Wednesday, September 23, 2009

ಲಹರಿ


ತೀರದಲಿ ಕಾಯುತಿಹ ಕಾಲ್ಗಳನು ತೋಯಿಸದೆ,
ಆಸೆ ತೋರಿಸಿ ಹಿಂದಿಕ್ಕುವ ಅಲೆಗಳಂತೆ...
ಕಡ್ಡಿ ಗೀರುತಿರೆ ಒಮ್ಮೆಲೇ ಬೆಳಗಿ ಹೊಳೆದು,
ಮತ್ತೆ ಜ್ವಾಲೆಯಾಗದ ಅಗ್ನಿ ಶಿಖೆಯಂತೆ...
ಮುಷ್ಟಿಯಲಿ ಬಂಧಿಸಿ ಖುಶಿಪಡುತಲಿರಲು,
ಸದ್ದಿರದೆ ಜಾರಿ ರಿಕ್ತ ಹಸ್ತವನುಳಿಸುವ ಮರಳಿನಂತೆ...
ದಿನದೆಲ್ಲಾ ಕ್ಷಣವೂ ರವಿಯನ್ನು ಮುಚ್ಚಿಟ್ಟು,
ಒಂದಿನಿತು ಹನಿಸದೆ ಓಡುವ ಮೋಡದಂತೆ...
ಮನಕೆ ದಾಳಿ ಇಡುತಲಿವೆ ಪರಿ ಪರಿ
ಅಕ್ಷರಕ್ಕೆ ಇಳಿಸಲಾಗದ ಅದೆಷ್ಟೋ ಲಹರಿ !

Wednesday, September 9, 2009

ಪ್ರಶ್ನೆ


ಪ್ರತಿ ನಾಳೆ ಇಂದಾಗುತ್ತಿದೆ
"ಇಂದು" ಗಳು ನಿನ್ನೆಗಳಾಗುತಿವೆ
ಬದುಕ ಹೊಳೆ ನಿಂತ ನೀರಾಗಿದೆ
ಮನಸು ಗೊಂದಲದ ಬೀಡಾಗಿದೆ

ಸರಣಿ ಅಲಂಕಾರ ದೀಪದಲ್ಲಿ
ಚಕಚಕನೆ ಓಡುವ ಬೆಳಕಿನಂತೆ
ಚಲನೆಯ ನೋಟ ಕಂಗಳಿಗೆ ಮಾತ್ರ
ವಾಸ್ತವದ ಬದುಕು ಸ್ಥಿರವಾದ ಸ್ಥಾವರ!

ಸುಂದರ ಕಾರಂಜಿ, ಚಿಮ್ಮುತಿಹ ನೀರು
ಮನಕೆ ಆಹ್ಲಾದ ಬಾಹ್ಯ ಸೌಂದರ್ಯ
ವಾಸ್ತವದಿ ಇರುವುದು ಅದೇ ನೀರು
ಆಂತರ್ಯ ಹುಡುಕುತಿದೆ ಹೊಸತನಕಾಗಿ

ಗರಗರನೆ ತಿರುಗುವ ಧರಣಿಯದೋ
ಚಲನೆ ಭ್ರಮೆಯಾದರೂ ವಾಸ್ತವದ ಸತ್ಯ
ಬದುಕಿನ ಚಲನೆ ನಿಜವೋ - ಭ್ರಮೆಯೋ
ಎಂಬ ಪ್ರಶ್ನೆಯೇ ಮನದಲ್ಲಿ ನಿತ್ಯ