Saturday, May 30, 2009

ಜೊತೆಗಾರ - ಚಂದಿರ


ಚಂದಮಾಮ ಇಣುಕುತಿಹನು
ಕುಡಿ ನೋಟ ಬೀರಿ ನಗುತಲಿಹನು
ಜೀವನದುದ್ದದ ಜೊತೆಗಾರ
ಸದಾ ಖುಷಿ ಕೊಟ್ಟ ಗೆಣೆಕಾರ

ಪುಟ್ಟ ಕಂದನಾಗಿದ್ದಾಗ, ನೋಡುತಿದ್ದೆ
ಯಾರೂ ದೂರವಾದರೂ ನೀ ಜೊತೆಗೆ ಇದ್ದೆ
ದಿನವಿಡೀ ದಣಿದಾಗ, ನೀ ಎದುರು ಬರುವೆ
ಮಧುರ ಸಿಂಚನವ ಎರೆದು ಪುಳಕಿಸುವೆ

ಕುಗ್ಗುತಾ ಕಾಣೆಯಾದರೂ ಒಂದೊಮ್ಮೆ
ಹಿಗ್ಗುತಾ ನಗಿಸುವೆ ಮಗದೊಮ್ಮೆ
ಮರೆತು ಮರೆಯಾಗುವ ಉಳಿದವರಂತಲ್ಲ
ನೀ ಸದಾ ಜೊತೆಗಿರುವ ಪ್ರೀತಿಯ ನಲ್ಲ

ಎದುರಿಗಿಲ್ಲದಿರೂ ಆ ಒಂದು ದಿನ
ನೀಡುವೆ ಖುಷಿಯನು ಉಳಿದೆಲ್ಲ ದಿನ
ಮರೆಯಾಗುವ ಮೊದಲೇ ತಿಳಿಸುವೆ ಸ್ಪಷ್ಟ
ಅದಕಾಗೇ ಆಗುವೆ ನನಗೆ ನೀನಿಷ್ಟ

ಯಾರಿಹರು ಜಗದಿ ಪ್ರತಿಶತ ಪೂರ್ಣ
ಸಕಲರಿಗೂ ಅಸಾಧ್ಯ ಆಗಲು ಪರಿಪೂರ್ಣ
ಶ್ಯಾಮಲ ಕಳಂಕಗಳಿದ್ದರೇನಂತೆ
ಶುಭ್ರವಾಗಿರುವೆ ನಿನ್ನ ಬಿಳಿ ಬಣ್ಣದಂತೆ

ಇರುವುದೆಲ್ಲವನು ಇರುವಂತೆ ತೋರುವ
ಬೇಸತ್ತ ಹೃದಯಕೆ ಆಹ್ಲಾದ ನೀಡುವ
ಮೈ ಮನಗಳಿಗೆಲ್ಲ ತಂಪನೆರೆಯುವ
ನಿನ್ನಂತೆ ಸದಾ, ಜೊತೆಗಿರುವ ಜೊತೆಗಾರ
ಹುಡುಕಿಕೊಡುವೆಯಾ ನನಗೆ ಓ ಚಂದಿರ ?

