Tuesday, August 17, 2010

ಕೊಡಚಾದ್ರಿಯಲ್ಲಿ...

ಕೆಲ ತಿಂಗಳ ಹಿಂದೆ ಗೆಳತಿ ಭವ್ಯಾಳ ಟ್ರಿಪ್ ಫೋಟೋಗಳನ್ನು ನೋಡುತ್ತಿದ್ದಾಗ ತುಂಬಾ ಖುಷಿಯಾಗಿತ್ತು. ಘಾಟಿಕಲ್ಲಿನ ರಮಣೀಯ ದೃಶ್ಯಗಳನ್ನು ನೋಡುತ್ತಿದ್ದಂತೆ ಮನಸ್ಸು ಗರಿ ಬಿಚ್ಚಿ ಕುಣಿದಾಡಿತ್ತು. ಆಗಾಗ ಇಂಥ ಸುಂದರ ಸ್ಥಳಗಳಿಗೆ ಟ್ರಿಪ್ ಹೋಗುತ್ತಲೇ ಇರುವ ಗೆಳತಿಯ ಅದೃಷ್ಟದ ಬಗ್ಗೆ ನೆನೆಯುತ್ತಾ, ಜೊತೆಗೆ ಹೋಗಲು ಇಂಥದೊಂದು ಸ್ನೇಹಿತರ ಗುಂಪು ನನಗೆ ಇಲ್ಲವಲ್ಲ ಅಂತ ಸ್ವಲ್ಪ ಬೇಸರಿಸಿದ್ದೆ. ಆಕೆಯಾದರೋ, ಆಫೀಸು ಶಟಲ್ ನವರ ಗುಂಪಿನೊಂದಿಗೆ ಒಮ್ಮೆ ಹೋದರೆ, ಇನ್ನೊಮ್ಮೆ ಅವಳದೇ ಜೊತೆ ಆಫೀಸು ಸೇರಿದ್ದ ಬ್ಯಾಚ್ ಮೇಟ್ ಗಳ ಜೊತೆ, ಮಗದೊಮ್ಮೆ ಆಫೀಸು ಪ್ರಾಜೆಕ್ಟ್ ಟೀಮ್ ಜೊತೆ ಆಫಿಶೀಯಲ್ ಟ್ರಿಪ್ ಕಣೆ ಅಂತ ಒಂದರ ಹಿಂದೆ ಒಂದರಂತೆ ಟ್ರಿಪ್ಪು ಹೋದದ್ದೇ ಹೋದದ್ದು. ನಾವೆಲ್ಲ ಬರೀ ಕತೆ ಕೇಳಿದ್ದೇ ಕೇಳಿದ್ದು. ಇನ್ನೆಷ್ಟು ಕತೆ ಕೇಳುತ್ತಾ ಕೂರೋದು ಅಂತ ಒಂದು ದಿನ ಅನಿಸಿ 'ಲೇ ನಾವೂ ಒಂದು ಪ್ಲಾನ್ ಮಾಡಿ ಟ್ರಿಪ್ ಗೆ ಹೋಗೋಣ ಕಣೆ' ಅಂದೆ. ಕಾಲೇಜಲ್ಲಿ ತೀರ ಜಾಸ್ತಿ ಜನರೊಡನೆ ಬೆರೆಯದ ನಮಗೆ ಅಷ್ಟೊಂದು ದೊಡ್ಡ ಸ್ನೇಹಿತರ ಗುಂಪು ಇಲ್ಲ :( ಹಾಗಾಗಿ, ಭವ್ಯಾಳ ಆಫೀಸು ಗುಂಪು ಹಾಗೂ ನಮ್ಮದೊಂದು ಪುಟ್ಟ ಗುಂಪು ಸೇರಿ ಟ್ರಿಪ್ ಹೋಗುವುದು ಅಂತ ನಿರ್ಧಾರವಾಯಿತು.

