Saturday, January 30, 2010

ಕರವಸ್ತ್ರ ಪುರಾಣ


ಪ್ರೌಢ ಶಾಲಾ ವಾರ್ಷಿಕೋತ್ಸವ ಸಮಾರಂಭ. ಮಕ್ಕಳಿಗೆಲ್ಲ ಇನ್ನಿಲ್ಲದ ಸಂಭ್ರಮ. ನೃತ್ಯ ನಾಟಕ ಯಕ್ಷಗಾನದಲ್ಲಿ ಭಾಗವಹಿಸುವವರೆಲ್ಲಾ ಆಯಾ ಪ್ರಕಾರ/ಪಾತ್ರಕ್ಕೆ ತಕ್ಕಂತೆ ಸಕಲ ವೇಷ ಭೂಷಣಗಳೊಂದಿಗೆ ಸಜ್ಜಿತರಾಗಿ ಪರದೆಯ ಹಿಂಭಾಗಕ್ಕೆ ಬಂದು ನಿಲ್ಲುತ್ತಿದ್ದಾರೆ. ಪ್ರತಿ ಒಂದು ಕಾರ್ಯಕ್ರಮ ಮುಗಿದಾಗಲೂ ಮುಂದಿನ ಕಾರ್ಯಕ್ರಮ ನೀಡಲಿರುವ ಮಕ್ಕಳ ಉತ್ಸಾಹ ದ್ವಿಗುಣಗೊಳ್ಳುತ್ತಿದೆ! ಇದೀಗ ಮುಂದಿನ ಕಾರ್ಯಕ್ರಮ "ಸಂಸ್ಕ್ರತ ನಾಟಕ - ಶಾಲಾ ವಿದ್ಯಾರ್ಥಿಗಳಿಂದ" ಎಂಬ ನಿರ್ವಾಹಕರ ಘೋಷಣೆಯ ನಂತರ ವೇದಿಕೆಯ ಪರದೆ ಸರಿಯುತ್ತದೆ. ಮಹಾರಾಜ ವೇದಿಕೆಗೆ ಬರುತ್ತಾನೆ. ಉನ್ನತ ವಿಚಾರ ಧಾರೆಯ ಸಂಭಾಷಣೆ ಆರಂಭವಾಗುತ್ತದೆ... ಆಗ ಪ್ರೇಕ್ಷಕರ ಮಧ್ಯೆ ಕೂತಿರುವ ಒಂದು ಧ್ವನಿ ತನ್ನ ಪಕ್ಕದಲ್ಲಿರುವ ಅಮ್ಮನ ಕಿವಿಯಲ್ಲಿ ಉಸುರುತ್ತದೆ "ಅಯ್ಯೋ ಇದೇನು ಅಕ್ಕ ಮಹಾರಾಜನಾದಾಗ್ಲೂ ಕರ್ ಚೀಫ್ ಹಿಡ್ ಕೊಳ್ಳೋದ್ ಬಿಟ್ಟಿಲ್ವಲ್ಲಾ :-( " ಎಂದು! ಮತ್ತೆ ನಾಟಕ ಮುಗಿದ ಮೇಲೆ ಮಹಾರಾಜನಿಗೆ ಎಲ್ಲ ಗೆಳತಿಯರ ತಮಾಷೆ! ತಂಗಿಯ ಬಯ್ಗುಳ!!

*****

ಹೌದು.. ಇದು ನನ್ನದೇ ಇತಿಹಾಸ! ನನಗೂ ಕರವಸ್ತ್ರಕ್ಕೂ ಒಂದು ಅಭೇದ್ಯ ನಂಟು - ಯಾರಿಂದಲೂ ಬಿಡಿಸಲಾಗದ್ದು ; ಏನೇ ಆದರೂ ತೊರೆಯಲಾಗದ್ದು! ಬಹುಷಃ ಜೀವನದಲ್ಲಿ ಈ ತನಕ ಯಾರ ಜೊತೆಯೂ ಇಲ್ಲದಷ್ಟು ;-) ಅದು ನನ್ನ ದೇಹದ ಒಂದು ಅವಿಭಾಜ್ಯ ಅಂಗವಾಗಿದೆಯೇನೋ ಎಂಬಷ್ಟು! ಕೆಲವೊಮ್ಮೆ ನನಗೇ ಆಶ್ಚರ್ಯ ಆಗುತ್ತೆ - ಅದೇಕೆ ನನಗೆ ಅದರ ಜೊತೆ ಅಂತಹ ನಂಟು ಎಂದು. ಯಾಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕಬಹುದೇನೋ. ಆದರೆ ಬೆಸೆದಿರುವ ನಂಟನ್ನು ಮಾತ್ರ ತೊರೆಯುವುದು ಅಸಾಧ್ಯ. ಎಲ್ಲೋ ಒಂದೆರಡು ಕ್ಷಣ ಅದು ನನ್ನ ಕೈಯಲ್ಲಿರದಿದ್ದರೆ ಏನೋ ಕಳಕೊಂಡಂತೆ ಭಾಸವಾಗಿ, ಕೂಡಲೇ ಹುಡುಕಿ ಅದನ್ನು ಮತ್ತೆ ಕೈಯೊಳಗೆ ಸೇರಿಸದಿದ್ದರೆ ನನ್ನ ಮುಂದಿನ ಕೆಲಸ ಆಗುವುದೇ ಇಲ್ಲವೇನೋ ಅನ್ನುವಷ್ಟು ಕಷ್ಟ!