Wednesday, May 13, 2009

ಒಂದು ಘಟನೆ - ನೂರೊಂದು ಪ್ರತಿಕ್ರಿಯೆ

ಅದೊಂದು ಮಾಮೂಲಿ ಸಂಜೆ. ಆಫೀಸಿನಲ್ಲಿ ಕುಳಿತು, ಕೆಲಸ ಮುಗಿದಿದ್ದರೂ, ಬಸ್ಸು ಹೊರಡುವ ಸಮಯ ಆಗಿಲ್ಲವಾದ್ದರಿಂದ, ಹೀಗೆ ಏನೋ ಮಾಡುತ್ತಾ ಕಾಲಹರಣ ಮಾಡುತ್ತಿದ್ದೆ. ಬೇರೆ ಹಲವು ರೂಟ್ ಗಳ ಬಸ್ಸುಗಳು, ಆಫೀಸಿಂದ ಬೇರೆ ಬೇರೆ ಸಮಯಕ್ಕೆ ಮೂರು ನಾಕು ಸಲ ಇವೆಯಾದರೂ, ನನ್ನ ರೂಟ್ ಬಸ್ಸಿರುವುದು ಬೆಳಗ್ಗೆ ಒಂದು ಸಲ, ಸಂಜೆ ಒಂದು ಸಲ ಮಾತ್ರ. ಹಾಗಾಗಿ ಅಷ್ಟೂ ಹೊತ್ತು, ಕೆಲಸ ಮುಗಿದಿದ್ದರೂ, ಆಫೀಸಿನಲ್ಲಿರುವುದು ಅನಿವಾರ್ಯ. ಹೀಗೆ ಬಸ್ಸುಗಳ ಸಮಯ ಉದ್ಯೋಗಿಗಳನ್ನು ವಿಧೇಯರನ್ನಾಗಿ ಮಾಡುವುದು ಸೋಜಿಗವಲ್ಲವೆ? :-) ಸಮಯದ ಬಗ್ಗೆ ಅಷ್ಟೇನೂ ಕಟ್ಟುನಿಟ್ಟು ಇರದ ಕಾರಣ, ಹಲವರೆಲ್ಲ ಬೆಳಗ್ಗೆಯೂ ತಡವಾಗಿ ಬಂದು ಸಂಜೆಯೂ ಬೇಗ (ಕೆಲಸ ಕಮ್ಮಿ ಇದ್ದ ದಿನ ಮಾತ್ರ! ) ಹೋಗುವುದನ್ನು ನೋಡಿ, ಹೊಟ್ಟೆ ಉರಿದುಕೊಳ್ಳುವುದದು, ನನ್ನಂಥ ತಡವಾಗಿ ಬಸ್ ಹೊರಡುವ ರೂಟ್ ನಲ್ಲಿರುವವರ ಕರ್ಮ.

ಇರಲಿ.. ಅಂಥ ಒಂದು ಸಂಜೆ ಏನಾಯ್ತೆಂದ್ರೆ.. ನನ್ನ ಜಂಗಮ ದೂರವಾಣಿ ಬಾರಿಸಲಾರಂಭಿಸಿತು. ನೋಡಿದರೆ, ಯಾವುದೋ ಅಪರಿಚಿತ ಸಂಖ್ಯೆ ! ಆರಂಭದ ಸಂಖ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ತಿಳಿಯಿತು ಓಹ್.. 022 ! ಇದು ಮುಂಬಯಿಯಿಂದ ಅಂತ. ಯಾರಪ್ಪ ನನಗೆ ಅಲ್ಲಿಂದ ಕರೆ ಮಾಡುವವರು ಎಂದು ಕುತೂಹಲಭರಿತಳಾಗಿ ಕರೆಯನ್ನು ಸ್ವೀಕರಿಸಿ "ಹಲೋ" ಎಂದೇ. ಒಂದು ಸುಮಧುರ ಕಂಠ "Am I speaking to Ms.Divya Mallya?" ಎಂದು ಉಲಿಯಿತು. ನಾನೂ ಅಷ್ಟೇ ಸುಮಧುರವಾಗಿ ಉಲಿಯಲು ಪ್ರಯತ್ನಿಸಿ "Ya.." ಅಂದೆ. "Mam, this is from Mahindra and Mahindra" ಅಂದಿತು ಮಧುರ ಕಂಠ. ನನಗೋ ಸರಿಯಾಗಿ ಕೇಳಲಿಲ್ಲ. ಯಾರಿದು ಅಂತ ಮನಸಿನಲ್ಲಿ ಪ್ರಶ್ನೆ ಮೂಡಿತು. "Sorry..." ಅಂದೆ. ಅದಕ್ಕೆ ಪ್ರತಿಯಾಗಿ "This is from Xylo Mahindra and Mahindra group" ಅಂತ ಉತ್ತರ ಬಂತು!!!!

