Monday, August 31, 2009

ಅವಿಸ್ಮರಣೀಯ "ಲಗೇ ರಹೋ...."

"ಯಾವಾಗ ನೀನು ನಿನ್ನ ತಪ್ಪನ್ನು ಒಪ್ಪಿಕೊಂಡು, ಅದಕ್ಕಾಗಿ ಕ್ಷಮೆ ಕೇಳುತ್ತಿಯೋ, ಸತ್ಯವನ್ನೇ ಹೇಳುತ್ತೀಯೋ, ಆಗ ನಿನಗೆ ಖಂಡಿತಾ ವಿಜಯ ಪ್ರಾಪ್ತಿಯಾಗುತ್ತದೆ" ಇದು "ಲಗೇ ರಹೋ.. ಮುನ್ನಾಭಾಯಿ" ಚಿತ್ರದಲ್ಲಿ, ಗಾಂಧೀಜಿ ಮುನ್ನಾ ಭಾಯಿಗೆ ಹೇಳುವ ಮಾತುಗಳು! ತುಂಬಾ ಮೌಲ್ಯಯುತವಾದ ಮಾತುಗಳು. ಆದರೆ ಜೀವನದಲ್ಲಿ ಅದನ್ನು ಸದಾ ಅನುಸರಿಸುವುದು ಅಷ್ಟೊಂದು ಸುಲಭವಲ್ಲ. ಮೊನ್ನೆ ಸ್ವತಂತ್ರ ದಿನಾಚರಣೆಯಂದು ಬೆಳಿಗ್ಗೆ ಟಿ.ವಿ. ಚಾನಲೊಂದರಲ್ಲಿ ಈ ಚಿತ್ರದ ದೃಶ್ಯ ಮೂಡಿ ಬರುತ್ತಿತ್ತು. ಗಾಂಧೀಜಿ ಹೇಳಿದಂತೆ ಮುನ್ನಾ, ತನ್ನ ಆಪ್ತ ಸಖನ ಬಳಿ ಹೋಗಿ, ತನ್ನ ತಪ್ಪನ್ನು ಒಪ್ಪಿಕೊಂಡು ಅಳುವ ದೃಶ್ಯ ತುಂಬಾ ಹೃದಯಸ್ಪರ್ಶಿ!

ಇದು ನೋಡುತ್ತಿದ್ದಂತೆ, ನೆನಪಿನ ಸುರುಳಿಯಿಂದ ನನ್ನ ಪದವಿ ತರಗತಿಯ ಆ ಮಧುರ ದಿನಗಳು ತೇಲಿ ಬಂದವು. ಈ ಚಿತ್ರ ಮೊದಲು ತೆರೆ ಕಂಡಾಗ ನಾನು ಇಂಜಿನಿಯರಿಂಗ್ ಪದವಿಯ ಮೂರನೇ ವರ್ಷದಲ್ಲಿದ್ದೆ. ಈ ಚಿತ್ರಕ್ಕೂ ನಮ್ಮ ವಿದ್ಯಾರ್ಥಿ ಜೀವನಕ್ಕೂ ಒಂದು ಅಗಾಧವಾದ ನಂಟಿದೆ! ಮನದಾಳ ಸೇರಿದ್ದ ಈ ಕ್ಷಣಗಳೆಲ್ಲಾ ಮತ್ತೆ ಮೇಲಕ್ಕೆ ಬಂದು, ತುಟಿಯ ಮೇಲೊಂದು ನಗು ಮೂಡಿಸಿತು. ಈಗೇನೋ ನಗು ಬರುತ್ತೆ, ಆದರೆ ಆಗ ಮಾತ್ರ ಸಾಕು ಬೇಕಾಗಿ ಹೋಗಿತ್ತು.