ಶುಕ್ರವಾರ ರಾತ್ರಿ ಅದೆಷ್ಟು ಬೇಗ ಹೊರಡಬೇಕು ಅಂದುಕೊಂಡರೂ, ನಮ್ಮ ಗಾಡಿ ಬೆಂಗಳೂರು ಬಿಡುವಾಗ ಗಂಟೆ ಹತ್ತು ದಾಟಿತ್ತು. ಕುಡಿದರೆ, ಯಾವ ದಿಕ್ಕಿನಿಂದಲೂ ನಿದ್ದೆ ಸುಳಿಯದೇ, ಎಚ್ಚರವಾಗಿಡುವ (ರೆಡ್ ಬುಲ್ ನ ಜಾಹೀರಾತು ಅಲ್ಲ; ತಪ್ಪು ತಿಳಿಯಬೇಡಿ!) ರೆಡ್ ಬುಲ್ ಅನ್ನು ಇಡೀ ರಾತ್ರಿ ಜಾಗರಣೆ ಮಾಡುವ ಸಲುವಾಗಿ ಕುಡಿಯಲು ತಂದಿದ್ದರು. ಜೊತೆಗೆ ಮುಗಿಯದಷ್ಟು ಹಾಡುಗಳು. ಅವೂ ಕನ್ನಡ ಹಾಡುಗಳು :-) ಎರಡು ದಿನದ ಪ್ರವಾಸದಲ್ಲಿ ತುಂಬಾ ಖುಷಿ ಕೊಟ್ಟದ್ದೆಂದರೆ ಕನ್ನಡ! ಎಲ್ಲರೂ ಕನ್ನಡಿಗರೇ ಇದ್ದಿದ್ದರಿಂದ ಬೇರೆ ಭಾಷೆಯಿಂದ ವಿಮುಕ್ತರಾಗಿ ಇರುವಂತಾಯಿತು. ಆಫೀಸು, ಹಾಸ್ಟೆಲ್ಲು ಎಲ್ಲೆಂದರಲ್ಲಿ ಕನ್ನಡವನ್ನು ಕೇಳದೆ, ಕನ್ನಡಕ್ಕಾಗಿ ಕಾತರಿಸುವ ಕಿವಿಗಳು ಎರಡು ದಿನ ಕನ್ನಡ ಹಾಡು ಮಾತು ಎಲ್ಲಾ ಕೇಳಿ ಕೇಳಿ ತಂಪುಗೊಂಡವು. ಅಂತೂ ಇಂತೂ ದಾರಿ ಕೇಳಿ ಕೇಳಿ ಶಿವಮೊಗ್ಗ ಅಯ್ಯನೂರು ದಾಟಿ ಕೊಡಚಾದ್ರಿ ತಲುಪುವಾಗ ಬೆಳಗ್ಗೆ ಎಂಟು ಗಂಟೆಯಾಗಿತ್ತು. ರೆಸಾರ್ಟ್ ಎಂಬ ಹೆಸರು ಮನಸ್ಸಲ್ಲಿ ಕೂತು, ನಮ್ಮ ನಮ್ಮದೇ ಆದ ರಮ್ಯ ಕಲ್ಪನೆಗಳಿದ್ದವು. ಆದರೆ ಅಲ್ಲಿ ಹೋಗಿ ನೋಡಿದಾಗ ತಿಳಿಯಿತು ಅದು ಮೂಲಭೂತ ಅಗತ್ಯಗಳಷ್ಟೇ ಇರುವ 'ನಿಸರ್ಗಧಾಮ' ಎಂದು. ಎರಡು ಕಾಟೇಜ್ ಗಳು ಬೇಕು ಎಂದು ಮೊದಲೇ ಹೇಳಿದ್ದ ನಮಗೆ ಒಂದು ಮಾತ್ರ ಸಿಕ್ಕಿದ್ದು ಸ್ವಲ್ಪ ಅಸಮಾಧಾನಕ್ಕೆ ಕಾರಣವಾಯಿತು (ಸಂಜೆ ಹೊತ್ತಿಗೆ ಎರಡು ಸಿಕ್ಕಿತ್ತು). ಮತ್ತೊಂದು ತೊಂದರೆ ಆದದ್ದು - ಮಳೆ ಬಿದ್ದು, ಮೆದುವಾಗಿ, ಕಾಲಿಟ್ಟಲ್ಲೆಲ್ಲಾ ಜಾರಿ ಬೀಳುವಂತಿದ್ದ ಕೆಂಪು