ಅದು ಕೇಳಿದ್ದೆ ತಡ.. ನನ್ನ ತಲೆಯಲ್ಲಿ ನೆನಪಿನ ಸುರುಳಿ ಸರಸರನೆ Rewind ಆಯಿತು. ಕೆಲವು ತಿಂಗಳ ಹಿಂದೆ, Xylo ಕಾರು ಮಾರುಕಟ್ಟೆಗೆ ಬರಲು ಸ್ವಲ್ಪ ದಿನಗಳಿರುವಾಗ, ಸ್ನೇಹಿತರೊಬ್ಬರು ಲಿಂಕ್ ಕಳಿಸಿ, "ಇದಕ್ಕೆ ಏನಾದರೂ ಬರೆಯೋಕಾಗುತ್ತಾ ನೋಡು..ಯಾರಿಗ್ಗೊತ್ತು ನಿನ್ನ ಹಣೆಲೀ Xylo ಕಾರಿನ ಯೋಗ ಇದ್ರೆ..." ಅಂತ ಹೇಳಿ ಆಸೆ ಹುಟ್ಟಿಸಿದ್ದರು. Xylo ಕಾರಿನ ಅಂತರ್ಜಾಲ ತಾಣದಲ್ಲಿ, ಹೊಸದಾಗಿ ಬಿಡುಗಡೆಯಾಗುತ್ತಿರುವ ಕಾರಿನ ಪ್ರಚಾರಕ್ಕೆ, ಜಾಹೀರಾತಿಗೆ ಬಳಸಿಕೊಳ್ಳಲು ಕಾರಿನ ಬಗ್ಗೆ ನಿಮಗನಿಸಿದ್ದನ್ನು ಒಂದೆರಡು ವಾಕ್ಯದಲ್ಲಿ ಸೂಚಿಸಿ ಎಂದು ಆಹ್ವಾನ ನೀಡಿದ್ದರು. ಇಲ್ಲಿ ನೀವು ಸೂಚಿಸಲಾದ ನಿಮ್ಮ ಯಾವುದೇ ಹೇಳಿಕೆಯ ಕಾಪಿರೈಟ್ ನಮ್ಮದಾಗುತ್ತದೆ ಅಂತೆಲ್ಲ ಸೂಚನೆಗಳೂ ಇದ್ದವು... ಜೊತೆಗೆ, ಎಲ್ಲದಕ್ಕಿಂತ ಮುಖ್ಯವಾಗಿ "ಅತ್ಯುತ್ತಮವಾದ ಒಂದು ಹೇಳಿಕೆಗೆ Xylo ಕಾರು ಬಹುಮಾನ" ಎಂದಿತ್ತು!!! ಅದು ಓದಿದಾಗ, ಏನೇ ಆಗಲಿ, ಒಂದು ಕೈ ನೋಡಿಯೇ ಬಿಡಬೇಕು ಎಂದು ಅನಿಸಿತು. ಹಾಗೆಲ್ಲಾ ಅದೃಷ್ಟ ನನಗೆ ಯಾವತ್ತೂ ಒಲಿದಿಲ್ಲ. ಆದರೂ ಮನುಷ್ಯನಿಗೆ ಆಸೆ ಅಂತ ಒಂದಿರುತ್ತೆ ಅಲ್ವಾ? ಅದೃಷ್ಟದಲ್ಲಿ ಏನಾದರೂ ಸಿಗೋ ಹಾಗಿದ್ರೆ, ಸಿಕ್ಕಲಿ ಅಂತ. ಆದರೆ, ದಿನಗಳಲ್ಲಿದ್ದ ಕಾರ್ಯ ಬಾಹುಳ್ಯದಿಂದ, ಇದಕ್ಕಾಗಿ ಅದ್ಭುತವಾದ ಏನನ್ನಾದರೂ ಯೋಚಿಸಲು ಸಮಯವೇ ಸಿಗಲಿಲ್ಲ.. ಇನ್ನೇನು ಇವತ್ತು ಅದನ್ನು ಸೂಚಿಸಲು ಕೊನೆಯ ದಿನ ಅಂತಾದಾಗ, ತಾಣಕ್ಕೆ ಹೋಗಿ ಒಮ್ಮೆ ಕಣ್ಣಾಡಿಸಿದೆ. ಒಂದು ಕಡೆ ಹೀಗೆ ಬರೆದಿದ್ದರು "Tested in HELL.." ಅಂತ. ನಾನೋ, ಏನಾದರೂ ಒಂದು ಹೇಳಿಕೆಯನ್ನು ಸೂಚಿಸಲೇ ಬೇಕು ಎಂಬ ದೃಢಚಿತ್ತ(!!)ದೊಂದಿಗೆ "Tested in HELL.. Gives the warmth of HEAVEN" ಅಂತ ಹಾಕಿದೆ. ಮತ್ತೆ ದಿನಗಳು ಸರಿದಂತೆ ಅದನ್ನು ಮರೆತೇ ಬಿಟ್ಟಿದ್ದೆ.

