Tuesday, April 21, 2009

ಋತು













ಬಾಗಿಲೊಳು ನಿಂತಿತ್ತು ನವ ವಸಂತ
ಸೊಂಪಾಗಿ ಬೀಸಿತ್ತು ತಂಪಾದ ಮಾರುತ
ತಂದಿತ್ತು ಮನಕೆ ಆಹ್ಲಾದ ಚೈತನ್ಯ
ಮಾಡಿತ್ತು ಎಲ್ಲ ದುಗುಡವನು ಶೂನ್ಯ

ಇಹವನು ಮರೆತು ಮನಸದು ಓಡಿತ್ತು
ಮುಂಬರುವ ಗ್ರೀಷ್ಮದ ತಾಪಕೆ ಹೆದರಿತ್ತು
ಹೇಗೆ ತಾಳುವುದು ವಿರಹದ ಬೇಗೆಯನು
ಎಂದು ಮಾಡಿತು ಈಗಲೇ ಚಿಂತೆಯನು

ವರ್ಷದ ನೆನಪಾಗಿ ಕನಸೊಂದು ಮೂಡಿತು
ಅರಳಿತು ಮನಸು ಸಂಗಮವ ನೆನೆದು
ಬಯಕೆ ಅತಿಯಾಯ್ತು ಜೋರಾಗೋ ಮಳೆಯಂತೆ
ಒಂದಾಗಿ ಹೋಗಲು ಸುರಿಮಳೆಯ ಜೊತೆ

ಮತ್ತೆ ಮನದಂಗಳದಿ ಬರುವವನು ಶರತ
ಎಲ್ಲವನೂ ಉದುರಿಸಿ ಆಗುವನು ಸಂಪ್ರೀತ
ಹೇಮಂತ ಕಾಲಿಡಲು ತಂಪನೆಯ ತಂಗಾಳಿ
ತನುಮನಕೆ ಹಿತ ತರುವ ಕುಳಿರ್ಗಾಳಿ

ಶಿಶಿರನು ಬರಲು ಎಲ್ಲೆಡೆಯೂ ಇಬ್ಬನಿ
ಕೇಳುವನು ಮನದ ಪ್ರೀತಿಯ ಇನಿದನಿ
ಮತ್ತೆ ಬರುವನು ಇದೇ ವಸಂತ
ತರುವನು ಮತ್ತದೇ ಭರಪೂರ ಸಂತಸ

ಎಣಿಕೆಯು ನಡೆದಿತ್ತು ಆಕೆಯ ಮನದಿ
ಫಲಿಸೀತೆ ಆಸೆ ಮುಂದಿನ ವಸಂತದಿ
ಕಾಯುತಿಹಳು ಆ ಸ್ತ್ರೀ-ಧಾರಿಣಿ
ಕಾಲ ಪುರುಷನ ಪ್ರೀತಿಯ ರಮಣಿ

Sunday, April 19, 2009

ಸಾಂತ್ವನ


ನೊಂದ ಜೀವವೊಂದಳುತಲಿದೆ ಖಾಲಿ ಹೃದಯದಲಿ
ಹುಡುಕಾಟ ನಡೆಸುತಿದೆ ಏಕಾಂತದೂರಿನಲಿ
ಪಯಣವ ಸಾಗಿಸುತಿದೆ ಒಂಟಿ ಹಾದಿಯಲಿ
ಕಂಬನಿಯು ಜಾರುತಿದೆ ಕಣ್ಣಿನಣೆಕಟ್ಟೆಯಲಿ...

ನೋಡುವೆಯಾ ನೀನೊಮ್ಮೆ ಹೊಳೆವ ರವಿಯನ್ನು
ವಿಶಾಲಾಗಸದಿ ಏಕಾಂಗಿಯವನು,
ನಲಿಸುವನು ಸಕಲ ಜೀವ ರಾಶಿಯನು
ನೀಡುವನು ಎಲ್ಲರಿಗೂ ಬಾಳ್ವ ಶಕ್ತಿಯನು

ಮಿನುಗುತಿರುವನು ನೋಡು ಆ ಚಂದಿರ
ತಾರೆಗಳು ನೂರಾರು, ದೂರ ದೂರ
ಕಾರಿರುಳ ನಡುವೆ ಒಬ್ಬಂಟಿಯವನು
ಆದರೂ ತಂಪ ಬೀರಿ, ನಗುತಲಿಹನು

ಅಬ್ಬರದಿ ಭೋರ್ಗರೆವ ಸಾಗರವ ನೋಡು
ಏನಾದರೂ ನಿಲ್ಲದು ಮೊರೆವ ಅಲೆಗಳ ಬೀಡು
ಸಂಜೆಯಾದಂತೆ, ಬಹು ಜನರ ನಾಡು
ಮತ್ತೆಲ್ಲ ಸಮಯದಲಿ ಮೌನದ ಹಾಡು

ಸಾಕಿನ್ನು ರೋಧನ, ಓ ನೊಂದ ಜೀವವೇ..
ನಾವಿಹೆವು ಜೊತೆಗೆ, ಕಣ್ಣೀರ ತಡೆಯುವೆವು
ಬಾಡಿರುವ ಬೇರನು ಮತ್ತೆ ಚಿಗುರಿಸುವೆವು
ಚಿಗುರಿಸಿದ ಮನದಲಿ ಹೊನ್ನ ಹೂವರಳಿಸುವೆವು

ಹೊರಹಾಕು ಅಮುಕಿಟ್ಟ ಜ್ವಾಲಾಮುಖಿಯನು
ಆರಂಭಿಸು ಮತ್ತೆ ಹೊಸ ಜೀವನವನು
ಮೂಡಲಿ ಮನದಲಿ ಹೊಸ ಲಾವಣ್ಯ
ನವೀನ ಆರಂಭಕೆ ನವ ಚೈತನ್ಯ .....

Wednesday, April 8, 2009

ಚಿಕಣಿ ಸಾಲುಗಳು

ನಾಕು ಮೂಲೆಯಿರುವ ವಿನ್ಯಾಸ ಕ್ಯುಬಿಕಲ್ಲು
ಒಳಗಿರುವ ಅಭಿಯಂತರ ಆಗುವನು ಜೀವ ಇಲ್ಲದ ಕಲ್ಲು !




ಖುಷಿ ಪಟ್ಟು ಒಪ್ಪಿದ್ದ ಆಕೆಯನು
ಹೇಳಲು ಅವಳೊಂದು ದಿನ...
"ಸದಾ ಅನಿಸುವುದು ಪ್ರಿಯ,
ಕನ್ನಡಿಯಲ್ಲಿ ನಿಂತಂತೆ ನೀ ನನ್ನ ಹಿಂದೆ"
ಈಗ ಅವನದು ಪಾಪ ನಾಯಿ ಪಾಡು
ಅವಳು ಸದಾ ಮುಂದೆ
ಅವನು ಅವಳ ಹಿಂದೆ !




ಬಂದಿದೆ ಮಾರುಕಟ್ಟೆಗೆ ಅಗ್ಗದ ಕಾರು ನ್ಯಾನೋ
ಪೈಪೋಟಿ ಕೊಳ್ಳುವುದಕೆ ಮೊದಲಾರೆಂದು, ನೀನೋ ನಾನೋ ?