Sunday, November 16, 2025

ಅಪ್ಪ!


ಕೈ ಹಿಡಿದು ನಡೆಸುವಾಗ

ಹಾರಲು ಪ್ರೇರೇಪಿಸಿದೆ

ಲೇಖನಿಯನು ಹಿಡಿಯವಾಗ                    

ಕವಿತೆಗೆ ಸ್ಫೂರ್ತಿಯಾದೆ


ಬದುಕ ಬವಣೆ ತಿಳಿಸಲು

ನಿನ್ನ ಕಥೆಯ ಹೇಳಿದೆ

ನಮ್ಮ ಸುಖದ ಬದುಕಲೂ

ಗುರಿಯ ಅರಿವು ಮೂಡಿಸಿದೆ


ನನಗೇ ಇರದ ಭರವಸೆಯನು

ನೀನು ನನ್ನಲಿ ಇರಿಸಿದೆ

ಪುಟ್ಟ ದಿಣ್ಣೆ ನೋಡುತಿರಲು

ಬೆಟ್ಟದ ಕನಸನು ಬಿತ್ತಿದೆ


ನಿನ್ನ ಉತ್ಸಾಹದ ಕುಲುಮೆ

ಸದಾ ಜಿನುಗುವ ಸಹನೆಯ ಚಿಲುಮೆ

ನಿರಂತರ ಪರಿಶ್ರಮದ ಸಾಧನಾಪಥ

ನಮಗಾಯಿತು ದಾರಿದೀಪ ಅನವರತ


ಅಂತರ್ಜಾಲವೇ ಇಲ್ಲದಿರುವಾಗ

ಆಗಿದ್ದೆ ನೀ ನನ್ನ ವಿಕಿಪೀಡಿಯಾ ಗೂಗಲ್ಲು

ಇಂದಿನ ಸುಂದರ ಬಾಳಿಗೆ ಕಾರಣ

ನೀನು ಹಾಕಿದ ಭದ್ರ ಅಡಿಗಲ್ಲು!!

ಮಕ್ಕಳ ರಜೆ!

ಮಕ್ಕಳಿಗೆ ರಜೆಯೆಂದರೆ ನಮಗೂ ಮಜಾ

ಬೆಳಗಿನ ಗಡಿಬಿಡಿಯ ಜಂಜಡಗಳಿಲ್ಲವಲ್ಲಾ

ಎಂದು ಸಂತಸದ ನಿಟ್ಟುಸಿರು ಕಣ್ರೀ!

ಅದರ ಜೊತೆಗೆ ಇನ್ನೊಂದು ಫ಼ೀಲಿಂಗು

ನಾಳೆಯಿಂದ ಇಡೀ ದಿನ ಆಗಬೇಕಲ್ಲಾ

ಇವರ ಜಗಳ-ವಿವಾದಕ್ಕೆ ನಾವು ರೆಫ಼್ರೀ!!



ತಿರುಪತಿ ತಿಮ್ಮಪ್ಪನ ದರ್ಶನ

ಅದೊಂದು ಅಚ್ಚರಿಯೋ?

ಭಯವೋ, ಭಕ್ತಿಯೋ?

ಆನಂದವೋ, ಕೌತುಕವೋ?                                             

ಪ್ರಥಮ ದರ್ಶನದ ಸೌಭಾಗ್ಯವೋ?

ಅಭೂತಪೂರ್ವ ಪುಳಕವೋ?

ಊಹೂಂ.. ಯಾವುದೋ ಗೊತ್ತಿಲ್ಲ! ಅದೊಂದು ಬಣ್ಣಿಸಲಾಗದ 

ಅಪೂರ್ವ ಅನುಭವ!

ನೋಡಿಯೇ ಅನುಭವಿಸಬೇಕಾದ

ಅನಿರ್ವಚನೀಯ  ಭಾವ!!

ದಸರಾ ರಜೆಯೆಂದರೆ..

ದಸರಾ ರಜೆಯೆಂದರೆ,


ಶಾರದೆ, ನವದುರ್ಗೆಯರ

ಅಂದವ ಕಣ್ತುಂಬಿಕೊಂಡು

ಅನ್ನಪ್ರಸಾದವ ಸವಿದುಂಡು

ಮೈಮನ ಪುಳಕವಾಗಿಸುವುದು


ಜನಜಂಗುಳಿಯ ನಡುವೆ 

ಹಳೆಯ ಗೆಳತಿಯ ಗುರುತಿಸಿ

ಎದುರು ನಿಂತ ಸಂತಸದಲಿ

ಮಾತು ಮರೆತುಹೋಗುವುದು


ಮಕ್ಕಳಾಟವನು ನೋಡುತಾ

ಅವರ ಜೊತೆ ಆಟವಾಡುತಾ

ನಮ್ಮ ಕಳೆದ ಬಾಲ್ಯವನು 

ಮತ್ತೆ ಅನುಭವಿಸುವುದು


ಐದು ದಿನದ ಅವಧಿಯಲಿ

ಐವತ್ತು ಜನರನು ಭೇಟಿಯಾಗಿ

ಮಧುರ ಕ್ಷಣಗಳನು ಕಟ್ಟಿಕೊಳುವುದು

ಮೆಲುಕು ಹಾಕಲು ಮತ್ತೆ ಮತ್ತೆ!!




