

ಬಾಗಿಲೊಳು ನಿಂತಿತ್ತು ನವ ವಸಂತ
ಸೊಂಪಾಗಿ ಬೀಸಿತ್ತು ತಂಪಾದ ಮಾರುತ
ತಂದಿತ್ತು ಮನಕೆ ಆಹ್ಲಾದ ಚೈತನ್ಯ
ಮಾಡಿತ್ತು ಎಲ್ಲ ದುಗುಡವನು ಶೂನ್ಯ
ಇಹವನು ಮರೆತು ಮನಸದು ಓಡಿತ್ತು
ಮುಂಬರುವ ಗ್ರೀಷ್ಮದ ತಾಪಕೆ ಹೆದರಿತ್ತು
ಹೇಗೆ ತಾಳುವುದು ವಿರಹದ ಬೇಗೆಯನು
ಎಂದು ಮಾಡಿತು ಈಗಲೇ ಚಿಂತೆಯನು
ವರ್ಷದ ನೆನಪಾಗಿ ಕನಸೊಂದು ಮೂಡಿತು
ಅರಳಿತು ಮನಸು ಸಂಗಮವ ನೆನೆದು
ಬಯಕೆ ಅತಿಯಾಯ್ತು ಜೋರಾಗೋ ಮಳೆಯಂತೆ
ಒಂದಾಗಿ ಹೋಗಲು ಸುರಿಮಳೆಯ ಜೊತೆ
ಮತ್ತೆ ಮನದಂಗಳದಿ ಬರುವವನು ಶರತ
ಎಲ್ಲವನೂ ಉದುರಿಸಿ ಆಗುವನು ಸಂಪ್ರೀತ
ಹೇಮಂತ ಕಾಲಿಡಲು ತಂಪನೆಯ ತಂಗಾಳಿ
ತನುಮನಕೆ ಹಿತ ತರುವ ಕುಳಿರ್ಗಾಳಿ
ಶಿಶಿರನು ಬರಲು ಎಲ್ಲೆಡೆಯೂ ಇಬ್ಬನಿ
ಕೇಳುವನು ಮನದ ಪ್ರೀತಿಯ ಇನಿದನಿ
ಮತ್ತೆ ಬರುವನು ಇದೇ ವಸಂತ
ತರುವನು ಮತ್ತದೇ ಭರಪೂರ ಸಂತಸ
ಎಣಿಕೆಯು ನಡೆದಿತ್ತು ಆಕೆಯ ಮನದಿ
ಫಲಿಸೀತೆ ಆಸೆ ಮುಂದಿನ ವಸಂತದಿ
ಕಾಯುತಿಹಳು ಆ ಸ್ತ್ರೀ-ಧಾರಿಣಿ
ಕಾಲ ಪುರುಷನ ಪ್ರೀತಿಯ ರಮಣಿ