ಹೇಳಿ ಕೇಳಿ ನಮ್ಮದು, ಶಿಸ್ತಿಗೆ ತುಂಬಾ ಹೆಸರುವಾಸಿಯಾದ ಕಾಲೇಜು. ಬೇರೆ ಕಾಲೇಜುಗಳಲ್ಲಿ ಯಾರೂ ತಲೆ ಕೆಡಿಸಿಕೊಳ್ಳದ ವಿಷಯಗಳು ನಮ್ಮಲ್ಲಿ ತಲೆ ಹೋಗುವಂತಹ ವಿಷಯಗಳಾಗಿ ಬಿಡುತ್ತಿದ್ದವು! ನಮ್ಮ ಕಾಲೇಜಿನ ನಿರ್ದೇಶಕರು " When you pay for whole year, why do you want to bunk the classes? You have to be keen to attend 100% classes............ಶಿಸ್ತಿಲ್ಲದಿದ್ದರೆ ಜೀವನದಲ್ಲಿ ಯಾವ ಯಶಸ್ಸನ್ನೂ ಸಾಧಿಸಲಾಗುವುದಿಲ್ಲ... ಹಾಗಿರುವಾಗ ನಿಮಗೆಲ್ಲಾ ಯಾಕೆ ಈ ಶಿಸ್ತು ಕ್ರಮಗಳ ಬಗ್ಗೆ ಬೇಸರ, ದ್ವೇಷ? ನೀವು ಹೆಮ್ಮೆಯಿಂದ ಇವುಗಳನ್ನು ಪಾಲಿಸಬೇಕು" ಅಂತೆಲ್ಲ ಹೇಳುವಾಗ ಅವರು ಹೇಳುವುದು ನಿಜ ಎಂದೆನಿಸಿದರೂ, ಮತ್ತೆಲ್ಲೋ, "ಅತಿಯಾದರೆ ಅಮೃತವೂ ವಿಷ" ಎಂದೆನಿಸುತ್ತಿತ್ತು... ನಮ್ಮ ಕಾಲೇಜಿನ ಕಟ್ಟು ನಿಟ್ಟುಗಳ ಬಗ್ಗೆ ಇಷ್ಟೆಲ್ಲಾ ತಿಳಿದಿದ್ದೂ, ಒಮ್ಮೆ ನಾವೆಲ್ಲಾ ಒಂದು ದಿಟ್ಟ(!!) ಹೆಜ್ಜೆ ಇಟ್ಟಿದ್ದೆವು. ತರಗತಿಯ ಎಲ್ಲಾ ಹುಡುಗಿಯರೂ ಜೊತೆಯಾಗಿ ಎಲ್ಲಾದರೂ ಹೋಗಬೇಕು ಎಂಬುದು ನಮ್ಮ ಬಹು ದಿನಗಳ ಅಪೇಕ್ಷೆಯಾಗಿತ್ತು. ಅಂತೂ ಇಂತೂ ಯಾವುದೋ ಒಂದು ಫ್ರೀ ಪೀರಿಡ್ ನಲ್ಲಿ ಕುಳಿತು ಪ್ಲಾನ್ ಹಾಕಿದೆವು - "ಲಗೇ ರಹೋ.." ಚಿತ್ರಕ್ಕೆ ಹೋಗುವುದು ಎಂದು. ಎಲ್ಲರಿಗೂ ಆದಿತ್ಯವಾರ ಬರಲಾಗದುದಕ್ಕೆ ಏನೇನೋ ಕಾರಣಗಳು. ಹಾಗಾಗಿ ಒಂದು ವಾರದ ದಿನವೇ ಬೆಳಗ್ಗೆಯ ಎರಡು ಅವಧಿಗಳ ಕಾಲ ಹಾಜರಾಗಿ, ಮತ್ತೆ ಊರ್ವಶಿ ಥೀಯೆಟರ್ ಗೆ ಹೋಗಿ, ಮಧಾಹ್ನ ಒಂದುವರೆಯ ಷೋಗೆ ಟಿಕೆಟ್ ಬುಕ್ ಮಾಡಿ, ಲಾಲ್ ಬಾಗ್ ನಲ್ಲಿ ಸುತ್ತಾಡಿ, ಒಂದು ಒಳ್ಳೆಯ ಹೋಟೆಲಿನಲ್ಲಿ ಉಂಡು, ಚಲನಚಿತ್ರ ನೋಡಿ ಮತ್ತೆ ಮನೆಗೆ ಹೋಗುವುದು ಎಂದು ನಮ್ಮ ಮಾಸ್ಟರ್(!) ಪ್ಲಾನ್ ರೆಡಿ ಆಯಿತು. ಆದರೆ, ಕ್ಲಾಸ್ ನಲ್ಲಿ ಎಲ್ಲಾ ಹುಡುಗಿಯರೂ ಒಟ್ಟಿಗೆ ನಾಪತ್ತೆಯಾದರೆ ಮತ್ತೆ ಡೌಟ್ ಬರುತ್ತಲ್ವಾ ಅಂತ ಅದಕ್ಕೊಂದು ಮಾಸ್ಟರ್ ಪ್ಲಾನ್ ರೆಡಿ ಆಯ್ತು.. ನಮ್ಮ ಗೆಳತಿಯರಲ್ಲೇ ಒಬ್ಬಳ ಮನೆಯಲ್ಲಿ "ಸತ್ಯನಾರಾಯಣ ಪೂಜೆ"; ಅದಕ್ಕೆ ನಾವೆಲ್ಲಾ ಹೋಗ್ತಿದಿವಿ ಅಂತ ನಮ್ಮ ನೆಚ್ಚಿನ (ನಾವು ಹೇಳಿದನ್ನು ಒಪ್ಪುವ!) ಲೆಕ್ಚರರ್ ಒಬ್ಬರ ಬಳಿ ಹೇಳಿ ಹೊರಟೆವು.

