Tuesday, February 9, 2010

ಹುಡುಗಿಯರಿಗೇಕೆ ಟೆಡ್ಡಿಗಳು ಇಷ್ಟ?

-ಕನ್ನಡ ಪ್ರಭದ "ಸಖಿ"ಗಾಗಿ ಬರೆದದ್ದು. ಫೆಬ್ರವರಿ 1-15 ಸಂಚಿಕೆಯಲ್ಲಿ ಪ್ರಕಟಿತ.


ಮೊನ್ನೆ ಗೆಳತಿಯೊಬ್ಬಳ ಹುಟ್ಟು ಹಬ್ಬವಿತ್ತು. ನಿಜ ಹೇಳಬೇಕು ಅಂದರೆ ಮುಂಜಾನೆ ಗಡಿಬಿಡಿಯಲ್ಲಿ ನನಗೆ ಆಕೆಯ ಹುಟ್ಟು ಹಬ್ಬ ಎನ್ನುವುದೇ ಮರೆತು ಹೋಗಿತ್ತು! ಮತ್ತೆ ಸಂಜೆ ವಾಪಾಸ್ ಬಂದಾಗ ಯೋಚನೆ ಶುರು ಆಯಿತು - ಏನಪ್ಪಾ ಗಿಫ್ಟ್ ಕೊಡುವುದು ಎಂದು. ಉಡುಗೊರೆ ಕೊಡುವಾಗ ಏನಾದರೂ ಉಪಯೋಗಕ್ಕೆ ಬರುವಂಥದ್ದು ಕೊಡಬೇಕು ಅಥವಾ ಕೊಟ್ಟವರಿಗೆ ತುಂಬಾ ಸಂತೋಷ ಆಗುವಂಥ ವಸ್ತುವನ್ನು ನೀಡಬೇಕು. ಆದರೆ ಆ ಕತ್ತಲು ಕವಿಯುತ್ತಿರುವ ಮುಸ್ಸಂಜೆಯಲ್ಲಿ, ಎಲ್ಲಿ ಏನು ಹುಡುಕಿಕೊಂಡು ಹೋಗುವುದು ಅಂತ ಯೋಚಿಸುತ್ತಿದ್ದಾಗ, ಥಟ್ ಅಂತ ಹೊಳೆದದ್ದು - ಒಂದು ಚಂದದ ಟೆಡ್ಡಿ ಕೊಟ್ಟರೆ, ಗೆಳತಿ ಖಂಡಿತಾ ಖುಷಿ ಪಡುತ್ತಾಳೆ ಎಂದು. ಕೂಡಲೇ ಹತ್ತಿರದ, ಮಕ್ಕಳ ಆಕರ್ಷಕ ಉಡುಗೊರೆಗಳು ದೊರೆಯುವ ಅಂಗಡಿಗೆ ಕಾಲಿಟ್ಟೆ. ಅಲ್ಲಿ ಒಂದು ಮಹಡಿ ತುಂಬಾ ಟೆಡ್ಡಿಗಳನ್ನೇ ತುಂಬಿಟ್ಟಿದ್ದಾರೆ. ಸುತ್ತ ಒಮ್ಮೆ ಕಣ್ಣು ಹಾಯಿಸಿದರೆ, ಏನು ಆರಿಸುವುದೆಂದೇ ತಿಳಿಯದಷ್ಟು ಗೊಂದಲವಾಗುವುದಂತೂ ನಿಜ. ಅಂತೂ ಒಂದು ಬಿಳಿ - ಗುಲಾಲಿ ಮಿಶ್ರ ಬಣ್ಣಗಳಿರುವ, ಕುತ್ತಿಗೆಗೊಂದು ಚಂದದ ಸ್ಕಾರ್ಫ್ ಅನ್ನು ತೂಗು ಬಿಟ್ಟು, ತನ್ನನ್ನು ಹಿಡಿದವರ ಮನ ಸೂರೆಗೊಳ್ಳುವಂತಹ ಮುದ್ದು ನಗೆಯನ್ನು ಬೀರುತ್ತಿರುವ ಒಂದು ಟೆಡ್ಡಿಯನ್ನು ಆರಿಸಿ ತಂದು ಗೆಳತಿಗೆ ಉಡುಗೊರೆ ನೀಡಿದೆ. ಅದನ್ನು ನೋಡಿದಾಗ ಅವಳ ಖುಷಿಗೆ ಪಾರವೇ ಇರಲಿಲ್ಲ. ಪುಟ್ಟ ಮಗುವನ್ನು ಮುದ್ದಾಡಿದಂತೆ ಅಪ್ಪಿ ಮುದ್ದಾಡಿದಳು! ಜೊತೆಗೆ ಫೋಟೋ ಸೆಶ್ಶನ್ ಕೂಡ ಆರಂಭವಾಯಿತು - ಅವಳು ಮಾತ್ರವಲ್ಲ, ಜೊತೆಗಿರುವ ಉಳಿದ ಹುಡುಗಿಯರೂ ಅದನ್ನು ಮುದ್ದಾಡಿ ಹಿಡಿದು ಒಂದೊಂದು ಫೋಟೋ ತೆಗೆಸಿಕೊಂಡರು. (ಯಾರಾದರೂ ಹುಡುಗರು ಸುತ್ತ ಇದ್ದಿದ್ದರೆ, ಆ ಟೆಡ್ಡಿಯ ಅದೃಷ್ಟ ಕಂಡು ಕರುಬುತ್ತಿದ್ದರೇನೋ! ಆದರೆ ಯಾರೂ ಇರಲಿಲ್ಲ ಬಿಡಿ)

ಹುಡುಗಿಯರೇ ಹಾಗೆ.. ಟೆಡ್ಡಿ ಬೇರ್ ಗೊಂಬೆಗಳಿಗೂ ಹುಡುಗಿಯರಿಗೂ ಅದೇನೋ ಒಂದು ಆಪ್ತ ನಂಟು. ಪುಟ್ಟ ಹುಡುಗಿಯರಿಂದ ಹಿಡಿದು, ಕಾಲೇಜು ತರುಣಿಯವರೆಗೆ ಎಲ್ಲ ಪ್ರಾಯದ ಹುಡುಗಿಯರು ಟೆಡ್ಡಿ ಗೊಂಬೆಗಳನ್ನು ಇಷ್ಟ ಪಡುವವರೇ. ಮುಂದೆ ಸಂಗಾತಿಯಾಗಲಿರುವ ಪ್ರಿಯ ಗೆಳತಿಗೆ ಆಕೆಯ ಗೆಳೆಯ, ಬಾಲ್ಯದ ಗೆಳತಿಗಾಗಿ ಒಬ್ಬಳು ಪ್ರೀತಿಯ ಗೆಳತಿ, ಹೀಗೆ ಕೊಡುವವರು ಯಾರೇ ಆಗಿದ್ದರೂ, ಉಡುಗೊರೆ ಪಡೆಯುವ ಸ್ಥಾನದಲ್ಲಿ ಇರುವುದು ಹುಡುಗಿಯಾದಲ್ಲಿ, ಉಡುಗೊರೆಯಾಗಿ ಕೊಡಲು ಮೊದಲು ಹೊಳೆಯುವುದೇ ಈ ಟೆಡ್ಡಿ. ಹುಡುಗಿಯರು ಯಾಕೆ ಟೆಡ್ಡಿ ಗೊಂಬೆಗಳನ್ನೂ ಅಷ್ಟೊಂದು ಇಷ್ಟ ಪಡುತ್ತಾರೆ ಎನ್ನಲು ಅವರವರದೇ ಆದ ಕಾರಣಗಳಿವೆ. ಟೆಡ್ಡಿ ಗೊಂಬೆಗಳು ಯಾರನ್ನೇ ಆಗಲಿ ಮತ್ತೆ ಬಾಲ್ಯದ ನೆನಪಿಗೆ ಕೊಂಡೊಯ್ಯುತ್ತವೆ. ಮತ್ತೆ ಮಕ್ಕಳನ್ತಾಗುವುದು ಏನೋ ಒಂದು ಸಂಭ್ರಮ. ಇದು ಒಂದು ಕಾರಣವಾದರೆ, ಇನ್ನು ಕೆಲವರಿಗೆ ಬೇರೆ ಥರದ ಅನುಭವ! ಹುಡುಗಿಯರಿಗೆ, ಒಂಥರಾ ಸೆಕ್ಯೂರ್ ಫೀಲ್ ಮಾಡಿಕೊಳ್ಳುವುದು ಏನೋ ಒಂದು ಸಮಾಧಾನ, ಖುಷಿ ನೀಡುತ್ತದೆ. ಈ ಟೆಡ್ಡಿಬೇರ್ ಪಡಕೊಂಡಾಗ, ಇನ್ನೂ ತಮ್ಮನ್ನು ಪುಟ್ಟ ಮಕ್ಕಳಂತೆ ಪರಿಗಣಿಸುತ್ತಾರೆ ಎಂಬ ಭಾವನೆಯೇ ಒಂದು ರೀತಿಯ ಖುಷಿಗೆ ಕಾರಣವಾಗುತ್ತದೆ. ಟೆಡ್ಡಿಯಂತೆ ಹುಡುಗಿಯರದ್ದೂ ಕೋಮಲ ಮೃದು ಸ್ವಭಾವ ಆಗಿರುವುದರಿಂದಲೂ ಬಹುಷಃ ಹುಡುಗಿಯರು ಟೆಡ್ಡಿಯನ್ನು ಉಡುಗೊರೆಯಾಗಿ ಸ್ವೀಕರಿಸಿದಾಗ ಖುಷಿ ಪಡಲು ಮತ್ತೊಂದು ಕಾರಣವಿರಬಹುದು. ಅದರಲ್ಲೂ ಹುಡುಗ, ತನ್ನ ಹುಡುಗಿಗೆ ಒಂದು ಟೆಡ್ಡಿ ಕೊಟ್ಟರಂತೂ ಅಲ್ಲಿ ನಾನಾ ಕಾರಣಗಳು, ಸಂತೋಷಕ್ಕೆ ನಾಂದಿಯಾಗುತ್ತವೆ. ಟೆಡ್ಡಿಗೊಂದು ಹೆಸರಿಟ್ಟು, ಅದನ್ನು ಜೊತೆಗಿಟ್ಟುಕೊಂಡು ಸದಾ ಸನಿಹದಲ್ಲಿರುವ ಸಂಗಾತಿಯಂತೆ, ಅದರ ಜೊತೆಗಿನ ಸಖ್ಯದ ಅನುಭೂತಿ ಪಡೆಯುವುದು, ಭವಿಷ್ಯದ ಬಗ್ಗೆ ಸುಂದರ ಕನಸು ಕಾಣುತ್ತಿರುವ ಹುಡುಗಿಯರ ಜಾಯಮಾನ.

ಇನ್ನು ಕೆಲವು ಹುಡುಗಿಯರಿಗೆ ನಾನಾ ವಿಧದ ಟೆಡ್ಡಿ ಸಂಗ್ರಹಿಸುವ, ಅವುಗಳಿಂದಲೇ ತಮ್ಮ ವಾಸದ ಕೋಣೆಯನ್ನು ಅಲಂಕರಿಸುವ ಅಭಿರುಚಿಯಿರುತ್ತದೆ. ಮಿಕ್ಕಿ ಮೌಸ್, ಡೊನಾಲ್ಡ್, ಡಕ್, ಪೂ, ಹೀಗೆ ತಾವು ಪುಟ್ಟ ಮಗುವಾಗಿದ್ದಾಗಿನಿಂದ, ದೊಡ್ಡವರಾಗುವ ತನಕ ಉಡುಗೊರೆಯಾಗಿ ಪಡೆದ ಎಲ್ಲಾ ಥರದ ಗೊಂಬೆಗಳನ್ನೂ ತಮ್ಮ ಸಂಗ್ರಹಕ್ಕೆ ಸೇರಿಸುತ್ತಾ ಹೋಗುವುದೇ ಒಂದು ಖುಷಿ. ಪುಟ್ಟ ಮಕ್ಕಳಿಗೆ ಉಡುಗೊರೆ ಕೊಡುವಾಗ ಬೇರೆ ಬೇರೆ ಕಾರ್ಟೂನ್ ಗೊಂಬೆಗಳನ್ನು ಕೊಡುವುದು ವಾಡಿಕೆಯಾದರೆ, ಒಲುಮೆಯ ಗೆಳತಿಗೆ ಕೊಡುವಾಗ, ಚಂದದ ಮನಸೆಳೆಯುವ ಗೊಂಬೆಯನ್ನು ಆರಿಸುತ್ತಾರೆ. ಇನ್ನು ವಾಲಂಟೈನ್ಸ್ ದಿನ ಹತ್ತಿರ ಬಂದಾಗಲಂತೂ ಮಾರಾಟವಾಗುವುದು ಪ್ರೇಮ ಸಂಕೇತವಾಗಿರುವ ಕೆಂಪು ಹೃದಯವನ್ನು ಹಿಡಿದಿರುವ ಜೋಡಿ ಗೊಂಬೆಗಳು. ಜೀವನದ ಬೇರೆ ಬೇರೆ ಸ್ಥರಗಳಲ್ಲಿ, ಈ ಗೊಂಬೆಗಳನ್ನು, ಉಡುಗೊರೆಯಾಗಿ ಪಡೆದಾಗ ದೊರಕುವ ಖುಷಿ ಬೇರೆ ಬೇರೆಯಾಗಿರುತ್ತದೆ - ಅದು ಅನುಭವಿಸಿದವರಿಗೆ ಮಾತ್ರ ಗೊತ್ತು! ಈಚಿನ ದಿನಗಳಲ್ಲಿ ಅದನ್ನು ತಯಾರಿಸುವುದನ್ನು ಕಲಿಸುವ ತರಗತಿಗಳೂ ಆರಂಭವಾಗಿದ್ದು, ಅವು ಹಲವು ಹೆಣ್ಣು ಮಕ್ಕಳ ಗಮನ ಸೆಳೆದಿವೆ. ಅದನ್ನು ತಯಾರಿಸುವ ವಿಧಾನವನ್ನು ಕಲಿತು, ತಮ್ಮ ಕೈಯಿಂದಲೇ ಮಾಡಿದ ಟೆಡ್ಡಿ ಗೊಂಬೆಗಳನ್ನು ಸ್ನೇಹಿತರಿಗೆ ಉಡುಗೊರೆ ನೀಡಿ, ಅವರ ಸಂತೋಷಕ್ಕೂ, ನಾವೇ ಮಾಡಿದ್ದೂ ಅಂತ ಹೇಳಿ ತಮ್ಮ ಸಂತೋಷಕ್ಕೂ ಜೊತೆ ಜೊತೆಗೆ ಕಾರಣರಾಗುತ್ತಾರೆ.

ಆದರೆ ಎಲ್ಲಾ ಹುಡುಗಿಯರೂ ಟೆಡ್ಡಿ ಬೇರ್ ನಂತಹ ಸಾಫ್ಟ್ ಟಾಯ್ಸ್ ಗಳನ್ನು ಇಷ್ಟಪಡುತ್ತಾರೆ ಎಂದೇನೂ ಇಲ್ಲ. ಅಂತಹ ಜೀವ ಇಲ್ಲದ ವಸ್ತುವೊಂದಕ್ಕೆ ಹೆಸರಿಡುವುದು, ಅದನ್ನು ಒಂದು ಜೀವ ಇರುವ ವ್ಯಕ್ತಿಯಂತೆ ಪರಿಗಣಿಸುವುದು ಇದೆಲ್ಲ ತುಂಬಾ ಬಾಲಿಶ ಎಂಬ ಭಾವನೆಯೂ ಕೆಲವರಲ್ಲಿರುತ್ತದೆ. ಆದರೆ ಅಂಥ ಹುಡುಗಿಯರ ಸಂಖ್ಯೆ ಸ್ವಲ್ಪ ಕಡಿಮೆಯಿರಬಹುದೇನೋ. ಅಷ್ಟಕ್ಕೂ ನೀವು ಯಾರಿಗೆ ಉಡುಗೊರೆ ನೀಡುತ್ತಿದ್ದೀರಿ, ಅವರ ಅಭಿರುಚಿ-ಆಸಕ್ತಿಗಳನ್ನು ಸ್ವಲ್ಪ ಮಟ್ಟಿಗಾದರೂ ತಿಳಿದುಕೊಂಡಿರರಬೇಕಾಗಿರುವುದು ಉಡುಗೊರೆ ನೀಡಲು ಇರಬೇಕಾದ ಒಂದು ಪೂರ್ವ ಭಾವಿ ಅಗತ್ಯ. ಅದೇನೇ ಇರಲಿ, ಸದಾ ಜೊತೆಗಿರಿಸಿ, ಹೆಸರಿಟ್ಟು, ಜೊತೆಗೆ ಮಲಗಿಸಿಕೊಳ್ಳುವಷ್ಟು ತೀರಾ ಇಷ್ಟ ಪಡದೆ ಇರುವ ಹುಡುಗಿಯರೂ, ಟೆಡ್ಡಿಯನ್ನು ಉಡುಗೊರೆಯಾಗಿ ಪಡೆದಾಗ, ಮುಖ ಅರಳಿಸಿ ಒಂದು ಅವ್ಯಕ್ತ ಸಂತೋಷವನ್ನು ಅನುಭವಿಸುವುದಂತೂ ಸತ್ಯ. "ಬೆಳೆಯುವ ಸಿರಿ ಮೊಳಕೆಯಲ್ಲಿಯೇ" ಎಂಬ ಮಾತಿನಂತೆ ಮುಂದಿನ ಮಾತೆಯರಾಗುವ ಆ ಮಾತ್ರತ್ವದ ಭಾವ, ಹುಡುಗಿಯರ ಹೃದಯದಾಳದಲ್ಲಿ ಹುದುಗಿರುವುದರಿಂದಲೇ, ಅಪ್ಪಿ ಮುದ್ದಾಡಿ ತಮ್ಮ ಪ್ರೀತಿಯನ್ನು ಸುರಿಸಲು ಸಾಧ್ಯವಾಗುವ ಟೆಡ್ಡಿಗಳು ಅವರಿಗೆ ಇಷ್ಟವಾಗುತ್ತವೆ ಎಂದರೆ ಉತ್ಪ್ರೇಕ್ಷೆಯಾಗಲಾರದು !