ಗಣೇಶ ಹಬ್ಬ

ಗೌರಿ ಗಣೇಶ ಹಬ್ಬ ಬಂತೆಂದರೆ

ಬಾಲ್ಯದಲಿ ನಮಗೆ ಇನ್ನಿಲ್ಲದುತ್ಸಾಹ

ಎಲ್ಲರೂ ಸೇರಿ ನಲಿಯುವ ಸಡಗರ

ಮನೆ ಮನವೆಲ್ಲಾ ಸಂತಸದ ಆಗರ!


ಬೆಳ್ಳಂಬೆಳಗ್ಗೆ ಹೋಗಿ ಶಿಲ್ಪಿಯ ಮನೆಗೆ

ನಮ್ಮನೆ ಗಣಪನ ಹುಡುಕಿ ಕೊನೆಗೆ

ದೃಷ್ಟಿಯ ಚಿತ್ರಿಸಿ ಕೊಡುವರು ನಮಗೆ

ಮತ್ತೆ ಜಾಗಟೆ ವಾದ್ಯದ ಮೆರವಣಿಗೆ


ಮನೆಯಲಿ ಸುಂದರ ಕಬ್ಬಿನ ಮಂಟಪ

ಅದರಲಿ ಕೂತಾಗ ನಮ್ಮ ಮುದ್ದುಗಣಪ

ತನು ಮನವೆಲ್ಲಾ ನವಿರಾದ ಪುಳಕ

ಗಣಪನ ಸುತ್ತ ಲೈಟುಗಳ ಚಕಮಕ 


ಗಣಪನ ಹಬ್ಬವೆಂದರೆ ಭೂರಿ ಭೋಜನ

ಬಗೆಬಗೆ ಉಂಡೆ ಮೋದಕ ಪಂಚಕಜ್ಜಾಯ

ಎಲ್ಲರೂ ಸೇರಿ ಮಾಡುತಿರೆ ಕೆಲಸ-ಸೇವೆ

ನಡೆಯುವುದು ಸಕಲವೂ ಸರಾಗವಾಗಿ..


ಸಂಜೆಯಾದೊಡೆ ನಮಗೆ ನವ ಚೈತನ್ಯ

ಊರ ದೇವಳವೆಲ್ಲಾ ಸುತ್ತಿ ನಾವು ಧನ್ಯ

ಮತ್ತೆ ಬಂದು ಗಣಪನ ಮುಂದೆ ತಲೆಬಾಗಿ

ಹಾಡುವೆವು ಭಜನೆ ಎಲ್ಲರೂ ಒಂದಾಗಿ..


ರಾತ್ರಿಯಾದಂತೆ ಒಂದು ವಿಚಿತ್ರ ತವಕ

ವಿಸರ್ಜನೆ ಪೂಜೆಯಲಿ ಏನೋ ಆತಂಕ!

ಮಣ್ಣಿನ ಗಣಪ ಮತ್ತೆ ಮಣ್ಣಾಗುತಿರಲು

ಕಣ್ಣಿನಣೆಕಟ್ಟು ದಾಟಿ ಹನಿ ಜಾರುತಿತ್ತು!!

 


ರೈಲು ಹಿಡಿಯುವುದು..

ಸಮಯಕ್ಕೆ ಸರಿಯಾಗಿ ತಲುಪಿ

ರೈಲು ಹಿಡಿಯುವುದೆಂದರೆ 

ಪಾಕ್-ಇಂಡಿಯಾದ ರೋಚಕ ಮ್ಯಾಚ್ ನಂತೆ..

ಮೊದಲಿಗೆ-

ಸಮಯ ಭರಪೂರು - ಮಾತು, ನಗು, ಫನ್ನು!

ಕ್ರಿಕೆಟ್ ನಲ್ಲಿದ್ದಂತೆ ಬಾಲು ಜಾಸ್ತಿ, ಕಮ್ಮಿ ರನ್ನು 

ಆಮೇಲೆ-

ಗೂಗಲ್ ಮ್ಯಾಪಿನಲಿ ಸಮಯ-ದೂರದ ಸಮರ

ಆಟ ಸಾಗಿದಂತೆ ಬಾಲು-ರನ್ನು ಸಮ-ಸಮ

ಕೊನೆಗೆ-

ರೈಲು ಚಲಿಸುವ ಐದೇ ನಿಮಿಷ ಮುನ್ನ

ಸೀಟಿನಲ್ಲಿ ಕೂತು ನಿಟ್ಟುಸಿರು ಬಿಡಲು,

ಕೊನೆಯ ಬಾಲಿಗೆ ಬೌಂಡರಿ ಹೊಡೆದು

ಮ್ಯಾಚ್ ಗೆದ್ದಂತಹ ವಿಜಯೋತ್ಸಾಹ!