ಮಣ್ಣಿನ ನೆಲದಿಂದ. ಹಲವರೆಲ್ಲ ಜಾರಿ ಬಿದ್ದು, ಕೂಡಲೇ ಏಳಲು ಹೋಗಿ ಮತ್ತೆ ಮತ್ತೆ ಬಿದ್ದು ಉಳಿದವರಿಗೆ ಮನೋರಂಜನೆ ಒದಗಿಸುವಂತಾಯಿತು. ಒಮ್ಮೆಯೂ ಬೀಳದವರು ಬಿದ್ದ ಕೂಡಲೇ, ಅಷ್ಟರವರೆಗೆ ಬಿದ್ದವರಿಗೆಲ್ಲ ಖುಷಿಯೋ ಖುಷಿ - ನಮ್ಮ ಗುಂಪಿಗೆ ಒಂದು ಜನ ಸೇರ್ಪಡೆ ಆಯ್ತು ಅಂತ! ಜೋರಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗಾಳಿಪಟ ಫಿಲ್ಮ್ ನಲ್ಲಿ ಹೇಳಿದ ಹಾಗೆ 'ಈ ಊರೆಲ್ಲ ಬಚ್ಚಲ ಮನೆ ಥರ ಕಣ್ರೋ' ಅನ್ನೋ ಮಾತು ನಮ್ಮ ಗುಂಪಿನಲ್ಲಿ ಕೇಳಿ ಬಂತು. ಅಲ್ಲಿ ತಲುಪಿದ ದಿನ ಬೆಳಗ್ಗೆ, ಆ ಮಳೆ ಚಳಿಯಲ್ಲಿ ತಣ್ಣೀರು ಸ್ನಾನ ಮಾಡುವ ಸೌಭಾಗ್ಯ ನಮಗೆ ಒದಗಿ ಬಂತು. ಕೆಲವರಂತೂ ಸ್ನಾನ ಮಾಡಬೇಕೆ ಬೇಡವೇ ಎಂದೂ ಯೋಚಿಸುವಂತಾದರು! ಅಂತೂ ಇಂತೂ ಹೇಳಿದ ಸಮಯಕ್ಕೆ ತಯಾರಾಗಿ ಕೂತರೆ, ಚಾರಣ ಆರಂಭಿಸಲು ನಮ್ಮನ್ನು ಕಾಡಿನೊಳಗೆ ಒಂದು ಸ್ಥಳದವರೆಗೆ ಕರಕೊಂಡು ಹೋಗಬೇಕಾದ ಜೀಪ್ ಬರಲೇ ಇಲ್ಲ. ಎಲ್ಲರೂ ಅಲ್ಲೇ ನಿದ್ರೆ ಹೋದರು. ಎಲ್ಲರದ್ದೂ ಒಂದು ಕೋಳಿ ನಿದ್ದೆ ಆಗುವ ಹೊತ್ತಿಗೆ ಜೀಪ್ ಬಂತು. ಇದ್ದೆಲ್ಲ ಚೈತನ್ಯವನ್ನು ಒಗ್ಗೂಡಿಸಿಕೊಂಡು ಚಾರಣಕ್ಕೆ ಹೊರಟೆವು.

ಚಾರಣದ ಆರಂಭದಲ್ಲಿ ಎಲ್ಲರಿಗೂ ಲಾಲಿಪಾಪ್ ಥರ ಒಂದು ಕಡ್ಡಿಗೆ ಉಪ್ಪು ಸುಣ್ಣವನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಅದನ್ನು ನೀಲಗಿರಿ ಎಣ್ಣೆಯಲ್ಲಿ ಅದ್ದಿ ಕೊಟ್ಟಿದ್ದರು. "ಲೀಚ್ ಎಲ್ಲಾದ್ರೂ ಕಾಲ ಮೇಲೆ ಹತ್ತಿದ್ರೆ, ಇದ್ರಿಂದ ಸರಿಸಿ ಬಿಡಿ, ಹೋಗ್ಬಿಡುತ್ತೆ" ಅಂತ ಉಪಾಯ ಹೇಳಿಕೊಟ್ಟಾಗ ಮುದ್ದಾದ ಬಿಳಿ ಪಾದಗಳ ಲಲನೆಯರ ಮುಖದಲ್ಲೆಲ್ಲಾ ಏನೋ ಒಂದು ಭಯ ಮಿಶ್ರಿತ ಸಮಾಧಾನ. ೬ ಕಿ.