇಕು ಎಂಬ ಹಂಬಲವಿದೆ. ಭಾವ ಜೀವ ತಳೆದಾಗ ಅದನ್ನು ಅಕ್ಷರಕ್ಕಿಳಿಸುವ ಪ್ರಯತ್ನ ಮಾಡುತ್ತೇನೆ. ಈ ಪ್ರಯತ್ನ ನಿರಂತರವಾಗಿರಲಿ ಎಂದು ಹಾರೈಸುವಿರಲ್ಲವೇ?