ಈಗ ಅಲ್ಲಿಂದಲೇ ಕರೆ ಬಂದಾಗ.... ಮನಸು ಒಂದು ಸೆಕೆಂಡಿನಲ್ಲಿ ಎರಡು ತಿಂಗಳ ಹಿಂದಕ್ಕೂ, ಹಾಗೂ, ಕಾರು ಬಹುಮಾನವಾಗಿ ಬಂದು, ನಾನು ಸಂತಸದ ಸಾಗರದಲ್ಲಿ ತೇಲಾಡುತ್ತಿರುವ ಹಾಗೆ, ಒಂದು ತಿಂಗಳು ಮುಂದಕ್ಕೂ ಓಲಾಡಿತು. ಅಷ್ಟರಲ್ಲಿ ಧ್ವನಿ ನನ್ನನ್ನು ಕಲ್ಪನಾ ಲೋಕದಿಂದ ಎಚ್ಚರಿಸಿತು. "ನೀವು ಸೂಚಿಸಿದ ಹೇಳಿಕೆಗೆ, ಅರ್ಧ ಗಂಟೆಯ ಟೆಸ್ಟ್ ರೈಡ್ ಅನ್ನು, ನಮ್ಮ ಸಂಸ್ಥೆಯ ಬೆಂಗಳೂರು ವ್ಯಾಪ್ತಿಯಲ್ಲಿ ಗೆದ್ದೀದ್ದೀರಿ(??). ನಾಡಿದ್ದು ಗುರುವಾರ ಮಧ್ಯಾಹ್ನ ಒಂದುವರೆ ಗಂಟೆಗೆ ನೀವು ಲಭ್ಯವಿದ್ದೀರಾ?" ಎನ್ನುವುದೇ?! ನನಗೋ, ಸ್ವರ್ಗದಿಂದ ಪಾತಾಳಕ್ಕೆ ಬಿದ್ದ ಅನುಭವ... " ಛೆ ! ಇಷ್ಟೇನಾ " ಅಂತ ಒಂದು ಕ್ಷಣ ಅನಿಸಿತು. ದಿನ ನಾನು ಲಭ್ಯವಿರಲಾರೆ ಎಂದು ಹೇಳಿ ನುಣುಚಿಕೊಳ್ಳೋಣ (ನಿಜವಾಗಲೂ ದಿನ ಸಾದ್ಯವಿರಲಿಲ್ಲ ) ಅಂತ ಪ್ರಯತ್ನಿಸಿದರೂ, ಮತ್ತೊಂದು ದಿನದ ನನ್ನ ಲಭ್ಯತೆ ಕೇಳಿ, ಕೊನೆಗೆ, ಮುಂದಿನ ವಾರಾಂತ್ಯಕ್ಕೆ ನಾನು ಗೆದ್ದ(?!) ಟೆಸ್ಟ್ ರೈಡ್ ಸಮಯವನ್ನು ನಿಗದಿಮಾಡಿದರು. ಅದೇನೇ ಆಗಲಿ, ಎಷ್ಟೋ ಜನರಲ್ಲಿ, ನಾನು ಆಯ್ಕೆ ಆಗಿರುವೇನಲ್ಲ, ಅಷ್ಟಾದರೂ ಅದೃಷ್ಟ ಇದೆಯಲ್ಲ ಎಂದು ಸಮಾಧಾನಪಟ್ಟುಕೊಂಡೆ.