ಛೆ ಅದೇಕೆ ಹಾಗೆ ಎಂದು ಎಷ್ಟೋ ಸಲ ಯೋಚಿಸುವುದಿದೆ. 'ರಾಜ್ಹ್ - ಪಿಚ್ಲೇ ಜನಮ್ ಕಾ' ದಲ್ಲಿ ತೋರಿಸುವಂತೆ ನಾನು ನನ್ನ ನೆನಪಿನ ಗಡಿಯಾರವನ್ನು ಹಿಂದಿರುಗಿಸಿದರೆ(ಹಿಂದಿನ ಜನ್ಮದ ತನಕ ಅಲ್ಲ ಬಿಡಿ) ನನ್ನ ಕಣ್ಣೆದುರು ಬಂದು ನಿಲ್ಲುವುದು ನೆಗಡಿ ರಾಯ! ನೆಗಡಿಯೆಂದರೆ ನನ್ನ ಜೀವನದಲ್ಲಿ ನಿರಂತರ ನೆಂಟ - ಕರೆಯದೆ ಬರುವ ಅತಿಥಿ! ಅತಿ ಚಿಕ್ಕಂದಿನಿಂದ ಕರವಸ್ತ್ರದ ಜೊತೆ ನಂಟು ಬೆಸೆಯಲು ಈ ನೆಂಟನೆ ಕಾರಣ. ದಿನವೂ ಬೆಳಿಗ್ಗೆ ಸೂರ್ಯ ನೆತ್ತಿಯ ಮೇಲೆ ಬರುವ ತನಕ ನನಗೂ ನೆಗಡಿಗೂ ಭಾರೀ ಸಖ್ಯ ಇತ್ತು. ಹಾಗಾಗಿ ಈ ಕರವಸ್ತ್ರ ಮಹಾಶಯನನ್ನು ನಾನು ಅದೆಷ್ಟು ನೆಚ್ಚಿಕೊಂಡುಬಿಟ್ಟೆನೆಂದರೆ - ಎಂದೂ ಬಿಡಲಾರದಷ್ಟು!! ಶಾಲೆಗೆ ಹೋಗುವ, ಸಮವಸ್ತ್ರ ಧರಿಸಿರುವ ಪುಟ್ಟ ಮಕ್ಕಳ ಅಂಗಿಗೆ ಅವರ ಅಮ್ಮಂದಿರು ಪಿನ್ ಮಾಡಿರುವ ಕರವಸ್ತ್ರವನ್ನು ನೋಡಿದಾಗಲಂತೂ "ಅಯ್ಯೋ ನನಗೂ ಇದೇ ಥರ ಮಾಡಿದ್ದರೆ ಪರಿಸ್ಥಿತಿ ಈ ಮಟ್ಟಿಗೆ ಬರುತ್ತಿರಲಿಲ್ಲವೇನೋ" ಎಂದು ಅನಿಸುವುದಂತೂ ನಿಜ!

