Saturday, June 20, 2009

ಅವಳು ಮತ್ತು ಅವನು

ಅವಳು ಸುಮ್ಮನಿದ್ದಳು
ಯಾವುದರ ಪರಿವೆಯೇ ಇಲ್ಲದೆ
ಅವಳು ಖುಷಿಯಲಿದ್ದಳು
ಅವಳದೇ ಮುಗ್ಧ ಲೋಕದಲ್ಲಿ

ಅವನು ಬಂದನು ಆಗ
ಅವಳ ಲೋಕವನ್ನು ನೋಡಿದ
ಅವಳ ಖುಷಿಗೆ ತಾನೂ ಖುಷಿ ಪಟ್ಟ
ಇನ್ನೂ ಖುಷಿ ಪಡಿಸಲು ಪಣ ತೊಟ್ಟ

ಅವಳ ಬಾಳಿಗೆ ದೀಪವಾಗಲು
ತಾನು ಉರಿಯ ಹೊರಟನು
ಬೆಂಕಿಯ ತಾಪಕೆ ಹೆದರಿ
ದೂರ ಹೊರಟಳು ಆಕೆ

ತಂಪನೆರೆಯುವೆನೆಂದು ತಾನು
ಮಂಜುಗಡ್ಡೆಯಾಗಹೊರಟನು
ಆಕೆ ಆತನಿಗಾಗಿ ಕರಗಲಿಲ್ಲ
ಅತಿಯಾದ ತಂಪಿಗೆ ಶಿಲೆಯಾದಳು

ಆಕೆಯನು ಕಥಾನಾಯಕಿಯಾಗಿಸಲು
ಹೊರಟಿದ್ದ ಅವನು - ತಾನೇ ಕಥೆಯಾದ
ಆಕೆಯೋ ಕಥೆಯ ಓದುಗಳಾದಳು
ತನ್ನ ಬದುಕಿಗೊಂದು ನೀತಿ ಪಾಠ ಕಲಿತಳು

Friday, June 5, 2009

"ಶುಭಾ"ಶಯ!

-ಪ್ರೀತಿಯ ತಂಗಿ ಶುಭಾಳಿಗಾಗಿ, ಪ್ರೀತಿ ತುಂಬಿ ಬರೆದದ್ದು...


ಮುದ್ದಾದ ನೋಟದಿಂದ ಹೃದಯವನು ಗೆಲ್ಲುವ
ಒಮ್ಮೊಮ್ಮೆ, ಮುಗ್ಧ ಪ್ರಶ್ನೆಗಳಿಂದ ಮನಸೂರೆಗೊಳ್ಳುವ
ಇನ್ನೊಮ್ಮೆ, ಗಾಂಭೀರ್ಯ ಮೈವೆತ್ತು ಕಂಗೊಳಿಸುವ
ಮತ್ತೊಮ್ಮೆ, ಚತುರ ಮಾತುಗಳಿಂದ ನಕ್ಕು ನಗಿಸುವ
ಬೇಸರವಾದೊಡೆ ನನ್ನ ಬೊಗಸೆಯಲಿ ಕಣ್ಣೇರು ಹರಿಸುವ
ಸಂತೋಷವಾದೊಡೆ ನನ್ನೊಡನೆ ಹಂಚಿ, ಹಾರಾಡುವ
ನನ್ನ ಭಾವನೆಗಳನ್ನೆಲ್ಲಾ ಕೆದಕಿ ವಿಚಾರಿಸುವ
ನನ್ನ ಕೈಯೊಡನೆ ಕೈ ಸೇರಿಸಿ, ಶಾಲೆಗೆ ಜೊತೆ ನಡೆದ
ಎಂದಿಗೂ, ಯಾವುದಕೂ, ಬಹುವಾಗಿ ಚಿಂತಿಸದ
ನಗು ನಗುತಾ, ಎಲ್ಲರನೂ ನಗಿಸುತ್ತಲಿರುವ
ಪ್ರೀತಿಯ ಒಲುಮೆಯ ಮುದ್ದಿನ ತಂಗಿಗೆ
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು !