skip to main |
skip to sidebar
-ಬೀಚಿಯವರ 'ನನ್ನ ಭಯಾಗ್ರಫಿ'ಯಲ್ಲಿ ಬರುವ ಹರಪನ ಹಳ್ಳಿಯ ಒಬ್ಬ ಅಜ್ಜಿ ತನ್ನ ಗಂಡನ ಬಗ್ಗೆ ಹೇಳುವ ಮಾತಿನಿಂದ ಪ್ರೇರಿತವಾಗಿ ಜನಿಸಿದ ಸಾಲುಗಳು!ನಿನ್ನೆ ನಡೆದ ಏನೋ ಕಲಹಕೆ
ಇಬ್ಬರೊಳು ಮೂಡಿದ ಭಿನ್ನ ಮತಕೆ
ಮಾತಿಗೆ ಮಾತು ಬೆಳೆದು
ಚರ್ಚೆ ಎತ್ತೆತ್ತಲೋ ಹರಿದು
ಅವನು ಪೂರ್ವಕೆ ಅವಳು ಪಶ್ಚಿಮಕೆ
ಮುಖ ಮಾಡಿ ಮಲಗಿರಲು,
ನಗಿಸುವ ಪಣ ತೊಟ್ಟವ ಅಳಿಸುತ್ತಿರಲು,
ಅವಳ ಮನದಲ್ಲೊಮ್ಮೆ ಅನಿಸಿದ್ದು ನಿಜವಂದು-
"ಛೇ ನನ್ನ ಹಣೆಯಲ್ಲಿ ಬರೆದಿದ್ದೆ ಈ ಥರವೇ?"
ಎಂದು!!
ಆದರೆ...
ಮುಂಜಾನೆ ಬಚ್ಚಲಲಿ ಯೋಚನಾ ಗುಂಗಲ್ಲಿ
ಸಾಬೂನು ಹಚ್ಚಿ ಕಣ್ಮುಚ್ಚಿ ಬಗ್ಗಲು,
ಚಾಚಿದ್ದ ನಳದ ತುದಿಯು ಫಟಾರನೆ ರಭಸದಿ
ಹಣೆಯ ಮಧ್ಯಕ್ಕೆ ಬಡಿದು ಕೆಂಪು ಬರೆ ಬರಲು
ತಡೆಯಲಾಗದ ನೋವಲಿ ಕಣ್ಣೀರು ಹರಿದಿರಲು
ಓಡೋಡಿ ಬಂದು ಆತ ಸಂತೈಸುತಿರಲು
ಇದ್ದೆಲ್ಲ ಪ್ರೀತಿಯನು ಧಾರೆಯೆರೆಯಲು
ಮತ್ತೆ ನಗೆ ಹೂವು ಮನದಲ್ಲಿ ಅರಳಿರಲು
ದಿನವು ಸಂತಸದಿ ಸಾಗುತ್ತಲಿರಲು
ಹಣೆ ಬರಹ ಹಳಿದ ತಪ್ಪಿಗೆ ನೊಂದಳು
ಅದೇನಿದ್ದರೂ...
ಅವನು ನನ್ನವನು
ನಾನವನ ಮನದರಸಿ
ಸಮರಸವೇ ಜೀವನ
ಎಂದೆನುತ್ತಾ ನಿನ್ನೆ ಮರೆತಳು
"ಶುಭಾ, ನಿಂಗೆ ಹುಟ್ಟು ಹಬ್ಬಕ್ಕೆ ಏನು ಗಿಫ್ಟ್ ಬೇಕು ಹೇಳು" "ವಿಶ್ವ ಪರಿಸರ ದಿನ ಅಲ್ವಾ, so, ನೀನು ಪರಿಸರ ಮಾಲಿನ್ಯ ಕಮ್ಮಿ ಮಾಡೋಕೆ, ಪರಿಸರ ಹಸಿರಾಗಿಡೋಕೆ, ಪ್ರಯತ್ನ ಮಾಡು, ಅದೇ ನಂಗೆ ದೊಡ್ಡ ಗಿಫ್ಟು :) ಹಾಹಾ - ದೊಡ್ಡ ಜನರ ಥರ ದೊಡ್ಡ ಮಾತಾಡಿದೆ ಅಲ್ವಾ !" *** "ಲೇ ಶುಭಾ, ಬೇಗ ಅಮ್ಮಂಗೆ ಫೋನ್ ಕೊಡು, ನಂಗೆ ಹಸಿವಾಗ್ತಾ ಇದೆ ಜೋರು, ಮಾತು ಮುಗಿಸಿ ಆಮೇಲೆ......." "ಅಮ್ಮ ಬೇಗ ಬಾ, ಅಕ್ಕಂಗೆ ಜೋರು ಹಸಿವಂತೆ, ನಿನ್ನ ತಲೆ ತಿನ್ನೋಕೆ ಕರೀತಿದಾಳೆ!" ***
"ಹೇ ಅಕ್ಕಾ, ಇವತ್ತು ನನ್ ಫ್ರೆಂಡ್ಸ್ ಗೆಲ್ಲಾ ನಿನ್ನ ಬ್ಲಾಗ್ ತೋರಿಸಿದೆ ಕಣೆ, ಒಂದು ಫ್ರೀ ಪೀರಿಡ್ ಇತ್ತು.." "ಓಹ್ ಪರ್ವಾಗಿಲ್ವೆ ನೀನು?" "ಆದ್ರೆ ಜಾಸ್ತಿ ಟೈಮ್ ಇರ್ಲಿಲ್ಲ ಆಯ್ತಾ, ಅದಕ್ಕೆ ನೀ ನನ್ನ ಬರ್ತ್ ಡೇ ದಿನ ನನ್ನ ಬಗ್ಗೆ ಬರ್ದಿದ್ದೆ ಅಲ್ವಾ 'ಶುಭಾ'ಶಯ ಕವನ, ಅದನ್ನು ತೋರಿಸಿದೆ, ಖುಷಿಯಾಯ್ತು ಗೊತ್ತಾ ಅವರಿಗೆಲ್ಲಾ? :)" "!!!" ***
"ಹೇ, ಶುಭಾ ನಮ್ಮ ಶಾಲೆಗೆ ಹೋಗಿ ಬರೋಣ್ವಾ, ಬರ್ತೀಯಾ? " "ನೀನು ಬಿಡು, ಹೀರೋಯಿನ್ ಆಗಿದ್ದೆ ಸ್ಕೂಲ್ ನಲ್ಲಿ, ನಾನ್ಯಾಕೆ ಸೈಡ್ ಆಕ್ಟ್ರೆಸ್ಸ್ ಥರ ನಿನ್ ಜೊತೆ ಬರಲಿ ;-)" "!!?" ***