ಮೀ. ಹತ್ತೋದು, ಮತ್ತೆ ೬ ಕಿ.ಮೀ. ಇಳಿಯೋದು, ಒಟ್ಟು ಹನ್ನೆರಡು ಕಿ.ಮೀ. ಗಳ ಚಾರಣ ಎಂಬ ಯೋಚನೆ ಮನದಲ್ಲಿ ಕೂತಿದ್ದರಿಂದಲೋ ಏನೋ, ಪ್ರತಿ ಹತ್ತು ನಿಮಿಷಕ್ಕೊಮ್ಮೆ, ಈಗೆಷ್ಟು ಕಿ.ಮೀ. ಬಂದಿದೀವಿ ಅಂತ ಚಿಕ್ಕ ಮಕ್ಕಳ ಥರ ಜೊತೆಯಲ್ಲಿದ್ದ ಗೈಡ್ ಹತ್ತಿರ ಒಮ್ಮೊಮ್ಮೆ ಒಬ್ಬೊಬ್ಬರು ಕೇಳುತ್ತಿದ್ದಾಗ ಅವರ ಮುಖದಲ್ಲಿ ಸುಂದರ ನಗು ಅರಳುತ್ತಿತ್ತು. 'ಯಾಕ್ರೀ ಆಗ್ಲೇ ಸುಸ್ತಾಯ್ತಾ' ಅಂತ ಅವ್ರು ಕೇಳಿದ್ರೆ ಮತ್ತೆ ಇಪ್ಪತ್ತು ನಿಮಿಷ ನಾವು ಆ ಪ್ರಶ್ನೆ ಕೇಳ್ತಿರಲಿಲ್ಲ. ಮೊದಲ ೧.೫ - ೨ ಕಿ.ಮೀ ಗಳ ನಡಿಗೆ ತುಂಬಾ ತ್ರಾಸದಾಯಕ ಅನಿಸಿತ್ತು. ಆಮೇಲೆ ಅದು ಹೇಗೋ ಹೊಂದಿಕೊಂಡು ಬಿಟ್ಟಿತು. ಆರಂಭದಲ್ಲಿ ಬರೀ ಕಡಿದಾದ ಸಣ್ಣ ಹಾದಿ ಇದ್ದರೆ, ಮುಂದೆ ಮುಂದೆ ಹೋದಂತೆ ಸ್ವಲ್ಪ ಇಳಿಜಾರು, ಮತ್ತೆ ಸ್ವಲ್ಪ ಹರಿಯುವ ನೀರು, ಇನ್ನೊಂದು ಕಡೆ ಸಮತಟ್ಟು ಹೀಗೆ ವೈವಿಧ್ಯಮಯವಾಗಿ ದಾರಿ ಸಾಗುತ್ತಿದ್ದುದರಿಂದ ಅಷ್ಟೊಂದು ತ್ರಾಸವಾಗಲಿಲ್ಲ. ಮೇಲೆ ಮೇಲಕ್ಕೆ ಹೋದಂತೆ ಒಂಥರಾ ವಿಶೇಷವಾದ ಅನುಭವ! ಒಂದು ಹಂತದವರೆಗೆ, ಮುಚ್ಚಿದ ಗಿಡ ಮರಗಳಿದ್ದ ಹಾದಿಯಲ್ಲಿ ಸಾಗುತ್ತಿದ್ದ ನಾವು ಒಮ್ಮೆಲೇ ತೆರೆದ ಪ್ರದೇಶಕ್ಕೆ ಬಂದೆವು.. ಸುತ್ತಲೂ ಬಿಳಿಯ ಮೋಡ, ಮಸುಕು ಮಸುಕು ಮಂಜು. ತಂಪಾದ ಗಾಳಿ. ಮುಖಕ್ಕೆ ಸವಿ ಮುತ್ತನ್ನಿಕ್ಕುವಂತೆ ಸುರಿಯುವ ತುಂತುರು. ಓಹ್!! ಅದೆಂಥಾ ಅನಿರ್ವಚನೀಯ ಆನಂದ! ಹಲವರ ಬಾಯಿಂದ ಆನಂದ ಅಭಿವ್ಯಕ್ತಿಗೊಳಿಸುವ ಉದ್ಗಾರಗಳು ಹೊರಬಂದರೆ, ಇನ್ನು