ಈ ಶಾಲಾ ನಾಟಕದ ಪ್ರಸಂಗವಾದ ನಂತರವಂತೂ ತೀರಾ ಆಪ್ತವಲಯದಲ್ಲಿ ಕರವಸ್ತ್ರಕ್ಕೆ ನನ್ನ 'ಗಧೆ' ಅಂತ ನಾಮಕರಣ ಮಾಡಲಾಯಿತು. ಆಪ್ತ ಗೆಳತಿಯರಂತೂ ಕರವಸ್ತ್ರವನ್ನು ಬೇಕೆಂದೇ ಅಡಗಿಸಿಟ್ಟು ಆಟ ಆಡಿಸಿದ್ದೂ ಇದೆ. ಕರವಸ್ತ್ರ ಒಂದೆರಡು ನಿಮಿಷ ಕಾಣೆಯಾದರೆ, ಅದನ್ನು ಹುಡುಕುತ್ತ ನಾನು ಚಡಪಡಿಸುವುದನ್ನು ನೋಡಿ ಮಜಾ ತಗೋಳೋದು ಕೂಡ ನನ್ನ ಗೆಳತಿಯರ ಸಂತೋಷದ ಟೈಮ್ ಪಾಸ್! ರಾವಣ ಶಿವಲಿಂಗವನ್ನು ಹಿಡಿದಂತೆ ನಾನೂ ನನ್ನ ಕರವಸ್ತ್ರವನ್ನು ಕೆಳಗೆ ಇಡುವುದೇ ಕಡಿಮೆ. ಸದಾ ಕೈಯಲ್ಲಿ ಅದೂ 'ಮುದ್ದೆ'ಯಾಗಿರುವ ಸ್ಥಿತಿಯಲ್ಲಿ ಹಿಡಿದುಕೊಂಡರೇನೆ ನನಗೆ ನೆಮ್ಮದಿ:-) ಆದರೂ ಎಲ್ಲೋ ಒಂದು ಕಡೆ ಕೈ ತಪ್ಪಿ ಇಟ್ಟೆನೆಂದರೆ ನೋಡಿದವರು, 'ಓಹ್ ಯಾವುದೋ ಒಗೆಯಲಿಕ್ಕೆ ಹಾಕಬೇಕಾಗಿರುವ ಬಟ್ಟೆ' ಎಂದೆನಿಸಿ, ಇನ್ನಾವುದೇ(!) ಕಾರ್ಯಕ್ಕೆ ಉಪಯೋಗಿಸಿ , ಮತ್ತೆ ಒಗೆಯಲಿರುವ ಬಟ್ಟೆಗಳ ಗುಂಪಿಗೆ ಸೇರಿಸಿದ್ದೂ ಉಂಟು!! (ಒಮ್ಮೆ ಗೊತ್ತಾದ್ರೆ ಆಮೇಲೆ ಮಾಡೋಲ್ಲ.) ಇನ್ನು ಕೆಲವೊಮ್ಮೆ ಅಸ್ಪ್ರಶ್ಯ ವಸ್ತುವಿನಂತೆ ಪರಿಗಣಿಸಿದ್ದೂ ಇದೆ!! ಏನೋ ಒಂದು ಡಬ್ಬಿಯಿಂದ ಇನ್ನೊಂದು ಪಾತ್ರೆಗೆ ವರ್ಗಾವಣೆ ಮಾಡುವಾಗ ಕೈ ತಪ್ಪಿ ಸಾಮಾನೆಲ್ಲಾ ನೆಲದ ಪಾಲಾದುದರ ಶಾಪ/ಪಾಪ ಕರವಸ್ತ್ರಕ್ಕೆ ಬರುತ್ತಿತ್ತು (ಯಾಕೆಂದ್ರೆ ಕರವಸ್ತ್ರ ಹಿಡಿದುಕೊಂಡೆ ಆ ಕೆಲಸ ಮಾಡಿರುತ್ತೇನೆ) . ಇನ್ನು ಸಂದರ್ಶನಗಳನ್ನು ಎದುರಿಸುವ ಸಂದರ್ಭದಲ್ಲಿ ಈ ರೀತಿ ಕರವಸ್ತ್ರ ಹಿಡಿಯೋದು 'ಆತ್ಮವಿಶ್ವಾಸದ ಕೊರತೆ'ಯ ಸಂಕೇತ ಅಂತೆಲ್ಲ ಹಿತವಚನಗಳು ಕೇಳಿ ಬಂದರೂ, ನಾನು ಕರವಸ್ತ್ರವಿಹೀನಳಾಗಿ ಸಂದರ್ಶನ ಎದುರಿಸಲಿಲ್ಲ ಬಿಡಿ. ಅಂತೂ ಆ ಸಂದರ್ಭದಲ್ಲಿ ಏನೂ ತೊಂದರೆ ಆಗಿಲ್ಲ ನನ್ನ ಕರವಸ್ತ್ರದಿಂದ.