"ಶುಭಾ, ಸೆಮಿಸ್ಟರ್ ಪರೀಕ್ಷೆ ಮುಗಿದ ಮೇಲೆ ಏನ್ ಪ್ಲಾನ್ ರಜಕ್ಕೆ?" "ಬೆಂಗಳೂರಿಗೆ ಬರೋಣ ಅನ್ಕೊಂಡಿದ್ವಿ ನಾನು ಮತ್ತು ಅಪ್ಪ, ಆದ್ರೆ ನೀನೆ ಬರ್ತಿದೀಯಲ್ವಾ ಊರಿಗೆ ಮುಂದಿನ ವಾರದಲ್ಲಿ, ಹದಿನೈದು ದಿನದೊಳಗೆ ಮತ್ತೆ ನಿನ್ನ ಮುಖ ನೋಡೋಕೆ ಯಾಕೆ ಬರೋದು ಹೇಳು ಬೆಂಗಳೂರಿಗೆ :P ಅದ್ಕೆ ಏನೂ ಪ್ಲಾನ್ ಇಲ್ಲ ಈಗ!" "!! " *** ಪ್ರೀತಿಯ ಮುದ್ದು ತಂಗಿ ಶುಭಾ, ನನಗೆ ಖಂಡಿತಾ ಗೊತ್ತಿದೆ, ಈ ಮೇಲಿನ ಸಾಲುಗಳನ್ನೆಲ್ಲ ನೀನು ಓದಿದಾಗ ನಂಗೆ ಚೆನ್ನಾಗಿ ಮಂಗಳಾರತಿ ಇದೆ ಎಂದು. ಆದರೆ ಏನಾದರೂ ವಿಶೇಷವಾಗಿ ನಿನ್ನ ಹುಟ್ಟು ಹಬ್ಬಕ್ಕೆ ನನ್ನ ಬ್ಲಾಗ್ ನಲ್ಲಿ ಬರೆಯೋಣ ಎಂದು ಮನಸ್ಸಿಗೆ ಬಂದು, ನನ್ನ ಮನದಲ್ಲಿ ಅಚ್ಚೊತ್ತಿದ ನಿನ್ನ ಕೆಲವು ಮುದ್ದು ಮಾತುಗಳನ್ನು ಹಾಗೆಯೇ ಅಕ್ಷರಕ್ಕಿಳಿಸಿದ್ದೇನೆ, ಬೇಸರವಿಲ್ಲವಷ್ಟೇ? ಕೆಲವೊಮ್ಮೆ ನೀನು ತಟ್ ಅಂತ ನೀಡುವ ಉತ್ತರಗಳು, ನಗು ತರುವ ನಿನ್ನ ಮಾತುಗಳು, ಆ ಚುರುಕುತನ ಅದೆಲ್ಲ ಎಷ್ಟು ಖುಷಿಯಾಗುತ್ತದೆಂದರೆ, ಆ ಕ್ಷಣ ನನ್ನ ಮನದ ದುಗುಡಗಳನ್ನೆಲ್ಲಾ ಮರೆತು ಬಿಡುತ್ತೇನೆ. ಇನ್ನು ಕೆಲವೊಮ್ಮೆ, ನೀನು ನನ್ನ ಅನುಪಸ್ಥಿತಿಯ ಬಗ್ಗೆ ದೂರಿದಾಗ, ನಾಲ್ಕು ದಿನಕ್ಕೆ ಬಂದ ನಾನು ಎರಡೇ ದಿನಕ್ಕೆ ಮನೆಯಿಂದ ಮತ್ತೆ ವಾಪಾಸು ಹೊರಟ ಸಂದರ್ಭದಲ್ಲಿ ಕಣ್ಣೀರು ಸುರಿಸಿದಾಗ, ಮನದ ಮೂಲೆಯಲ್ಲಿ ಬೇಸರವೂ ಮೂಡುತ್ತದೆ. ಆದರೆ ಬದುಕು ನಮ್ಮನ್ನು ಕೊಂಡೊಯ್ಯುವ ಕಡೆ ನಾವು ಸಾಗಬೇಕು ಅಲ್ಲವೇ? ಮನೆಯಲ್ಲಿ ಸಣ್ಣ ಮಕ್ಕಳು ಯಾವತ್ತೂ ದೊಡ್ದವರಾಗುವುದೇ ಇಲ್ಲ ಎಂದು ನಂಗೆ ಹಲವು ಬಾರಿ ಅನಿಸುವುದಿದೆ. ನಾನು ಬಾಲವಾಡಿಯಲ್ಲಿದ್ದಾಗ ನೀನು ಹುಟ್ಟಿದಾಗಿಂದ ನಾನು ದೊಡ್ಡವಳು. ಆದರೆ ನೀನು ಕಾಲೇಜಿಗೆ ಬಂದರೂ ಇನ್ನು ಚಿಕ್ಕವಳು