ಕೆಲವರು ಮೂಕ ವಿಸ್ಮಿತರಾಗಿ ಒಳಗೊಳಗೇ ಸಂತಸ ಅನುಭವಿಸುತ್ತಿದ್ದರು. ಈ ಸಂತಸಕ್ಕೆ ನೀರೆರೆಚುವಂತೆ ಮಧ್ಯೆ ಮಧ್ಯೆ ಲೀಚ್ ಗಳ ಕಾಟ- ಹುಡುಗಿಯರ ಆರ್ತನಾದ! ಹುಡುಗರಂತೂ 'ಅದೇನಪ್ಪ ನೀವು ಹುಡುಗಿಯರು, 'in-built siren system' ಜೊತೆಗೆ ಹುಟ್ಟಿರ್ತೀರಾ? ಅಂತ ಕಿಚಾಯಿಸೋದಕ್ಕೆ. ಇದೆಲ್ಲವುಗಳ ಜೊತೆ ಆರು ಕಿ.ಮೀ. ಗಳ ದೂರ ಸಾಗಿ ಕೊನೆಗೂ ತುತ್ತ ತುದಿ ಬಂತು. ಅಲ್ಲೊಂದು ಪುಟ್ಟ ದೇವಸ್ಥಾನ. ಅಲ್ಲಿ ನಮಗೆ ಊಟಕ್ಕೆ ವ್ಯವಸ್ಥೆಯಾಗಿತ್ತು. ಆದರೆ ಅಲ್ಲಿ ತಲುಪಿದಾಗಲೇ ತಿಳಿದಿದ್ದು - ಇನ್ನೂ ಮೇಲೆ ೧.೫ ಕಿ.ಮೀ. ಎತ್ತರ ನಡೆದರೆ ಶಂಕರಾಚಾರ್ಯರ ಪೀಠವಿದೆ ಅಲ್ಲಿವರೆಗೂ ನಡೆಯುವಿರಾ ಅಂತ ಪ್ರಶ್ನೆ ಬಂತು! ಅಷ್ಟು ದೂರ ಬಂದು ಇನ್ನು ಒಂದುವರೆ ಕಿ.ಮೀ. ಏನು ಮಹಾ ಅಂದು ಒಮ್ಮತವಾಗಿ ನಿರ್ಧರಿಸಿ ಮತ್ತೆ ಪಯಣ ಮುಂದುವರೆಸಿದೆವು. ಕೇರಳದಿಂದ ಕೊಲ್ಲೂರಿಗೆ ಬರುವ ಭಕ್ತರು ಕೊಡಚಾದ್ರಿ ಬೆಟ್ಟದ ಮೇಲಿರುವ ಈ ಪೀಠವನ್ನು ಸಂದರ್ಶಿಸಿಯೇ ಹೋಗುತ್ತಾರೆ ಎಂದು ಜೊತೆಯಲ್ಲಿರುವ ಗೈಡ್ ಹೇಳುತ್ತಿದ್ದರು. ಅಲ್ಲಲ್ಲಿ ಬಂಡೆಯ ಬಳಿ ವಿಶಿಷ್ಟವಾಗಿ ಕಾಣಿಸುವ ಗುರುತುಗಳನ್ನು ತೋರಿಸಿ "ಅದೆಲ್ಲಾ ಮೈನಿಂಗ್ ಗಾಗಿ ನಡೆಸಿದ ಪರೀಕ್ಷೆಗಳು. ಆದರೆ ನಾವು ಇಲ್ಲಿ ಗಣಿಗಾರಿಕೆ ನಡೆಯಲು ಖಂಡಿತಾ ಬಿಡುವುದಿಲ್ಲ, ಕೈಗಾರಿಕೀಕರಣ ಆಗುವುದೂ ಬೇಡ, ಇಲ್ಲಿನ ಪರಿಸರ ಮಲಿನವಾಗುವುದೂ ಬೇಡ" ಎಂದು ಬೇಸರ, ರೋಷದಿಂದ ಅವರು ಹೇಳುವಾಗ ಆ ಹಸಿರು ಪರಿಸರದ ಬಗೆಗಿನ ಕಾಳಜಿ ಪ್ರೀತಿ ಅವರ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು.