ಆದರೆ, ಪ್ರತಿಕೂಲತೆಗಳಷ್ಟೇ ಅನುಕೂಲಗಳು ಇದ್ದವು ಅನ್ನೋದು ಸಂತೋಷದ ವಿಚಾರ! ಕರವಸ್ತ್ರದ ಕುರಿತು ಯಾರ ಜೊತೆಯಲ್ಲಿಯಾದರೂ ಮಾತಾಡಿದರೆ ಮೊದ್ಲು ಗೊತ್ತಾಗೋದು ಎಷ್ಟು ಬೇಗ ಎಷ್ಟು ಕರವಸ್ತ್ರಗಳನ್ನು ಕಳೆದು ಕೊಳ್ಳುತ್ತಾರೆ ಅಂತ! ಆದ್ರೆ ಈ ಥರ ನಂಟು ಇರೋ ನಾನು ಕರವಸ್ತ್ರಗಳನ್ನು ಕಳಕೊಂಡಿದ್ದೆ ಇಲ್ಲ ಅನ್ನಬಹುದೇನೋ! ಇನ್ನು 'rapid game' ನಂತಹ ಆಟಗಳಲ್ಲಿ ಕರವಸ್ತ್ರ(ಅದೂ ladies ಅಂತಾನೆ specific ಆಗಿ) ಕೇಳಿದಾಗೆಲ್ಲಾ ನಾನಿರೋ ಟೀಂ ಯಾವತ್ತೂ ಲಕ್ಕಿ :-) ದೇವಸ್ಥಾನಕ್ಕೆ ಊಟಕ್ಕೆ ಹೋದಾಗ (ಕೆಳಗೆ ಕೂರೋವಾಗ) ಚಂದದ ಚೂಡಿಯನ್ನು ಕಾಪಾಡಿದ ಹೆಗ್ಗಳಿಕೆಯೂ ನನ್ನ ಕರವಸ್ತ್ರಕ್ಕೆ ಸಲ್ಲುತ್ತದೆ! ಮಲ್ಪೆ ಸಮುದ್ರ ತೀರದ ಮರಳಿನಲ್ಲಿ "ಸೊಪ್ಪಾಟ" ಆಡುವ ಭರದಲ್ಲಿ ಪಾದದೊಳಗೆ ಗಾಜಿನ ಚೂರು ಪ್ರವೇಶಿಸಿ, ನೆತ್ತರು ಹರಿದಾಗಲೂ, ಕೂಡಲೇ ಅದನ್ನು ತಡೆಯಲು ದೊರೆತಿದ್ದು ನನ್ನ ಕರವಸ್ತ್ರವೇ ಹೊರತು ಯಾವ ಫಸ್ಟ್ ಏಡ್ ಕಿಟ್ಟೂ ಅಲ್ಲ ! ಇನ್ನು ಸಂದರ್ಶನದಲ್ಲಿ "what are different uses of hanky" ಅಂತ ಕೇಳಿದಾಗ ಬಹುಷಃ ನನ್ನಷ್ಟು ದೊಡ್ಡ ಪಟ್ಟಿ ಯಾರೂ ಹೇಳಿರಲಿಕ್ಕಿಲ್ಲ! ಮುಂದೊಂದು ದಿನ ಪ್ರಿಯತಮನಿಗಾಗಿಯೂ ನಾನು ದುಪಟ್ಟಾ ಅಥವಾ ಸೆರಗಿನ ತುದಿ ಉಪಯೋಗಿಸುವ ಅವಶ್ಯಕತೆಯನ್ನು ನನ್ನ ಕರವಸ್ತ್ರವೇ ಪೂರೈಸಬಹುದೇನೋ! :-)

12 comments:

  1. ದಿವ್ಯ,
    ಹಾ ಹಾ, ಚೆನ್ನಾಗಿ ಇದೆ ರೀ ನಿಮ್ಮ ಕರವಸ್ತ್ರದ ಕತೆ.......ಅಂತು ಒಳ್ಳೆ ಉಪಯೋಗ... ಇದೆ ನಿನ್ನ ಕರವಸ್ತ್ರದಿಂದ .....ಗುಡ್