ಕಾಲೇಜಿನ ಗೇಟು ದಾಟಿ ಹೊರಗೆ ಕಾಲಿಟ್ಟಾಗ ನಮ್ಮ ಮುಖದಲ್ಲಿ ಯುದ್ಧದಲ್ಲಿ ಗೆದ್ದ ವಿಜಯೋತ್ಸಾಹ! ಮೂರು ಟೂ-ವೀಲರ್, ಒಂದು ಕಾರ್ ನಲ್ಲಿ ಸುಮಾರು ಹನ್ನೆರಡು ಜನರ ನಮ್ಮ ಗುಂಪು ಹೊರಟಿತು. ಹಳ್ಳಿ ಹಾಗೂ ಪುಟ್ಟ ಪಟ್ಟಣ ಪ್ರದೇಶಗಳಿಂದ ಬೆಂಗಳೂರಿಗೆ ಬಂದವರಿಗೆ, ಎರಡು ವರ್ಷದಲ್ಲಿ ಮೊದಲ ಬಾರಿಗೆ, ನಾವೆಲ್ಲೋ ಎಲ್ಲೆ ಮೀರುತ್ತಿದ್ದೇವಾ ಎಂದು ಅನಿಸಿದ ಕ್ಷಣ! ಮತ್ತೆ ಮರು ಕ್ಷಣ "ಅಯ್ಯೋ ಏನಿದೆ ಒಂದು ದಿನ ಪಿಕ್ಚರಿಗೆ ಹೋಗುವುದರಲ್ಲಿ" ಅಂತ ನಿರಪರಾಧಿ ಭಾವದ ಜನನ.

ಎಲ್ಲಾ ಯೋಜನೆಯಂತೆ ಸಾಗಿತು. ಚಿತ್ರವೂ ಅಷ್ಟೇ.. ತುಂಬಾ ಇಷ್ಟವಾಯಿತು. ಹೇಗಿರುತ್ತೇನೋ ಎಂದು ಮನದ ಮೂಲೆಯಲ್ಲಿದ್ದ ಆತಂಕ ಮಾಯವಾಗಿ ದುಡ್ಡು ಸುಮ್ಮನೆ ವ್ಯರ್ಥವಾಗದ ಸಾರ್ಥಕತೆ ಎಲ್ಲರ ಮುಖದ ಮೇಲೆ ರಾರಾಜಿಸಿತು. ಆದರೆ ಗಾಂಧೀಜಿಯವರ ಉನ್ನತ ಮೌಲ್ಯಗಳನ್ನು, ಹಾಸ್ಯ ಮಿಶ್ರಿತ ಗಂಭೀರದ ವಿಭಿನ್ನ ರೀತಿಯಲ್ಲಿ ಅಭಿವ್ಯಕ್ತಿಗೊಳಿಸಿದ ಈ ಚಿತ್ರಕ್ಕೆ ನಾವು ಸುಳ್ಳು ಹೇಳಿ ಬಂದಿದ್ದೇವಲ್ಲಾ ಎಂದು ಮನದಲೆಲ್ಲೋ ಅಪರಾಧಿ ಪ್ರಜ್ಞೆ ಕಾಡುತ್ತಿತ್ತು. ಚಿತ್ರ ಮುಗಿದು ಹೊರ ಬಂದಾಗ ಒಬ್ಬಳು ಹೇಳಿದಳು - "ನಾವು ಚಿತ್ರದಿಂದ ಪ್ರಭಾವಿತರಾಗಿದ್ದು ನಿಜ ಆಗಿದ್ದಲ್ಲಿ, ನಾಳೆ ಕಾಲೇಜಿನಲ್ಲಿ ಇದ್ದ ಸತ್ಯವನ್ನು ಹೇಳಿಬಿಡೋಣ". ಆಗ ಉಳಿದವರು ಬಾಯಿ ಮುಚ್ಚಿಸಿದರು - "ಅಮ್ಮ ತಾಯೆ, ಸಾಕು; ತೀರ ಒಳ್ಳೆಯವರಾಗಲು ಹೋಗೋದೇನೂ ಬೇಡ! ಈಗ ಹೇಳಿರುವುದನ್ನು ಮತ್ತೆ ಬದಲಾಯಿಸುವ ಯಾವ ಅವಶ್ಯಕತೆಯೂ ಇಲ್ಲ".

ನಾವು ಕಾಲೇಜಿಂದ ಹೋದ ಮೇಲೆ ಇತ್ತ ಕಾಲೇಜಿನಲ್ಲಿ ಏನಾಗಿರಬಹುದು ಎಂದು ನಾವು ಚಿಂತಿಸಿರಲೇ ಇಲ್ಲ.. ನಾವು ಹೋದುದನ್ನು ನೋಡಿ ತರಗತಿಯಲ್ಲಿದ್ದ ಹುಡುಗರಿಗೆ ಅದೆಲ್ಲಿಂದ ಜೋಶ್ ಬಂತೋ, ಅವರೂ ಮಧ್ಯಾಹ್ನದ ಯಾವ ತರಗತಿಗೂ ಹಾಜರಾಗಲೇ ಇಲ್ಲ. ಅಲ್ಲಿಗೆ, ಅಂದು ನಮ್ಮ ತರಗತಿಯದು "mass bunk" ಎಂದು ಪರಿಗಣಿಸಲಾಯಿತು.

