
ಮನದ ಕಲಸು ಮೇಲೋಗರ
ಜ್ವಾಲಾಮುಖಿಯ ಗೆದ್ದು
ಮತ್ತೆ ಎದ್ದ ಬಿರುಗಾಳಿಯ
ಹೊಯ್ದಾಟದಲೂ ದಿಟ್ಟನೆ ನಿಂದು
ಅಷ್ಟ ದಿಕ್ಕುಗಳಿಂದ ಬರುತಿಹ
ಭವ್ಯ ಆರ್ಭಟವ ಒದ್ದು
ಮೌನ ಭೂಮಿಕೆಯ ಅಂತಿಮ
ಘಟ್ಟದಲಿ - ಜೀವ ತಳೆದಿದೆ ಕವಿತೆ
ಲೇಖನಿ ಚಡಪಡಿಸುತಿದೆ
ಸುಂದರ ಪುಟವ ಅರಸುತಿದೆ
ಕವಿತೆ-ಪುಟದ ಸಂಗಮಕೆ ಕಾಯುತಿದೆ
ಮತ್ತೆ ಮೂಡುವ ನವಿಲುಗರಿಯ ಕನಸ ಕಾಣುತಿದೆ
ಪುಟವೊಂದು ಹಾತೊರೆಯುತಿದೆ
ತನ್ನ ಸಂಪೂರ್ಣ ಆವರಿಸಿಬಿಡುವ ಕವಿತೆಗಾಗಿ
ಬಹುವಾಗಿ ತವಕಿಸುತಿದೆ
ಕವಿತೆಯ ತನ್ನದಾಗಿಸುವುದಕಾಗಿ
ಆಷಾಢದ ಗಾಳಿ ಭೋರೆಂದು ಬೀಸುತಿದೆ
ಎಲ್ಲವನೂ ಹಾರಿಸಿ ಅಟ್ಟಹಾಸ ಬೀರುತಿದೆ
ಪುಟವು ಪಟಪಟನೆ ಅಲುಗುತಿದೆ
ಲೇಖನಿ ಚಡಪಡಿಸುತಿದೆ
ಕವಿತೆ ಕಾಯುತಿದೆ !!