    ReplyDelete
  2. ಸೂಪರ್‌ ಬರಹ.... ತುಂಬಾ ಚೆನ್ನಾಗಿದೆ... ಇನ್ನೂ ಈ ರೀತಿಯ ಬೇರೆ ಬೇರೆ ವಿಷಯಗಳ ಕುರಿತು ಲಘು ಪ್ರ-ಬಂಧ ಬರೆಯಿರಿ ಚೆನ್ನಾಗಿರುತ್ತದೆ. ಕಾವ್ಯದಿಂದ ಗದ್ಯಕ್ಕೆ ಹೊರಳಿಕೊಂಡಿರುವ ನಿಮ್ಮ ಬರಹದಲ್ಲಿ ಕಾವ್ಯದ ಸೊಗಸು ಇದೆ... ಮುಂದುವರೆಯಲಿ ನಿಮ್ಮ ಬರವಣಿಯ ’ದಿವ್ಯ’ ಯಾನ.... once again....sUUUUUper.. -ದಿ.ಮಡಗಾಂವಕರ್

    ReplyDelete
  3. ಚಂದದ ಬರಹ....

    ನನ್ನ ಬಳಿಯೂ ಕರವಸ್ತ್ರ ಇರುತ್ತದೆ...
    ಅದು ಇರಲೇ ಬೇಕು..

    ಆದರೆ ಉಪಯೋಗಿಸುವದು ಬಹಳ ಬಹಳ ಕಡಿಮೆ..

    ಆದರೆ ಅದು ಪ್ಯಾಂಟಿನ ಹಿಂಬದಿ ಕಿಸೆಯಲ್ಲಿರಬೇಕು..
    ಅಲ್ಲಿರದಿದ್ದರೆ ನನಗೆ ಏನೋ ಒಂಥರ ಕಸಿವಿಸಿ..

    ನಿಮ್ಮ ಅನುಭವ .. ಬರೆದ ರೀತಿ ತುಂಬಾ ಚೆನ್ನಾಗಿದೆ..

    ಅಭಿನಂದನೆಗಳು...

    ReplyDelete
  4. Ha ha.. I remember that Sanskrit drama and the long long history of your untouchable but yet most valuable hanky :)
    Forgive me for commenting in English for such a nice Kannada article.

    ReplyDelete
  5. ನಿಮ್ಮ ಪ್ರಿಯಕರನಿಗೋಸ್ಕರ ಇನ್ನೊಂದು ಕರ್ಚೀಫ್ ಇಟ್ಟುಕೊಂಡಿರಿ .ಕರ್ಚೀಫ್ ನಿಂದ ರೋಗಗಳು ಹರಡುತ್ತವಂತೆ!

    ReplyDelete
  6. ha ha ha!

    dont tell me u carry a huge hanky!!!
    and i agree with Sandeep!!! ಪ್ರಿಯ’ಕರವಸ್ತ್ರ’ should be separate
    :-)
    malathi S

    ReplyDelete
  7. ನೈಸು. :-)

    ಅಂದಹಾಗೇ, ಹುಡ್ಗೀರು ಕರ್ಚೀಫ್ ಹಿಡ್ಕೊಂಡಿರೋ ಬಗ್ಗೆ ವಿಕಾಸ್ ಹೆಗಡೆ ಭಾಳ ಹಿಂದೆ ಒಂದು ಸಮೀಕ್ಷೆ ನಡೆಸಿ ಬರೆದಿದ್ದು ಇಲ್ಲಿದೆ. :-)

    ReplyDelete
  8. ತುಂಬಾ ಚೆನ್ನಾಗಿದೆ ಲಲಿತ ಪ್ರಬಂಧ. ನಾನೂ ಕರವಸ್ತ್ರ ಪ್ರೇಮಿಯೇ :)

    ReplyDelete
  9. ದಿವ್ಯಾ,
    ಕರವಸ್ತ್ರ ಪುರಾಣ ಸೂಪರ್
    ಓದಲು ಮಜವಾಗಿದೆ

    ReplyDelete
  10. ಕರವಸ್ತ್ರ ಮರೆತು ಬಿಟ್ಟು ಬಂದಾಗಲೇ ಕರವಸ್ತ್ರದ ಅವಶ್ಯಕತೆ ಗೊತ್ತಾಗೋದು.. ಚಂದದ ಬರಹ, ಹೀಗೆ ಬರೆಯುತ್ತಿರಿ

    ReplyDelete
  11. ಪ್ರತಿಕ್ರಿಯಿಸಿದ ಎಲ್ಲರಿಗೂ ಪ್ರೀತಿಯ ಧನ್ಯವಾದಗಳು
    -ದಿವ್ಯಾ.

    ReplyDelete