ಹದಿನೈದು ಕಿ.ಮೀ.ಗಳ ನಡಿಗೆ ಮುಗಿಸಿ ವಾಪಸ್ಸು ಬಂದಾಗ ನಿಸರ್ಗಧಾಮದ ಜೊತೆ ನಮಗೆ ಒಂದು ನಂಟು ಬೆಸೆದಿತ್ತು. ಇಡೀ ದಿನ ಜೊತೆಯಲ್ಲಿದ್ದ ಗೈಡು, ಬೆಳಿಗ್ಗೆ ಬಿದ್ದಾಗ, ಎದ್ದಾಗ ಬೇಕೆನಿಸಿದಾಗ ಸಹಾಯ ಮಾಡಿದ ನಿಸರ್ಗಧಾಮದ ಕೆಲಸದಾಳುಗಳು, ಅಲ್ಲಿನ ಸ್ಥಳ ಮಹಾತ್ಮೆಯನ್ನು ಅಚ್ಚ ಕನ್ನಡದಲ್ಲಿ ಸೊಗಸಾಗಿ ವಿವರಿಸುತ್ತಿದ್ದ ಮಂಜಣ್ಣ, ಹೀಗೆ ಎಲ್ಲರೂ ಆಪ್ತರಾಗಿದ್ದರು. ಕಾಲಿಟ್ಟರೆ ಜಾರಿಸದೆ ಕಾಪಾಡುವ ಅಲ್ಲಿನ ಹುಲ್ಲು, ಗುಡಿಸಿಲಿನಂತಹ ಕಾಟೇಜು, ಸಂಜೆ ಕೊಟ್ಟ ಬಿಸಿ ಬಿಸಿ ಪಕೋಡ, ಕಷಾಯ, ಕಾಫಿ, ಒಲೆಯಲ್ಲಿಯೇ ತಯಾರಾಗುವ ಅನ್ನ ಸಾಂಬಾರಿನ ರುಚಿ, ಬೆಳಿಗ್ಗೆ ತಿಂದ ಚಿತ್ರಾನ್ನ, ಕಡುಬಿನಲ್ಲಿದ್ದ ಎಲ್ಲಿಯೂ ಸಿಗದ ಮಧುರ ಸ್ವಾದ ಇವೆಲ್ಲವೂ ನಿಸರ್ಗಧಾಮದ ಜೊತೆಗಿನ ಮಧುರ ನಂಟಿಗೆ ಕಾರಣವಾಗಿದ್ದವು. ಮರುದಿನ ಅಲ್ಲಿಯೇ ಹತ್ತಿರದಲ್ಲಿರುವ ಶರಾವತಿ ಹಿನ್ನೀರಿನಲ್ಲಿ ಮನ ತಣಿಯೆ ಆಟವಾಡಿ, ಬೋಟಿಂಗ್ ಮಾಡಿ ಮಧ್ಯಾಹ್ನ ಮತ್ತೆ ಅಲ್ಲಿನ ರುಚಿ ಶುಚಿಯಾದ ಊಟವನ್ನು, ನಿಸರ್ಗಧಾಮದವರ ಪ್ರೀತಿಯ ಆತಿಥ್ಯದೊಂದಿಗೆ ಉಂಡು ಅವರ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಅಲ್ಲಿಂದ ಮತ್ತೆ ಬೆಂಗಳೂರಿಗೆ ಹೊರಟೆವು.

ನಂತರದ ದುಷ್ಪರಿಣಾಮಗಳು :
  • ಟ್ರಿಪ್ಪು ಮುಗಿಸಿ ಬಂದು ಅಲ್ಲಿ ಕೊಳಚೆ ರಾಡಿಯಾಗಿದ್ದ ಬಟ್ಟೆ ಒಗೆಯೋದು ಚಾರಣಕ್ಕಿಂತ ತ್ರಾಸದಾಯಕವಾಗಿತ್ತು.
  • ವಿಪರೀತವಾಗಿ ಅಂತ್ಯಾಕ್ಷರಿ ಆಟ ಆಡಿದ್ದರ ಪರಿಣಾಮವಾಗಿ, ಟ್ರಿಪ್ಪಿನ ನಂತರ ಅದ್ಯಾವ ಹಾಡು ಕೇಳಿದರೂ, 'ಛೆ ಈ ಹಾಡು ನೆನಪಿಗೆ ಬಂದಿಲ್ವಲ್ಲ ಆ ಅಕ್ಷರ ಬಂದಾಗ' ಅನ್ನುವ ಪಶ್ಚಾತ್ತಾಪ!