ಈಗ ಎಲ್ಲರಿಗೂ ಇದನ್ನು ಹೇಳುವ ಹುರುಪು ನನ್ನಲ್ಲಿ. ಏನೋ ಗೆದ್ದಿದ್ದೆ ತಾನೇ? ಎಲ್ಲರಿಗೂ ಫೋನಾಯಿಸಲಾರಂಭಿಸಿದೆ. ಹೀಗಿದೆ ನೋಡಿ ಒಂದು ಘಟನೆಯ ನೂರೊಂದು ಪ್ರತಿಕ್ರಿಯೆಗಳು -

ಅಪ್ಪ ಆಸಕ್ತಿಯಿಂದ ಕೇಳಿದ್ದು - "ಪರ್ವಾಗಿಲ್ವೆ? ಇನ್ನೇನಾದ್ರೂ offer ಇದೆಯಂತಾ ಇದರ ಜೊತೆಗೆ.. ಅಥವಾ ಅಷ್ಟೇನಾ?"
ಅಮ್ಮ ಕಾಳಜಿಯಿಂದ ಹೇಳಿದ್ದು - "ಟೆಸ್ಟ್ ರೈಡ್ ಅಂತೆಲ್ಲ ಒಬ್ಳೇ ಹೋಗಬೇಡಾ. ಜೊತೆಗೆ ನಿನ್ನ ಒಂದೆರಡು ಗೆಳತಿಯರನ್ನು ಕರೆದುಕೊಂಡು ಹೋಗು"
ನಾನು ಹೇಳುತ್ತಿದ್ದ ಹುರುಪಿನಲ್ಲಿ, ವಿಷಯ ಸರಿಯಾಗಿ ಅರ್ಥ ಆಗುವ ಮೊದಲೇ ತಂಗಿ ಉದ್ಗರಿಸಿದ್ದು - "ಏನಕ್ಕಾ ! ನಿಂಗೆ ಕಾರು ಬರುತ್ತಾ? !!!!!!!!"
ಒಲುಮೆಯ ಕೋಣೆವಾಸಿ(roommate!) ಹೇಳಿದ್ದು - "ನಾನು ನಿನಗೆ ದಿನವೆ ಹೇಳಿದ್ದೆ.. ಅದೃಷ್ಟ ಯಾವಾಗ ಬರುತ್ತೆ ಅಂತ ಗೊತ್ತಾಗಲ್ಲ.. ನೋಡು ಈಗ.. ಅದೇನೇ ಆಗಲಿ ಗೆದ್ದಿರುವೆ ತಾನೇ.. ಅರ್ಧ ಗಂಟೆ ಮಜಾ ಮಾಡಬಹುದು"
ಲಿಂಕ್ ಕೊಟ್ಟ ಸ್ನೇಹಿತರು ಜೋಶ್ ನಲ್ಲಿ ಹೇಳಿದ್ದು - "ಮೊದಲು ನೀನು car driving ತರಗತಿಗೆ ಸೇರಿಕೋ. ಹೇಗಿದ್ದರೂ ಎರಡು ವಾರ ಸಮಯ ಇದೆ. ಭರ್ಜರಿಯಾಗಿ ಚಲಾಯಿಸು. ನಿನಗೆ ಚಿಂತೆ ಬೇಡ, ಎಲ್ಲಾದರೂ ಹೋಗಿ ಗುದ್ದಿ ಕಾರಿಗೆ ಏನ್ ಆದ್ರೂ, ನೀನು ಸುರಕ್ಷಿತವಾಗಿ ಇರೋವಷ್ಟು ಸರಿಯಾಗಿ ಚಲಾಯಿಸಲು ಕಲಿ !!"
ಚಾರ್ಟರ್ಡ್ ಅಕೌಂಟೆಂಟ್ ಗೆಳತಿ ನುಡಿದಿದ್ದು - "ನಾನು ಚೆನ್ನಾಗಿ, ಚಲಾಯಿಸಿದರೆ, ನಂಗೆ ಕಾರು ಬಹುಮಾನವಾಗಿ ಕೊಡ್ತೀರಾ" ಅಂತ ಕೇಳಬೇಕಿತ್ತು ನೀನು!
ಸಾಹಿತಿ ಮಿತ್ರರೊಬ್ಬರು ಮೆಚ್ಚುಗೆಯಿಂದ ಹೇಳಿದ್ದು - "ಎಷ್ಟೋ ಜನರಲ್ಲಿ ನಿಮ್ಮನ್ನು ಆಯ್ಕೆ ಮಾಡಿರಬೇಕಾದರೆ, ಖಂಡಿತಾ ನೀವು ಸೂಚಿಸಿದ್ದು ಅವ್ರಿಗೆ ಇಷ್ಟವಾಗಿರಬೇಕು."
ಕೆಲಸದ ಒತ್ತಡದಲ್ಲಿದ್ದ ಇನ್ನೋರ್ವ ಗೆಳತಿ ಹೇಳಿದ್ದು - "ಅಯ್ಯೋ ಏನಿದೆಯೇ ಅದ್ರಲ್ಲಿ.. ಕಾರು ಖರೀದಿ ಮಾಡಬೇಕು ಅಂತ ಹೋದ್ರೆ, ಯಾರಿಗೆ ಕೂಡ ಟೆಸ್ಟ್ ರೈಡ್ ಮಾಡುವ ಅವಕಾಶ ಸಿಗುತ್ತೆ.. ನೀನು ಸುಮ್ಮನೆ ಅರ್ಧ ಗಂಟೆ ವ್ಯಯಿಸುವ ಬದಲು, ಬೇರೆ ಏನಾದರೂ ಮಾಡು.. ನನಗೆ ಆಸಕ್ತಿಯಿಲ್ಲ ಅಂತ ಹೇಳಿ ಬಿಡು."
ಸಹೋದ್ಯೋಗಿ ಮಿತ್ರೆ ಕೊಟ್ಟ ಐಡಿಯಾ - "ವಾವ್! ಒಂದು ದಿನ ಬೆಳಗ್ಗೆ ಸಮಯ ನಿಗದಿ ಮಾಡಿ ರಾಣಿ ಥರ ಕಾರಲ್ಲಿ ಆಫೀಸಿಗೆ ಬರಬಹುದಿತ್ತಲ್ಲಾ? "

ಅದಕ್ಕೆ ತಾನೇ ಹೇಳೋದು "ಅವರವರ ಭಾವಕ್ಕೆ!" ಎಂದು.. ಎಲ್ಲರ ಪ್ರತಿಕ್ರಿಯೆಯೂ ಅವರವರ ದೃಷ್ಟಿಕೋನದಿಂದ ನೋಡಿದರೆ ಸಮಂಜಸವಾದದ್ದೇ. ಯಾವುದೇ ವಿಷಯದ ಕುರಿತು, ನೂರು ಜನರ ದೃಷ್ಟಿಕೋನ ನೂರು ರೀತಿಯಾಗಿರುತ್ತದೆ ಅಲ್ಲವೇ? ಇದೊಂದು ಸಣ್ಣ ಉದಾಹರಣೆ ಅಷ್ಟೇ!