ಅನ್ನುವ ಮನೋಭಾವ ನನ್ನಲ್ಲಿತ್ತು. ಆದರೆ, ಇತ್ತೀಚೆಗೆ ಒಂದೆರಡು ವರ್ಷಗಳಿಂದ, ನಿನ್ನ ಸ್ನೇಹಿತೆಯರ ಗುಂಪಿನಲ್ಲಿ ನಿನ್ನ ಒಡನಾಟ, ನೀನು ಹೇಳುವ ಕೆಲ ಘಟನೆಗಳು, ನಿನ್ನ ವಿಚಾರ ಧಾರೆಯನ್ನು ಮಂಡಿಸುವ ಶೈಲಿ, ಇದೆಲ್ಲ ನೋಡಿದಾಗ, ಕೇಳಿದಾಗ, ನಂಗೂ ಖುಷಿಯಾಗಿತ್ತು - ನನ್ನ ಮುದ್ದು ತಂಗಿ ಆ ಮುದ್ದುತನ, ತುಂಟತನವನ್ನು ಉಳಿಸಿಕೊಂಡು, ಪ್ರೌಢಳೂ ಆಗಿದ್ದಾಳೆ ಅಂತ. I m happy and proud about you! ಶುಭಾ, ಬದುಕಿನ ಒಂದು ಮುಖ್ಯವಾದ ಘಟ್ಟದಲ್ಲಿ ನೀನು ನಿಂತಿರುವ ಈ ಸಂದರ್ಭದಲ್ಲಿ ನಾನು ನಿನಗೆ ಹೇಳುವುದಿಷ್ಟೇ - "ಯಾವತ್ತೂ ಒಂದು ಸ್ಪಷ್ಟವಾದ ಗುರಿ ನಮ್ಮ ಮುಂದಿರಬೇಕು, ಆ ಗುರಿಯನ್ನು ತಲುಪುವ ದೃಢಸಂಕಲ್ಪ ಹಾಗೂ ಶ್ರಮ ನಮ್ಮದಾಗಿರಬೇಕು." ನನ್ನ ಶುಭ-ಹಾರೈಕೆಗಳು, ಸದಾ ನಿನ್ನ ಜೊತೆಗಿವೆ. ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು! ಪ್ರೀತಿಯಿಂದ, ನಿನ್ನ ಅಕ್ಕ. ಮುಗಿಸುವ ಮುನ್ನ : ಹುಟ್ಟು ಹಬ್ಬಕ್ಕೆ ಉಡುಗೊರೆಯ ಜೊತೆ ನಿನಗೊಂದು ಪತ್ರ ಕಳುಹಿಸಬೇಕು ಎಂದು ಮನದಲ್ಲಿ ಅಂದುಕೊಂಡಿದ್ದೆನೋ ನಿಜ; ಆದರೆ, ಸಮಯದ ಅಭಾವದಿಂದಾಗಿ ಪತ್ರ ಬರೆದು ಕಳುಹಿಸಲಾಗಲಿಲ್ಲ. ಅದಕ್ಕಾಗಿ ಇಲ್ಲಿ ಬರೆದಿದ್ದೇನೆ. ಪತ್ರಗಳು ವೈಯಕ್ತಿಕ. ಆದರೆ ಮಹತ್ತರವಾದ ಯಾವುದೇ ವೈಯಕ್ತಿಕ ವಿಚಾರಗಳ ಪ್ರಸ್ತಾಪ ಇಲ್ಲಿ ಇಲ್ಲದಿರುವುದರಿಂದ ಹಾಗೂ ನಿನಗೆ ಖುಷಿಯಾಗುತ್ತದೆ ಎನ್ನುವ ಭರವಸೆಯೊಂದಿಗೆ, ಈ ಪತ್ರವನ್ನು 'ಭಾವ ಜೀವ ತಳೆದಾಗ'ದಲ್ಲಿ ದಾಖಲಿಸುತ್ತಿದ್ದೇನೆ.