ಮರುದಿನ ಕಾದಿತ್ತು ನೋಡಿ ನಮಗೆ! "ಅಧ್ಯಾಪಕರು ತಯಾರಿ ನಡೆಸಿಕೊಂಡು ತರಗತಿಗೆ ಬಂದಾಗ ವಿದ್ಯಾರ್ಥಿಗಳೇ ಇಲ್ಲ ಎಂಥಾ ಮಹಾಪರಾಧ!" ಎಂದು ನಮ್ಮ ದೂಷಣೆಯಾಯಿತು. HOD ಕೊಠಡಿಗೆ ಎಲ್ಲರನ್ನೂ ಕರೆಸಿ ವಿಚಾರಣೆ! ಯಾರಾದರೂ ಏನಾದರೂ ಹೇಳಬೇಕೆ? ಎಲ್ಲರೂ ಬಾಯಿ ಮುಚ್ಚಿ ನೆಲ ನೋಡುವ ಸುಬಗರು... ಮನಸ್ಸಿನಲ್ಲಿ ಮಾತ್ರ "ಅದೇನು ಅಂತಹಾ ಯಾರೂ ಮಾಡದ ಮಹಾಪರಾಧ ನಾವು ಮಾಡಿದ್ದೇವೆ ಅಂತ ನಮಗೆ ಶಿಕ್ಷೆ" ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರೂ, ಹಾಗೆ ಹೇಳಲಾಗುವುದಿಲ್ಲವಲ್ಲ! ಹುಡುಗರು ಹುಡುಗಿಯರತ್ತ ಬೊಟ್ಟು ತೋರಿಸಿದರೆ, ಹುಡುಗಿಯರು ನಾವು ಈಗಾಗಲೇ ಹೇಳಿರುವ ಸುಳ್ಳನ್ನು ಮತ್ತೆ ಪ್ರತಿಪಾದಿಸಿದೆವು. ಅಂತೂ HODಗೆ ನಮ್ಮ ಯಾರ ಉತ್ತರಗಳಿಂದಲೂ ಸಮಾಧಾನವಾಗಲಿಲ್ಲ. mass bunk ಯಾಕೆ ಮಾಡಿದ್ದು ಎಂದು ನೀವು ನಿಜವಾದ ಕಾರಣ ಹೇಳುವವರೆಗೆ ನಿಮ್ಮನ್ನು ಕ್ಷಮಿಸುವುದಿಲ್ಲ ಅಂತ ಅವರು. ಹೇಳುವುದಿಲ್ಲ ಅಂತ ನಾವು. ಅದೆಷ್ಟು ಹೊತ್ತು HOD ಕೋಣೆಯ ಹೊರಗೆ, ಇಡೀ dept ಎದುರು ಏನೋ ಮಹಾಪರಾಧ ಮಾಡಿದ ಹಾಗೆ ನಿಂತುಕೊಂಡಿದ್ದೇವೆ!