ಮುಗಿಸುವ ಮುನ್ನ - ಇಷ್ಟೆಲ್ಲಾ ಹೇಳಿದ ಮೇಲೆ ಟೆಸ್ಟ್ ರೈಡ್ ಗೆ ನಾನು ಹೋದೇನೋ ಇಲ್ಲವೋ ಅಂತ ನಿಮ್ಮಲ್ಲಿ ಕುತೂಹಲ ಹಾಗೇ ಉಳಿಸಿಬಿಟ್ಟು, ಮುಗಿಸಲಾರೆ. ಮುಂದಿನ ಶನಿವಾರ ಬೆಳಿಗ್ಗೆ ಅವರು ಕರೆ ಮಾಡಿದಾಗ, ನಾನು ಗೆಳತಿಯ ಹತ್ತಿರ ಮಾತಾಡ್ತಿದ್ದೆ. ಆಮೇಲೆ ಸುಮಾರು ಹೊತ್ತು ಅವರ ಕರೆಯ ಪತ್ತೆ ಇಲ್ಲ. ಮಧ್ಯಾಹ್ನ ಕರೆ ಮಾಡಿ ಸಂಜೆ ಆರುವರೆಗೆ ಆಗಬಹುದೋ ಎಂದು ಕೇಳಿದರು. ತುಂಬಾ ತಡವಾಗುತ್ತೆ ಅಂತ ಅನಿಸಿ "ಇಲ್ಲ, ಸಮಯ ಆಗದು.." ಅಂದೆ. ವಾರದ ದಿನಗಳೂ ಆಗುವದಿಲ್ಲ ಎಂದು ಹೇಳಿದಾಗ, " ಹಾಗಿದ್ರೆ ಮುಂದಿನ ವಾರಾಂತ್ಯ ಇಡುತ್ತೇವೆ " ಎಂದು ಪಟ್ಟು ಬಿಡದೆ ಹೇಳಿದಾಗ, "ಛೆ, ಅದೆಷ್ಟು ಛಲ ಇವರಿಗೆ, ಮುಂದಿನ ವಾರ ಅದೆಷ್ಟೇ ಸಮಯಕ್ಕೆ ಇಟ್ಟರೂ ಹೋಗೋಣ" ಎಂದೆಣಿಸಿ, "ಆಗಬಹುದು" ಅಂತ ಒಪ್ಪಿಗೆ ಸೂಚಿಸಿದೆ. ಅದರ ನಂತರ ಇವತ್ತಿನವರೆಗೆ ಅವರ ಕರೆಯಿಲ್ಲ! ಪಾಪ, ನನ್ನ ಅಷ್ಟೊಂದು "ಇಲ್ಲ"ಗಳಿಂದ ಬೇಸತ್ತು ಮತ್ತೆ ಕರೆ ಮಾಡುವ ಗೋಜಿಗೆ ಹೋಗಿಲ್ಲವೇನೋ?

Sunday, May 10, 2009

ನಮನ


ಶೈಶವದಾರಂಭದಲಿ ಅಂಬೆಗಾಲಿಡುವಾಗ
ಪ್ರಥಮ ಹೆಜ್ಜೆಗೆ ಕಾಲೂರಿದಾಗ
ಓಡುತ, ಆಡುತ ಜಾರಿ ಬಿದ್ದಾಗ
ಕೈ ಹಿಡಿದು ನಡೆಸಿದ ಮಾತೆಗೆ ನಮನ

ಬಾಲ್ಯದಲಿ ಎಲ್ಲದಕೂ ಹಠ ಮಾಡಿದಾಗ
ಊಟಕ್ಕೆ ತಿಂಡಿಗೆ ರಚ್ಚೆ ಹಿಡಿದಾಗ
ಚಂದಮಾಮನ ತೋರಿಸಿ ಕಥೆ ಹೇಳಿದಮ್ಮನಿಗೆ
ತಲೆ ಬಾಗಿ ಮಾಡುವೆ, ಪ್ರೀತಿಯ ನಮನ