ವಿಷಯದ ಗಂಭೀರತೆ ಎಲ್ಲಿಯವರೆಗೆ ಹೋಯಿತೆಂದರೆ, 1st internals ಗೆ ತಪ್ಪು ಮಾಡಿದ ನಮ್ಮ ಸೆಕ್ಷನ್ ಗೆ ಕಷ್ಟದ ಪ್ರಶ್ನಾ ಪತ್ರಿಕೆಯನ್ನು, ಮತ್ತೊಂದು ಸೆಕ್ಷನ್ ನಲ್ಲಿರುವ ನಮ್ಮ ಸ್ನೇಹಿತರಿಗೆ ಮತ್ತೊಂದು ಪ್ರಶ್ನಾ ಪತ್ರಿಕೆ ಮಾಡುವಷ್ಟು! HOD ಗೆ ಅದು ಹೇಗೋ ಎಲ್ಲಾ ನಿಜ ವಿಷಯಗಳು ತಿಳಿದಿದ್ದವು. ನಮ್ಮಿಂದ ನಿಜ ಹೊರಬರುವುದು ಬೇಕಿತ್ತವರಿಗೆ... ನಾವಾದರೋ, ಯಾಕೆ ಸತ್ಯ ಹೇಳಿ ನಮ್ಮ ಮರ್ಯಾದೆ ಕಳೆದುಕೊಳ್ಳುವುದು ಅಂತ. ಕೊನೆಗೂ, ಬೇರೆ ವಿಧಿಯಿಲ್ಲದೆ(ಈ ನಡುವೆ ತುಂಬಾ ಘಟನೆಗಳು ನಡೆದು ಸತ್ಯ ಹೇಳಲೇ ಬೇಕಾದ ಸಂದರ್ಭ ಬಂತು ಬಿಡಿ! ಅದನ್ನೆಲ್ಲಾ, ಮಹಾಭಾರತದ ಉಪ ಕತೆಗಳಂತೆ ಮುಖ್ಯ ಕತೆಯಲ್ಲಿ ಈಗ ಹೇಳದೆ, ಮತ್ತೊಮ್ಮೆ ಯಾವಾಗಲಾದರೂ ಹೇಳುತ್ತೇನೆ) "ನಾವು ಸುಳ್ಳು ಹೇಳಿ ಪಿಕ್ಚರ್ ಗೆ ಹೋಗಿದ್ದು" ಅಂತ ಹೇಳಿ ಬಿಟ್ಟೆವು ಎನ್ನಿ. ಆಗಲೇ ಆ ವಿಷಯ ಮುಗಿದಿದ್ದು. ಗಾಂಧೀಜಿ ಹೇಳಿದಂತೆ ಇದ್ದುದನ್ನು ಇದ್ದ ಹಾಗೆ ಮೊದಲೇ ಒಪ್ಪಿದ್ದರೆ, ಇಷ್ಟೆಲ್ಲಾ ಅನುಭವಿಸ ಬೇಕಾಗುತ್ತಿರಲಿಲ್ಲವೇನೋ...

ಅದೇನೇ ಇರಲಿ...ಈ ಘಟನೆ ನಮ್ಮನ್ನು, ವಿದ್ಯಾರ್ಥಿ ಜೀವನದಲ್ಲಿ ಮುಂದೆಂದೂ mass bunk ಮಾಡದಿರುವಂತಹ ಒಳ್ಳೆಯ ವಿದ್ಯಾರ್ಥಿಗಳನ್ನಾಗಿ ಮಾಡಿದ್ದಂತೂ ಸತ್ಯ. ನಮ್ಮನ್ನು ಅದೆಷ್ಟೇ ಮೇಲೆ ಕೆಳಗೆ ಮಾಡಿದ್ದರೂ, ಕೊನೆಯ internals ನಲ್ಲಿ ಸುಲಭ ಪ್ರಶ್ನೆ ಪತ್ರಿಕೆಯಿತ್ತು, ಆ ರೀತಿಯಾಗಿ ನಮಗೆ ಇಂಟರ್ನಲ್ಸ್ ನಲ್ಲೂ, ಶಿಸ್ತು ಹಾಗು ಕ್ರಮಬದ್ಧ ಪರೀಕ್ಷಾ ವಿಧಾನಗಳಿಂದ( ಇಂಟರ್ನಲ್ಸ್ ಗೂ ಓದದೆ ಬೇರೆ ವಿಧಿಯಿರಲಿಲ್ಲ!) ಸೆಮಿಸ್ಟರಿನ ಕೊನೆಯ ಪರೀಕ್ಷೆಯಲ್ಲೂ ಉತ್ತಮ ಅಂಕ ಗಳಿಸಲು ಸಹಕಾರಿಯಾದ, ಎಲ್ಲಕ್ಕಿಂತ ಮುಖ್ಯವಾಗಿ, ಜೀವನದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಪಾಠ ಹೇಳಿಕೊಟ್ಟ ನಮ್ಮ ಶಿಕ್ಷಕರಿಗೆಲ್ಲಾ ನಮೋ ನಮಃ !

8 comments:

  1. ತುಂಬ ಚೆನ್ನಾಗಿ ಬರೆದಿದ್ದೀರ ದಿವ್ಯ...ಕೆಲವೊಮ್ಮೆ ಇಂಥ ಸಂಗತಿಗಳೇ ಅಲ್ವೇ ನಮಗೆ ಕುಷಿ ಕೊಡುವುದು....