ಗುರಿಯತ್ತ ಸಾಗಲು ದೂರಕ್ಕೆ ಹೊರಟಾಗ,
ಕಣ್ಣಿಂದ ಹನಿ ಬಿಂದು, ನಿಲ್ಲದೆ ಹರಿದಾಗ
ಅದ ತಡೆದು, ದೃಷ್ಟಿಯನು ಗುರಿಯೆಡೆಗೆ ಹಾಯಿಸಿದ
ನಲ್ಮೆಯ ಮಾತೆಗೆ ಒಲುಮೆಯ ನಮನ

ಸಂತಸದ ನಗುವನ್ನು ಹೆಚ್ಚಿಸಿದಳಾಕೆ
ಮನದ ದುಗುಡವನು ಇಲ್ಲವಾಗಿಸಿದಾಕೆ
ಸುಂದರ ಬಾಳನ್ನು ಕೊಟ್ಟ ಅಮ್ಮ
ನಿನಗಿದೋ ನನ್ನ ಸಾಷ್ಟಾಂಗ ಪ್ರಣಾಮ...

Monday, May 4, 2009

ಕಲ್ಲು


ಉರುಳುವ ಕಲ್ಲಿಗೆ ನೆಲೆಯಿಲ್ಲ ಬೇರಿಲ್ಲ
ನಿಂತು ಅದನಾರೂ ನೋಡುವರೇ ಇಲ್ಲ
ಫುಟ್ ಬಾಲಿನಂತೆ ತಳ್ಳುವರೆ ಎಲ್ಲಾ
ಜಗಕೆಂದು ಅದರ ಪರಿವೆಯೇ ಇಲ್ಲಾ

ಪುಟ್ಟ ಕಲ್ಲೆಂದು ಜನಕೆ ತಾತ್ಸಾರ
ಸುಲಭದಲಿ ಎಸೆದು ಮಾಡುವರು ಜಯಕಾರ
ಒಂದಿನಿತು ಇಲ್ಲ ಅದರೆಡೆಗೆ ಮಮಕಾರ
ನೀಡರು ಯಾರೂ ಅದಕೆ ಸಹಕಾರ

ಅನುಭವಿಸುತಿದೆ ಅದು ಸಕಲ ನೋವನ್ನು
ಸಹಿಸುತಿದೆ ಉಳಿಯ ಪ್ರತಿ ಹೊಡೆತವನ್ನು
ಮುಂದುವರೆಸುತಿದೆ ತನ್ನ ಪ್ರಯತ್ನವನ್ನು
ತಾನೂ ಆಗಲು ಹೊಳೆವ ಹೊನ್ನು

ಸುತ್ತುಗಟ್ಟಿವೆ ರಾಶಿ ಮುತ್ತು ರತ್ನ
ಮುಚ್ಚಿಹಾಕಿವೆ ಈ ಪುಟ್ಟ ಕಲ್ಲನ್ನ
ಹೋರಾಡುತಿದೆ ಕಲ್ಲು ಅಸ್ತಿತ್ವಕ್ಕಾಗಿ
ತನ್ನ ಮಹಿಮೆಯನೂ ತೋರಿಸುವುದಕಾಗಿ

ಹೊಡೆತಗಳು ರೂಪಿಸುತಿವೆ ಭವ್ಯ ಕಾಯಕಲ್ಪ
ಭವಿಷ್ಯದಲಿ ಕಲ್ಲಾಗುವುದು ಸುಂದರ ಶಿಲ್ಪ
ನೆಲೆ ನಿಂತ ಕಲ್ಲಾಗಿ ಗಳಿಸುವುದು ಮರ್ಯಾದೆ
ಸಕಲರಿಗೂ ಮೂಡುವುದು ಪೂಜಿಸುವ ಇರಾದೆ