    ReplyDelete
  2. ಏನ್ರಿ ದಿವ್ಯ ಬಂಕ್ ಹೊಡೆಯೋದಕ್ಕೆ ಪ್ರೋತ್ಸಾಹ ಕೊಡ್ತಿರೆನೋ ನೋಡಿದ್ರೆ, ಕೊನೇಲಿ "ಶಿಕ್ಷಕರಿಗೆ ನಮೋ ನಮಃ" ಅಂತ ಕೈ ಎತ್ತಿದ್ರಿ.. ಥೋ ಥೋ ಥೋ... ನಾನು ೩ ವಾರಗಳ ಹಿಂದೆ ಬಂಕ್ ಮಾಡಿ "ಸವಾರಿ" ನೋಡ್ಕೊಂಡು ಬಂದೆ :) ತಮಾಷೆ ಬಿಟ್ಟು ನೋಡಿದರೆ, ನೀವು ಹೇಳಿದ್ದು ಸರಿ ಎನ್ನಿಸುತ್ತದೆ... ಆದರೂ ಹುಡುಗ ಬುದ್ದಿ ನಮ್ಮದು .. ಬಂಕ್ ಹೊಡ್ಯಲ್ಲ ಅಂತ ಅಂತೂ ಹೇಳಲ್ಲ ಬಿಡಿ :)

    ReplyDelete
  3. ಅಯ್ಯೋ ಕ್ಲಾಸ್ ಬಂಕ್ ಮಾಡಿಲ್ಲ ಅಂದ್ರೇ ಅದು ಕಾಲೇಜೇ ಅಲ್ಲ!

    ReplyDelete
  4. ಒಳ್ಳೆಯ ಬರಹ. ಬಂಕ್ ಮಾಡೋದ್ರಲ್ಲಿ rank ಕೊಡೋದಾಗಿದ್ರೆ ನಾನೇ ಫರ್ಸ್ಟು ಇರ್ತಿದ್ದೆ..:)

    ReplyDelete
  5. ದಿವ್ಯ ಮೇಡಮ್,

    ಕಾಲೇಜಿಗೆ ಬಂಕ್ ಹೊಡೆಯಬೇಕೆಂದು ನನಗೆ ಅನ್ನಿಸಿರಲಿಲ್ಲ. ನನ್ನ ಗೆಳೆಯರೆಲ್ಲಾ ಹಾಗೆ ಮಾಡುತ್ತಿದ್ದರು. ಕೊನೆಕೊನೆಯಲ್ಲಿ ನಾನು ಮಾಡಿ ಸಿನಿಮಾಗೆ ಹೋಗುತ್ತಿದ್ದೆ...ಬರಹ ಚೆನ್ನಾಗಿದೆ.

    ReplyDelete
  6. ದಿವ್ಯ,
    ಕಾಲೇಜಿಗೆ ಬಂಕ್ ಹೊಡೆಯಲಿಲ್ಲ ಅಂದ್ರೆ ಸ್ಕೂಲಿಗೂ ಕಾಲೇಜಿಗೂ ವ್ಯತ್ಯಾಸ ಗೊತ್ತಾಗಲ್ಲ....
    ನಾವು ಸಾಕಷ್ಟು ಮಾಡಿದ್ದೆವು...ಈಗ ಅನ್ನಿಸುತ್ತೆ ತಪ್ಪು ಮಾಡಿದೆವು ಅಂತ... ..
    ಚೆನ್ನಾಗಿ ಬರೆದ್ದಿದೀರಾ...

    ReplyDelete
  7. ಪ್ರತಿಕ್ರಿಯಿಸಿದ ಎಲ್ಲರಿಗೂ ಪ್ರೀತಿಯ ಧನ್ಯವಾದಗಳು :)

    ReplyDelete